Saturday, December 22, 2012

ಸಭ್ಯ ಸಮಾಜ ಇದನ್ನ ಒಪ್ಪಲ್ವಾ..?



                                                                         ಹೆಣ್ಣು ಅಂದರೆ ಸಹನೆ, ಹೆಣ್ಣು ಅಂದರೆ ಧರಿತ್ರಿ, ಹೆಣ್ಣು ಅಂದರೆ, ತಾಯಿ ಹೆಣ್ಣು ಅಂದರೆ ಸೋದರಿ  ಹೆಣ್ಣು ಅಂದ್ರೆ ಗೆಳತಿ ಹೆಣ್ಣು ಅಂದರೆ ಒಡತಿ .. ಎಲ್ಲವೂ ನೀನು.. ಸೃಷ್ಟಿ ನೀನು.. ವೃಷ್ಟಿ ನೀನು .. ನಿನಗೆ ಗೊತ್ತಾ ಮುಷ್ಟಿಯೊಳಗಿಟ್ಟು ಕಷ್ಟಕೊಟ್ಟವರನ್ನೂ ಪ್ರೀತಿಸಿದವಳು ನೀನು.. ಹೆಣ್ಣು ಅಂದ್ರೆ  ಹರಿದು ಹಂಚಿ ತಿನ್ನೋ ಹಣ್ಣು ಅಂತ ಅಂದರೂ ಸಹಿಸ್ಕೋತೀಯಾ ತಾಯಿ.. ಬೇಡ ಈ ಸಹನೆ.. ನನಗನ್ನಿಸತ್ತೆ ಆಕೆಗೆ ಕೊಟ್ಟ ಬಿರುದುಗಳೇ ಅವಳನ್ನ ಅಸಹಾಯಕಳನ್ನಾಗಿ ಮಾಡಿಸಿದ್ದು.. ಅವಳಿಗೊಂದು ಸೀಮಿತ ರೂಪವನ್ನ ಕೊಟ್ಟಿದ್ದು..

                                                                       ಅವಳು ಸಹನಾಮಯಿ ಅಂದ್ರು.. ಆಕೆ ಬದುಕಿನ ಕಷ್ಟಗಳನ್ನೆಲ್ಲಾ ಅವಡುಗಚ್ಚಿಕೊಂಡು ಸಹಿಸಿಕೊಂಡ್ಲು.. ಭೂಮಿಯ ತೂಕ ನೋಡಿ  ಆಕೆಗೆ ಯಾರೂ ಭಾರವಾಗಲಿಲ್ಲಾ.. ದಣಿದವರಿಗೆ ಮಡಿಲಲ್ಲಿ ಮಲಗಿಸಿ ಜೋಗುಳ ಹಾಡಿದ್ಲು .. ಹಸಿದವರಿಗೆ ತುತ್ತಿಟ್ಟು ತಾಯಿಯಾದಳು.. ಸೋತು ಕೂತವರಲ್ಲಿ ಭರವಸೆ ತುಂಬುವ ಸಾಥಿಯಾದ್ಲು... ಇದ್ಯಾವುದೂ ಅವಳ ಬದುಕಿನ ದೊಡ್ಡ ಸಮಸ್ಯೆ ಆಗ್ತಿರ್ಲಿಲ್ಲ.. ಯಾಕಂದ್ರೆ ಅಲ್ಲೆಲ್ಲಾ ಮನಸು ಮಾತಾಡೋದು.. ಆದ್ರೆ ಯಾವಾಗ ದೇಹದ ಮಾತಿಗೆ ಹೂಂ ಗುಟ್ಟಿ ಪುರುಷನ ದೈಹಿಕ ವಾಂಛೆಗಳನ್ನ ತೀರಿಸಲು ದಾರಿಯಾದಳು ನೋಡಿ ಅಲ್ಲಿಂದ ಶುರುವಾಯ್ತು ಸಮಸ್ಯೆ..!

                                                                      ಹೆಣ್ಣಾಗಿ ಹುಟ್ಟೋದು ಸೌಭಾಗ್ಯಾನಾ? ನನ್ನ ಬದುಕನ್ನ ಅವಲೋಕಿಸಿಬಿಟ್ರೆ ನನಗೆ ಹೌದು ಪುಣ್ಯ ಮಾಡಿದವರಿಗೆ ಮಾತ್ರ ಪ್ರಕೃತಿಯಾಗೋ ಅವಕಾಶ ಸಿಗತ್ತೆ ಅನ್ನಿಸುತ್ತೆ.. ಆದ್ರೆ ಸಮಾಜವನ್ನ ನೋಡಿದ್ರೆ ಹೆಣ್ಣು ಶಾಪಗ್ರಸ್ಥ ಸೃಷ್ಟಿ ಅನ್ನಿಸಿಬಿಡೋದು ಸುಳ್ಳಲ್ಲಾ.. ಹುಟ್ಟಿನಿಂದ ಶುರುವಾಗತ್ತೆ ತಾರತಮ್ಯ.. ಹೆಣ್ಣಾದರೆ ಮಾತ್ರ ಕಣ್ಬಿಡುವ ಮುನ್ನವೇ ಭ್ರೂಣ ಹತ್ಯೆಯ ಹೆಸರಲ್ಲಿ ಸಾಯುವ ಸಂಕಷ್ಟ.. ಎಲ್ಲರಿಗೂ ವಂಶೋದ್ಧಾರಕ ಬೇಕು, ಮುಕ್ತಿ ಮಂತ್ರ ಪಠಿಸುವವ ಬೇಕು.. ಅಂಥವರಿಗಂತೂ ಹುಟ್ಟಿದ ಮಗು ಹೆಣ್ಣಾದ್ರೆ ಹೆತ್ತವಳನ್ನೂ ಬಲಿಕೊಟ್ಟುಬಿಡೋ ಮನಸಾಗತ್ತೆ.. ಆ ಕ್ರೂರ ಮನೋಭಾವ ಈಗ ನಿಧಾನಗತಿಯಲ್ಲಾದರೂ ಸರಿ ದೂರ ಹೋಗ್ತಿದೆ.. ಅಲ್ಲಿ ಇಲ್ಲಿ ನಡೆಯೋ ಒಂದೊಂದು ಪ್ರಕರಣಗಳಿಗೆ ಕಾನೂನು ಕಠಿಣ ಶಿಕ್ಷೆಯನ್ನ ಕೊಟ್ಟು ದಾರಿಗೆ ತರುವ ಪ್ರಯತ್ನ ಮಾಡ್ತಿದೆ.. ಒಟ್ಟಲ್ಲಿ ಗಂಡು ಮಗುನೇ ಬೇಕು ಅಂತ ನಿಲ್ಲೋರ ಸಂಖ್ಯೆ ಕಡಿಮೆ ಆಗ್ತಿದೆ.. ಇದರಿಂದ ಪ್ರಕೃತಿಯಲ್ಲಿ ಮತ್ತೆ ಬ್ಯಾಲೆನ್ಸ್ ಆಗಬಹುದು ಅನ್ನೋದು  ಒಂದು ಆಶಾ ಭಾವ.  ಆದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಹುಟ್ಟೋ ಮಗು ಹೆಣ್ಣೋ ಗಂಡೋ ಯಾವುದಾದರೂ ಒಂದೇ ಅಂತ ಅಂದ್ಕೊಳ್ಳೋರ ಮನಸಲ್ಲೂ ಹೆಣ್ಣುಮಗು ಹಿಟ್ಟಿದಾಗ ಆಗೋ ಖುಷಿನೇ ಬೇರೆ, ಗಂಡು ಹುಟ್ಟಿದಾಗ ಆಗೋದೇ ಬೇರೆ.. ಹೆಣ್ಣಿನ ವಿಷಯಕ್ಕೆ ಬಂದಾಗ ಆಕೆಯ ಸೇಫ್ಟಿ ಭಯ ಹುಟ್ಟಿಸಿಬಿಡುತ್ತೆ..  ಈ ಸಮಾಜದಲ್ಲಿ ಹೆಣ್ಣುಮಗಳನ್ನ ಕಾಪಾಡಿಕೊಳ್ಳೋದು ಅದೆಂಥಾ ಕಷ್ಟ ಅನ್ನೋದು ಹೆಣ್ಣು ಹೆತ್ತವರಿಗಷ್ಟೇ ಅಲ್ಲಾ , ಪ್ರತಿಯೊಬ್ಬ ಪುರುಷನ ಪೌರುಷತ್ವಕ್ಕೂ ಗೊತ್ತು.. ಹೆರುವ ತಾಯಿಯ ಹೃದಯಕ್ಕೆ ಗೊತ್ತು...

                                                                      ಹೆಣ್ಣಾಗಿ ಹುಟ್ಟಿ ಹುಣ್ಣಾಗುವುದಕ್ಕಿಂತ ಗಿಡದ ಮೇಲಿನ ಹಣ್ಣೇ ವಾಸಿ.. ಹಣ್ಣಾದರು ತಿನ್ನೋದಕ್ಕೆ ಮಾಗಬೇಕು.. ಆದರೆ ಹೆಣ್ಣು ... ಹುಟ್ಟಿದರೆ ಸಾಕು.. ಭೋಗಿಸುವವರಿಗದೆಷ್ಟು ಬಾಗಿಲುಗಳು ಅಂತೀರಾ , ಒಬ್ಬಳು ತಾಯಿ ಅದ್ಯಾವ ಬಾಗಿಲನ್ನ  ಅಂತ ಹಾಕಿಕೊಂಡು  ಬರ್ತಾಳೆ.. ಮಲಗಿಸಿಟ್ಟ ಮಗುವನ್ನ ಮುದ್ದಿಸೋ ನಿರ್ಮಲ ಪ್ರೀತಿಯಲ್ಲೂ ಮೋಸವೇನಾದ್ರೂ ಇದ್ಯಾ ಅಂತ ಹುಡುಕಬೇಕು. ಯಾಕಂದ್ರೆ ಅಪರಿಚಿತರನ್ನ ಬಿಟ್ಟುಬಿಡಿ, ಸ್ನೇಹಿತರು ಸಂಬಂಧಿಕರು ಕೊನೆಗೆ ಸ್ವತಃ ಜನ್ಮ ಕೊಟ್ಟ ತಂದೆ ಕೂಡಾ ಮಾಗದ ಮೊಗ್ಗಿನಂತಾ ಮಗುವಿನ ಮೇಲೆ ಮದವೇರಿಸಿಕೊಂಡು ಮುಗಿಬಿದ್ದ ಉದಾಹರಣೆ ಇದೆ.. ಇವತ್ತಿನ ದಿನ ಇದು ಎಲ್ಲೋ ತೀರಾ ಅಪರೂಪಕ್ಕೊಂದು ದುರ್ಘಟನೆಯಾಗಿ ಉಳಿದಿಲ್ಲ.. ಇದಕ್ಕೆ ಕಾರಣ ಏನು..? ಅರ್ಥವಾಗದೇ ಅಳ್ತಾ ಇರೋರು ನಾವು..!

                          ಹೆಣ್ಣು ಮಗುವಿಗೇ ಈ ಪರಿಸ್ಥಿತಿ ,ಅದೇ ಸ್ಕೂಲು ಕಾಲೇಜು ಅಂತ ಕಳಿಸೋವಾಗ ಇನ್ನೆಷ್ಟು ಕಷ್ಟ ಅನುಭವಿಸಬೇಕು..ಯಾವ ಗಲ್ಲಿಯಿಂದ ಯಾವ ಪೊದೆಯಿಂದ ಇನ್ಯಾವ ವೆಹಿಕಲ್ಲಿಂದ ಕಾಮಾಪಿಶಾಚಿಯ ವಕ್ರ ದೃಷ್ಟಿ ಬೀರತ್ತೆ ಅನ್ನೋದನ್ನ ಹೇಳೋದಾದರೂ ಹೇಗೆ..? ಹೊಸಕಿಹಾಕಿಬಿಡ್ತಾರೆ ಅವಳ ಕನಸುಗಳನ್ನ.. ಮಾಗದ ಮನಸನ್ನ..

                        ಇನ್ನು ಹರಯದಲ್ಲಿ ಹೃದಯ ಸಹಜವಾಗೇ ಹೊಸತನದ ಹುಡುಕಾಟಕ್ಕೆ ನಿಲ್ಲತ್ತೆ.. ಹೃದಯಕ್ಕೆ ಹತ್ತಿರವಾಗುವವರ ಸಂಖ್ಯೆ ದೊಡ್ಡದು.. ಅದು ಸ್ನೇಹಾನಾ ಪ್ರೀತಿನಾ ಅಥವಾ ಅದೆಲ್ಲವನ್ನೂ ಮೆಟ್ಟಿ ನಿಲ್ಲುವ ಕಾಮವಾಗಿಬಿಡುತ್ತಾ ? ಯೋಚನೆಯನ್ನೇ ಮಾಡದ ವಯಸ್ಸು ಅದು.. ಆಗ ಪಾರಿಜಾತದಂತಾ ಪೋರಿಯನ್ನ ಆಸ್ವಾದಿಸಿ ಅಡಗಸಿಬಿಡೋ ಅದೆಷ್ಟು ಘಟನೆಗಳು ನಡೆದಿಲ್ಲಾ..? ಹೇಗೆ ಆಕೆ ಈ ದೌರ್ಜನ್ಯದಿಂದ ಬಚಾವ್ ಆಗೋದು.

                                                                ಈಗ ಹುಡುಗಿ ಮನೆಯೊಳಗೆ ಸೆರಗೊದ್ದು ಗಂಡನ ಪಾದಕ್ಕೆ ಹಣೆ ಹಚ್ಚಿ ಅಪ್ಪಟ ಪತಿವೃತ ಗೃಹಿಣಿಯಂತೆ ತನ್ನನ್ನ ತಾನು ಬಿಂಬಿಸಿಕೊಳ್ಲೋದಕ್ಕೆ ಇಷ್ಟಾಪಡಲ್ಲಾ. ತಾನು ಪುರುಷನಿಗೆ ಸರಿಸಮಾನಳು ಅಂತಾಳೆ.. ಭಟ್ಟೆಯಷ್ಟೇ ಬದಲಾಗೋದಲ್ಲ.. ಆಕೆಯ ವ್ಯಕ್ತಿತ್ವವೇ ಬದಲಾಗತ್ತೆ.. ಯಶಸ್ಸಿನ ಹಾದಿ ದಿಕ್ಕು ನೋಟ ಎಲ್ಲವೂ ಬದಲಾಗತ್ತೆ. ಮನೆಯಿಂದ ಹೊರಬರ್ತಾಳೆ.. ಗಗನದೆತ್ತರಕ್ಕೆ ಹಾರ್ತಾಳೆ.. ಕಬ್ಬಿಣದ ಕಡಲೆಯನ್ನೂ ಜಗಿದು ತೋರಿಸ್ತಾಳೆ.. ಬದುಕಿನ ಭಾರವನ್ನ ಬುಜದ ಮೇಲೆ ಹೊತ್ತು ನಿಂತು ಗೆಲುವಿನ ನಗೆ ಬೀರ್ತಾಳೆ.. ಎಲ್ಲದರಲ್ಲೂ ಹುಡುಗಿ ಗೆಲ್ಲಬಲ್ಲಳು.. ಮನೆಯ ಹೊರಗೆ ಒಳಗೆ.. ಆದ್ರೆ ಸೆಕ್ಸ್ ವಿಷಯದಿಂದ ಸಮಾಜದಲ್ಲಿ  ಅವಳ ಮೇಲೆ ಆಗೋ ದೌರ್ಜನ್ಯವನ್ನ ಆಕೆಯಿಂದ ಗೆಲ್ಲೋದಕ್ಕೆ ಆಗುತ್ತಾ.. ? ಹುಡುಗಿ ಅನ್ನೋ ಕಾರಣಕ್ಕೆ ಅವಳು ಅವಕಾಶ ವಂಚಿತಳಾಗಲ್ವಾ..?  ಆಕೆಯ ಮೇಲೆ ನಡೆಯೋ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಕಡಿಮೆ ಅಲ್ಲಾ.

                                                                ಹೆಣ್ಣನ್ನ ಭೋಗದ ವಸ್ತು ಅಂದುಕೊಳ್ಳದಿದ್ದರೆ ಕಾಮ ಅನ್ನೋದು ಕೆಟ್ಟದ್ದಲ್ಲಾ..ಆದ್ರೆ ಸಮಾಜ ಅದನ್ನ ಕೆಟ್ಟದ್ದನ್ನಾಗಿ ಮಾಡ್ತಿದೆ.. ಜನ ಅದನ್ನ ಕೆಟ್ಟ ದೃಷ್ಟಿಯಲ್ಲಿ ನೋಡ್ತಿದ್ದಾರೆ..   ನಿದ್ದೆ ಊಟ ಎಲ್ಲಾ ಇದ್ದಹಾಗೆ ಸೆಕ್ಸ್ ಕೂಡಾ.. ಅದು ಮಹಿಳೆಗಿಂತ ಪುರುಷನಿಗೆ ಒಂದು ಹಂತಕ್ಕೆ ಅನಿವಾರ್ಯ.. ಆ ಅನಿವಾರ್ಯತೆಯನ್ನ ಮಹಿಳೆ ದಾಳವಾಗಿಟ್ಟುಕೊಂಡು ಆಡೋಹಾಗೆ ಇದ್ದುಬಿಟ್ಟಿದ್ರೆ ಇಷ್ಟೊತ್ತಿಗೆ ಪುರುಷ ಪ್ರಧಾನತೆ ಹೋಗಿ ಮಹಿಳೆಯ ಪ್ರಾಭಲ್ಯ ನೆಲೆಸಿಬಿಟ್ಟಿರೋದು.. ಆದ್ರೆ ಇಲ್ಲಿ ಪ್ರಧಾನತೆ ಅಲ್ಲಾ ಇಂಪಾಟರ್ೆಂಟು.. ಮನಸ್ಥಿತಿ.. ಪರಸ್ಪರ ಗೌರವದ ಭಾವ.. ಬೆರೆವ ಪ್ರೀತಿ.. ಎಲ್ಲಿ ದೇಹಗಳಲ್ಲದೆ ಮನಸುಗಳ ಮಿಲನವಾಗತ್ತೋ ಅಲ್ಲಿ ನಿಜವಾದ ಸುಖದ ಅನುಭೂತಿಯಾಗುತ್ತೆ.. ಅಂಥಾ ಕಾಮವನ್ನ ದೇವರನ್ನ ತೋರಿಸೋ ದಾರಿ ಅಂದಿದ್ದ ಓಶೊ.. ಅದನ್ನ ಅರ್ಥಮಾಡ್ಕೊಂಡವರು ಕಡಿಮೆ.. ಹಂಗಾಗಿ ಇವತ್ತಿಗೂ ಸಮಾಜದ ದೃಷ್ಟಿಯಲ್ಲಿ ಅದು ಕೆಟ್ಟದ್ದು. ಕಾಮ ಅನ್ನೋದು ಯಾವಾಗ ಕೆಟ್ಟದ್ದಾಗತ್ತೆ ಅನ್ನೋ ಬಗ್ಗೆ ಯೋಚಿಸೋರು ಕಡಿಮೆ.

                                                                ಹೆಂಡತಿ ಕಂಪ್ಲೆಂಟ್ ಕೊಡೋದಕ್ಕೆ ಬರ್ತಾಳೆ .. ಗಂಡನಿಂದಲೇ ರೇಪ್ ಆಗಿದೆ ಅಂತ.. ಆದ್ರೆ ಅದನ್ನ ತಗೋಬೇಕು ಅಂತ ಪೊಲೀಸರಿಗೆ ಅನ್ನಿಸಲ್ಲಾ.. ಇದೆಂಥಾ ಮಾತಾಡ್ತಾಳಪ್ಪಾ ಇವಳು ಅಂತ ನಕ್ಕುಬಿಡ್ತಾರೆ.. ಹಾಗಾದ್ರೆ ಮದುವೆಯ ಚೌಕಟ್ಟಲ್ಲಿ ಒಂದಾಗಿಬಿಟ್ಟ ಮಾತ್ರಕ್ಕೆ ಬಲಾತ್ಕಾರ ನಡೆಯಲ್ಲಾ ಅಂತಾನಾ..? ಪರಸ್ಪರ ಒಪ್ಪಿಗೆ ಇಲ್ಲದೆ ಸೇರೋದೆಲ್ಲಾ ಬಲಾತ್ಕಾರ ಅನ್ನೋದು ತುಂಬಾ ಜನರಿಗೆ ಇವತ್ತಿಗೂ ಅರ್ಥವಾಗಿಲ್ಲ.. ಇನ್ನು ವಿವಾಹೇತರ ಸಂಬಂಧ ಇಟ್ಟುಕೊಂಡ ಹೆಣ್ಣುಮಗಳೊಬ್ಬಳು ಒಂದು ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಬೇರೆಯಾದವನ ವಿರುದ್ಧ ರೇಪ್ ಕೇಸ್ ಕೊಡ್ತಾಳೆ.. ಅದನ್ನ ಮರು ಮಾತಾಡದೇ ತಗೊತಾರೆ.. ಅದ್ಹ್ಯಾಗೆ ರೇಪ್ ಆಗುತ್ತೆ ಹೇಳಿ.. ನಂಬಿಕೆ ದ್ರೋಹ ಅಷ್ಟೆ. ಅದೇ ಮನಸು ಮಾಗದ ಹುಡುಗಿಯೊಬ್ಬಳಿಗೆ ಪುಸಲಾಯಿಸಿ ಅನುಭವಿಸಿ ಅವಳು ಒಪ್ಪಿದ್ಲು ಅಂದ್ರೆ ತಪ್ಪಾಗತ್ತೆ. ಆದ್ರೆ ಒಂದು ನೆನಪಿರಲಿ ಒಪ್ಪಿ ಒಂದಾಗಲಿ ಒಪ್ಪದೇ ಒಂದಾಗ್ಲಿ ತಪ್ಪು ನಡೆದಾಗ ಅದರಲ್ಲಿ ನಷ್ಠವಾಗೋದು ಹೆಣ್ಣಿಗೆ.. ಪೆಟ್ಟು ಬೀಳೋದು ಹೆಣ್ಣಿಗೆ .. ಸಮಾಜದ ದೃಷ್ಟಿಯಿಂದ ಕುಸಿದು ಬೀಳುವವಳು ಹೆಣ್ಣು.. ಹಾಗಿದ್ದಾಗ ಮಾಡಿದ ತಪ್ಪುಗಳನ್ನೆಲ್ಲಾ ಮೀರಿ ಬರೋ ಯೋಚನೆ ಹೆಣ್ಣಾಗಿ ಹುಟ್ಟಿದ್ದೇ ತಪ್ಪು ಅಂತ.!

                                                                ಮಗಳನ್ನ ಜೋಪಾನ ಮಾಡೋದಕ್ಕಾಗದೆ ಕಣ್ಣೀರಿಡೋ ತಂದೆಯನ್ನ ನೋಡಿದಾಗ ಗಂಡಸರು ಕೂಡಾ ಅಸಹಾಯಕರು ಅಂತ ನನಗೆ ಅನ್ನಿಸಿರ್ಲಿಲ್ಲ.. ಹೆಣ್ಣು ಹೆತ್ತವರ ಕಷ್ಟ ಇದು ಅನ್ಸಿತ್ತು.. ಆದ್ರೆ ಯಾವಾಗ ತನ್ನ ಗೆಳತಿಯನ್ನ ರಕ್ಷಿಸೋದಕ್ಕಾಗದೆ ಹುಡುಗನೊಬ್ಬ ಕುಸಿದು ಕೂರ್ತಾನೋ ಆಗ ಇಡೀ ಸಮಾಜವೇ ಅಸಹಾಯಕವಾಗಿದೆ ಅನ್ನಿಸಿಬಿಟ್ತು.. ದೆಹಲಿಯಲ್ಲಿ ನಡೆದ ಕೇಸು ಪುರುಷರು ತಲೆತಗ್ಗಿಸೋದೊಂದೇ ಅಲ್ಲಾ ಸಿಡಿದೇಳೋ ಹಾಂಗ್ ಮಾಡ್ತು. ಇನ್ನಾದ್ರೂ ಇದಕ್ಕೆ ಕಡಿವಾಣ ಬೀಳದೇ ಇದ್ರೆ ಹೇಗೆ..?


                                  ನ್ಯಾಯಕ್ಕಾಗಿ ಹೋರಾಟ ಶುರುವಾಗಿದೆ.. ಲಿಂಗ ಬೇಧವಿಲ್ಲದೆ ಜನ ಬೀದಿಗಿಳಿದಿದ್ದಾರೆ.. ತಪ್ಪಿತಸ್ಥರಿಗೆ  ತಕ್ಷಣ ಶಿಕ್ಷೆ ಆಗ್ಬೇಕು ಅನ್ನೋದೇ ಬೇಡಿಕೆ.. ಗಲ್ಲಿಗೇರಿಸಿ ಅಂತ ಕೇಳ್ಕೋತಿರೋರು ತುಂಬಾ ಜನ.. ಆದ್ರೆ ಅವರಿಗೆಲ್ಲಾ ನನ್ನದೊಂದು ಪ್ರಶ್ನೆ ಆ ರೇಪಿಸ್ಟ್ ಗಳನ್ನ ಸಾಯಿಸಿದ್ರೆ ಆ ಹುಡುಗಿಗೆ ನ್ಯಾಯ ಸಿಕ್ಕಂಗಾಗತ್ತಾ..? ಅವಳು ಬದುಕಿನುದ್ದಕ್ಕೂ ಅನುಭವಿಸೋ ಯಾಥನೆಯನ್ನ ಇವರು ಅನುಭವಿಸ್ತಾರಾ..? ಅನುಭವಿಸಬೇಕು.. ಸಮಾಜದಲ್ಲಿ ತಲೆ ಎತ್ತಿ ನಡೆಯಲಾಗದ ಪರಿಸ್ಥಿತಿ ಅವರಿಗೆ ಎದುರಾಗಬೇಕು.. ಅಂಥವರ ಬದುಕಲ್ಲಿ ಮುಂದೆ ಯಾವತ್ತೂ ಹೆಣ್ಣಿನ ಛಾಯೆಕೂಡಾ ಬೀಳದಂತಾಗ್ಬೇಕು.. ಮದುವೆ ಆದವರಾದ್ರೆ  ಸ್ವಂತ ಹೆಂಡತಿಯ ಜೊತೆಗೂ ಇನ್ಯಾವತ್ತೂ ಸುಖಪಡಬಾರದು.. ಯಾವ ಪುರುಷತ್ವವನ್ನ ಅವರು ದುರುಪಯೋಗ ಪಡಿಸಿಕೊಂಡಿದ್ದಾರೋ ಅದನ್ನೇ ಬೇರುಸಹಿತ ಕೀಳಬೇಕು... ಅಷ್ಟಾದರೆ , ಅವರಷ್ಟೇ ಅಲ್ಲಾ ಇಡೀ ಕಾಮುಕ ಸಮಾಜ ಪಾಠಾ ಕಲಿಯುತ್ತೆ.. ಹೆಣ್ಣುಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೊಡೋರ ಕಣ್ಣಿಗೆ ಕಡಿವಾಣ ಬಿದ್ದಂಗಾಗತ್ತೆ.. ಇದಲ್ವಾ ನಿಜವಾಗಿಯೂ ನಮಗೆ ಬೇಕಾಗಿರೋದು... ಆದ್ರೆ ನಮ್ಮ ಕಾನೂನು ಇದಕ್ಕೆ ಒಪ್ಪತ್ತಾ..?

                                                      ಸಂಸ್ಕೃತಿ ಬದಲಾಗತ್ತೆ... ಸಂಪ್ರದಾಯ ಬದಲಾಗುತ್ತೆ.. ಯೊಚನಾ ಶೈಲಿ ಬದಲಾಗುತ್ತೆ.. ಒಟ್ಟಾರೆ ಬದುಕುವ ರೀತಿಯೇ ಬದಲಾಗುತ್ತೆ.. ಆದ್ರೆ ನಮ್ಮ ಕಾನೂನು ಬದಲಾಗಲ್ಲಾ.. ಅದರಲ್ಲಿ ಅಮೆಂಡ್ಮೆಂಟ್ ತರೋ ಮಾತೇ ಇಲ್ಲಾ.. ಕಾಲಕ್ಕೆ ತಕ್ಕ ಹಾಗೆ , ಸಮಾಜದ ಉನ್ನತಿಗೆ ಬೇಕಾದ ಹಾಗೆ ಯಾಕೆ ಅದು ಬದಲಾಗ್ಬಾದರ್ು..? ಹಾಗಂತ ಬದಲಾವಣೆ ಬರೋದೇ ಇಲ್ಲಾ ಅಂತಲ್ಲಾ.. ಚಿತ್ರ ವಿಚಿತ್ರ ಅನ್ನಿಸೋ ಬದಲಾವಣೆಗಳೂ ನಮ್ಮಲ್ಲಿ ಬರುತ್ವೆ.. ಒಮ್ಮೆ ಅಧಿಕಾರದಲ್ಲಿರೋರು ಆದೇಶಿಸಿಬಿಟ್ರೆ ಮರು ಮಾತನಾಡೋ ಹಕ್ಕು ನಮಗಿಲ್ಲ..  ಒಂದ್ವೇಳೆ ಕಾನೂನಿನ ಆದೇಶವನ್ನ ರಸ್ತೆಯಲ್ಲಿ ನಿಂತು ಧಿಕ್ಕರಿಸೋ ಹಕ್ಕು ,  ಜನಸಾಮಾನ್ಯನಿಗಿದ್ರೆ ಇವತ್ತು ಕಾರ್ಗಳಲ್ಲಿ ಕೂಲಿಂಗ್ ಪೇಪರ್ ತೆಗೀಬೇಕು ಅನ್ನೋದನ್ನ ಜನ ಒಪ್ಕೋತಿದ್ರಾ..?  ಪಾಪಾ ಅವರಾದ್ರೂ ಅನಿವಾರ್ಯವಾಗಿ ಕಾನೂನಿನ ಕಣ್ಣಿಗೆ ಬಟ್ಟೆ ಕಟ್ತಾರೆ.. ಕಾರುಗಳಿಗೆ ಕರ್ಟನ್ ಹಾಕ್ತಾರೆ.. ಅಲ್ಲಿಗೆ ಕಾರಿನೊಳಗೆ ಅದೇನ್ ಅಕ್ರಮ ನಡೆದ್ರೂ ಖಾಕಿಗಳು ಕಣ್ಣು ಹಚ್ಚಿ ನೊಡೋಕಾಗಲ್ಲಾ.. ಅಲ್ಲಿಗೆ ಇದೊಂದು ಕಾನೂನು ಬಂದು ಏನ್ ಪ್ರಯೋಜನ.. ಜನರ ಕಷ್ಟ ಸುಖಗಳನ್ನೂ ಅರ್ಥ ಮಾಡ್ಕೊಂಡು ಆರ್ಡರ್ ಮಾಡ್ಬೇಕು.. ಅದೇನೂ ಇಲ್ಲದೆ ವಿಚಿತ್ರ  ಬದಲಾವಣೆಗಳು ಯಾವ ಸದ್ದಿಲ್ಲದೆ ಬಂದು ಸೇರ್ಕೊಂಬಿಡುತ್ವೆ.. ಆದ್ರೆ ಇಡೀ ಸಮಾಜದ ಸ್ವಾಸ್ತ್ಯ ಕಾಪಾಡಬಹುದಾದ , ದೇವತಾರೂಪಿ ಹೆಣ್ಣಿಗೆ ನಿಜಕ್ಕೂ ರಕ್ಷಣೆ ಕೊಡಬಹುದಾದ ಒಂದು ಮಹತ್ವದ ತೀಪರ್ು ಕಾನೂನಿನ ಪುಠದೊಳಗೆ ಯಾಕೆ ಸೇರ್ಪಡೆ ಆಗಲ್ಲಾ..? ಈ ನಿಟ್ಟಿನಲ್ಲೂ ಒಂದು ಹೋರಾಟ ನಡೆದರೆ ಸೂಕ್ತ..

                                                           ಅಂದ್ಹಾಗೆ ಇದು ಪುರುಷ ವಿರೋಧಿ ನೀತಿ ಅಲ್ಲಾ..ಸ್ತ್ರೀ ವಾದವೂ ಅಲ್ಲಾ..  ಕಣ್ಣಿಗೆ ಕಾಣುವ ಸಮಾಜದ ಕರಾಳ ಮುಖದ ಅವಲೋಕನ.. ಬದಲಾವಣೆ ಕಾಣದ ಅಸಮಾಧಾನ.. ಅಸಹಾಯಕತೆಯ ಬೇಸರ.. ಕೊನೆಯದಾಗಿ ಕಾಮುಕರ ಕೈಗೆ ಸಿಕ್ಕಿ ನರಳಾಡಿದ ಹುಡುಗಿಯರಿಗೆ ಮುಂದೊಂದು ದಿನ ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಬರಬಹುದು ಅನ್ನೋ ಭರವಸೆಯ ಸಾಂತ್ವನ ಅಷ್ಟೆ..