Saturday, September 24, 2011

ಪ್ರೀತಿಗ್ಯಾಕೆ ಇಂಥಾ ಪರೀಕ್ಷೆ..?

ನಿನ್ನ ಪ್ರೇಮದ ಪರಿಯ 
 ನಾನರಿಯೆ ಕನಕಾಂಗಿ
 ನಿನ್ನೊಳಿದೆ ನನ್ನ ಮನಸು
ಅವಳ ಪ್ರೇಮದ ಪರಿ ಅವನಿಗೆ ನಿಜವಾಗಿಯೂ ಅರ್ಥವಾಗಿಲ್ವಾ..? ಅಥವಾ ಅವಳೊಳಗಿನ ಮನಸನ್ನ ಹೊರಗೆ ತರೋದಕ್ಕೇ ಸಾಧ್ಯವಾಗ್ಲಿಲ್ವಾ..? ಒಮ್ಮೆ ಅನ್ನಿಸಿಬಿಟ್ಟಿತ್ತು ಪ್ರೀತಿ ಅಂದ್ರೆ ಅದು.. ಅಲ್ಲಿ ಅದರಹೊರತಾಗಿ ಎಲ್ಲವೂ ಗೌಣ.. ಅದೊಂದು ಜೀವ ಜೊತೆಗಿಲ್ಲದಿದ್ದರೆ ಬೆಳಗಿನಲಿ ಚಂದವಿಲ್ಲ, ನೋಟದಲ್ಲಿ ಅಂದವಿಲ್ಲ .. ತಿಂಡಿ ತೀರ್ಥದಲ್ಲಿ ಧ್ಯಾನವಿಲ್ಲ.. ಕತ್ತಲಲಿ ಕರೆದಂತಾಗತ್ತೆ.. ಮೌನದಲಿ ನೆರಳು ಸರಿದಾಡಿದಂತಾಗತ್ತೆ.. ಅಲ್ಲಿಗೆ ಅದು ಎರಡು ಜೀವವಲ್ಲವೇ ಅಲ್ಲ..



ಅವಳೆಲ್ಲೋ ಹುಟ್ಟಿದವಳು ಇವನೆಲ್ಲೋ ಬೆಳೆದವನು.. ಒಂದು ತಟ್ಟೆಯಲಿ ತಿಂದವರಲ್ಲಾ, ಒಂದೇ ಅಂಗಳದಲಿ ಆಡಿದವರಲ್ಲಾ.. ಇಬ್ಬರ ಕುಟುಂಬದ ರೀತಿ ನೀತಿಗಳೇ ಬೇರೆ.. ಸಂಸ್ಕಾರ ಬೇರೆ. ಸಂಬಂಧಗಳು ಬೇರೆ.. ಕಡೆಗೆ ನಡೆದ ದಾರಿಯೂ ಬೇರೆ.. ಅದ್ಯಾವ ತಿರುವಿನಲ್ಲಿ ಅವನು ಅವಳನ್ನ ನೋಡಿದ್ನೋ ಗೊತ್ತಿಲ್ಲ, ಕಣ್ಣುಗಳು ಕಲೆತಿವೆ.. ಮನಸುಗಳು ಬೆರೆತಿವೆ.. ಕಾಣದ ದೇವರು ಹರಸದಿದ್ದರೆ ಕಂಡಕ್ಷಣದಲ್ಲಿ ಎರಡು ಜೀವಗಳು ಅಂಥದ್ದೊಂದು ಪ್ರೇಮದ ಸೆಲೆಯಲ್ಲಿ ಸಿಲುಕೋದಕ್ಕೆ ಸಾಧ್ಯ ಇದ್ಯಾ..? ಅವರಿಬ್ಬರೂ ಮಾತೇ ಆಡದೆ ಮನಸುಕೊಟ್ಟಿದ್ರು.. ಅಲ್ಲಿ ಜಾತಿಯಿಲ್ಲ.. ಜಾತಕವಿಲ್ಲ ಕಡೆಗೆ ಹೆಸರೂ ಗೊತ್ತಿಲ್ಲ.. ಹೃದಯಬಡಿತ ಅಷ್ಟೇ ಕೇಳಿಸಿದ್ದು.. ಮನದ ಮಿಡಿತವಷ್ಟೇ ಮೊಳಗಿದ್ದು..


ಅವನು ಹಾಸನದವನು ಅವಳು ಅಲ್ಲೇ ಹತ್ತಿರದ ಹಳ್ಳಿಯವಳು.. ಅವಳು ಓದಿದ್ದು ಕಡಿಮೆ , ಇವನು ಡಿಪ್ಲೋಮಾ ಮಾಡೋದಕ್ಕೆ ಹೊರಟಿದ್ದ.. ಓದು ಮುಗಿಸಿ ಬರೋವರೆಗೂ ಅವನ ಮನಸಲ್ಲಿದ್ದವಳು ಅವಳೊಬ್ಬಳೇ.. ಧೈವೇಚ್ಛೆ ನೋಡಿ, ಆ ಮನೆಯಲ್ಲಿದ್ದ ಹುಡುಗಿಗೆ ಯಾವತ್ತೋ ಮದುವೆ ಆಗ್ಬಿಡ್ತಿತ್ತು, ಆದ್ರೆ ಗುರುಬಲ ಬಂದಿದ್ದು ಅವನು ಬಂದಮೇಲೆ.. ಆಗ ಇಬ್ಬರೂ ಮತ್ತೆ ಸಿಕ್ಕಿದ್ದಾರೆ.. ಪ್ರೀತಿಯ ಸಂದೇಶ ಮಾತಲ್ಲಿ ಹೊರಬಂದಿದ್ದು ಆಗ.. ಇಬ್ಬರಿಗೂ ಇಷ್ಟ.. ಆದ್ರೆ ಕಷ್ಟ.. ಯಾಕಂದ್ರೆ ಜಾತಿ ಬೇರೆ.. ಮನೆಯಲ್ಲಿ ಇವರಿಬ್ಬರ ಸಂಬಂಧವನ್ನ ಜೋಡಿಸೋ ಚಾನ್ಸೇ ಇಲ್ಲ.. ಹರಸಿದರೆ ಅದೇ ಹೆಚ್ಚು.. ಆದ್ರೂ ಪ್ರೀತಿ ಕುರುಡು ನೋಡಿ ಪರಸ್ಪರ ಅದೆಂಥಾ ಟೈಮಲ್ಲೂ ಜೊತೆ ಯಾಗೋ ಶಪಥ ಮಾಡೇ ಬಿಟ್ರು.. ನಂತ್ರಾ ಎಲ್ಲರ ವಿರೋಧದಲ್ಲೂ ಮದುವೆ ಫಿಕ್ಸ್ ಆಯ್ತು.. ಕಡೆಗೆ ಹೆತ್ತವರು ಭಾರವಾದ ಹೃದಯದಲ್ಲೇ ಆಶಿರ್ವಾದ ಮಾಡಿದ್ರು.. ಆದ್ರೆ ಮದುವೆ ಊರ ಅಂಗಳದ ಚಪ್ಪರದಲ್ಲಿ ಅದ್ಧೂರಿಯಾಗಂತೂ ನಡೆದಿಲ್ಲ.. ಧರ್ಮಸ್ಥಳದ ಮಂಜುನಾಥ ಈ ಮದುವೆಗೆ ಸಾಕ್ಷಿಯಾದ.. ಹರಸಿ ಹೃದಯದಲ್ಲಿ ನೆಲೆನಿಂತ ಹರನಾದ.. !


 ಆ ಭಗವಂತನ ಆಶೀರ್ವಾದದೊಂದಿದೆ ಬದುಕನಾರಂಭಿಸಿದ ಆ ಜೋಡಿ ನೆಲೆ ಕಂಡುಕೊಂಡಿದ್ದು ಬೆಂಗಳೂರಿನಲ್ಲಿ.. ಡಿಪ್ಲೊಮಾ ಮಾಡ್ಕೊಂಡಿದ್ದ ಹುಡುಗನಿಗೊಂದು ಕೆಲಸಾ ಸಿಕ್ತು.. ಬರೋ ಕಾಸು ಇವರಿಬ್ಬರ ಬದುಕಿಗೆ ಸಾಕಾಗಿತ್ತು..ಅಷ್ಟಕ್ಕೂ ಹೊತ್ತು ಅನ್ನವಿಲ್ಲದೆ ಬರಿ ತುತ್ತು ತಿಂದು ಬದುಕಿದ ದಿನಗಳನ್ನೂ ಕಂಡ ಜೀವ ಅದು.. ಬಡತನ ದುಃಖವಾಗಿರ್ಲಿಲ್ಲ.. ಬದುಕಿನ ಕತ್ತಲಲ್ಲಿ ಬಾಂಧವ್ಯದ ಹಣತೆಹಚ್ಚಿ , ತಂಗಾಳಿಯ ಹೊದಿಕೆಯಲ್ಲಿ , ಶೃಂಗಾರದ ಕಾವ್ಯ ಬರೆದು ಬೆಚ್ಚಗಾದ ಜೀವಗಳಿಗೆ ಕಷ್ಟ ಕಣ್ಣೀರಾಗ್ಲಿಲ್ಲ.. ದಿನಗಳು ಹಾಗೇ ಕಳೆದಿದ್ವು.. ಅವಳ ಕಣ್ಣಾಲೆಯಲಿ ಮೂಡಿದ ಚಿತ್ತಾರಕ್ಕೆ ಇವನು ಬಣ್ಣ ತುಂಬ್ತಿದ್ದ, ಇವನ ತುಟಿಯಂಚಿನ ಮಾತಿಗೆ ಇವಳು ಶಬ್ದವಾಗ್ತಾ ಇದ್ಲು.. ನಡುವೆ ಮತ್ತೊಂದು ಸಂಭ್ರಮ ..


ಆಕೆ ಹೆರಿಗೆ ಕೋಣೆಯಲ್ಲಿ ಅಮ್ಮಾ ಅಂತ ನರಳಾಡ್ತಾ ಇದ್ರೆ ಇವನು ಒದ್ದಾಡ್ತಾ ಇದ್ದ.. ಆಕೆಯ ಬೇನೆ ಅವನ ನೋವಾಗಿತ್ತು.. ಕಟ್ಟಿದ್ದ ಕೈ ಮುಷ್ಠಿ ಸಡಿಲಾಗೋ ಹೊತ್ತಿಗೆ ಕಂದನ ಕೂಗು.. ಮನೋಜ ಹುಟ್ಟಿದ್ದ.. ಆ ಮಗುವನ್ನ ಎತ್ತಿ ಮುದ್ದಾಡೋ ಮೊದಲು  ಬೊಗಸೆಯಲ್ಲಿ ಅವಳ ಮುಖವನ್ನಿಟ್ಟು ಹಣೆಗೊಂದು ಹೂಮುತ್ತನಿಟ್ಟವನ ಕಣ್ಣಲ್ಲಿ ಧನ್ಯತೆಯ ಭಾವವಿತ್ತು..! ಆಕೆ ಮೆಲ್ಲಗೆ ಹೊರಳಿದಾಗ ಇವನ ಕೈಯ್ಯಲ್ಲಿ ಮಗು.. ಅವನ ಕೈಯ್ಯಲ್ಲಿ ಬೆಚ್ಚಗೆ ಮಲಗಿದ್ದ ಕಂದನ್ನ ಕಂಡಾಗ ಆಕೆಯ ಕಣ್ಣಲ್ಲಿ ಸಂತಸದ ಕಂಬನಿ.. ಹೀಗೆ ಶುರುವಾಗಿತ್ತು ಪ್ರೇಮಿಗಳ ಬದುಕಿನ ಮತ್ತೊಂದು ಯಾನ..!


ಮಗುವಿನ ಆಟ ನೋಟ ತುಂಟಾಟದಲ್ಲಿ ಮೂರು ವರ್ಷಕಳೆದಿದ್ದೇ ಗೊತ್ತಾಗಿಲ್ಲ.. ಆ ನಂತ್ರ ಶುರುವಾಗೋದು ದೊಡ್ಡ ದೊಡ್ಡ ಜವಾಬ್ದಾರಿಗಳ ಸಾಲು.. ಅವನ ಸಂಬಳದಲ್ಲಿ ಎಲ್ಲವೂ ಸರಾಗವಾಗಿ ಮುಗಿಯಲ್ಲ ಅಂತ ಅನ್ನಿಸಿ ಆಕೆ ಮೊಟ್ಟಮೊದಲಬಾರಿ ಹೊರಗೆ ದುಡಿಯೋ ಯೋಚನೆ ಮಾಡಿದ್ಲು.. ಅವನೂ ಅದಕ್ಕೆ ಒಪ್ಪಿದ್ದ.. ದುಡಿಮೆ ಪ್ರೀತಿಗೆ ಕಡಿವಾಣಹಾಕಲಿಲ್ಲ.. ಜೀವನದ ಜವಾಬ್ದಾರಿ ಸಂಬಂಧದ ಸಮಯವನ್ನ ಸಾಯಿಸಲಿಲ್ಲ.. ಬೆಳದಿಂಗಳಲ್ಲಿ ಇಬ್ಬರೂ ಕೈ ಜೋಡಿಸಿ ಕುಳಿತಿದ್ರೆ ಕಣ್ಣಲ್ಲಿ ನಕ್ಷತ್ರ ಕಾಣ್ತಾ ಇತ್ತು.. ನಡೆಯಲ್ಲಿ ಆನಂದ ಇರ್ತಿತ್ತು.. ನಗು ನಗು.. ಅದೊಂದು ಸುಂದರ ಸಂಬಂಧಕ್ಕೆ ಸಾವಿರ ವರ್ಷ ಆಯಸ್ಸಿದ್ರೂ ಇಷ್ಟೇ ಮಧುರವಾಗಿರ್ತಿತ್ತೇನೋ.. ಕಾಣದ ಕಣ್ಣುಗಳೂ ಕಥೆ ಹೇಳ್ತಿದ್ವೇನೋ.. ನಡುಗೋ ಕೈಗಳು ಹಿತವೆನಿಸುವವರೆಗೂ ಜೊತೆಯಾಗುವಂತ ಪ್ರೀತಿ ಅವರದ್ದು.. ಅಂಥ ಪ್ರಿತಿಗೆ ಆಯಸ್ಸಿಲ್ಲ..!


ಅವಳಿಗೆ ಅದೇನು ಕಾಯಿಲೆ ಇತ್ತು ಅನ್ನೋದು ನನಗೂ ಗೊತ್ತಾಗ್ಲಿಲ್ಲ.. ಒಟ್ಟಲ್ಲಿ ಗಂಟಲಲ್ಲಿ ಎದ್ದ ಚಿಕ್ಕದೊಂದು ಗಂಟು ಬದುಕಿನ ನಂಟನ್ನೇ ಕಡಿದುಬಿಡೋ ಮಟ್ಟಕ್ಕೆ ಹೋಯ್ತು.. ಆ ಗಂಟಿಗೆ ಅಂಟಿಕೊಂಡು ಬಂದ ಗಂಟಲ ನೋವು ಮನೆಮದ್ದಿಗೆ ವಾಸಿಯಾಯ್ತು..ಆದ್ರೆ ಗಂಟು ಹೋಗ್ಲಿಲ್ಲಾ.. ಮತ್ತೆ ಅದು ಕಾಡಿದಾಗ ಮದ್ದು , ಬಾಡಿದಾಗ ಮೌನ.. ಅವಳು ಆ ಕಷ್ಟವನ್ನ ಇವನಿಗೆ ಹೇಳಲೇ ಇಲ್ಲ.. ಆದ್ರೆ ಇವನಿಗೆ ಆಕೆ ಕೆಲವಷ್ಟನ್ನ ಹೇಳಬೇಕಾಗಿರ್ಲಿಲ್ಲ.. ಹೆಂಡತಿಯನ್ನ ಆಸ್ಪತ್ರೆಗೆ ಕರ್ಕೊಂಡ್ಹೋಗಿದ್ದ.. ಅವರು ಆ ದಂಪತಿಯ ಬದುಕಿಗೆ ಬಹುದೊಡ್ಡ ಶಾಕ್ ಕೊಟ್ಟಿದ್ರು.. ಅದು ಗಂಟಲ್ಲಾ ಗಡ್ಡೆ.. ತಕ್ಷಣ ಆಪರೇಶನ್ ಆಗ್ಬೇಕು..
ಆಪರೇಶನ್ ಆಗ್ತಿತ್ತು ದುಡ್ಡೊಂದಿದ್ರೆ.. ಆದ್ರೆ ಇವರತ್ರಾ ಇರೋ ಚಿಕ್ಕಸೇವಿಂಗಲ್ಲಿ ಕೆಲಸಾ ಆಗಲ್ಲಾ.. ಆಗ್ಲೇ ಹೆತ್ತವರಿಗೆ ಸಂಬಂಧಿಗಳಿಗೆ ವಿಶಯ ತಿಳಿಸಿ ಸಹಾಯ ಕೇಳಿದ್ರೆ ಆ ರುಣವನ್ನ ಕೈಲಾದ ಮಟ್ಟಿಗೆ ತೀರಿಸೋದಕ್ಕೆ ಅವಳು ಬದುಕಿರ್ತಾ ಇದ್ಲು..ಆದ್ರೆ ಆಕೆಗೆ ಸ್ವಾಭಿಮಾನ,, ಯಾರ ಹತ್ರಾನೋ ಕೈಚಾಚೋದಕ್ಕೆ ಅವಳೊಪ್ಪಲಿಲ್ಲ.. ಅವನು ಎಲ್ಲಕಡೆ ಹಣಾ ಹೊಂದಿಸೋ ಪ್ರಯತ್ನದಲ್ಲುಳಿದ.. ಆ ಟೈಮಲ್ಲೇ ಇವಳ ಗಂಟಲಿನ ಗಡ್ಡೆ ಕಣ್ಣಿನ ದೃಷ್ಟಿಯನ್ನೂ ಕಿತ್ಕೊಂಡಿತ್ತು.. ಆದ್ರೂ ಆಪರೇಶನ್ನಿನ ಹಣ ಸೇರಿರ್ಲಿಲ್ಲ.. ಹಗಲೂ ರಾತ್ರಿ ಕಷ್ಟ ಪಡೋ ಗಂಡನ್ನ ನೋಡಿ ಆಕೆ ಅಂತಿಮ ನಿರ್ಧಾರಕ್ಕೆ ಬಂದಿದ್ಲು.. ತನ್ನ ಆಪರೇಶನ್ನಿಗೆ ಕರ್ಚುಮಾಡೋ ಹಣವನ್ನ   ಉಳಿಸಿದ್ರೆ ಮಗುವಿನ ಭವಿಶ್ಯಕ್ಕಾಗತ್ತೆ ಅಂತ ಯೋಚಿಸಿದ್ಲು.. ತನ್ನವನ ಪರದಾಟಕ್ಕೆ ತೆರೆ ಎಳೆದುಬಿಡ್ತೀನಿ ಅಂದ್ಕೊಂಡು ಅವತ್ತೊಂದು ದಿನ ಸಾವನ್ನ ಕೈಬೀಸಿ ಕರೆದುಬಿಟ್ಲು..


ಮನೆಗೆ ಬಂದವನಿಗೆ  ಭರಿಸಲಾಗದ ಆಘಾತ.. ಪ್ರಾಣಕ್ಕಿಂತ ಹೆಚ್ಚಾಗಿ ಪ್ರಿತಿಸ್ತಾ ಇದ್ದವಳ ಹೆಣದ ಮುಂದೆ ಕೂತು  ಕೊಡಗಟ್ಟಲೆ ಕಣ್ಣೀರಾಕಿದ್ರೂ ದುಃಖ ಹೋಗ್ಲಿಲ್ಲ.. ಪಕ್ಕದಲ್ಲಿದ್ ಮಗನ ನೋಟ್ ಬುಕ್ ತಗೊಂಡು ಬರೆದಿದ್ದು ಒಂದೇ ವಾಕ್ಯ.. ನೀನು ಮೊದಲು ಹೋಗ್ಬಿಟ್ಯಾ..? ನಾನೂ ಬರ್ತೀನಿ.. ಅಂತ ಅಲ್ಲಿಂದ ಎದ್ದವನಿಗೆ ಸ್ಕೂಲಿಗೆ ಹೋಗಿದ್ದ ಮಗ ನೆನಪಾಗ್ಲಿಲ್ಲ.. ಹೆಂಡತಿಯ ಜತೆಗೆ ಅವನಿಗಿದ್ದ ಮನಸಿನ ಸಂಬಂಧವನ್ನ ಮಗನ ಮೇಲಿನ ಪ್ರೀತಿ ಗೆದ್ದಿರ್ಲೇ ಇಲ್ಲ.. ಅವಳಿಗಿಂತ ಜಾಸ್ತಿ ಅವನ ಬದುಕಲ್ಲಿ ಮತ್ತೇನೋ ಇದೆ ಅಂತ ಅನ್ನಿಸಲೇ ಇಲ್ಲ.. ಅವಳ ನೆನಪಲ್ಲೇ ಕತ್ತಿನ ಕುಣಿಕೆಯನ್ನ ಬಿಚ್ಚಿ ಹಾಸಿಗೆಯ ಮೇಲೆ ಮಡದಿಯನ್ನ ಮಲಗಿಸಿದವನು ಅದೇ ಹಗ್ಗದಲ್ಲಿ ಮತ್ತೊಂದು ಕುಣಿಕೆ ಹಾಕಿಬಿಟ್ಟ.. ಅದರೊಳಗೆ ತಲೆ ಇಟ್ಟವನಿಗೆ ಮತ್ತೆ ಅವಳನ್ನ ಸೇರುವ ತವಕವೊಂದೇ ಇತ್ತು.. ಪ್ರೇಮಿಗಳು ಸಾವಿನ ನಂತರದ ಗೊತ್ತಿಲ್ಲದ ಬದುಕಲ್ಲಿ ಮತ್ತೆ ಒಂದಾಗಲು ಹೊರಟುಬಿಟ್ಟಿದ್ವು.. ಇಬ್ಬರು ಬದುಕಿದ್ದು ಒಂದೇ ಬದುಕನ್ನ ಇನ್ನು ಸಾವು ಬೇರೆ ಬೇರೆ ಬರೋದಕ್ಕೆ ಸಾಧ್ಯ ಇದ್ಯಾ..?  ಆ ಹೆಣವನ್ನ ನೋಡಿ ಅತ್ತವಳು ನಾನು.. ಅವರ ಪ್ರೀತಿ ಅದರ ಅಸಹಾಯಕ ರೀತಿ ನನ್ನನ್ನ ಕಾಡಿಬಿಟ್ತು..
ಈ ಪವಿತ್ರ ಪ್ರೇಮದ ಕುಡಿ ಬಾಡದಿರ್ಲಿ.. ಮನೋಜ ಮನೋಜ್ಞವಾಗಿ ಬೆಳೆಯಲಿ.

Saturday, September 10, 2011

ಲೈಫ್ ಇಷ್ಟೇನಾ..?


                     ಮೊನ್ನೆ ನಾವು  ಮಾತಾಡೋವಾಗ ಎಕ್ಸ್ಪೈರೀ ಡೇಟ್ ಬಗ್ಗೆ ಹೇಳ್ತಾ ಇದ್ರು.. ಯಾಕೋ ಅದು ನನ್ನ ಕಿವಿಯಲ್ಲಿ ಗುಯ್ಗುಡ್ತಾನೇ ಇತ್ತು.. ಮಾತು ಮುಗಿಸಿ ಎದ್ದ ಮೇಲೆ ನನ್ನ ತಲೆ ಎಲ್ಲಿಂದ ಎಲ್ಲಿಗೋ ಓಡ್ತಾ ಇತ್ತು.. ಎಲ್ಲದಕ್ಕೂ ಒಂದು ಎಕ್ಸ್ಪೈರಿ ಡೇಟ್ ಇದ್ದೇ ಇರತ್ತಾ.?ಕೇಳಿದ್ದೆ. ಯೆಸ್ ನಾನಂತೂ ಏನ್ ತಗೊಂಡ್ರೂ ಮೊದ್ಲು ನೋಡೋದು ಎಕ್ಸ್ಪೈರಿ ಡೇಟನ್ನಾ ಅಂತ ಯಾರೋ ಅಂದ್ರು.. ಇನ್ನೊಬ್ಬರು ಗುಡ್ ಹೆಬಿಟ್ ಅಂತ ಬೆನ್ನುಚಪ್ಪರಿಸಿದ್ರು.. ನನಗೆ ಮಾತ್ರ ಉತ್ತರ ಸಿಗಲಿಲ್ಲ..

ಹೊಟ್ಟೆಗೆ ಹಾಕೋ ತಿಂಡಿ ತಿನಿಸುಗಳ ಎಕ್ಸಪೈರಿ ಡೇಟ್ ನೋಡ್ತೀವೋ ಇಲ್ವೋ ಮೈಗೆ ಹಚ್ಚೋ ಲೋಶನ್ನಿಂದ ಹಿಡಿದು ಕೂದಲ ಬಣ್ಣದ ತನಕ ಎಲ್ಲದರ ಅವಧಿ ಯಾವತ್ತು ಮುಗಿಯತ್ತೆ ಅನ್ನೋದನ್ನ ಎಲ್ಲರೂ ನೋಡ್ಕೊಂಡೇ ನೋಡ್ಕೋತಾರೆ.. ನಮಗೆಲ್ಲಾ ಚಂದ ಇಂಪಾರ್ಟೆಂಟು.. ಹೊರಗಿನಿಂದ ಬಳ್ಕೊಳ್ಳೋ ಬಣ್ಣ ಇಂಪಾರ್ಟೆಂಟು.. ನಾವು..? ನಮ್ಮ ಬದುಕು..? ನಮ್ಮ ಎಕ್ಸ್ಪೈರಿ ಡೇಟ್ ಬಗ್ಗೆ ನಾವ್ಯಾವತ್ತಾದ್ರೂ ಯೋಚಿಸಿದೀವಾ?  ಅಪ್ಕೋರ್ಸ್ ತಮಗೆ ವಯಸ್ಸಾಗ್ತಿದೆ.. ಜಾಸ್ತಿ ಅಂದ್ರೆ ಇನ್ನಿಷ್ಟು ವರ್ಷ ನಾವ್ ಕೆಲಸಾ ಮಾಡ್ಬಹುದು.. ಅಂತೆಲ್ಲಾ ಕೆಲವರು ಯೋಚಿಸಿರ್ತಾರೆ.. ಹೀಗೆ ಮುಂದಾಲೋಚನೆ ಇರೋರು ಬ್ಯಾಂಕ್ಗಳನ್ನ ಬೆಳೆಸ್ತಾರೆ.. ಒಂದಿಷ್ಟು ಸೇವಿಂಗ್ ಅಂತೂ ಆಗೇ ಆಗತ್ತೆ ಬಿಡಿ.. ಆದ್ರೆ ನಮ್ಮ ಎಕ್ಸ್ಪೈರಿ ಡೇಟ್ಗಳನ್ನ ನಿರ್ಧರಿಸೋದ್ಹೇಗೆ..?

ರಾತ್ರಿ ನಿದ್ದೆನೇ ಬರ್ತಿಲ್ಲಾ.. ಯಾಕೋ ಊಟಾನೂ ಅಷ್ಟಾಗಿ ಸೇರಲ್ಲ.. ಕಣ್ಣು ಮಂಜಾಗ್ತಿದೆ.. ಓಡಾಡೋದಕ್ಕೂ ಮೈಲಿ ಶಕ್ತಿನೇ ಇಲ್ಲಾ ..ಇನ್ನು ನಾನು ಜಾಸ್ತಿ ದಿನ ಇರ್ಲಿಕ್ಕಿಲ್ಲಾ ಅಂತ ಹಾಸಿಗೆ ಹಿಡಿದ ಅಜ್ಜಿಗೆ ಅನ್ನಿಸತ್ತೆ.. ಆದ್ರೆ ಆಕೆ ವರ್ಷಗಳಿಂದ ಅದೇ ಸ್ಥಿತಿಯಲ್ಲಿ ಮಲಗಿರ್ತಾಳೆ.. ಅದನ್ನ ಎಕ್ಸ್ಪೈರಿ ಡೇಟ್ ಮುಗಿದ್ಮೇಲೂ ಯೂಸಲ್ಲಿರೋದಕ್ಕೆ ಹೋಲಿಸಬಹು ಅಲ್ವಾ..? ಇನ್ನೊಬ್ಬರಿಗೆ ಡಿಪೆಂಡ್ ಆಗದೆ ಬದುಕಿದ ಕೊನೆಯ ದಿನವನ್ನ ಮನುಷ್ಯರ ಶೆಲ್ಪ್ ಲೈಫ್ ಅನ್ನೋಣಾ.. ಹಾಗಾದ್ರೆ ಭಾವನೆಗಳು ? ಸಂಬಂಧ..? ಅದಕ್ಕೆಲ್ಲಾ ಇಷ್ಟು ಲೈಫ್ ಅಂತಾ ಇಲ್ವಾ...? ಇದೆಯಪ್ಪಾ ನಮ್ಮಿಬ್ಬರ ಪ್ರೀತಿ ಎಕ್ಸ್ಪೈರ್ ಆಗ್ಲಿಲ್ವಾ? ಅಂತ ಕೈ ಕೊಟ್ಟ ಹುಡುಗಿ ನಗ್ ನಗ್ತಾ ಹೇಳ್ತಾಳೆ.. ಹುಡುಗ ಇನ್ನೂ ಎಕ್ಸ್ಪೈರ್ ಆದ ಪ್ರೀತಿಯ ಟಾನಿಕ್ಕನ್ನ ತಗೋತಾ ಗಡ್ಡ ಬೆಳೆಸಿಕೊಂಡಿರ್ತಾನೆ..


ಪ್ರೇಮಿಗಳಲ್ಲಿ ಪ್ರೀತಿ ನಾನಾ ಕಾರಣಕ್ಕೆ ಎಕ್ಸ್ಪೈರ್ ಆಗ್ಬಹುದು.. ಮನೆಯಲ್ಲಿ ಒಪ್ಪಿಗೆ ಇಲ್ಲದೆ ಇರ್ಬಹುದು.. ಅಥವಾ ಅವರದು ಟೈಮ್ ಪಾಸ್ ರಿಲೇಶನ್ನೇ ಆಗಿರ್ಬಹುದು.. ಇಲ್ಲಾ ಹುಡುಗನ ಜೇಬು ಕಾಲಿಯಾದ್ರೆ ಹುಡುಗಿಗೆ ಇವನ ಜೊತೆಗೆ ನನ್ನ ಸಂತಸ ಇಲ್ಲಾ ಅನ್ನಿಸಬಹುದು.. ಅವಳನ್ನ ಉಂಡೆದ್ದಮೇಲೆ ಇವನಿಗೆ ಅವಳು ಸಾಕು ಅನ್ನಿಸಿಬಿಡಬಹುದು.. ಆದ್ರೆ ಇದ್ಯಾವುದರ ಅಡೆತಡೆ ಇಲ್ಲದೆ ಸಾಯದೇ ಬದುಕೋ ಪ್ರೀತಿ ಮದುವೆ ಅನ್ನೋ ಬಾಂಧವ್ಯದೊಳಗೆ ಬಡವಾಗಿಬಿಡೋ ಎಷ್ಟು ಉದಾಹರಣೆಗಳಿಲ್ಲಾ..

ಹದಿಹರಯದಲ್ಲಿ ಹೆತ್ತವರನ್ನ ಬಿಟ್ಟು ಓಡಿಬಂದು ಮದುವೆಯಾಗೋ ಹುಡುಗಿಗೆ ಲೈಫು ಇಷ್ಟೇನೇ ಅಂತ ಅನ್ನಿಸೋದಕ್ಕೆ ಜಾಸ್ತಿ ದಿನ ಬೇಡಾ.. ಇನ್ನು ಹತ್ತಾರು ವರ್ಷ ಜೊತೆಗೆ ಸಂಸಾರಮಾಡಿದವರಿಗೂ ಒಂದು ಹಂತಕ್ಕೆ ಈ ಜೀವನ ಸಾಕು ಅನ್ನಿಸಿದ್ದಿದೆ.. ಯಾಕ್ ಹೀಗಾಗತ್ತೆ..? ದಾಂಪತ್ಯದಲ್ಲಿ ಎಕ್ಸ್ಪೈರಿ ಡೇಟು ಯಾವಾಗ ಹತ್ತಿರವಾಗತ್ತೆ..?
ನನಗನ್ನಿಸಿದ ಹಾಗೆ ಗಂಡಸರಿಗೆ ಸಂಸಾರ ಸಾಕು ಅನ್ನಿಸೋದು ಜವಾಬ್ದಾರಿಗಳು ಭಾರವಾದಾಗ.. ಸಂಬಂಧ ಬಂಧನವಾದಾಗ.. ಗಂಡನಿಗೆ ಮಾಡಬೇಕು ಅನ್ನಿಸಿದ್ದನ್ನೆಲ್ಲಾ ಮಡದಿಯಾದವಳು ಮಾಡೋದಕ್ಕೆ ಬಿಟ್ಟುಬಿಟ್ರೆ ಅವರಿಗೆ ಸಂಸಾರ ಕಷ್ಟ ಅನ್ನಿಸಲ್ಲಾ.. ಗಯ್ಸ್ ನೀಡ್ ಫ್ರೀಡಮ್..! ಆದ್ರೆ ಹೆಂಗಸು..? ಅವಳಿಗೆ ಗಂಡ ಕೊಡೋ ಫ್ರೀಡಮ್ಗಿಂತ ಪ್ರೀತಿಯ ಅಪ್ಪುಗೆ ಇಷ್ಟ.. ಅವನು ಅವಳಿಗಾಗಿ ಮೀಸಲಿಡೋ ಟೈಮ್ ಇಷ್ಟ.. ಅವನು ಕಾಡೋದು ಇಷ್ಟ.. ಬೇಡೋದು ಇಷ್ಟ.. ನಗಿಸೋದೂ ಇಷ್ಟ.. ಜೊತೆಗೆ ನಲಿಯೋದೂ ಇಷ್ಟ.. ಗಂಜಿನೇ ಆದ್ರು ಅದು ಅವನ ಪ್ರೀತಿಯಲಿ ಜೊತೆಯಾದ್ರೆ ಮೃಷ್ಟಾನ್ನ.. ಒಟ್ಟಲ್ಲಿ ಅವಳು ಸದಾ ಅವನ ಸಾಮಿಪ್ಯವನ್ನ ಬಯಸ್ತಾಳೆ.. ಭಾವುಕ ಜಗತ್ತನ್ನ ಬೆಳೆಸ್ತಾಳೆ.. ಅವಳು ಕಟ್ಟೋ ಭಾವನೆಯ ಗಾಳಿಗೋಪುರವನ್ನ ಇವನು ಅವಸರದಲ್ಲಿ ಒಡೆದುಬಿಡ್ತಾನೆ.. ಅವಳ ಕಣ್ಣು ಒದ್ದೆಯಾಗತ್ತೆ.. ಅದು ಇವನಿಗೆ ಕಾಣಿಸೋದೇ ಇಲ್ಲಾ.. ಕಂಡರೂ ಕಣ್ಣರೆಪ್ಪೆಯ ಮೇಲೆ ಒಂದು ಹೂ ಮುತ್ತು.. ಅಲ್ಲಿಗೆ ಅವಳು ಒಲಿಯ ಬೇಕು.. ನೋವನ್ನ ಮರೆಯಬೇಕು.. ಅದು ಎಷ್ಟು ಹೆಂಗಸರಿಂದ ಆಗತ್ತೋ ಅಷ್ಟು ಜನರ ಫ್ಯಾಮಿಲಿಗೆ  ಎಕ್ಸಪೈರೇಶನ್ ಡೇಟ್ ತುಂಬಾ ಲೇಟಾಗಿ ಬರಬಹುದು..

ಇವತ್ತು ಹುಡುಗಿ ಕೂಡಾ ಗಂಡಸಿಗೆ ಸಮನಾಗಿ ದುಡೀತಾಳೆ.. ಅವನ ಥರಾನೇ ವರ್ಕೋಹಾಲಿಕ್ ಇರ್ತಾಳೆ ಅಂದ್ಕೊಳ್ಳಿ, ಅಲ್ಲಿಗೆ ಸಮಸ್ಯೆ ಬರಲ್ವಾ..? ಗಂಡಿಗೆ ಬಯಸಿದಾಗ ಬಯಸಿದ್ದು ಬೇಕು.. ಅವನು ಒಂದಿನ ಬೇಗ ಆಫೀಸಿನಿಂದ ಬಂದ್ರೆ ಕಾಫಿ ಕೊಡೋದಕ್ಕೆ ಹೆಂಡತಿ ಇರ್ಬೇಕಿತ್ತು ಅನ್ಸತ್ತೆ.. ಹೋಗ್ಲಿ ಅದಕ್ಕೆ ಕಾಂಪ್ರಮೈಸ್ ಆಗ್ಬಿಡೋಣಾ.. ಹೆಂಡತಿಯ ದುಡಿಮೆ ಆಕೆಯ ಸ್ಥಾನ ಮಾನಗಳೆಲ್ಲಾ ಒಂದು ಹಂತಕ್ಕೆ ಹುಡುಗನಿಗೆ ಹೆಮ್ಮೆ ಅನ್ನಿಸಬಹುದು..ಆದ್ರೆ ಅದು ಅವನನ್ನ ಮೀರಿ ನಿಂತರೆ ಅಸಮಾಧಾನ.. ಇನ್ನು ಗಂಡಾ ಹೆಂಡತಿ ಇಬ್ಬರೂ ದುಡಿಯೋ ಫ್ಯಾಮಿಲಿಗಳಲ್ಲಿ ಮನೆಕೆಲಸಕ್ಕೆ ಕೆಲಸದವರಿದ್ದರೆ ಸರಿ, ಇಲ್ಲಾ ಅಂದ್ರೆ ಮನೆಯಲ್ಲಿ ಅತ್ತೆ ಮಾವಾ ಇದ್ರೂ ಗಂಡಾ ಹೆಂಡತಿಗೆ ಕೆಲಸದ ವಿಷಯದಲ್ಲಿ ಜಗಳ ಗ್ಯಾರಂಟಿ..

ಜಗಳಾ ಅನ್ನೋದು ಯಾರ್ ಫ್ಯಾಮಿಲಿಲಿ ಇರಲ್ಲಾ ಹೇಳಿ.. ಹಗಲೆಲ್ಲಾ ಹೊಡೆದಾಡಿದ್ರೂ ರಾತ್ರಿ ರಮಿಸಿ ಭ್ರಮಿಸಿ ಒಂದಾಗಿಬಿಟ್ರೆ ಮುಗಿದೋಗತ್ತೆ..ಆದ್ರೆ ಅದು ಮಂಚ ಕೈ ಬೀಸಿ ಕರೆಯೋವರೆಗೂ ಸರಿ.. ಒಂದು ಹಂತಕ್ಕೆ ಅವರಿಗೆ ಸಾಕು ಅನ್ನಿಸಿಬಿಟ್ರೆ.. ಗಂಡಸಿಗೆ ಅವಶ್ಯಕಥೆ ಇಲ್ಲದೆ ರಮಿಸೋದಕ್ಕೆ ಬರತ್ತಾ..? ಅವಳಿಗೆ ಸಂತಸದ ಭ್ರಮೆಯಲ್ಲಿ ಬದುಕೋದಕ್ಕೆ ಬರತ್ತಾ..? ಆಗ ಸಂಬಂಧ ಹಳಸಲಾಗತ್ತೆ.. ಯಾವತ್ತು ಗಂಡಾ ಹೆಂಡತಿ ಮಕ್ಕಳಿಗಾಗಿ ಹಿರಿಯರಿಗಾಗಿ ಮತ್ಯಾರಿಗೋ ಆಗಿ ಅಥವಾ ಅನಿವಾರ್ಯ ಅಂತ ಜೊತೆಗಿದೀವಿ ಅಂದ್ಕೋತಾರೋ ಅಲ್ಲಿಗೆ ಆ ಸಂಸಾರದ ಶೆಲ್ಪ್ ಲೈಪ್ ಮುಗೀತು ಅಂತಾನೇ..

ಬದುಕಿಗೆ ಎಕ್ಸ್ಪೈರಿ ಡೇಟಿದೆ.. ಸಂಭಂಧಕ್ಕಿದೆ.. ಆದ್ರೆ ಭಾವನೆಗಳಿಗೆ ಇಲ್ಲಾ ಅಲ್ವಾ..? ಅದು ಸಾಯೋ ಸ್ಥಿತಿಯಲ್ಲೂ ಬದುಕಿಬಿಡಬಹುದು.. ಬದಲಾಗ್ಬಹುದು.. ಇನ್ನಷ್ಟು ಮತ್ತಷ್ಟು ಸುಂದರವಾಗೋದಕ್ಕೆ ಯಾವ ಮಿತಿನೂ ಇಲ್ಲ.. ಇನ್ನು  ಎಕ್ಸ್ಪೈರಿ ಡೇಟ್ ಬಗ್ಗೆ ಯೋಚಿಸಲೇ ಬೇಕಾದ ಇನ್ನೊಂದು ಸಂಗತಿ ನಮ್ಮ ದಿನನಿತ್ಯದ ಬದುಕಲ್ಲಿದೆ.. ಅದು ನಮಗೆ ಅನ್ನ ಕೊಡೊ ಕೆಲಸಾ.. ಅದರಲ್ಲಿ ಒಂದಿಷ್ಟು ತೃಪ್ತಿ ಸಾಧನೆಯ ಖುಶಿ ಇರಬೇಕಲ್ವಾ..? ಅದು ದಿನ ದಿನ ಸಿಗಬೇಕು.. ಅದಕ್ಕೆ ನಾವೂ ಕ್ರಿಯೇಟೀವ್ ಆಗ್ಬೇಕು.. ಕೆಲಸದಲ್ಲಿ ಹೊಸತನ ಕಾಣ್ಬೇಕು..  ಯಾವ ಕೆಲಸಾನೂ ಬೇಸರಪಟ್ಟಿಕೊಳ್ಳೋಷ್ಟು ಕೆಟ್ಟದ್ದಾಗೋದಕ್ಕೆ ಯಾವತ್ತಿಗೂ ಚಾನ್ಸಿಲ್ಲಾ..ಅದು ಮೊನೋಟನಸ್ ಆದಾಗ ಬೇಸರ ಮೊಳಕೆಯೊಡೆಯತ್ತೆ.. ಸುತ್ತಲಿನ ಪರಿಸರ ಇಷ್ಟವಾಗಿದಿದ್ದಾಗ್ಲೂ ಕೆಲಸಾ ತೃಪ್ತಿಕೊಡಲ್ಲಾ.. ಕೆಲಸದಲ್ಲಿ ತೃಪ್ತಿ ಇಲ್ಲಾ ಅಂದ್ರೆ ಅದರ ಲೈಫ್ ಮುಗಿದಹಾಗೆ.. ಆದ್ರೆ ಕೆಲಸಾ ಅನ್ನೋದು   ಯಾವತ್ತು ಬೇಕಾದ್ರೂ ಬದಲಾಗ್ಬಹುದು.. ರೂಪರೇಶೆಯನ್ನ ಬದಲಿಸಬಹುದು.. ಬದಲಾವಣೆ ಕೂಡಾ ನಮ್ಮ ಕೈಲಿದೆ.. ಹಂಗಾಗಿ ದುಡಿಮೆಯ ಎಕ್ಷಪೈರಿ ಡೇಟನ್ನ ನಾವು ಡಿಸೈಡ್ ಮಾಡ್ಬಹುದು..
ಒಟ್ಟಾರೆ ಲೈಫು ಇಷ್ಟೇನೇ ಅನ್ನಿಸಿದಾಗ ನಮ್ಮ ಎಕ್ಸ್ಪೈರಿ ಡೇಟ್ ಆಗಿದೆ ಅಂತಾ ಅರ್ಥ.. ನಂತರದ ಬದುಕು ಎಕ್ಸ್ಪೈರಿ ಆದ ಮೆಡಿಸಿನ್ ಥರಾ ಪವರ್ಕಳ್ಕೋಬಹುದು, ಯಾವ ಇಫೆಕ್ಟೂ ಇಲ್ಲದೆ ಇರಬಹುದು ಇಲ್ಲಾ ಸೈಡ್ ಇಫೆಕ್ಟು ಬದುಕನ್ನೇ ಬಲಿತಗೋಬಹುದು..
ಎಕ್ಸ್ಪೈರಿ ಡೇಟ್ ಬಗ್ಗೆ ಇಷ್ಟೆಲ್ಲಾ ಯೋಚಿಸಿದ್ಮೇಲೆ ಡಿಸೈಡ್ ಮಾಡಿದೀನಿ.. ನನ್ನ ಬದುಕಿನ ಪ್ರತಿಯೊಂದು ಎಕ್ಸ್ಪೈರಿ ಡೇಟ್ ಕೂಡಾ ನನ್ನ ನಿರ್ಧಾರದ ಮೇಲಿರ್ಬೇಕು ಅಂತ.. ನನಗೆ ಲೈಫು ಇಷ್ಟೇ ಅಂತ ಅನ್ನಿಸದಿದ್ರೆ ಸಾಕಪ್ಪಾ..!