Friday, January 6, 2012

ನಾನು- ನನ್ನ ಲೋಕ..!

ಆ ಪುಟ್ಟ ಲೋಕ ಸಂದರವಾಗಿತ್ತು.. ಅಲ್ಲಿ ನಾನೊಬ್ಬಳೇ ಇದ್ದೆ.. ನನಗಿಷ್ಟವಾಗಿದ್ದನ್ನೇ ನನಗೆ ಕೊಡ್ತಾ ಇದ್ರು.. ಇಲ್ಲಾ ಅಂದ್ರೆ ನಾನು ಸುಮ್ಮನಿರ್ತಾ ಇದ್ನಾ ? ಅರಚಾಡಿ ,ಉಳ್ಳಾಡಿಬಿಡ್ತಿದ್ದೆ.. ನನ್ನ ಮೇಲಿನ ಭಯಕ್ಕೇ ಇರಬೇಕು ನನಗೆ ಹಿತ ಅನ್ನಿಸೋ ಥರಾನೇ ಇರ್ತಾ ಇದ್ರು.. ನನಗೆ ಸರಿಹೊಗೋ ಥರಾ ಮಲಗಿಕೊಳ್ತಾ ಇದ್ರು.. ನನಗೆ ಚಳಿ ಆಗದ ತರ ನೋಡ್ಕೋತಿದ್ರು.. ಹಸಿವು ಕಾಡದಂತೆ ಕಾಳಜಿವಹಿಸ್ತಾ ಇದ್ರು.. ಒಟ್ಟಲ್ಲಿ ನಾನು ಅಲ್ಲಿ ರಾಣಿ.. ಆ ಅನುಭವದ ಉತ್ತುಂಗದ ಸಂಭ್ರಮದಲ್ಲಿ ನಾನಿದ್ದಾಗಲೇ ಅದೇನೋ ಒತ್ತಡ.. ತಲೆತಿರುಗಿದಂತಾಗಿತ್ತು.. ನನಗೆ ಹೊರಳಾಡೋದಕ್ಕೇ ಆಗಲಿಲ್ಲ.. ಇದ್ದ ಜಾಗಾ ಜಾರುತ್ತಿತ್ತು.. ಜೋರಾಗಿ ಕೂಗಿಕೊಂಡರೂ ಪ್ರಯೋಜನ ಆಗಲಿಲ್ಲ.. ನಾನು ದೊಡ್ಡದ್ಯಾವುದೋ ಸಂಕಷ್ಟದಲ್ಲಿ ಸಿಲುಕಿದ್ದೆ.. ನಿಂತಜಾಗ ಕುಸಿದಂತಾಗಿತ್ತು.. ನಾನು ನನ್ನಲೋಕದಿಂದ ಅಷ್ಟಷ್ಟಾಗಿ ಹೊರಹೋಗ್ತಾ ಇದ್ದೆ.. ಕೊನೆಗೆ ಒಮ್ಮೆಲೇ ನಾನು ಕಂಡುಕೇಳರಿಯದ ಬೇರೆಯದೇ ಲೋಕ ನನ್ನ ಕಣ್ಣಮುಂದಿತ್ತು.. ಭಯಾ ಆಗಿ ಚೀರಿಕೊಂಡೆ..

ನಾನು ಎಲ್ಲಿದ್ದೀನಿ, ನನಗೆ ಏನ್ ಮಾಡ್ತಾ ಇದ್ದಾರೆ  ಒಂದೂ ಅರ್ಥವಾಗ್ತಾ ಇರಲಿಲ್ಲ.. ಈ ವಿಚಿತ್ರಲೋಕದಲ್ಲಿ ಕಣ್ಣು ಬಿಡೋದಕ್ಕೂ ನನಗೆ ಭಯ.. ಯಾವುದೋ ದೊಡ್ಡ ಜೀವಿ ನನ್ನನ್ನ ಒರಟೊರಟಾಗಿ ಮೇಲೆತ್ತಿದಾಗ, ಉಸಿರೇ ನಿಂತ್ಹೋದಾಂಗ್ ಆಗಿತ್ತು.. ನಾನು ಇಲ್ಲಿ ಜಾಸ್ತಿ ಹೊತ್ತು ಇರಬಾರದು ಅನ್ನೋ ಯೋಚನೆ ಬಂದು ,ಏಳೋದಕ್ಕೆ ನೋಡಿದೆ.. ಕೈ ಕಾಲು ಯಾವುದರಲ್ಲೂ ಭಲ ಇರಲಿಲ್ಲ.. ಎಲ್ಲವೂ ಗಾಳಿಯಲ್ಲಿ ತೇಲಿದಂತಾಗತೊಡಗಿತ್ತು.. ಕಷ್ಟಾಪಡ್ತಾ ಇದ್ದೆ.. ಆಗಲೇ ನನ್ನನ್ನ ಪರಿಚಿತವಾದದ್ದೇನೋ ಸೋಕಿತ್ತು.. ಅದೇನು ಗೊತ್ತಾಗಲಿಲ್ಲ.. ನಂತ್ರ ಅದರ ಸ್ಪರ್ಷ ಹಿತ ಅನ್ನಿಸೋದಕ್ಕೆ ಶುರುವಾಯ್ತು.. ಮತ್ತೆ ಬೆಚ್ಚನೆಯ ಅನುಭವ.. ಮತ್ತದೇ ಹಿತ.. ಹಸಿವು ಕಾಡಲಿಲ್ಲ.. ಆ ಕಾಳಜಿ .. ಮಮತೆ .. ಪ್ರೀತಿ ಹಳೆಯದೆಲ್ಲವನ್ನೂ ಮರೆಸಿಬಿಟ್ಟಿತ್ತು.. ನಾನು ಅವಳಿಂದಾಗಿ ಈ ಪರಿಸರವನ್ನ ಒಪ್ಪಿಕೊಂಡುಬಿಟ್ಟೆ.. ಆಕೆ ನನಗೆ ಮುದವಾದ ಅನುಭವ ಕೊಟ್ಟವಳು .. ಅವಳು ನನ್ನ ಅಮ್ಮ..

 ಅಮ್ಮನ ಪ್ರಪಂಚದಲ್ಲಿ ನಾನಿದ್ದೆ.. ಆಕೆ ನನ್ನನ್ನ ನೋಡಿ ಏನೋ ಅಂತಿದ್ಲು.. ಅದು ನನಗೆ ಅರ್ಥವಾಗ್ಲಿಲ್ಲ.. ಆದ್ರೆ ಅವಳು ಏನೋ ಹೇಳ್ತಾಳೆ , ಆಗ ನಾನು ಸ್ಪಂಧಿಸಬೇಕು ಅನ್ನೋದು ಗೊತ್ತಾಯ್ತು.. ಅದು ನನ್ನ ಹೆಸರಂತೆ.. ಅವಳೇ ಹೇಳಿದ್ದು.. ಅವಳು ನನಗೆ ತುಂಬಾ ಜನರನ್ನ ಪರಿಚಯಿಸಿದಳು.. ಅಪ್ಪ ಅಜ್ಜ ಅಜ್ಜಿ , ಅಣ್ಣ , ಅಕ್ಕ ಚಿಕ್ಕಪ್ಪ, ಚಿಕ್ಕಯ್ಯ, ಚಿಕ್ಕಮ್ಮ , ಆಂಟಿ , ಅತ್ತೆ ಮಾವ ಅಬ್ಬಬ್ಬಾ ಎಷ್ಟೊಂದು ಜನ ನನ್ನನ್ನ ಅಮ್ಮನ ಥರಾನೇ ಪ್ರೀತಿಸ್ತಾ ಇದ್ರು.. ಅವರೆಲ್ಲರೂ ಇಷ್ಟವಾಗತೊಡಗಿದ್ರು.. ನಾನು ಒಬ್ಬೊಬ್ಬರನ್ನೇ ನೋಡಿದಾಗಲೂ ಹೊಗಳಿ ಅಟ್ಟಕ್ಕೇರಿಸ್ತಾ ಇದ್ರು.. ಹಾಗಾಗೇ ನಾನು ನನ್ನ ಈ ಪ್ರಪಂಚವನ್ನ ಪ್ರೀತಿಸ್ತಾ ಇದ್ದೆ. ಅದಕ್ಕೇ ನನ್ನ ಮುಖದಲ್ಲಿ ನಗು ಮೂಡಿದ್ದು.

ನನಗೆ ಯಾಕೆ ಖುಶಿ ಆಗತ್ತೆ ಅನ್ನೋದು ಮೊದಮೊದಲು ನನಗೇ ಅರ್ತವಾಗ್ತಾ ಇರಲಿಲ್ಲ.. ನಿದ್ದೆಯಲ್ಲೂ ನಗ್ತಾ ಇದ್ನಂತೆ..ಅಮ್ಮಾ ಹೇಳ್ತಿದ್ಲು.. ಆಕೆ ಅದನ್ನ ಹೇಳಿದಾಗಲೂ ನಕ್ಕಿದ್ದೆ.. ಎಲ್ಲರೂ ಕೇಕೆ ಹಾಕಿದ್ರು.. ಆಗ ಗೊತ್ತಾಯ್ತು ನಾನು ಆಗಾಗ ನಗಬೇಕು ಅಂತ.. ಸದಾನಗುನಗುತಾ ಇರೋದು ರೂಡಿ ಆಗಿಹೋಯ್ತು.. ಖುಶಿನೋ ಖುಶಿ.. ಕಾಲು ಕೈ ಎಲ್ಲದರ ಜೊತೆಗೂ ಆಡಿ ನನ್ನದೇ ಭಾಷೆಯಲ್ಲಿ ಮಾತಾಡಿ ಮನಸಿಗೆ ಹತ್ತಿರವಾಗಿಸಿಕೊಂಡೆ.. ದಿನಕಳೆದಹಾಗೆ ನಾನೊಬ್ಬಳೇ ಮಲಗಿದ್ದಲ್ಲಿ ಮಲಗಿರೋದು, ಎಲ್ಲರೂ ನನ್ನನ್ನ ಮತಾಡಿಸಿ ಮಾತಾಡಿಸಿ ಅಲ್ಲಿಂದ ಹೊರಟೋಗ್ತಾರೆ ಅನ್ನಿಸ್ತು.. ಹಾಗಾಗಿ ಜೊತೆಗೆ ಹೊಗೋ ಪ್ರಯತ್ನ ಶುರುಮಾಡಿದೆ.. ಮಲಗಿದ್ದಲ್ಲೇ ಜಾರಿದೆ.. ಮಗ್ಗಲು ಬದಲಿಸಿದೆ.. ಅಮ್ಮಾ ಓಡಿಬಂದು ನೋಡಿ ಎಲ್ಲರನ್ನೂ ಕರೆದು ತೋರಿಸಿದ್ಲು.. ಎಲ್ಲರೂ ಖುಶಿಯಾದ್ರು.. ಅದನ್ನ ನೋಡಿ ನಾನೇನೋ ಸಾಧಿಸಿದ್ದೇನೆ ಅಂತ ಅಂದ್ಕೊಂಡು ಮತ್ತೆ ಮತ್ತೆ ಹಾಗೇ ಮಾಡಿದೆ.. ಯಾವಾಗ ಎಲ್ಲರಿಗೂ ನನ್ನ ಆ ಹೊಸ ಪ್ರಯತ್ನದಲ್ಲಿ ಇಂಟ್ರಸ್ಟ್ ಕಡಿಮೆ ಆಯ್ತು ಅನ್ನಿಸ್ತೋ ಮತ್ತೇನೋ ಮಾಡಿದೆ.. ಮತ್ತೆ  ಖುಶಿ.. ಮುಂದೆ ಹೋದೆ , ಹಿಂದೆ ಬಂದೆ.. ಎಲ್ಲರೂ ನನ್ನನ್ನ ಗುರುತಿಸೋವರೆಗೂ ನಾನು ಮಾಡಿದ್ದನ್ನೇ ಮಾಡಿದೆ.. ಹೊಸತೇನೋ ಮಾಡಿದೆ..!
ಮೊದಲು ಅಪ್ಪನ ಬೆರಳು ಹಿಡಿದು ನಿಂತ ಕ್ಷಣ, ಹೆಜ್ಜೆಯನಿಟ್ಟು ನಡೆದ ದಿನ, ಅಮ್ಮಾ ಅಂದಾಗ ಆದ ಸಂಭ್ರಮ ಎಲ್ಲವೂ ಹಿತವಾಗಿತ್ತು.. ಜೊತೆಗೆ ನಿಂತಷ್ಟೂ ದಿನ ನಿಲ್ಲೋದಕ್ಕೆ ಖುಶಿ ಇತ್ತು.. ಜೊತೆಯಾಗಿ ನಡೆವಾಗ ನಡೆಯೋದರಲ್ಲೇ ಸಡಗರ.. ಮಾತು ಮಾತು ಬೆರೆತಾಗ ಆದ ಸಂಭ್ರಮ ಅಷ್ಟಿಷ್ಟಲ್ಲ.. ನನ್ನ ಆ ಪ್ರಪಂಚದಲ್ಲಿ ನಾನು ತೃಪ್ತಳಾಗಿದ್ದೆ..

ಮತ್ತೆ ದಿನಗಳು ಉರುಳಿದವು.. ಮೊದಲು ನನ್ನ ಒಂದೊಂದು ಹಾವ ಭಾವಗಳನ್ನೂ ಗುರುತಿಸ್ತಾ ಇದ್ದ ಹಾಗೆ, ನಂತರ ಯಾರೂ ಗುರುತಿಸೋರು ಇರಲಿಲ್ಲ.. ಮಾತುಗಳಿಗೆ ನಕ್ಕವರಿಲ್ಲ.. ಹಂಗಾಗೇ ಅಮ್ಮನ ಕೈ ಬಿಟ್ಟು ಗೆಳತಿಯರೆಡೆಗೆ ಓಡಿದೆ.. ಶಾಲೆ ಪಾಠ ಓದು , ಎಲ್ಲಾ ಕಡೆ ನನ್ನನ್ನ ಹೇಗೋ ಗುರುತಿಸಬೇಕು.. ಅದೇ ನನ್ನ ಬದುಕು.. ಗುರುತಿಸಿದಷ್ಟೂ ಸಂಭ್ರಮ.. ಇಲ್ಲವಾದರೆ ಅಲ್ಲಿಂದ ಓಡು.. ಮತ್ತೇನೋ ನನ್ನನ್ನ ಹೆಮ್ಮೆಯಿಂದ ಕೈ ಮಾಡಿ ತೋರಿಸೋ ಥರ ಮಾಡು..

ನನ್ನ ಪ್ರಪಂಚ ಬದಲಾಗುತ್ತಾ ಬಂದಿತ್ತು.. ಹೀಗೆ ನಾನು ಬದುಕಿದ ಅಷ್ಟೂ ದಿನ ನಾನು ಕಡೆಗಣಿಸಿದ್ದು ನನ್ನೊಳಗಿನ ಮಾತನ್ನ.. ನನ್ನ ಭಾವನೆಗಳನ್ನ.. ಆ ಯೋಚನೆ ಬಂದಾಗ ಕನಸುಕಾಣ ತೊಡಗಿದ್ದೆ.. ಒಂಟಿಯಾಗಿ ನಿಂತು ಬಾನಂಗಳವನ್ನ ದಿಟ್ಟಿಸತೊಡಗಿದ್ದೆ.. ಮನಸಿನ ಮಾತುಗಳನ್ನ ಮೌನವಾಗಿ ಆಲಿಸತೊಡಗಿದ್ದೆ.. ಎಲ್ಲವನ್ನೂ ಅವನು ನೋಡ್ತಾ ಇದ್ದ.. ನೋಡಿ ನಕ್ಕಿದ ಥರಾ ಅನ್ನಿಸಿತ್ತು.. ಅವನಿಗೆ ನನ್ನಮನಸನ್ನ ಇಣುಕಿ ನೋಡಿ ಖುಶಿಪಡ್ತಾ ಇದ್ದಾನೆ ಅನ್ನಿಸ್ತು.. ಹಂಗಾಗಿ ಮತ್ತೆ ನನ್ನೊಳಗಿನ ಮಾತುಗಳನ್ನ ಹಂಚಿಕೊಳ್ಳೋ ತವಕ.. ಭಾವನೆಗಳನು ಶಬ್ದವಾಗಿ ಪೋಣಿಸಿದ್ದೆ.. ಮಾತಿನ ಹಾರವನು ಅವನಕೊರಳಿಗೆ ಹಾಕಿದ್ದೆ.. ಅವನ ಕಣ್ ಹೊಳಪಿನಲಿ ಚಿತ್ತಾರಬಿಡಿಸಿದ್ದೆ.. ಆಲಂಗಿಸಿ ಅನುಭವಿಸಿ ಆನಂದವಾಗೋದಕ್ಕೆ ಅವನದಾರಿ ಕಾಯ್ತಿದ್ದೆ.. ಅವನ ನಗುಮುಗವನ್ನ ನೋಡೋದಕ್ಕೆ ತಿಂಗಳು ಕಾಯಲೇಬೇಕು.. ಹುಣ್ಣಿಮೆಯ ವರೆಗೆ...! ಅವನು ಬಾನಂಗಳದಲ್ಲಿ ಬೆಳಕಿನ ರಂಗವಲ್ಲಿ ಬರೆದು ನನಗಾಗಿ ನಿಂತಿರ್ತಾ ಇದ್ದ.. ಐ ಲವ್ ಚಂದಮಾಮ..!

ಚಂದಿರನಂತೆ ನನ್ನ ಪ್ರೀತಿಸಿದವರು.. ಮನಸಿನ ಮಾತುಗಳನ್ನ ಅಲಿಸಿದವರು , ನನ್ನೊಳಗೆ ಬಂದು ಉತ್ತರಿಸಿದವರು ಯಾರೂ ಇರಲಿಲ್ಲ.. ಎಲ್ಲರಿಂದಲೂ ನಾನು ದೂರವಾಗುತ್ತ ಸಾಗಿದ್ದೆ.. ಮನಸಿನಮಾತುಗಳನ್ನ ಹಂಚಿಕೊಳ್ಳೋದಕ್ಕೆ ಯಾರೂ ಇರಲಿಲ್ಲ.. ಅಪ್ಪನದು ಕಾಳಜಿ.. ಅಮ್ಮನದು ಮಮಕಾರ.. ಅಕ್ಕ ಸ್ನೇಹಿತೆಯಾದರೂ ಅವಳೊಂದಿಗೆ ಮನಸನ್ನಬಿಚ್ಚಿಡೋದಕ್ಕೆ ಭಯ..ಅವಳು ನನ್ನ ಭಾವನೆಗಳಿಗೆ ಬಣ್ಣಹಚ್ಚದಿದ್ದರೆ ಅನ್ನೋ ಆತಂಕ.. ಇನ್ನು ಅಣ್ಣ, ಅವನೊಂದಿಗೆ ಕೆಲ ವಿಷಯಗಳನ್ನ ಹೇಳೋದಕ್ಕೇ ಆಗಲ್ಲ.. ಅವನು ನನ್ನಂಥವನಲ್ಲ.. ನನ್ನಂತೆ ಖುಷಿಪಡದಿದ್ದರೆ ನನಗೆ ಇರಸುಮರಸು.. ತಮ್ಮ ಚಿಕ್ಕವನು.. ಸಂಬಂಧಿಕರೆಲ್ಲಾ ದೂರ ದೂರ.. ಆಗ ಹತ್ತಿರವಾಗುವವರು ಸ್ನೇಹಿತೆಯರು .. ಆದ್ರೆ ಅಲ್ಲೂ ಹೃದಯದ ಮಾತುಗಳು ಮಾತ್ರ ನನ್ನೊಳಗೇ ಉಳಿದವು.. ನಾನಾಡದ ಮಾತುಗಳನ್ನ ಅರಿಯೋ, ಅಡಗಿರೋ ಕನಸಿಗೆ ಬಣ್ಣ ಬಳಿಯೋ , ಅರಿವಿಲ್ಲದೇ ಮನಸಿಗೆ ಹತ್ತಿರವಾಗೋ ಒಂದೇ ಒಂದು ಜೀವ ಹತ್ತಿರ ಸುಳಿಯಲಿಲ್ಲ..  ನನ್ನ ಪ್ರಪಂಚ ಬದಲಾಗತೊಡಗಿತ್ತು..!

ಇಷ್ಟು ದಿನ ನಾನು ಈ ಪ್ರಪಂಚವನ್ನ ಪ್ರೀತಿಸಿದ್ದೇ ಸುತ್ತಲಿನ ಪರಿಸರವನ್ನ ನೋಡಿ.. ಜನರನ್ನ ನೋಡಿ.. ಅವರು ನನ್ನನ್ನ ನೋಡಿ ಖುಶಿಪಡೋ ರೀತಿಯನ್ನ ನೋಡಿ.. ನನಗೆ ಸಂಭ್ರಮಿಸೋದಕ್ಕೆ ಇದ್ದ ಕಾರಣಗಳನ್ನ ನೋಡಿ.. ಈಗ ಅದ್ಯಾವುದೂ ಕಾಣಿಸುತ್ತಲೇ ಇಲ್ಲ..! ಯಾಕೆ ಹೀಗೆ ?

ಈಗ ಅರ್ಥವಾಗಿದೆ.. ಇದು ನನ್ನ ಬದುಕಲ್ಲ.. ನನ್ನನ್ನ ಸುತ್ತಲಿನ ಸಮಾಜ ಸೃಷ್ಟಿಸಿದೆ.. ಅದು ಮಾಯಾ ಸೃಷ್ಟಿ.. ಅದು ನಡೆಸಿದಷ್ಟು ದಿನ ನಾನು ನಡೆಯುತ್ತೇನೆ.. ಸಂಭ್ರಮಿಸಿದಷ್ಟು ದಿನ ಸಂಭ್ರಮಿಸುತ್ತೇನೆ.. ಬೆಳೆಸಿದಷ್ಟು ದಿನ ಬೆಳೆಯುತ್ತೇನೆ.. ಉಳಿಸಿದಷ್ಟು ದಿನ ಉಳಿಯುತ್ತೇನೆ.. ಮುಗಿಸಿದ ದಿನ ಮುಗಿಯುತ್ತೇನೆ..!

ಮತ್ತೆ ಅಮ್ಮನ ಉದರದೊಳಗಿನ ಅಪರೂಪದ ಬದುಕು ನೆನಪಾಗುತ್ತಿದೆ.. ಒಳಗೆ ಸೇರಿಕೊಂಡು ಆ ಹಿತವನ್ನ  ಅನುಭವಿಸೋ ಬಯಕೆ.. ಬೆಚ್ಚನೆಯ ಲೋಕದಲ್ಲಿ ವಿಹರಿಸೋ ಬಯಕೆ.. ಸೃಷ್ಟಿಸಿಕೊಳ್ಳಬೇಕು ಅದನ್ನೇ.. ಬದುಕಬೇಕು ಆ ಬದುಕನ್ನೇ.. ನಾನು ಮತ್ತು ನನ್ನ ಬಯಕೆಗಳಷ್ಟೇ ಇರೋ ಆ ಅದ್ಭುತ ಲೋಕ ಮತ್ತೆ ಕಾಣಿಸೋದೇ ಇಲ್ಲವಾ ? ಹುಡುಕುತ್ತಿದ್ದೇನೆ..

 

1 comment:

  1. ಲಹರಿ ಚೆನ್ನಾಗಿದೆರಿ..

    ReplyDelete