Saturday, December 31, 2011

ಲವ್ ಯು 2012..


ನೆನ್ನೆ ಸುಂದರವಾಗಿತ್ತಾ ? ಉಹು ಯಾಕೋ ಚನ್ನಾಗೇ ಇಲ್ಲ ಅನ್ನಿಸಿತ್ತು .. ಆದ್ರೆ ಯಾಕೆ ? ಅಕ್ಕ ಹೇಳಿದ್ದಳು ನೀನು ರೀಸನ್ ರಾಣಿ ಅಂತ..ಅದು ನಿಜ.. ನನಗೆ ಪ್ರತಿಯೊಂದಕ್ಕೂ ಕಾರಣ ಕಾಣತ್ತೆ.. ನೆನ್ನೆಯ ದಿನ ಚನ್ನಾಗಿಲ್ಲದಿರೋದಕ್ಕೆ ನನಗಿದ್ದ ತಲೆನೋವು ಕಾರಣ.. ಆ ತಲೆನೋವಿಗೆ ಸಾವಿರ ಕಾರಣಗಳಿದ್ವು.. ಎಲ್ಲವನ್ನೂ ಮೆಟ್ಟಿನಿಂತು ಮೋಡ ಬಿಡದೇ ಕಾಡ್ತಾ ಇರೋ ಜಿಟಿ ಜಿಟಿ ಮಳೆ , ಚಳಿ ಎಲ್ಲವೂ ಕಾರಣ ಅಂತ ನಿರ್ಧರಿಸಿಕೊಂಡೆ.. ಯಾಕೋ ಆಪೀಸ್ಗೆ ಹೊಗೋದಕ್ಕೆ ಆಗಲ್ಲ ಅನ್ನೋಷ್ಟು ನಿತ್ರಾಣವಾಗಿದ್ದರಿಂದ ಒಂದು ಕ್ರೋಸಿನ್ ಹಾಕ್ಕೊಂಡೆ.. ಮತ್ತೆ ಅದೇ ತಯಾರಿ.. ಅದೇ ಕಚೇರಿ... ಅದೇ ಜನ ,ಅದೇ ಕೆಲಸ.. ಅದೇ ಮನೆ, ಅದೇ ನಿದ್ದೆ ಹೀಗೆ ಮುಗಿದುಹೋಗತ್ತೆ ವರುಷ.. ನೋವಿನಲ್ಲೇ ಕಣ್ಮುಚ್ಚಿದ್ದೆ..

 ಥಟ್ ಅಂತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದು ಖುಶಿ ಅನ್ನೋದು ಎಲ್ಲಿದೆ ಅನ್ನೋ ಪ್ರಶ್ನೆ.. ತಕ್ಷಣ ಎದ್ದು ಕೂತೆ.. ನೋವು ಬೇಸರ ಯಾವುದೂ ನೆನಪಿಲ್ಲ.. ಬೆಳಿಗ್ಗೆ ಕಣ್ಬಿಟ್ಟಾಗ ಕಿಟಕಿಯಿಂದ ನನ್ನ ಶುಭ್ರ ನಿದ್ದೆಯನ್ನೇ ಕದ್ದು ಕದ್ದು ನೋಡಿ ಕಣ್ಮಿಟುಕಿಸ್ತಾ ಇದ್ದ ಬೀದಿ ದೀಪ ಕಾಣಿಸಿತ್ತು.. ನೋಡಿ ನಕ್ಕಿದ್ದೆ.. ಯಾಕೆ ಬಂತೋ ನಗು ಗೊತ್ತಿಲ್ಲ.. ಆ ನಗುವಿನಲಿ ಒಲವಿನ ಭಾವ ಬೀರಿ ಬಂದು ತಾಕಿದ್ದು ತಂಗಾಳಿ.. ಅದು ಮಿಲನದ ಸಂಭ್ರಮದಲ್ಲಿ ಸೃಷ್ಟಿಯಾದ ಸೊಬಗು ಅನ್ನೋದು ಗೊತ್ತಾಗೋದಕ್ಕೆ ಜಾಸ್ತಿ ಸಮಯ ಹಿಡಿಯಲಿಲ್ಲ.. ಸೂಕ್ಷ್ಮವಾಗಿ ಗೃಹಿಸಿದರೆ ಆ ಮಿಲನದಲ್ಲಿ ಸಂಭ್ರಮ ಕಾಣಿಸುತ್ತೆ.. ಸ್ಪರ್ಷದಲ್ಲೊಂದು ನವಿರಾದ ಭಾವವಿದೆ.. ಆ ಭಾವಕ್ಕೆ ಜೀವವಿದೆ.. ನೆಮ್ಮದಿ ಇದೆ.. ಸುಖವಿದೆ.. ಸಂತಸವಿದೆ ಜೊತೆಗೆ ತಂಗಾಳಿಯಲ್ಲಿ ಸುವಾಸನೆ ಇದೆ.. ಅದೊಂದು ಸ್ಮೆಲ್ ಎಲ್ಲವನ್ನೂ  ತೆರೆದಿಟ್ಟುಬಿಡತ್ತೆ.. ಅದನ್ನ ಅನುಭವಿಸಿದರೆ ಹಾಸಿಗೆಯಿಂದೆದ್ದು ಹೊರನಡೆಯದೇ ಇರೋದಕ್ಕೆ ಸಾಧ್ಯಾನೇ ಇಲ್ಲ..


ಪೃಕೃತಿ ಅದೆಷ್ಟು ಸುಂದರ ಅಲ್ವಾ ? ಅಲ್ಲಿ ಎಲ್ಲದಕ್ಕೂ ಅರ್ಥವಿದೆ.. ಸಂಬಂಧವಿದೆ ಸಂಸ್ಕಾರವಿದೆ.. ಒಲವಿದೆ ಬಲವಿದೆ ಒಗ್ಗಟ್ಟಿದೆ.. ಅರಿವಿದೆ.. ಅರಿಯದ ಅನುಭೂತಿ ಇದೆ , ಆಕರ್ಷಣೆ ಇದೆ.. ಅಪಾರ ಪ್ರೇಮವಿದೆ.. ಮೌನವಿದೆ.. ಮೋಹವಿದೆ .. ನಗುವಿದೆ.. ನಲಿವಿದೆ.. ಅಬ್ಬಾ ಎಲ್ಲವೂ ಸುಂದರ..

ಯಾರು ಜೀವವೇ... ಯಾರು ಬಂದವರು
ಭಾವನೆಗಳನೇರಿ..
ಒಣಗಿದೆನ್ನೆದೆಗೆ ತಂಪತಂದವರು... ಅಂತ ಹಾಡ್ತಾ ಇದ್ದದ್ದು ಬಿರಿದ ನೆಲಾನಾ ?


ನೀನಿಲ್ಲದೇ ನನಗೇನಿದೆ
ನಿನ್ನಂದ ನನ್ನಲ್ಲಿ ನೆಲೆಯಾಗಿದೆ ಅಂತ ನುಲಿದದ್ದು ನಲಿವ ಜಲಾನಾ ?


ನಿಜಕ್ಕೂ ಮಳೆಗೂ ಮಣ್ಣಿಗೂ ಅದ್ಯಾವ ಜನ್ಮದ ಮೈತ್ರಿ ಇದೆಯೋ ಏನೋ.. ಕರೆವ ರೀತಿಗೆ .. ಬೆರೆವ ಪ್ರೀತಿಗೆ ಸಾಟಿನೇ ಇಲ್ಲ.. ಎದೆಯೊಡ್ಡಿ ನಿಲ್ಲೋ ಭೂಮಿ , ಓಡಿಬಂದು ತಬ್ಬಿಕೊಳ್ಳುವ ಮಳೆಬಿಲ್ಲಿನ ಹನಿ.. ಒಂದಕ್ಕೊಂದು ಅದೆಷ್ಟು ಅದ್ಭುತವಾಗಿ ಬೆರೆತುಹೋಗತ್ತೆ ಅಲ್ವಾ ? ನಿಜವಾದ ಪ್ರೀತಿಗೆ ನೆಲಜಲಕ್ಕಿಂತ ಆದರ್ಷ ಬೇಡವೇನೋ.. ಒಂದಕ್ಕೊಂದು ಬೇರೆ ಮಾಡಲು ಸಾಧ್ಯವೇ ಇಲ್ಲದ ರೀತಿ ಬೆರೆಯುತ್ತೆ.. ಬೆಳೆಯುತ್ತೆ.. ಬದುಕನೀಡತ್ತೆ..ಆದರೆ ಅದಕ್ಕಿರೋ  ಅದರದೇ ಆದ ರೂಪ ಗುಣ ಜೀವ ಭಾವ ಎಲ್ಲವೂ ಹಾಗೇ ಇರತ್ತೆ.. ಅಲ್ಲಿ ಯಾವುದರ ಅಸ್ತಿತ್ವವೂ ಕಳೆದುಹೋಗಲ್ಲ.. ಅದಕ್ಕೇ ಏನೋ ಕವಿ ನೀನು ನೆಲ ನಾನು ಜಲ ಅಂತ ಪ್ರೇಮದ ಕಡಲಲ್ಲಿ ತೇಲಿದ್ದು..

ಆ ಮಧುರ ಪ್ರೇಮದ ದಿವ್ಯ ಆಲಿಂಗನವನ್ನ ಮನಸಾರೆ ಅನುಭವಿಸಿ ಆರಂಭಿಸಿದ ದಿನ ಅದ್ಭುತವಾಗಿರದೇ ಇರತ್ತಾ? ಆ ಖುಶಿಯಲ್ಲೇ ಅಡುಗೆ ಮನೆಯೊಳಗೆ ಅಡಿ ಇಟ್ಟವಳಿಗೆ ಬಿಸಿ ಬಿಸಿ ನೀರುಕುಡಿಯೋ ಮನಸಾಗಿತ್ತು.. ಒಂದು ಉದ್ದನೆಯ ಸ್ಟೀಲ್ ಕಪ್ಪನ್ನ ಒಂದೋಂದೇ ಸಿಪ್ಪಾಗಿ ಅನುಭವಿಸುತ್ತಾ ಕುಡಿದಿದ್ದೆ.. ನಮ್ಮನೆಯ ನೀರಿಗೂ ಒಂದು ಅದ್ಭುತವಾದ ರುಚಿ ಇದೆ ಅನ್ನೋದು ಗೊತ್ತಿರಲೇ ಇಲ್ಲ.. ಅದೇ ಖುಶಿಯಲ್ಲಿ ಮಧ್ಯಾನ್ಹದ ಊಟದ ಡಬ್ಬಿ ರೆಡಿ ಆಯ್ತು..ಅದೂ ಅಷ್ಟೇ ಘಮ ಘಮ ಅಂತಿತ್ತು.. ನಂತ್ರಾ ಬಿಸಿ ಬಿಸಿ ನೀರಲ್ಲಿ ಸುದೀರ್ಘ ಹದಿನೈದು ನಿಮಿಷಗಳ ಕಾಲ ಸ್ನಾನ ಮಾಡೋವಾಗ ಅದೆಷ್ಟು ಖುಶಿಪಟ್ಟೆ ಅನ್ನೋದನ್ನ ಹೇಳೋದಕ್ಕೇ ಸಾಧ್ಯಾ ಇಲ್ಲ.. ಆಹಾ ಛುಮು ಛುಮು ಚಳಿಯಲ್ಲಿ, ಜಿಟಿ ಜಿಟಿ ಮಳೆಯಲಿ ಬಿಸಿನೀರಿನ ಸ್ನಾನ ಕೊಡೋ ಖುಶಿ ಇದೆಯಲ್ಲಾ ಅದನ್ನ ಇನ್ನೇನೂ ಕೊಡಲ್ಲ.. ಆ ಅದ್ಭುತ ಸ್ನಾನದ ನಂತ್ರ ನನ್ನ ಪ್ರೀತಿಯ ಕಪ್ಪು ಮಿಶ್ರಿತ ಕೆಂಪು ಬಣ್ಣದ ಟಾಪನ್ನ ಹಾಕಿಕೊಳ್ಳೋದಕ್ಕೆ ಹೊರಟಿದ್ದೆ.. ಅದಕ್ಕೆ ಐರನ್ ಬೇಡ.. ಹಂಗಾಗಿ ಅದು ಅಂದ್ರೆ ನಂಗಿಷ್ಟ.. ಯಾಕೋ ಅವತ್ತು ಪಾರ್ ಅ ಚೇಂಜ್ ಆ ಟಾಪನ್ನೂ ಪ್ರೆಸ್ ಮಾಡಿದೆ.. ಯಾವತ್ತೂ ಐರನ್ ಬಾಕ್ಸ್ ನೋಡಿರದ ಆ ಬಟ್ಟೆಗೆ ಅದೆಷ್ಟು ಖುಶಿಯಾಗಿತ್ತೋ.. ಅದು ಬೆಚ್ಚಗೆ ನಗನಗ್ತಾ ಇದ್ದಾಗ್ಲೇ ನಾನೂ ಮೈಗೇರಿಸಿಕೊಂಡೆ.. ಈ ಚಳಿಯಲ್ಲಿ ಇಸ್ತ್ರಿ ಹಾಕಿದ ತಕ್ಷಣ ಬಟ್ಟೆಯನ್ನ ಹಾಕಿಕೊಳ್ಳೋ ಸುಖ ಇದೆಯಲ್ಲ, ಅದು ಅನುಭವಿಸಿದವರಿಗೆ ಮಾತ್ರ ಗೊತ್ತು..

ಇಕ್ ಲಡಕಿಕೋ ದೇಖಾತೋ ಏಸಾ ಲಗಾ ಅಂತ ಸಣ್ಣಗೆ ಗುನುಗುತ್ತಾ, ದೋಸೆಯ ಬಂಡಿ ಹಾಕಿ ಎರಡು ಬಿಸಿ ಬಿಸಿ ಬಾಳೆಹಣ್ಣಿನ ಸಿಹಿ ದೋಸೆ ಮಾಡ್ಕೊಂಡು ಬಟ್ಟಲಿಗೆ ಹಾಕಿದ್ದೆ.. ಇನ್ನೂ ಹೊಗೆ ಬರ್ತಾ ಇತ್ತು.. ಅಮ್ಮ ಮನೆಯಿಂದ ಕಳಿಸಿದ ಗಟ್ಟಿ ತುಪ್ಪದ ಜೊತೆ ಅದನ್ನ ತಿಂತಾ ಇದ್ರೆ ಹೊಟ್ಟೆತುಂಬಿದ್ದೇ ಗೊತ್ತಾಗಲ್ಲ.. ನಾಲಿಗೆಯ ಮೇಲೆ ತೇಲೋ ನೀರು ಆರೋದೇ ಇಲ್ಲ.. ಅಂಥ ಸಂಭ್ರಮದಲ್ಲಿ ತಿಂಡಿ ತಿಂದು ರೆಡಿಯಾಗಿ ಆಪೀಸಿಗೆ ಹೊರಟರೆ , ಕಿವಿಗೆ ತುರುಕಿಕೊಂಡ ಇಯರ್ಫೋನ್ನಲ್ಲೂ ಎಂಥೆಂಥಾ ಹಾಡುಗಳು ಅಂತೀರಾ.. ಹಳೆಯ ಹಾಡುಗಳು ಮತ್ತು ಭಾವಗೀತೆ ಅಂದ್ರೆ ಹೆಚ್ಚು ಪ್ರೀತಿ ಆದ್ರೂ , ಹೊಸಹಾಡುಗಳಿಗೂ ಒಮ್ಮೊಮ್ಮೆ ಮೈ ಮರೀತಿನಿ..ಅವತ್ತು ನನ್ನ ಮನಸಿಗೆ ಹಿತ ಅನ್ನಿಸೋ ಅಷ್ಟೂ ಗೀತೆಗಳೂ ಒಟ್ಟಿಗೆ ಬಂದಿದ್ವು.. ಎಷ್ಟು ಖುಶಿಪಟ್ಟಿದ್ದೆ ಗೊತ್ತಾ ?

ಇನ್ನು ಕಚೇರಿಯಲ್ಲಿ, ಅವತ್ತು ನನಗೆ ಬಿಗ್ ರೆಸ್ಟ್..! ಸಾಮಾನ್ಯವಾಗಿ ಕೈ ತುಂಬಾ ಕೆಲಸ ಇಲ್ಲದಿದ್ರೆ ನನಗೆ ಕಿರಿ ಕಿರಿ.. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಬರತ್ತೆ.. ಎಲ್ಲರಿಗೂ ಬೈಯ್ಯೋಣ ಅನ್ಸತ್ತೆ.. ಜಗಳ ಕೂಡ ಮಾಡಿದ್ದಿದೆ.. ಇನ್ನು ಕೈ ತುಂಬಾ ಕೆಲಸಾ ಇರೋವಾಗ ಫೇಸ್ಬುಕ್ಕು ಸುಂದರವಾಗಿ ಕಂಡಷ್ಟು ಖಾಲಿ ಕೂತಾಗ ಕಾಣಿಸಲ್ಲ.. ಚ್ಯಾಟ್ ಮಾಡೋ ಮನಸಾಗಲ್ಲ.. ಆಫೀಸಲ್ಲಿ ಕೂತು ಮನಸಿಗೆ ಅನ್ನಿಸಿದ್ದನ್ನ ಲಹರಿಯಲ್ಲಿ ತೇಲಿಬಿಡೋದಕ್ಕೂ ಸರಿ ಅನ್ನಿಸಲ್ಲ.. ಅಷ್ಟಕ್ಕೂ ನಮ್ಮ ಕಚೇರಿಯಲ್ಲಿ ನನ್ನ ಮನದಾಳದ ಮೋಹನಮುರಳಿ ಓಪನ್ನೇ ಆಗಲ್ಲ.. ಬ್ಲೋಕ್ ಆಗಿರೋ ಸೈಟು ಯು ನೋ.ನಾನೇನು ಬರೀಬಾರದ್ದು ಬರೀತಿನಾ.. ಬಟ್  ಐ ಆಮ್ ಹ್ಯಾಪಿ.. ಬ್ಲಾಗ್ ಬರಕೊಂಡು ಕೂತುಬಿಟ್ಟಿದ್ರೆ ಏನನ್ನೂ ಓದುತ್ತಾ ಇರಲಿಲ್ಲ.. ಈಗ ಗೂಗಲ್ ಅನ್ನೋ ಗಾಳಿಜಗತ್ತಲ್ಲಿ ಇಣುಕಿ ಏನೇನೋ ಪ್ರಶ್ನೆಗಳನ್ನ ಹಾಕಿ ಎಷ್ಟೆಲ್ಲಾ ವಿಷಯಗಳನ್ನ ತಿಳ್ಕೊಂಡೆ ಗೊತ್ತಾ..? ಖುಶಿ ಆಗಿತ್ತು.. ಎಷ್ಟು ಬೇಗ ಟೈಮ್ ಆಗ್ಬಿಡ್ತು.. ಆಫೀಸಲ್ಲಿ ಹೊಸವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ ನಡೆದಿತ್ತು.. ಆದ್ರೆ ಅಲ್ಲಿರೋದಕ್ಕೆ ಮನಸಾಗ್ಲಿಲ್ಲ.. ನನ್ನೊಳಗೆ ನಾನಿದ್ದು , ನನ್ನವರೊಂದಿಗೆ ಬೆರೆತು ಅರಿತು , ನಮ್ಮಿಚ್ಛೆಯಂತೆ ಸಂಬ್ರಮಿಸೋದರಲ್ಲೇ ಹೆಚ್ಚು ಖುಶಿ ನನಗೆ..

 ಇಷ್ಟೆಲ್ಲಾ ಖುಶಿಯ ಕ್ಷಣಗಳು ಒಂದೊಂದಾಗಿ ಬಂದು ಹೋಗಿವೆ, ಆದ್ರೂ ಯಾಕೋ ದಿನ ಸರಿ ಇರಲಿಲ್ಲ ಅನ್ನಿಸಿತ್ತಲ್ಲಾ, ಯಾಕೆ ? ಅದು ನನಗೆ ಅರ್ಥವಾಗಿತ್ತು...  ಅಷ್ಟೊತ್ತೂ ನಾನು ಇಡೀ ದಿನ ಅನುಭವಿಸಿದ ಖುಶಿಯ ಕ್ಷಣಗಳನ್ನ ಗಣನೆಗೇ ತಗೊಂಡಿರಲಿಲ್ಲ.. ದುಃಖ ಅನ್ನೋದು ಕಾರಣಾನೇ ಇಲ್ಲದೆ ಆವರಿಸಿಕೊಂಡುಬಿಡತ್ತೆ.. ಆದ್ರೆ ಕಾರಣ ಇದ್ರೂ ಖುಶಿಪಡೋದಕ್ಕೆ ನಮಗೆ ಬರಲ್ಲ.. ಅದನ್ನ ಕಲ್ತ್ಕೋಬೇಕಲ್ವಾ ? ಜ್ಞಾನೋದಯವಾಗಿತ್ತು..!

 ಈ ವರ್ಷ ಖುಶಿಯನ್ನ ಹುಡುಕೋ ರೆಸಲ್ಯೂಶನ್ ಮಾಡಿದ್ದೀನಿ.. ಪ್ರತಿ ದಿನ ನಾನು ಖುಶಿಪಡೋ ಹತ್ತು ಸಂಗತಿಗಳನ್ನಾದ್ರೂ ಕಂಡ್ಕೋತಿನಿ.. ಇಂಥದ್ದೊಂದು ನಿರ್ಧಾರಕ್ಕೆ ನಾನು ಬರೋದಕ್ಕೆ ನನ್ನ ಗೆಳತಿಯಂತಾ ಸೋದರಿಯೇ ಸ್ಪೂರ್ತಿ.. ಅವಳು ಸಮಸ್ಯೆಗಳನ್ನ ಚೂಯಿಂಗಮ್ ಥರಾ ಎಳೆದುಕೊಂಡುಹೊಗೋಳೇ ಅಲ್ಲ.. ಸದಾ ಖುಶಿಯಾಗಿದ್ದು ಖುಶಿಯನ್ನ ಹಂಚೋದನ್ನ ನಾನು ಅವಳಿಂದ ಇಷ್ಟು ವರ್ಷ ಜೊತೆಗಿದ್ರೂ ಕಲಿತಿಲ್ಲ.. ಅವಳ ದಾರಿಯಲ್ಲಿ ನಡೆಯೋದಕ್ಕೆ ಆರಂಭಿಸ್ತಾ ಹೊಸವರ್ಷಕ್ಕೆ ಕಾಲಿಟ್ಟಿದ್ದೀನಿ.. ಐ ಲವ್ ಯು 2012 ಅಂತ ಕಟ್ಟಕಡೆಯ ದಿನ ಗಟ್ಟಿಯಾಗಿ ಹೇಳಬೇಕು ನನಗೆ.. ಅದಕ್ಕೆ ಪ್ರಿಪರೇಶನ್ನಾಗಿ ದಿನಕ್ಕೊಮ್ಮೆ ಅವತ್ತಿನ ದಿನಕ್ಕೆ ನನ್ನ ಪ್ರೀತಿಯನ್ನ ಕನ್ವೇ ಮಾಡ್ತೀನಿ.. ಚನ್ನಾಗಿರತ್ತೆ.. ಇದು ನನ್ನ ಹ(ವ)ರುಷ ಆಗತ್ತೆ ಅಲ್ವಾ ? 

Tuesday, December 27, 2011

ಅವಳು ಕರಗುವ ಸಮಯ..!

ಹಲೋ ಹನಿ
ಹಾ ಹೇಳಿ
ಯಾಕೆ ನಾನ್ ಕಾಲ್ ಮಾಡಬಾರದಿತ್ತಾ ?
ಹಂಗೇನಿಲ್ಲ, ಎಲ್ರೂ ಇದ್ದಾರೆ
ಹೊರಗೆ ಬಾ..

ಹೀಗೆ ಶುರುವಾಗಿತ್ತು ಮಾತು.. ಪ್ರೀತಿಯಲ್ಲಿ ಇದೆಲ್ಲ ಸಹಜ..ಆದ್ರೆ ಅಸಹಜ ಅನ್ನಿಸಿದ್ದೂ ಅದರಲ್ಲಿತ್ತು.. ಎರಡೇ ಎರಡು ಶಬ್ದ ಮುಂದೆ ಕೇಳೋದಕ್ಕೆ ಆಗಲಿಲ್ಲ.. ಅದೆಷ್ಟು ನರಳಿಬಿಟ್ಟಳೋ ಅವಳು.. ಆಕೆಯ ಕಣ್ಣಲ್ಲಿ ಕಂಬನಿ ಇರಲಿಲ್ಲ.. ನನ್ನ ಮನಸು ಒದ್ದೆಯಾಗಿತ್ತು.. ಅವಳ ಮಾತು ಮುಗಿದ ಮೇಲೆ ಒಬ್ಬಳೇ ಅತ್ತಿದ್ದೆ.. ನನ್ನದಲ್ಲದ ಅನುಭವ ನನ್ನನ್ನ ಬೆಚ್ಚಿಬೀಳಿಸಿತ್ತು.. ಹುಡುಗೀರಿಗೆ ಯಾಕೆ ಈ ಶಿಕ್ಷೆ ?

ವೈಟ್ ಶರ್ಟ್  ಬ್ಲೂ ಜೀನ್ಸ್.. ಎತ್ತರಕ್ಕೆ ಸರಿಯಾದ ಮೈಕಟ್ಟು .. ಮುಖದಲ್ಲಿ ಮಂದಹಾಸ.. ಎಷ್ಟು ಚನ್ನಾಗಿ ಕಾಣಿಸ್ತಾ ಇದ್ದಾ ಗೊತ್ತಾ..? ಮಾತೂ ಅಷ್ಟೇ ತೇಲುವ ಮೋಡದ ಹಾಗೆ.. ತಂಗಾಳಿ ಬೀಸಿದ ಹಾಗೆ.. ಮುಂಗುರುಳ ಲಾಸ್ಯದಹಾಗೆ.. ಉಹು ಆಗಲ್ಲ ವರ್ಣಿಸೋದಕ್ಕೆ ಸಾಧ್ಯಾನೇ ಇಲ್ಲ.. ಅದ್ಭುತ ಮಾತುಗಾರ ಅನ್ನೋದಕ್ಕಿಂತ ಹುಡುಗಿಯರ ಹೃದಯವನ್ನ ಇಣುಕಿ ನೋಡಿದಂತಾ ಮಾತು.. ಅವನೇನಾ ಇವನು.. ಫೋನಿನಲ್ಲಿ ಮೆ ಶಾಯರ್ ತೊ ನಹಿ.. ಲೇಕಿನ್ ವೊ ಹಸಿ.. ಅಂತ ಬಂದಾಗಲೇ ಅನ್ನಿಸಿತ್ತು.. ಇವನು ಅವನಲ್ಲ ಅಂತ ಮೂರೇ ಮೂರು ದಿನಗಳ ಹಿಂದೆ ನಿನಗೆ ಮೋಸ ಮಾಡೋದಕ್ಕೆ ನನಗೆ ಇಷ್ಟ ಇಲ್ಲ.. ಐ ಎಮ್ ಇನ ಡಿಪ್ರೇಶನ್ ಅಂತ ಅತ್ತೇಬಿಟ್ಟಿದ್ದ.. ಯಾಕೋ ಕಥೆ ಕೇಳದೇ ಇರೋದಕ್ಕೆ ಆಗಿರಲಿಲ್ಲ.. ಅದೇ ನಾನು ಮಾಡಿದ ದೊಡ್ಡ ತಪ್ಪು..

ನಾನು ಅವಳನ್ನೇ ದಿಟ್ಟಿಸಿದ್ದೆ , ಆ ದನಿಯಲ್ಲಿ ಏರಿಳಿತಗಳಿರಲಿಲ್ಲ.. ಕೊನೇಪಕ್ಷ ಗಂಟಲ ನರಗಳಾದ್ರೂ ಉಬ್ಬಿವೆಯಾ..? ಉಹು ..ಅವಳದು ಸಹಜ ದಾಟಿಯ ಅಸಹಜ ಮಾತು.

ಅವನು ಪ್ರೀತಿಗೆ ಬಿದ್ದಿದ್ದನಂತೆ.. ಅವಳು ಬೆಳದಿಂಗಳಿನಂತಾ ಹುಡುಗಿ.. ಚೆಲುವೆ.. ಚಂಚಲೆ ..ಕೋಮಲೆ.. ಕವಿ ಕಲ್ಪನೆಯ ಕೆತ್ತನೆಯ ಥರಾ ಅನ್ನಿಸಿತ್ತು.. ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿದ್ದೆ ಅಂದಾ.. ಅಳ್ತಾ ಇದ್ದಾ ಅನ್ನಿಸತ್ತೆ.. ಧ್ವನಿ ಮಾತ್ರ ಗದ್ಘದಿತವಾಗಿತ್ತು.. ಅವಳು ಈಗ ಎಲ್ಲಿದ್ದಾಳೋ ? ಯಾರ ಜೊತೆಗೆ ಜೀವನ ಮಾಡ್ಕೊಂಡಿದ್ದಾಳೋ.. ? ಜಾತಿಯ ಕಾರಣಕ್ಕೆ ನಾವಿಬ್ಬರೂ ಬೇರೆಯಾಗಬೇಕಾಯ್ತು.. ಹಿರಿಯರ ಒತ್ತಾಯದಿಂದ ದೂರಾದ್ವಿ.. ಎಲ್ಲಿದ್ದರೂ ಚನ್ನಾಗಿರಲಿ.. ನೂರುಕಾಲ ಬಾಳಲಿ.. ಆದ್ರೆ ನನಗೆ ಅವಳನ್ನ ಮರೆಯೋದಕ್ಕೇ ಆಗ್ತಿಲ್ಲ.. ಆ ನೋವಿನಿಂದ ನಾನು ಹೊರಬರೋದಕ್ಕೆ ಟೈಮ್ ಬೇಕು.. ಈಗ್ಲೇ ಅಪ್ಪ ಅಮ್ಮ ಮದುವೆಗೆ ಒತ್ತಾಯಿಸ್ತಾ ಇದ್ದಾರೆ.. ಹಾಗಂತ ಈಗ ನಿನ್ನನ್ನ ಮದುವೆ ಮಾಡ್ಕೊಂಡ್ರೆ ತಪ್ಪಾಗತ್ತೆ.. ಮನಸೆಲ್ಲಾ ಅವಳೇ ತುಂಬಿದ್ದಾಳೆ.. ಆದಿನ್ಯಾವತ್ತೂ  ಅವಳು ನನ್ನವಳಾಗಲ್ಲ ಅನ್ನೋ ಸತ್ಯ ಗೊತ್ತಿದೆ.. ನಂತ್ರ ನಾನೂ ಮತ್ತೊಬ್ಬಳನ್ನ ಮದುವೆ ಆಗಲೇ ಬೇಕು.. ಅದು ನೀವೇ ಆಗಬಾರದು ಅಂತಿಲ್ಲ..ಆದ್ರೆ ನಿಮಗೆ ಅಡ್ಜೆಸ್ಟ್ ಆಗೋದಕ್ಕೆ , ನನ್ನ ಹೊಸ ಬದುಕನ್ನ ಒಪ್ಪಿಕೊಳ್ಳೋದಕ್ಕೆ ನನಗೆ ಟೈಮ್ ಬೇಕು.. ಅದನ್ನ ನಿಮ್ಮಿಂದ ಕೊಡೋದಕ್ಕಾಗತ್ತಾ..? ನಾನು ಹಿಂದೆ ಒಬ್ಬಳಿಗೆ ಮನಸು ಕೊಟ್ಟಿದ್ದೆ ಅನ್ನೋ ಸತ್ಯವನ್ನ ಒಪ್ಪಿಕೊಂಡು ನನ್ನನ್ನ ಮದುವೆಯಾಗೋ ಮನಸಿದ್ಯಾ ? ಉಹು ಇರಲ್ಲಾ, ಅಂತಾ ಅಳ್ತಾನೇ ಫೋನ್ ಇಟ್ಟಿದ್ದ..

ಕಣ್ಣೀರ್ ಹಾಕೋ ಹುಡುಗರನ್ನ ನಂಬಬಾರದು ಅಂತಾರಲ್ಲ ಅದು ನಿಜ ಅಂತ ನನಗನ್ನಿಸಿತು.. ಆದ್ರೆ ಅವನ ಹತ್ರಾ ನಾನೂ ಮಾತಾಡಿದ್ದೆ.. ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸಿದ್ದೆ.. ಉಹು ಅರ್ಥವಾಗಿರಲಿಲ್ಲ.. ಮೊದಲಬಾರಿಗೆ ಯಾರನ್ನೋ ಅಳೆಯೋದರಲ್ಲಿ ನಾನು ಸೋತಿದ್ದೆ.. ಅವಳೂ ಸೋತಿದ್ದಳು..

ಅದೊಂದು ಫೋನ್ ಕಾಲ್ ನನ್ನನ್ನ ತುಂಬಾ ಯೋಚಿಸೋ ಥರ ಮಾಡಿಬಿಟ್ಟಿತ್ತು.. ಕೂತಲ್ಲಿ ನಿಂತಲ್ಲಿ ಯೋಚಿಸಿದ್ದೆ, ಅವನಿಗೆ ಏನ್ ಹೇಳಲಿ.. ಒಂದು ಮನಸು ಯಾಕೋ ಮುಂದುವರೆಯೋದು ಬೇಡ ಅಂತ ಹೇಳ್ತಾ ಇತ್ತು.. ಆದ್ರೂ ಮನದ ಮೂಲೆಯಲ್ಲಿ ಎಲ್ಲೋ ಹೃದಯ ಕಲ್ಲಾಗಬಾರದು ಅನ್ನೋ ಧ್ವನಿ.. ಪ್ರೀತಿ ಸಿಗದವರು ಎಷ್ಟು ಜನ ಇಲ್ಲಾ.. ಅವರೆಲ್ಲಾ ಬದುಕನ್ನ ಪ್ರೀತಿಸಿಲ್ವಾ ?  ಹಳೆ ನೀರನ್ನ ಕೊಚ್ಚಿಕೊಂಡು ಹೊಗೋ ಹೊಸ ನೀರಿನ ಥರ ನಾನ್ಯಾಕ್ ಆಗಬಾರದು..? ನನ್ನ ಪ್ರೀತಿಗೆ ಎಲ್ಲವನ್ನೂ ಮರೆಸೋ ಶಕ್ತಿ ಇದೆ ಅನ್ನಿಸಿಬಿಟ್ಟಿತ್ತು..

ಎಲ್ಲಾ ಹುಡುಗಿಯರೂ ತಪ್ಪುಮಾಡೋದೇ ಅಲ್ಲಿ.. ನಾನು ನನ್ನ ಪ್ರೀತಿ ನನ್ನ ನಡುವಳಿಕೆ ನನ್ನ ಶಕ್ತಿಯಿಂದ ನನ್ನದಲ್ಲದ ಮನಸನ್ನ ಹತೋಟಿಗೆ ತಗೊಂಡು ಬತರ್ಿನಿ, ನನ್ನದಾಗಿಸಿಕೊಂಡುಬಿಡ್ತೀನಿ ಅಂದ್ಕೋತಾರೆ.. ಆದ್ರೆ ಅದು ಆಗದ ಕೆಲಸ.. ಅವಳು ಅವಳೇ ನಾನು ನಾನೇ.. ಅರಿಯಲು ತಡವಾದರೆ ನಂತರ ಮುಗಿಯದ ಬೇನೆ.

ಮೆಸೇಜ್ ಮೇಲೆ ಮೆಸೇಜ್ ಮಾಡಿದ್ದೆ.. ಉತ್ತರಗಳೆಲ್ಲ ಚಿಕ್ಕ ಮತ್ತು ಚೊಕ್ಕವಾಗಿದ್ವು.. ಮಗುವಿನ ಮನಸು ಅನ್ನಿಸಿಬಿಟ್ಟಿತ್ತು.. ನಾನು ಅವನನ್ನ ಒಪ್ಪಿಕೊಂಡೆ.. ಆದ್ರೆ ನಿಜ ಹೇಳ್ತೀನಿ, ನಾನು ಅವನನ್ನ ಒಪ್ಪಿಕೊಳ್ಳೋದಕ್ಕೆ ಕಾರಣ ಆತನ ಮಾತು ಮನಸು ನಡುವಳಿಕೆ ಅಷ್ಟೇ ಆಗಿರಲಿಲ್ಲ.. ಆತನ ರೂಪ ಕೆಲಸ ಗೌರವ ಘನತೆ ಎಲ್ಲವೂ ನನ್ನನ್ನ ಕರಗುವಂತೆ ಮಾಡಿದ್ದವು.. ಮದುವೆಗೆ ಒಪ್ಪಿಕೊಂಡಿದ್ದೆ.. ಅಷ್ಟಾಗಿ ವಾರಾಕೂಡ ಕಳೆದಿಲ್ಲ.. ಡಿಪ್ರೇಶನ್ನಿನ ಮಾತುಗಳು ಮೆಸೇಜ್ಗಳು ಬರೋದೂ ಕಡಿಮೆ ಆಗಿರಲಿಲ್ಲ.. ಅವತ್ತು ನಾನು ಅವನನ್ನ ಮೀಟ್ ಮಾಡೋಣ ಅಂದಿದ್ದೆ.. ಎದೆಯ ತುಂಬ ನೋವಿಟ್ಕೊಂಡು ಬತರ್ಾನೆ, ನಾನಾಗ ಅವನ ತಲೆಯನ್ನ ನನ್ನ ಎದೆಯ ಮೇಲಿಟ್ಟು ತಾಯಿಯಂತೆ ಸಮಾಧಾನ ಮಾಡಬೇಕು.. ಮನಸಿನ ಭಾರಗಳನ್ನೆಲ್ಲಾ ಹೊರಹಾಕೋದಕ್ಕೆ ಪ್ರಯತ್ನಿಸಬೇಕು ಅಂದುಕೊಂಡಿದ್ದೆ.. ಆದ್ರೆ ಆಗಿದ್ದೇ ಬೇರೆ.

ಹೆಣ್ಣುಮಕ್ಕಳಿಗೆ ಅದೆಲ್ಲಿಂದ ಬಂದುಬಿಡತ್ತೋ ತಾಯಿಯ ಹೃದಯ.. ಯಾರದೋ ನೋವು ಹತಾಶೆಗಳಿಗೂ ಇವಳ ಹೃದಯ ಮಿಡಿಯತ್ತೆ .. ಅದು ತಪ್ಪಾ ?


ಕಾರಿನಿಂದ ವೈಟ್ ಶರ್ಟ್ ಬ್ಲೂ ಪ್ಯಾಂಟ್ ತೊಟ್ಟಿದ್ದ ಹ್ಯಾಂಡ್ಸಮ್ ಹುಡುಗ ಕೆಳಗಿಳಿದಿದ್ದ..ಆತನ ಮುಖದಲ್ಲಿ ನೋವು ಕಾಣಿಸಲಿಲ್ಲ..ನನಗೆ ಗೊಂದಲ.. ಮಾತಲ್ಲೂ ಹಳೇ ಹುಡುಗಿ ಇಣುಕಲಿಲ್ಲ.. ದುಃಖದ ಗಾಳಿ ಬೀಸಲಿಲ್ಲ.. ಕಟ್ಟಕಡೆಯದಾಗಿ ನಾನು ನಿನ್ನನ್ನ ಚನ್ನಾಗಿ ನೋಡ್ಕೋತೀನಿ ಅಲ್ವಾ ? ಅಂತ ಅಮಾಯಕನಂತೆ ಕೇಳಿದ್ದೇ ಕೇಳಿದ್ದು ಹಳ್ಳಕ್ಕೆ ಬಿದ್ದೆ.. ಮದುವೆಯಾದರೂ ಏಳೋದಕ್ಕೆ ಆಗಲೇ ಇಲ್ಲ..

ಅವನೂ ಅದನ್ನೇ ಹೇಳಿದ್ದ.. ಮದುವೆಯಾದ್ರೂ ಅವಳನ್ನ ಮರೆಯೋದಕ್ಕಾಗಿರಲಿಲ್ಲ.. ಮೊದಲರಾತ್ರಿ ನಾವಿಬ್ಬರೂ ಮಾತಲ್ಲೇ ಮುಗಿಸಿದ್ವಿ.. ನಾನು ಅವಳನ್ನ ತುಂಬಾನೇ ಪ್ರೀತಿಸ್ತಾ ಇದ್ದೆ.. ಆದ್ರೆ ಅವಳಿಗೆ ಅನುಮಾನ.. ಒಂದೇ ಒಂದು ದಿನ ಹಳೆ ಹುಡುಗಿಯ ಹೆಸರು ತೆಗೆಯದೇ ಸಂಸಾರ ಮಾಡಲಿಲ್ಲ.. ಮಂಚದಲ್ಲೂ ಅವಳದೇ ಧ್ಯಾನ.. ಮೌನ.. ಕಳೆದುಹೋಗ್ತಾ ಇತ್ತು ಯವ್ವನ.

ಅವನ ಮಾತುಗಳು ಕಿವಿಯಲ್ಲಿ ಗುಯ್ಗುಡ್ತಾ ಇದ್ವು. ಮೈಯ್ಯೆಲ್ಲಾ ಉರಿ.. ಇಂಥಾ ನೀಚನ ಮಾತಿಗೆ ನಾನು ಅಯ್ಯೋ ಅಂದನಾ ? ತರ್ಕಕ್ಕಿಳಿಯದೇ ನಂಬಿಬಿಟ್ಟಿದ್ದೆ. ಅದು ನನ್ನ ದಡ್ಡತನ

ಅವನಿಗೆ ಊಟ ಬೇಡ , ನಿದ್ದೆ ಬೇಡ.. ಬರೀ ಹಾಸಿಗೆ ಹಾಸಿಗೆ ಹಾಸಿಗೆ.. ಅದು ನನಗೆ ಹೇಸಿಗೆ ಅಂದವಳ ಮುಖದಲ್ಲಿ ಅಸಹ್ಯದ ಭಾವ ಮೂಡಿದ್ದು ಮಾತ್ರ ನನಗೆ ಕಂಡಿತ್ತು.. ಗಂಡಸು ಅವಳನ್ನ ಅಷ್ಟರಮಟ್ಟಿಗೆ ಕಾಡಿಬಿಟ್ಟಿದ್ದ.. ಅವನಂಥ ಮನುಶ್ಯ ಮತ್ತೊಬ್ಬ ಇರೋದಕ್ಕೆ ಸಾಧ್ಯ ಇಲ್ವೇನೋ.. ಯಾವ ಹುಡುಗಿಗೂ ಅಂಥ ಗಂಡ ಸಿಗಬಾರದು ಅಂತ ಅಂದವಳ ಕಣ್ಣಲ್ಲಿ ಸಿಟ್ಟಿತ್ತು.

ಅವನು ಕಾಡಬಾರದ ರೀತಿ ಎಲ್ಲಾ ಕಾಡಿದ್ದ.. ಮೊದಮೊದಲು ಅವಳಿಗೆ ಎಲ್ಲವೂ ಹಳೆಯದನ್ನ ಮರೆಯೋ ತವಕ ಅನ್ನಿಸಿತ್ತು.. ಅವನಿಚ್ಛೆಯಂತೆ ಎಲ್ಲವೂ ನಡೆದವು.. ಅವನಿಲ್ಲದ ಸಮಯದಲ್ಲಿ ಅವಳಿಗೇ ಅರಿವಿಲ್ಲದಂತೆ  ಆಕೆ ಅತ್ತಿದ್ದಳು.. ವಿದ್ಯಾವಂತೆ ಬುದ್ಧಿವಂತೆ ದಿಟ್ಟ ಹೆಣ್ಣುಮಗಳೊಬ್ಬಳಿಗೆ ಮದುವೆ ಬಂಧನವಾಗಿತ್ತು.. ಆಕೆ ನರಳಿ ನರಳಿ ನಡುಗಿಹೋಗಿದ್ದಳು.. ಆಕೆಯ ಆ ನರಳಾಟ ನನಗೆ ಅರ್ಥವಾಗೋದಲ್ಲ.. ಹಾಗಾಗಿ ಅವಳ ಕಥೆ ಕೇಳಿದಾಗ ಕಣ್ಣುತುಂಬಿಬರಲಿಲ್ಲ.. ಆದ್ರೆ ಅವಳು ನನ್ನ ಕೈಲಿಟ್ಟ ಆಡಿಯೋ ಟ್ರಾಕ್ ಅಳುಬರಿಸಿಬಿಟ್ಟಿತ್ತು.. ನಾನರಿಯದ ಅದೆಷ್ಟೋ ಸಂಘತಿಗಳು ಅದರಲ್ಲಿದ್ದವು.. ಅವಳು ಇವನಿಗೆ ಹೆದರೇ ಓಡಿಹೋಗಿರಬೇಕು.. ಅವನೊಬ್ಬ ಸೈಕೋ.. 
 ಅವನ ಇಡೀ ಕಥೆ ಇನ್ಯಾವತ್ತಾದ್ರೂ ಸಮಯ ಕೂಡಿ ಬಂದಾಗ ಹೇಳ್ತೀನಿ..  


Thursday, December 8, 2011

ಬಿಗ್ ಬಾಸ್ ಅನ್ನೋ ಹಿಂಸೆ..!


"ಬಿಗ್ ಬಾಸ್ ಕೆ ಘರ್ ಮೆ ಹಿಂಸಾ ಕೇಲಿಯೇ ಜಗಾ ನಹೀ ಹೆ"  ನಾನ್ಸೆನ್ಸ್ ಅಂತ ನಕ್ಕುಬಿಟ್ಟೆ.. ಅವತ್ತು ಪೂಜಾ ಮಿಶ್ರಾ ಅನ್ನೋ ಕೋಪಿಷ್ಠೆಯೊಬ್ಬಳನ್ನ ಬಿಗ್ ಬಾಸ್ ಮನೆಯಿಂದ ಹೊರಗಾಕಿದ್ರು.. ಅದೂ ಸಿದ್ಧರ್ಥ ಅನ್ನೋ ಹುಡುಗನನ್ನ ತಳ್ಳಿದ್ಲು ಅನ್ನೋ ಕಾರಣಕ್ಕೆ  ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲ ಅಂದ್ರು..  ಆಗ್ಲೇ ನಾನು ಹಿಂಸೆಯ ಬಗ್ಗೆ ಯೋಚಿಸೋದಕ್ಕೆ ಶುರು ಮಾಡಿದ್ದು.. ಹೆಸರಲ್ಲೇನಿಲ್ಲ ಅನ್ನೋದು ಅರ್ಥವಾಗಿದ್ದು..

 ಬಿಗ್ ಬಾಸ್ ಅಂದ ತಕ್ಷಣ ಏನೋ ಒಂದು ಥರದ ಗೌರವ ಬರತ್ತೆ.. ಬಿಗ್ ಬಾಸ್ ಅಂತ ಯಾರನ್ನ ಕರೀತಾರೆ ಅಂತ ಆ ಕಾರ್ಯಕ್ರಮವನ್ನ ನೋಡೋ ಜನ  ಮೊದಮೊದಲು ಯೋಚಿಸ್ತಾ ಇದ್ರಾದ್ರೂ ಈಗ ಎಲ್ಲರೂ ರೂಪವಿಲ್ಲದ ವ್ಯಕ್ತಿಯನ್ನ ಒಪ್ಪಿಕೊಂಡಿದ್ದಾರೆ.. ಯಾರು ಬಿಗ್ ಬಾಸ್ಗೆ ಒಂದು ವ್ಯಕ್ತಿತ್ವ ಕೊಟ್ಟಿದ್ರೋ ಇಲ್ವೋ, ಆದ್ರೆ ಆಗೊಮ್ಮೆ ಈಗೊಮ್ಮೆ ಅದನ್ನ ನೋಡಿದ್ರೂ ನಾನು ಮಾತ್ರ ಆ ದನಿಗೊಂದು ವ್ಯಕ್ತಿತ್ವ ಕೊಟ್ಟಿದ್ದೆ.. ಮೋಸ್ಟ್ಲಿ ಕಾರ್ಯಕ್ರಮದ ನಿಮರ್ಾತ್ರರು ಬಿಗ್ಬಾಸ್ ಅಂದ್ರೆ ಒಬ್ಬ ಗೌರವಾನ್ವಿತ ವ್ಯಕ್ತಿ ಅಂತ ತೋರಿಸೋ ಪ್ರಯತ್ನ ಮಾಡಿದ್ದಾರೆ.. ಆತನ ಮನೆಯಲ್ಲಿ ಕಾಯ್ದೆ ಕಟ್ಟಳೆಗಳನ್ನ ಇಟ್ಟಿದ್ದಾರೆ.. ಎಲ್ಲವೂ ಜನರನ್ನ ಅಟ್ರಾಕ್ಟ್ ಮಾಡೋದಕ್ಕಾಗಿ.. ಅದು ಪಕ್ಕಾ ಕಮಷರ್ಿಯಲ್ ಓರಿಯೆಂಟೆಡ್ ರಿಯಾಲಿಟಿ ಶೋ ಅನ್ನೋದರಲ್ಲಿ ಎರಡು ಮಾತಿಲ್ಲ.. ಏನೇ ಆಗಿರಲಿ  ಕಾರ್ಯಕ್ರಮಕ್ಕೂ  ಒಂದು ಅದರದೇ ಆದ ಸುಂದರ ವ್ಯಕ್ತಿತ್ವ ಇದ್ರೆ ಅದು ಮನಸಿಗೆ ಹಿತವೆನಿಸತ್ತೆ...ಅದರಲ್ಲೂ ಮನೆ ಅಂತ ಕರೆಯೋವಾಗ ಅದಕ್ಕೆ ರೂಪ ಅಷ್ಟಿದ್ರೆ ಸಾಕಾಗಲ್ಲಾ , ಮನೆಯ ವಾತಾವರಣ ಕೂಡಾ ಇರಬೇಕಲ್ವಾ..?

 ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ ಮಧ್ಯದ ಕರ್ಜತ್ ಅನ್ನೋ ಕಡೆ ನಿಮರ್ಾಣವಾದ ಬಿಗ್ ಬಾಸ್ನ ಐದನೇ ಕಂತಿನ ಮನೆ ನೊಡೋದಕ್ಕೇನೋ ಸುಂದರವಾಗಿದೆ.. ಅಳವಿಡಿಸಲಾಗಿರೋ ಐವತ್ತೈದು ಕೆಮರಾಗಳು ಹೇಗೆ ವಕರ್್ ಮಾಡುತ್ವೆ ? ಆನ್ಲೈನ್ ಎಡಿಟಿಂಗ್ ನಡೆಯುತ್ತಾ..? ಎಷ್ಟು ಜನ ಕೆಲಸ ಮಾಡ್ತಿದ್ದಾರೆ ? ಹೇಗೆ ಕೆಲಸ ನಡೆಯುತ್ತೆ ? ಅನ್ನೋದೆಲ್ಲಾ ನಿಗೂಢ.. ಅದು ಈ ಕಾರ್ಯಕ್ರಮದ ಬಗ್ಗೆ ಒಂದಿಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ರೆ, ಇನ್ನಿಷ್ಟು ಕುತೂಹಲಕ್ಕೆ ಕಾರಣ ಬೇರೆ ಬೇರೆ ಥರದ ಜನರನ್ನ ಒಂದು ಕಡೆ ಅದೂ ಹೊರಪ್ರಪಂಚದ ಜೊತೆ ಕಾಂಟೆಕ್ಟೇ ಇಲ್ಲದೆ ತೊಂಬತ್ತಾರು ದಿನಗಳ ಕಾಲ ಇಡ್ತಾರಲ್ಲಾ, ಅವರು ಅಲ್ಲಿ ಹೇಗೆ ಬಿಹೇವ್ ಮಾಡಬಹುದು ಅನ್ನೋದು..

  ಒಬ್ಬ ವ್ಯಕ್ತಿಯನ್ನ ದೂರದಿಮದ ನೋಡಿದ್ರೆ, ಸ್ವಲ್ಪ ಹೊತ್ತು ಮಾತಾಡಿದ್ರೆ ಇಲ್ಲಾ ಇಷ್ಟಾನೇ ಪಟ್ಟು ಜೊತೆಯಾದ್ರೂ ಆತ ಏನು ಅನ್ನೋದು ಗೊತ್ತಾಗಲ್ಲ.. ಒಂದೇ ಮನೆಯಲ್ಲಿ ಒಟ್ಟಿಗೆ ಹಲವಾರುದಿನಗಳ ಕಾಲ ವಾಸವಾಗಿದ್ರೆ ಅವರ ನಿಜವಾದ ವ್ಯಕ್ತಿತ್ವ ಹೊರಬರತ್ತೆ ಅಂತಾರೆ.. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಇರೋರ ನಿಜವಾದ ವ್ಯಕ್ತಿತ್ವ ನಮಗೆ ಕಾಣಿಸತ್ತಾ..? ಅಪ್ಕೋರ್ಸ್ ಹೊರಜಗತ್ತಿನ ಸಂಪಕರ್ಾನೇ ಇಲ್ಲದೆ ಯಾರೋ ಅಪರಿಚಿತರ ಜೊತೆ ಒಂದು ಮನೆಯಲ್ಲಿ ಇರಬೇಕಾಗಿಬಂದಾಗ ಪ್ರಸ್ಟ್ರೇಶನ್ ಆಗಬಹುದು, ಅಡ್ಜೆಸ್ಟ್ ಆಗೋದಕ್ಕೆ ಕಷ್ಟವಾಗಬಹುದು, ಅಂಥಾ ಸ್ಥಿತಿಯ ಔಟ್ಕಮ್ ಹೇಗಿರತ್ತೆ ? ಅನ್ನೋದನ್ನ ತೋರಿಸೋದಕ್ಕೆ ನಿಂತಿದ್ದ ಬಿಗ್ಬಾಸ್ನ ಬೇಸಿಕ್ ಕಾನ್ಸೆಪ್ಟ್ ಚನ್ನಾಗೇ ಇದೆ.. ನಂತ್ರಾ ಪಬ್ಲಿಸಿಟಿಗಾಗಿ ಕಾಂಟ್ರಾವಸರ್ಿ ಕ್ರಿಯೇಟ್ ಮಾಡೋ ಥರದ ಜನರನ್ನ ತರೋದು, ಡಾಲಿಬಿಂದ್ರಾರಂತ ಎಕ್ಟ್ರಾರ್ಡನರಿ ಹೆಂಗಸನ್ನ ಕರ್ಕೊಂಬರೋದು , ಪ್ರಾಯದ ಹುಡುಗ ಹುಡುಗಿಯರನ್ನ ಬಿಟ್ಟು ನಡುವೆ ಒಂದಿಷ್ಟು ರೊಮ್ಯಾನ್ಸ್ ಕಾಣಿಸೋದು.. ಟಾಸ್ಕ್ ಕೊಟ್ಟು ಮಸಾಲಾ ಸೇರಿಸೋದು ಎಲ್ಲವನ್ನೂ ಒಪ್ಕೊಳ್ಳೋಣಾ .. ಊಟದ ಜೊತೆಗೆ ಉಪ್ಪಿನ ಕಾಯಿಯ ಥರ ಸವಿಯೋಣ.. ಆದ್ರೆ ಒಂದು ರಿಯಾಲಿಟಿ ಶೋ ಅದರಲ್ಲೂ ಬಿಗ್ ಬಾಸ್ನಂತ ಕಾರ್ಯಕ್ರಮ ಮನೆ ಅಂದ್ರೆ ಕಾದಾಡೋ ಜಾಗ ಅಂತ ತೋರಿಸಿದ್ರೆ ಅದನ್ನ ನೋಡಿ ಖುಶಿಪಡೋದಕ್ಕಾಗತ್ತಾ? ಹೋಗ್ಲಿ ವೆರೈಟಿ ವೆರೈಟಿ ಬೈಗುಳ ಕಾದಾಟ ಜಗಳದ್ದೇ ಶೋ ಆಗಿದ್ರೆ ಆ ಕಾನ್ಸೆಪ್ಟನ್ನೂ ಎಕ್ಸೆಪ್ಟ್ ಮಾಡ್ಕೋಬಹುದಿತ್ತು..ಆದ್ರೆ ಬಿಗ್ ಬಾಸ್ ಅನ್ನೋದು ಬೈಗುಳದ ಕಾರ್ಯಕ್ರಮ ಅಂತ ಆಗಿದ್ದು ಬೇಸರ ತರಿಸತ್ತೆ..
 ಆರಂಭದಲ್ಲೇ ಬಿಗ್ ಬಾಸ್ ಐದರಲ್ಲಿ  ಕಾದಾಟ ಅನ್ನೋದು ಕಾರ್ಯಕ್ರಮ ಮಾಡಿದವರ ಕಾನ್ಸೆಪ್ಟ್ ಆಗಿತ್ತು ಅನ್ಸತ್ತೆ,, ಯಾಕಂದ್ರೆ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಅಡಿ ಇಟ್ಟವರು ಒಬ್ಬರಿಗಿಂತ ಒಬ್ಬರು ಸ್ಟ್ರಾಂಗ್ ವ್ಯಕ್ತಿತ್ವದವರು..  ಯು ಟಿವಿ ಬಿಂದಾಸ್ ನಲ್ಲಿ ಬೆಂಕಿ ಅನ್ನಿಸಿಕೊಂಡ ಹುಡುಗಿ ಪೂಜಾ , ಚಾರ್ಲ್ಸ್ ಶೋಬ್ರಾಜ್ನಂಥಾ ಕ್ರಿಮಿನಲ್ನ ಹೆಂಡತಿ ನಿಹಿತಾ, ಡೇರ್ ಡೆವಿಲ್ ಪ್ರೋಥಿಮಾ ಬೇಡಿಯ ಮಗಳು ಪೂಜಾ ಬೇಡಿ, ದಿ ಗ್ರೇಟ್ ವೇಟ್ ಲಿಫ್ಟರ್ ಸೋನಿಕಾ, ಗಂಡನನ್ನ ತನ್ನ ಧರ್ಮಕ್ಕೆ ಕನ್ವಟರ್್ ಮಾಡೋ ತಾಕತ್ತಿದ್ದ ಗುಲಾಬೋ ಸಫೇರಾ, ಹೆಡ್ಲೈನ್ಸ್ ಟುಡೆಯಲ್ಲಿ ಶಾರ್ಪಶೂಟರ್ ಥರಾ ಇಂಟರ್ವ್ಯೂ ತಗೋತಿದ್ದ  ಆ್ಯಂಕರ್ ಮಂದೀಪ್ ಬೇವ್ಲಿ, ರಾಜಾ ಚೌದ್ರಿಯಂತ ಸ್ಟ್ರಾಂಗ್ ಅಟಿಟ್ಯೂಡ್ ಇರೋನ ಗಲರ್್ ಫ್ರೆಂಡ್ ಶೃದ್ಧಾ , ಅಫಗಾನ್ನಿಸ್ತಾನದಂತಾ ದೇಶದಿಂದ ಬ್ಯೂಟಿ ಕನ್ಸರ್ಟಲ್ಲಿ ಬಾಗವಹಿಸಿ ಗೆದ್ದ ವಿದಾ , ಸ್ಟ್ರೇಟ್ಪಾರ್ವರ್ಡ್ ಹೆಂಗಸು ಅಂತಾನೇ ಅನ್ನಿಸಿಕೊಂಡ ಜೂಹಿ ಪಮರ್ಾರ್ ಇವರ ಜೊತೆಗೆ ಹಿಜಡಾಗಳಿಗಾಗಿ ದನಿ ಎತ್ತಿ ಹೋರಾಡ್ತಿರೋ  ಟ್ರಾನ್ಜೆಂಡರ್ ಆಕ್ಟಿವಿಸ್ಟ್ ಲಕ್ಷ್ಮಿನಾರಾಯಣ ತ್ರಿಪಾಟಿ ಮತ್ತು ವಿಲನ್ ರೋಲ್ನಲ್ಲೇ ಹೆಚ್ಚಾಗಿ ಮಿಂಚಿದ್ದ ಶಕ್ತಿಕಪೂರ್ ಇವಿಷ್ಟು ಜನರ ಜೊತೆಗೆ ಒಳಬಂದಿದ್ದ ರಾಗೇಶ್ವರಿ ಮೆಹೆಕ್ ಮತ್ತು ಸೋನಾಲಿ ಸ್ವಲ್ಪ ಸಾಫ್ಟ್ ಇದ್ದಿರಬಹುದು ಅಂತ ಅನ್ನಿಸಿತ್ತು.. ನಂತ್ರ ಮೆಹೆಕ್ ಮತ್ತು ಶೊನಾಲಿ ಕೂಡ ನಾವ್ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಬಿಟ್ರು.. ದುರಂತ ಅಂದ್ರೆ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಕಚ್ಚಾಡೋರೇ ಇರೋದು ಅನ್ನೋ ಅಘೋಷಿತ ನಿಯಮ ಬಂದುಬಿಟ್ಟಿದೆ.. ಒಳಗಿದ್ದ ಒಳ್ಳೆಯ ಸ್ವಭಾವದ , ತನ್ನ ವ್ಯಕ್ತಿತ್ವವನ್ನೇ ತೋರಿಸೋ , ಪಾಸಿಟೀವ್ ವೈಬ್ರೇಟಿಂಗ್  ಹುಡುಗಿ ರಾಗೇಶ್ವರಿಯನ್ನ ಮೂರನೇ ವಾರದಲ್ಲೇ ಹೊರಹಾಕಿದ್ರು.. ಆಕೆಯ ವ್ಯಕ್ತಿತ್ವವನ್ನ ಯಾರಾದ್ರೂ ಇಷ್ಟಾಪಡದೇ ಇರೋ ಚಾನ್ಸಿದ್ಯಾ ಅಂತ ನನಗನ್ನಿಸ್ತು.! ಆಕೆ ನಿಜಕ್ಕೂ ಸಭ್ಯ ಸಂಭಾವಿತ ಹುಡುಗಿ.. ಆದ್ರೆ ಓಟ್ ಮಾಡೋರಿಗೆ ಜಗಳಾ ಆಡೋರು ಬೇಕು..! ಅದಕ್ಕಿಂತ ಹೆಚ್ಚಾಗಿ ಈ ಬಾರಿ ಬಿಗ್ಬಾಸ್ಗೂ ಬೆಂಕಿ ಹತ್ತಿಸೋರೇ ಬೇಕು.. ಮನೆಯಲ್ಲಿ ಹೊಗೆಯಾಡ್ತಾನೇ ಇರಬೇಕು..ಅದನ್ನೇ ಜನ ನೋಡ್ಬೇಕು.. ಅದೇ ಕಾನ್ಸೆಪ್ಟು.. ಹಂಗಾಗಿನೇ ನಂತ್ರ ಸ್ಪ್ಲಿಟ್ ವಿಲ್ಲಾದ ವಿನ್ನರ್ ಸಿದ್ಧಾರ್ಥನ್ನ ಕರ್ಕೊಂಬಂದ್ರು, ಬ್ಯಾಡ್ ಬಾಯ್ ಅಂತಾನೇ ಕರೆಸಿಕೊಂಡ ಇಸ್ ಜಂಗಲ್ಸೆ ಮುಜೆ ಬಚಾವೋ ಖ್ಯಾತಿಯ ಸಿಟ್ಟಿನ ಹುಡುಗ ಆಕಾಶ್ದೀಪ್ ಸೈಗಲ್ನ ಕರ್ಕೊಂಬಂದ್ರು.. ನಂತ್ರಾ ಬಿಂದಾಸ್ ಹುಡುಗಿ ಸನ್ನಿ ಅಲಿಯಾಸ್ ಕೆರೆನ್ ಮಲ್ಹೋತ್ರಾ ಬಂದ್ಲು.. ಈಗ ಕ್ರಿಕೇಟ್ ಜಗತ್ತಿನ ಕಿರಿಕ್ ಮಾಸ್ಟರ್ ಸೈಮಂಡ್ಸ್ ಕೂಡಾ ಬಂದಾಯ್ತು... ಇವರೆಲ್ಲರೂ ಸೇರ್ಕೊಂಡು ಮಾಡೋದು ಒಂದೇ ಕೆಲಸ ..ಅದು ಕಾದಾಟ.. ! 

 ಮುರು ತಿಂಗಳ ಕಾಲ ಹೊರಪ್ರಪಂಚದಿಂದ ದೂ
ರಾಗಿ ಒಂದು ಮನೆಯಲ್ಲಿರೋದ್ರಿಂದ ಪ್ರಸ್ಟ್ರೇಟ್ ಆಗ್ತಾರೆ, ಅವರು ಅದನ್ನ ಬೇರೆ ಬೇರೆ ಥರದಲ್ಲಿ ಹೊರಹಾಕ್ತಾರೆ ಅಂತ ಅಂದ್ಕೊಳ್ಳೋದ್ರಲ್ಲಿ ಅಥರ್ಾನೇ ಇಲ್ಲ.. ಇಲ್ಲಿ ಭಾವನೆಗಳು ಕೆಲಸ ಮಾಡಲ್ಲ.. ಯಾರೂ ಭಾವುಕರಾಗಲ್ಲ.. ಒಂದ್ವೇಳೆ ಭಾವುಕತೆ ಇದ್ರೆ  ಅವರು ಜಾಸ್ತಿ ದಿನ ಇರೋದೇ ಇಲ್ಲ.. ಇದು ಅಪ್ಪಟ ಗೇಮ್ ,ಅಳಿ ಉಳಿವಿನ ಆಟ.. ಓಟಿನ ಊಟ.. ಬಿಗ್ ಬಾಸ್ನ ಲೆಕ್ಕಾಚಾರದ ಮಾಟ ! ಯಾವಾಗ ಬಿಗ್ಬಾಸ್ ಮನೆಯ ಇಡೀ ವಾತಾವರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಪೂಜಾ ಓಟರ್ಸ್ ಫೆವರೆಟ್ ಅಂತ ಆಯ್ತೋ ಅವತ್ತಿನಿಂದ ಪ್ರತಿಯೊಬ್ಬರ ದನಿನೂ ದೊಡ್ಡದಾಯ್ತು.. ಮುಟ್ಟಿದರೆ ಮುನಿಯೋದು , ಮಾತೆತ್ತಿದರೆ ಕಾದಾಡೋದು ಶುರುವಾಗ್ಬಿಟ್ತು.. ಜಗಳ ಮಾಡದೇ ಇರೋರೇ ಯಾರೂ ಇಲ್ಲ ಅನ್ನೋ ಮಟ್ಟಕ್ಕೆ ಬಂತು.. ಜೊತೆಗೆ ನಾಮಿನೇಟ್ ಆದವರೇ ಹೆಚ್ಚಾಗಿ ಕಾದಾಡೋದನ್ನ ನೋಡಿದ್ರೆ , ಎಲ್ಲರೂ ರಗಳೆ ರಂಪಾಟಗಳೇ ಉಳಿವಿನ ದಾರಿ ಅಂದ್ಕೊಂಡಹಾಗಿದೆ.. ಅವಷ್ಟನ್ನೇ ಮಾಡ್ತಾರೆ.. ಅದೇ ಗೇಮ್ ಪ್ಲಾನ್.. ಅಲ್ಲಿಗೆ ಬಿಗ್ಬಾಸ್ ಮನೆಯಲ್ಲಿ ನಿಜವಾದ ವ್ಯಕ್ತಿತ್ವ ಹೊರಗೆ ಬರೋ ಚಾನ್ಸೇ ಇಲ್ಲ.. ಎಲ್ಲರೂ ಉಳಿವಿಗಾಗಿ ಜಗಳ ಮಾಡ್ತಾರೆ ಅಷ್ಟೆ !
ಇದೊಂದು ಗೇಮ್ ಶೋದಲ್ಲಿ ಭಾಗವಹಿಸಿದವರ ವ್ಯಕ್ತಿತ್ವದ ಮಾತು ಒತ್ತಟ್ಟಿಗಿರಲಿ, ಬಿಗ್ಬಾಸ್ಗಾದ್ರೂ ವ್ಯಕ್ತಿತ್ವ ಬೇಡ್ವಾ..? ಈಗ ಆ ಮನೆಯಲ್ಲಿ ಒಂದು ರೂಲ್ಸ್ ಇಲ್ಲ .. ರೂಲ್ಸ್ ಪಾಲೋ ಮಾಡೋರು ಯಾರೂ ಇಲ್ಲ.. ತಪ್ಪುಮಾಡಿದವರಿಗೆ ದಂಡಿಸೋರಿಲ್ಲ.. ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲಾ ಅಂತ ಹೇಳೋದೇ ನಿಜ ಆದ್ರೆ ಅಬ್ಯೂಸಿಂಗ್ ಶಬ್ದಗಳನ್ನ ಪ್ರಯೋಗಿಸಿ ಬೈದಾಡೋದು ಕೂಡಾ ಹಿಂಸೆ ಅಪರಾಧ ಅನ್ನೋದು ಬಿಗ್ ಬಾಸ್ಗೆ ಗೊತ್ತಿಲ್ವಾ..? ಪೂಜಾ ಮಿಶ್ರಾ ಸಿದ್ಧಾರ್ಥನ್ನ ದೂಡಿದ್ದು ಹಿಂಸೆ ಅನ್ನೋದಾದ್ರೆ ಶೊನಾಲಿಯ ಎದುರಿಗೆ ಕ್ಲೀನಿಂಗ್ ಸ್ಟಪ್ಅನ್ನ ಒಡೆದು ಚೂರ್ ಚೂರಾಗಿ ಮಾಡಿ ಆ ಚೂರುಗಳು ಸೊನಾಲಿಗೆ ಸಿಡಿದಿದ್ದು ಹಿಂಸೆ ಅಲ್ವಾ ? ಮೆಹೆಕ್ ಮಂದೀಪ್ಳನ್ನ ತಳ್ಳಿದ್ದು ಹಿಂಸೆ ಅಲ್ವಾ ? ಆಗೆಲ್ಲಾ ಯಾರಾದ್ರೂ ಒಬ್ಬರು ನಾವಿರಬೇಕು ಇಲ್ಲಾ ಅವರಿರಬೇಕು ಅಂತ ಪಟ್ಟು ಹಿಡಿದಿದ್ರೆ ಬಿಗ್ಬಾಸ್ ಕ್ರಮ ತಗೋತಾ ಇದ್ನೇನೋ.. ಆದ್ರೆ ಸಿದ್ಧಾರ್ಥ ಮಾತ್ರ ಆ ಇಶ್ಯೂವನ್ನ ದೊಡ್ಡದು ಮಾಡಿದ್ರಿಂದ ಪೂಜಾ ಮಿಶ್ರ ಹೊರಗೆ ಹೋದ್ಲು.. ಅಲ್ಲಿಗೆ ಬಿಗ್ ಬಾಸ್ಗೆ ನ್ಯಾಯ ನೀತಿ ಇಂಪಾಟರ್ೆಂಟ್ ಅಲ್ಲ, ದನಿ ಎತ್ತಿದವರಿಗೆ ನ್ಯಾಯ ಸಿಗತ್ತೆ ಅಷ್ಟೆ ಅಂದಾಂಗಾಯ್ತು.. ಅಂದ್ಹಾಗೆ ಪ್ರತಿನಿತ್ಯ ಬೆಳಗಾದ್ರೆ ಜಗಳ ರಾತ್ರಿಯಾದ್ರೆ ಜಗಳ ಅಂದ್ರೆ ನಿಮ್ಮಮನೆ ಹೇಗಿರತ್ತೆ ..? ನಿಮ್ಮ ಬದುಕು ಏನಾಗತ್ತೆ ? ಅಲ್ಲಿ  ಸ್ಕೈ ನ ಮಾತಿಗಿಂತ ದೊಡ್ಡ ಹಿಂಸೆ ಇದೆಯಾ..? ಈ ರಗಳೆಯನ್ನ ನುರು ಕೋಟಿಜನ ನೋಡ್ಬೇಕಾ..? ಅದಕ್ಕಿಂತ ದೊಡ್ಡ ಹಿಂಸೆ ಇನ್ನೊಂದಿದ್ಯಾ ? ಅಪ್ಕೋರ್ಸ್ ಯಾರೂ ಯಾರಿಗೂ ಈ ಶೊ ನೋಡಿ ಅಂತ ಬಲವಂತ ಮಾಡಲ್ಲ.. ಆದ್ರೆ ರಿಯಾಲಿಟಿಗೆ ಹತ್ತಿರವೇ ಅಲ್ಲದ ಪಕ್ಕಾ ಪ್ಲಾನ್ಡ್ ಶೋಗಳನ್ನ ರಿಯಾಲಿಟಿ ಶೋ ಅಂತ ಯಾಕೆ ಕರೀಬೇಕು ? ಹೀಗೇ ಆದ್ರೆ ಬಿಗ್ ಬಾಸ್ ತನ್ನ ಖ್ಯಾತಿಯನ್ನ ಕಳ್ಕೊಳ್ಳೋದ್ರಲ್ಲಿ ಸಂದೇಹನೇ ಇಲ್ಲ... 

ನಾನು ಇಷ್ಟೆಲ್ಲಾ ಯೋಚಿಸೋದಕ್ಕೆ ಕಾರಣವಾಗಿದ್ದು ಬಿಗ್ಬಾಸೂ ಅಲ್ಲ.. ಅದರಲ್ಲಿರೋ ವ್ಯಕ್ತಿಗಳೂ ಅಲ್ಲ.. ಅದರ ಖ್ಯಾತಿ ಅಪಖ್ಯಾತಿಗಳೂ ಅಲ್ಲ.. ನಾನು ಅಲ್ಲಿರೋ ಯಾರೊಬ್ಬರ ಫ್ಯಾನೂ ಅಲ್ಲ.. ಅಷ್ಟಕ್ಕೂ ಆಗೊಮ್ಮೆ ಈಗೊಮ್ಮೆ ಅದನ್ನ ನೋಡೋದ್ಬಿಟ್ರೆ ಪ್ರತಿದಿನ ನೋಡಿದ್ದೂ ಇಲ್ಲ.. ಆದ್ರೆ ಅದನ್ನ ನೋಡಿದಾಗಲೆಲ್ಲಾ ನನಗೆ ಹಿಂಸೆ ಅನ್ನಿಸಿದೆ.. ಆದ್ರೆ ಬಿಗ್ ಬಾಸ್ಗೆ ಹಿಂಸೆ ಅನ್ನಿಸಿಲ್ವಲ್ಲಾ ! ಹಾಗಾದ್ರೆ  ಕಾದಾಟ ಜಗಳ ಬೈದಾಟಗಳೆಲ್ಲಾ ಹಿಂಸೆ ಅಲ್ವಾ..?