ನೆನ್ನೆ ಸುಂದರವಾಗಿತ್ತಾ ? ಉಹು ಯಾಕೋ ಚನ್ನಾಗೇ ಇಲ್ಲ ಅನ್ನಿಸಿತ್ತು .. ಆದ್ರೆ ಯಾಕೆ ? ಅಕ್ಕ ಹೇಳಿದ್ದಳು ನೀನು ರೀಸನ್ ರಾಣಿ ಅಂತ..ಅದು ನಿಜ.. ನನಗೆ ಪ್ರತಿಯೊಂದಕ್ಕೂ ಕಾರಣ ಕಾಣತ್ತೆ.. ನೆನ್ನೆಯ ದಿನ ಚನ್ನಾಗಿಲ್ಲದಿರೋದಕ್ಕೆ ನನಗಿದ್ದ ತಲೆನೋವು ಕಾರಣ.. ಆ ತಲೆನೋವಿಗೆ ಸಾವಿರ ಕಾರಣಗಳಿದ್ವು.. ಎಲ್ಲವನ್ನೂ ಮೆಟ್ಟಿನಿಂತು ಮೋಡ ಬಿಡದೇ ಕಾಡ್ತಾ ಇರೋ ಜಿಟಿ ಜಿಟಿ ಮಳೆ , ಚಳಿ ಎಲ್ಲವೂ ಕಾರಣ ಅಂತ ನಿರ್ಧರಿಸಿಕೊಂಡೆ.. ಯಾಕೋ ಆಪೀಸ್ಗೆ ಹೊಗೋದಕ್ಕೆ ಆಗಲ್ಲ ಅನ್ನೋಷ್ಟು ನಿತ್ರಾಣವಾಗಿದ್ದರಿಂದ ಒಂದು ಕ್ರೋಸಿನ್ ಹಾಕ್ಕೊಂಡೆ.. ಮತ್ತೆ ಅದೇ ತಯಾರಿ.. ಅದೇ ಕಚೇರಿ... ಅದೇ ಜನ ,ಅದೇ ಕೆಲಸ.. ಅದೇ ಮನೆ, ಅದೇ ನಿದ್ದೆ ಹೀಗೆ ಮುಗಿದುಹೋಗತ್ತೆ ವರುಷ.. ನೋವಿನಲ್ಲೇ ಕಣ್ಮುಚ್ಚಿದ್ದೆ..
ಥಟ್ ಅಂತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದು ಖುಶಿ ಅನ್ನೋದು ಎಲ್ಲಿದೆ ಅನ್ನೋ ಪ್ರಶ್ನೆ.. ತಕ್ಷಣ ಎದ್ದು ಕೂತೆ.. ನೋವು ಬೇಸರ ಯಾವುದೂ ನೆನಪಿಲ್ಲ.. ಬೆಳಿಗ್ಗೆ ಕಣ್ಬಿಟ್ಟಾಗ ಕಿಟಕಿಯಿಂದ ನನ್ನ ಶುಭ್ರ ನಿದ್ದೆಯನ್ನೇ ಕದ್ದು ಕದ್ದು ನೋಡಿ ಕಣ್ಮಿಟುಕಿಸ್ತಾ ಇದ್ದ ಬೀದಿ ದೀಪ ಕಾಣಿಸಿತ್ತು.. ನೋಡಿ ನಕ್ಕಿದ್ದೆ.. ಯಾಕೆ ಬಂತೋ ನಗು ಗೊತ್ತಿಲ್ಲ.. ಆ ನಗುವಿನಲಿ ಒಲವಿನ ಭಾವ ಬೀರಿ ಬಂದು ತಾಕಿದ್ದು ತಂಗಾಳಿ.. ಅದು ಮಿಲನದ ಸಂಭ್ರಮದಲ್ಲಿ ಸೃಷ್ಟಿಯಾದ ಸೊಬಗು ಅನ್ನೋದು ಗೊತ್ತಾಗೋದಕ್ಕೆ ಜಾಸ್ತಿ ಸಮಯ ಹಿಡಿಯಲಿಲ್ಲ.. ಸೂಕ್ಷ್ಮವಾಗಿ ಗೃಹಿಸಿದರೆ ಆ ಮಿಲನದಲ್ಲಿ ಸಂಭ್ರಮ ಕಾಣಿಸುತ್ತೆ.. ಸ್ಪರ್ಷದಲ್ಲೊಂದು ನವಿರಾದ ಭಾವವಿದೆ.. ಆ ಭಾವಕ್ಕೆ ಜೀವವಿದೆ.. ನೆಮ್ಮದಿ ಇದೆ.. ಸುಖವಿದೆ.. ಸಂತಸವಿದೆ ಜೊತೆಗೆ ತಂಗಾಳಿಯಲ್ಲಿ ಸುವಾಸನೆ ಇದೆ.. ಅದೊಂದು ಸ್ಮೆಲ್ ಎಲ್ಲವನ್ನೂ ತೆರೆದಿಟ್ಟುಬಿಡತ್ತೆ.. ಅದನ್ನ ಅನುಭವಿಸಿದರೆ ಹಾಸಿಗೆಯಿಂದೆದ್ದು ಹೊರನಡೆಯದೇ ಇರೋದಕ್ಕೆ ಸಾಧ್ಯಾನೇ ಇಲ್ಲ..
ಪೃಕೃತಿ ಅದೆಷ್ಟು ಸುಂದರ ಅಲ್ವಾ ? ಅಲ್ಲಿ ಎಲ್ಲದಕ್ಕೂ ಅರ್ಥವಿದೆ.. ಸಂಬಂಧವಿದೆ ಸಂಸ್ಕಾರವಿದೆ.. ಒಲವಿದೆ ಬಲವಿದೆ ಒಗ್ಗಟ್ಟಿದೆ.. ಅರಿವಿದೆ.. ಅರಿಯದ ಅನುಭೂತಿ ಇದೆ , ಆಕರ್ಷಣೆ ಇದೆ.. ಅಪಾರ ಪ್ರೇಮವಿದೆ.. ಮೌನವಿದೆ.. ಮೋಹವಿದೆ .. ನಗುವಿದೆ.. ನಲಿವಿದೆ.. ಅಬ್ಬಾ ಎಲ್ಲವೂ ಸುಂದರ..
ಯಾರು ಜೀವವೇ... ಯಾರು ಬಂದವರು
ಭಾವನೆಗಳನೇರಿ..
ಒಣಗಿದೆನ್ನೆದೆಗೆ ತಂಪತಂದವರು... ಅಂತ ಹಾಡ್ತಾ ಇದ್ದದ್ದು ಬಿರಿದ ನೆಲಾನಾ ?
ನೀನಿಲ್ಲದೇ ನನಗೇನಿದೆ
ನಿನ್ನಂದ ನನ್ನಲ್ಲಿ ನೆಲೆಯಾಗಿದೆ ಅಂತ ನುಲಿದದ್ದು ನಲಿವ ಜಲಾನಾ ?
ನಿಜಕ್ಕೂ ಮಳೆಗೂ ಮಣ್ಣಿಗೂ ಅದ್ಯಾವ ಜನ್ಮದ ಮೈತ್ರಿ ಇದೆಯೋ ಏನೋ.. ಕರೆವ ರೀತಿಗೆ .. ಬೆರೆವ ಪ್ರೀತಿಗೆ ಸಾಟಿನೇ ಇಲ್ಲ.. ಎದೆಯೊಡ್ಡಿ ನಿಲ್ಲೋ ಭೂಮಿ , ಓಡಿಬಂದು ತಬ್ಬಿಕೊಳ್ಳುವ ಮಳೆಬಿಲ್ಲಿನ ಹನಿ.. ಒಂದಕ್ಕೊಂದು ಅದೆಷ್ಟು ಅದ್ಭುತವಾಗಿ ಬೆರೆತುಹೋಗತ್ತೆ ಅಲ್ವಾ ? ನಿಜವಾದ ಪ್ರೀತಿಗೆ ನೆಲಜಲಕ್ಕಿಂತ ಆದರ್ಷ ಬೇಡವೇನೋ.. ಒಂದಕ್ಕೊಂದು ಬೇರೆ ಮಾಡಲು ಸಾಧ್ಯವೇ ಇಲ್ಲದ ರೀತಿ ಬೆರೆಯುತ್ತೆ.. ಬೆಳೆಯುತ್ತೆ.. ಬದುಕನೀಡತ್ತೆ..ಆದರೆ ಅದಕ್ಕಿರೋ ಅದರದೇ ಆದ ರೂಪ ಗುಣ ಜೀವ ಭಾವ ಎಲ್ಲವೂ ಹಾಗೇ ಇರತ್ತೆ.. ಅಲ್ಲಿ ಯಾವುದರ ಅಸ್ತಿತ್ವವೂ ಕಳೆದುಹೋಗಲ್ಲ.. ಅದಕ್ಕೇ ಏನೋ ಕವಿ ನೀನು ನೆಲ ನಾನು ಜಲ ಅಂತ ಪ್ರೇಮದ ಕಡಲಲ್ಲಿ ತೇಲಿದ್ದು..
ಆ ಮಧುರ ಪ್ರೇಮದ ದಿವ್ಯ ಆಲಿಂಗನವನ್ನ ಮನಸಾರೆ ಅನುಭವಿಸಿ ಆರಂಭಿಸಿದ ದಿನ ಅದ್ಭುತವಾಗಿರದೇ ಇರತ್ತಾ? ಆ ಖುಶಿಯಲ್ಲೇ ಅಡುಗೆ ಮನೆಯೊಳಗೆ ಅಡಿ ಇಟ್ಟವಳಿಗೆ ಬಿಸಿ ಬಿಸಿ ನೀರುಕುಡಿಯೋ ಮನಸಾಗಿತ್ತು.. ಒಂದು ಉದ್ದನೆಯ ಸ್ಟೀಲ್ ಕಪ್ಪನ್ನ ಒಂದೋಂದೇ ಸಿಪ್ಪಾಗಿ ಅನುಭವಿಸುತ್ತಾ ಕುಡಿದಿದ್ದೆ.. ನಮ್ಮನೆಯ ನೀರಿಗೂ ಒಂದು ಅದ್ಭುತವಾದ ರುಚಿ ಇದೆ ಅನ್ನೋದು ಗೊತ್ತಿರಲೇ ಇಲ್ಲ.. ಅದೇ ಖುಶಿಯಲ್ಲಿ ಮಧ್ಯಾನ್ಹದ ಊಟದ ಡಬ್ಬಿ ರೆಡಿ ಆಯ್ತು..ಅದೂ ಅಷ್ಟೇ ಘಮ ಘಮ ಅಂತಿತ್ತು.. ನಂತ್ರಾ ಬಿಸಿ ಬಿಸಿ ನೀರಲ್ಲಿ ಸುದೀರ್ಘ ಹದಿನೈದು ನಿಮಿಷಗಳ ಕಾಲ ಸ್ನಾನ ಮಾಡೋವಾಗ ಅದೆಷ್ಟು ಖುಶಿಪಟ್ಟೆ ಅನ್ನೋದನ್ನ ಹೇಳೋದಕ್ಕೇ ಸಾಧ್ಯಾ ಇಲ್ಲ.. ಆಹಾ ಛುಮು ಛುಮು ಚಳಿಯಲ್ಲಿ, ಜಿಟಿ ಜಿಟಿ ಮಳೆಯಲಿ ಬಿಸಿನೀರಿನ ಸ್ನಾನ ಕೊಡೋ ಖುಶಿ ಇದೆಯಲ್ಲಾ ಅದನ್ನ ಇನ್ನೇನೂ ಕೊಡಲ್ಲ.. ಆ ಅದ್ಭುತ ಸ್ನಾನದ ನಂತ್ರ ನನ್ನ ಪ್ರೀತಿಯ ಕಪ್ಪು ಮಿಶ್ರಿತ ಕೆಂಪು ಬಣ್ಣದ ಟಾಪನ್ನ ಹಾಕಿಕೊಳ್ಳೋದಕ್ಕೆ ಹೊರಟಿದ್ದೆ.. ಅದಕ್ಕೆ ಐರನ್ ಬೇಡ.. ಹಂಗಾಗಿ ಅದು ಅಂದ್ರೆ ನಂಗಿಷ್ಟ.. ಯಾಕೋ ಅವತ್ತು ಪಾರ್ ಅ ಚೇಂಜ್ ಆ ಟಾಪನ್ನೂ ಪ್ರೆಸ್ ಮಾಡಿದೆ.. ಯಾವತ್ತೂ ಐರನ್ ಬಾಕ್ಸ್ ನೋಡಿರದ ಆ ಬಟ್ಟೆಗೆ ಅದೆಷ್ಟು ಖುಶಿಯಾಗಿತ್ತೋ.. ಅದು ಬೆಚ್ಚಗೆ ನಗನಗ್ತಾ ಇದ್ದಾಗ್ಲೇ ನಾನೂ ಮೈಗೇರಿಸಿಕೊಂಡೆ.. ಈ ಚಳಿಯಲ್ಲಿ ಇಸ್ತ್ರಿ ಹಾಕಿದ ತಕ್ಷಣ ಬಟ್ಟೆಯನ್ನ ಹಾಕಿಕೊಳ್ಳೋ ಸುಖ ಇದೆಯಲ್ಲ, ಅದು ಅನುಭವಿಸಿದವರಿಗೆ ಮಾತ್ರ ಗೊತ್ತು..
ಇಕ್ ಲಡಕಿಕೋ ದೇಖಾತೋ ಏಸಾ ಲಗಾ ಅಂತ ಸಣ್ಣಗೆ ಗುನುಗುತ್ತಾ, ದೋಸೆಯ ಬಂಡಿ ಹಾಕಿ ಎರಡು ಬಿಸಿ ಬಿಸಿ ಬಾಳೆಹಣ್ಣಿನ ಸಿಹಿ ದೋಸೆ ಮಾಡ್ಕೊಂಡು ಬಟ್ಟಲಿಗೆ ಹಾಕಿದ್ದೆ.. ಇನ್ನೂ ಹೊಗೆ ಬರ್ತಾ ಇತ್ತು.. ಅಮ್ಮ ಮನೆಯಿಂದ ಕಳಿಸಿದ ಗಟ್ಟಿ ತುಪ್ಪದ ಜೊತೆ ಅದನ್ನ ತಿಂತಾ ಇದ್ರೆ ಹೊಟ್ಟೆತುಂಬಿದ್ದೇ ಗೊತ್ತಾಗಲ್ಲ.. ನಾಲಿಗೆಯ ಮೇಲೆ ತೇಲೋ ನೀರು ಆರೋದೇ ಇಲ್ಲ.. ಅಂಥ ಸಂಭ್ರಮದಲ್ಲಿ ತಿಂಡಿ ತಿಂದು ರೆಡಿಯಾಗಿ ಆಪೀಸಿಗೆ ಹೊರಟರೆ , ಕಿವಿಗೆ ತುರುಕಿಕೊಂಡ ಇಯರ್ಫೋನ್ನಲ್ಲೂ ಎಂಥೆಂಥಾ ಹಾಡುಗಳು ಅಂತೀರಾ.. ಹಳೆಯ ಹಾಡುಗಳು ಮತ್ತು ಭಾವಗೀತೆ ಅಂದ್ರೆ ಹೆಚ್ಚು ಪ್ರೀತಿ ಆದ್ರೂ , ಹೊಸಹಾಡುಗಳಿಗೂ ಒಮ್ಮೊಮ್ಮೆ ಮೈ ಮರೀತಿನಿ..ಅವತ್ತು ನನ್ನ ಮನಸಿಗೆ ಹಿತ ಅನ್ನಿಸೋ ಅಷ್ಟೂ ಗೀತೆಗಳೂ ಒಟ್ಟಿಗೆ ಬಂದಿದ್ವು.. ಎಷ್ಟು ಖುಶಿಪಟ್ಟಿದ್ದೆ ಗೊತ್ತಾ ?
ಇನ್ನು ಕಚೇರಿಯಲ್ಲಿ, ಅವತ್ತು ನನಗೆ ಬಿಗ್ ರೆಸ್ಟ್..! ಸಾಮಾನ್ಯವಾಗಿ ಕೈ ತುಂಬಾ ಕೆಲಸ ಇಲ್ಲದಿದ್ರೆ ನನಗೆ ಕಿರಿ ಕಿರಿ.. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಬರತ್ತೆ.. ಎಲ್ಲರಿಗೂ ಬೈಯ್ಯೋಣ ಅನ್ಸತ್ತೆ.. ಜಗಳ ಕೂಡ ಮಾಡಿದ್ದಿದೆ.. ಇನ್ನು ಕೈ ತುಂಬಾ ಕೆಲಸಾ ಇರೋವಾಗ ಫೇಸ್ಬುಕ್ಕು ಸುಂದರವಾಗಿ ಕಂಡಷ್ಟು ಖಾಲಿ ಕೂತಾಗ ಕಾಣಿಸಲ್ಲ.. ಚ್ಯಾಟ್ ಮಾಡೋ ಮನಸಾಗಲ್ಲ.. ಆಫೀಸಲ್ಲಿ ಕೂತು ಮನಸಿಗೆ ಅನ್ನಿಸಿದ್ದನ್ನ ಲಹರಿಯಲ್ಲಿ ತೇಲಿಬಿಡೋದಕ್ಕೂ ಸರಿ ಅನ್ನಿಸಲ್ಲ.. ಅಷ್ಟಕ್ಕೂ ನಮ್ಮ ಕಚೇರಿಯಲ್ಲಿ ನನ್ನ ಮನದಾಳದ ಮೋಹನಮುರಳಿ ಓಪನ್ನೇ ಆಗಲ್ಲ.. ಬ್ಲೋಕ್ ಆಗಿರೋ ಸೈಟು ಯು ನೋ.ನಾನೇನು ಬರೀಬಾರದ್ದು ಬರೀತಿನಾ.. ಬಟ್ ಐ ಆಮ್ ಹ್ಯಾಪಿ.. ಬ್ಲಾಗ್ ಬರಕೊಂಡು ಕೂತುಬಿಟ್ಟಿದ್ರೆ ಏನನ್ನೂ ಓದುತ್ತಾ ಇರಲಿಲ್ಲ.. ಈಗ ಗೂಗಲ್ ಅನ್ನೋ ಗಾಳಿಜಗತ್ತಲ್ಲಿ ಇಣುಕಿ ಏನೇನೋ ಪ್ರಶ್ನೆಗಳನ್ನ ಹಾಕಿ ಎಷ್ಟೆಲ್ಲಾ ವಿಷಯಗಳನ್ನ ತಿಳ್ಕೊಂಡೆ ಗೊತ್ತಾ..? ಖುಶಿ ಆಗಿತ್ತು.. ಎಷ್ಟು ಬೇಗ ಟೈಮ್ ಆಗ್ಬಿಡ್ತು.. ಆಫೀಸಲ್ಲಿ ಹೊಸವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ ನಡೆದಿತ್ತು.. ಆದ್ರೆ ಅಲ್ಲಿರೋದಕ್ಕೆ ಮನಸಾಗ್ಲಿಲ್ಲ.. ನನ್ನೊಳಗೆ ನಾನಿದ್ದು , ನನ್ನವರೊಂದಿಗೆ ಬೆರೆತು ಅರಿತು , ನಮ್ಮಿಚ್ಛೆಯಂತೆ ಸಂಬ್ರಮಿಸೋದರಲ್ಲೇ ಹೆಚ್ಚು ಖುಶಿ ನನಗೆ..
ಇಷ್ಟೆಲ್ಲಾ ಖುಶಿಯ ಕ್ಷಣಗಳು ಒಂದೊಂದಾಗಿ ಬಂದು ಹೋಗಿವೆ, ಆದ್ರೂ ಯಾಕೋ ದಿನ ಸರಿ ಇರಲಿಲ್ಲ ಅನ್ನಿಸಿತ್ತಲ್ಲಾ, ಯಾಕೆ ? ಅದು ನನಗೆ ಅರ್ಥವಾಗಿತ್ತು... ಅಷ್ಟೊತ್ತೂ ನಾನು ಇಡೀ ದಿನ ಅನುಭವಿಸಿದ ಖುಶಿಯ ಕ್ಷಣಗಳನ್ನ ಗಣನೆಗೇ ತಗೊಂಡಿರಲಿಲ್ಲ.. ದುಃಖ ಅನ್ನೋದು ಕಾರಣಾನೇ ಇಲ್ಲದೆ ಆವರಿಸಿಕೊಂಡುಬಿಡತ್ತೆ.. ಆದ್ರೆ ಕಾರಣ ಇದ್ರೂ ಖುಶಿಪಡೋದಕ್ಕೆ ನಮಗೆ ಬರಲ್ಲ.. ಅದನ್ನ ಕಲ್ತ್ಕೋಬೇಕಲ್ವಾ ? ಜ್ಞಾನೋದಯವಾಗಿತ್ತು..!
ಈ ವರ್ಷ ಖುಶಿಯನ್ನ ಹುಡುಕೋ ರೆಸಲ್ಯೂಶನ್ ಮಾಡಿದ್ದೀನಿ.. ಪ್ರತಿ ದಿನ ನಾನು ಖುಶಿಪಡೋ ಹತ್ತು ಸಂಗತಿಗಳನ್ನಾದ್ರೂ ಕಂಡ್ಕೋತಿನಿ.. ಇಂಥದ್ದೊಂದು ನಿರ್ಧಾರಕ್ಕೆ ನಾನು ಬರೋದಕ್ಕೆ ನನ್ನ ಗೆಳತಿಯಂತಾ ಸೋದರಿಯೇ ಸ್ಪೂರ್ತಿ.. ಅವಳು ಸಮಸ್ಯೆಗಳನ್ನ ಚೂಯಿಂಗಮ್ ಥರಾ ಎಳೆದುಕೊಂಡುಹೊಗೋಳೇ ಅಲ್ಲ.. ಸದಾ ಖುಶಿಯಾಗಿದ್ದು ಖುಶಿಯನ್ನ ಹಂಚೋದನ್ನ ನಾನು ಅವಳಿಂದ ಇಷ್ಟು ವರ್ಷ ಜೊತೆಗಿದ್ರೂ ಕಲಿತಿಲ್ಲ.. ಅವಳ ದಾರಿಯಲ್ಲಿ ನಡೆಯೋದಕ್ಕೆ ಆರಂಭಿಸ್ತಾ ಹೊಸವರ್ಷಕ್ಕೆ ಕಾಲಿಟ್ಟಿದ್ದೀನಿ.. ಐ ಲವ್ ಯು 2012 ಅಂತ ಕಟ್ಟಕಡೆಯ ದಿನ ಗಟ್ಟಿಯಾಗಿ ಹೇಳಬೇಕು ನನಗೆ.. ಅದಕ್ಕೆ ಪ್ರಿಪರೇಶನ್ನಾಗಿ ದಿನಕ್ಕೊಮ್ಮೆ ಅವತ್ತಿನ ದಿನಕ್ಕೆ ನನ್ನ ಪ್ರೀತಿಯನ್ನ ಕನ್ವೇ ಮಾಡ್ತೀನಿ.. ಚನ್ನಾಗಿರತ್ತೆ.. ಇದು ನನ್ನ ಹ(ವ)ರುಷ ಆಗತ್ತೆ ಅಲ್ವಾ ?
No comments:
Post a Comment