Thursday, March 24, 2011

ಭರವಸೆಯ ಬೆಳಕು..!


http://withlove-ajit.blogspot.com/2011/03/blog-post_15.html

ಇದನ್ನ ನೋಡಿ ಕರುಳು ಚುರ್ರಂದಿದ್ದಷ್ಟೇ ಅಲ್ಲಾ ಒಮ್ಮೆ ಮಾತೇ ನಿಂತಂತಾಯ್ತು..
ಮೌನವಾಗ್ಹೋದೆ.. ಸಾಯಿನಾಥ್ ಅವರು ತೋರಿಸಿದ ಆ ಹುಡುಗನ ಚಿತ್ರ ನನ್ನ ಮನಸಲ್ಲಿ ಸ್ಟಿಲ್ ಆಗ್ಹೋಗಿತ್ತು. ಆ ಕಣ್ಣುಗಳಲ್ಲಿ ಏನಿತ್ತು..? ಭಯ..? ಆತಂಕ..? ನೋವು..? ಅಥವಾ ವಯಸ್ಸಿಗೆ ಮೀರಿದ ಪ್ರಬುದ್ಧತೆ..? ಬದುಕಿನ ಅನಿವಾರ್ಯತೆ..? ಉಹು ನನಗೆ ಅರ್ಥವಾಗ್ಲಿಲ್ಲಾ.. ಒಂದಂತೂ ಹೇಳಬಲ್ಲೆ ಆ ಕಣ್ಣುಗಳಿಗೆ ಜೀವ ಇತ್ತು.. ಅವುಗಳು ಅದೇನನ್ನೋ ಹುಡುಕ್ತಾ ಇದ್ವು.. ಅದು ಭರವಸೆನಾ..?ಬದುಕಿಗೊಂದು ಭರವಸೆನಾ..?





ಮನೆಯಲ್ಲಿ ಮಸಣದ ಚಾಯೆ .. ಅವನ ಅಪ್ಪಾ ಆತ್ಮಹತ್ಯೆ ಮಾಡಿಕೊಂಡು ಮೂರೋ ಮತ್ತೊಂದೋ ದಿನ ಆಗಿದೆ.. ಹತ್ತಿಯ ಹುಳಕ್ಕೆ ಹೊಡೆಯೋ ಕೀಟನಾಶಕದಲ್ಲಿ ಹಟ್ಟಿಯೊಳಗಿನ ಬಡತನ ಅನ್ನೋ ಕ್ರಿಮಿಯನ್ನ ಬಡೀಬಹುದು, ಬೆಳ್ಳಿಯ ಕಿರಣದಂತಾ ಎಳೆಯಲ್ಲಿ ಬದುಕುಕಟ್ಟಿಕೊಳ್ಳಬಹುದು ಅಂದ್ಕೊಂಡು ಚಿಕ್ಕಂದಿನಿಂದ ದುಡಿದಿದ್ದ.. ಆತನ ದುಡಿಮೆಗೆ ದೇವರು ಕಣ್ಣುಬಿಡ್ಲಿಲ್ವಾ..? ದಣಿವಿಗೊಂದು ದಯೆ ಇರಲಿಲ್ವಾ..? ಯಾವ ಲೆಕ್ಕದಲ್ಲೂ ಅಗ್ಗವಾಗದ ಉಳ್ಳವರ ಅಲಂಕಾರಕ್ಕೆ ಅಹಂಕಾರಕ್ಕೆ ಇವನೆಲ್ಲಿ ಕಾಣಿಸಬೇಕು..! ಕೊಡುವವರ ಕೈ ಸಣ್ಣದಾಯ್ತು...ಕೊಂಡವನ ಉದರ ಉಬ್ಬಿಕೊಂಡ್ತು.. ಅಟ್ಟದ ಮೇಲೆ ಒಣನಗಿಬಿದ್ದ ಅಂಟವಾಳಕಾಯಿಯಂತಾದ ಬೆವರು ಬಸಿದ ರೈತ... ಉಸಿರಿದೆ ಹಸಿರಿಲ್ಲಾ.. ವಿದರ್ಭದ ರೈತನ ಕಣ್ಣಲ್ಲಿ ಬತ್ತಿಹೋದ ಬದುಕಿನ ಹೊರತಾಗಿ ಮತ್ತೇನೂ ಇರಲಿಲ್ಲಾ.. ಭರವಸೆಗಳು ಸತ್ತಮೇಲೂ ಬದುಕಿನಗಾಡಿ ಎಳೆದ ದೇಹ ಮಣ್ಣಾಗೋದಕ್ಕೆ ಹೊರಟುಬಿಟ್ತು.. ಅವನೊಂದಿಗೆ ಆಕೆಗಿದ್ದ ಅಲ್ಪ ಖುಶಿಯೂ ಹೋಯ್ತು..

ಅಮ್ಮಾ ಅಮ್ಮಾ.. ಕರೆದರೆ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವಳಿಲ್ವಾ..? ಅತವಾ ಕೇಳುವ ಮನಸಿಲ್ವಾ..? ಧೈರ್ಯವಿಲ್ವಾ..? ಹುಟ್ಟಿಸಿದ ದೇವರು ಹುಲ್ಲುಮೇಯಿಸಲಾಗದೆ ಹೆಣವಾಗಲಿಲ್ವಾ..? ಈಗ ಮಗ ಹಸಿವು ಅಂದ್ರೆ ಏನ್ ಮಾಡ್ತಾಳೆ..? ದುಡಿದು ತಿನ್ನು ಅನ್ನಬಹುದಿತ್ತು..ಆದ್ರೆ ದುಡಿಮೆ ಅನ್ನವಾಗುವುದಲ್ಲಾ ಅನ್ನೋದು ಅವಳಿಗಿಂತ ಚನ್ನಾಗಿ ಮತ್ಯಾರಿಗೆ ಅರ್ಥವಾಗ್ಬೇಕು..? ಸುಟ್ಟ ರೊಟ್ಟಿಯ ಕನವರಿಕೆಯಲ್ಲೇ ಕನಸಿನ ಲೋಕಕ್ಕೆ ಕರೆದೊಯ್ದುಬಿಡೋದಕ್ಕೆ ಅವನು ಚಿಕ್ಕವನಲ್ಲಾ.. ಬೆಳೆದಿದ್ದಾನೆ.. ಬುಜದೆತ್ತರಕ್ಕೆ.. ಅವಳಷ್ಟು, ಅವರಪ್ಪನಷ್ಟು..

ಅದು ನನೆಪು.. ಉಳಿದವರಿಗೆ ಅಳಿದವರ ನೆನಪು.. ಅವನಿಗೆ ಈ ಬಟ್ಟೆ ಇಷ್ಟ , ತಿಂಡಿ ಇಷ್ಟ.. ಪುಸ್ತಕ ಇಷ್ಟಾ.. ಕಣ್ಣೀರಾಕ್ತಾ ಕಳೆದುಹೋದವರ ನೆನಪುಗಳನ್ನ ಜೋಪಾನಮಾಡೋ ಜನಗಳ ನಡುವೆ ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಅಂಗಿಯನ್ನ ತೊಟ್ಟು ದಿಕ್ಕುತೋಚದೆ ಕೂತ ಮಗ.. ಅವನೀಗ ಆ ಮನೆಗೆ ಅಪ್ಪನಾಗಬೇಕು..ಆತನ ಜವಾಬ್ದಾರಿಗಳನ್ನ ಹೊರಬೇಕು.. ಅವನಾದ್ರೂ ಏನ್ ಮಾಡ್ತಾನೆ.. ಅಪ್ಪಾ ಕುಡಿದ ಕೀಟನಾಶಕದಲ್ಲಿ ಸ್ವಲ್ಪ ಮಿಕ್ಕಿದೆಯಲ್ಲಾ ಅದನ್ನೇ ತಗೊಂಡು ಅಷ್ಟು ದೂರದಲ್ಲಿರೋ ಹೊಲದ ಕಡೆ ಹೋಗ್ತಾನಾ..? ಹತ್ತಿಯ ಗಿಡಗಳನ್ನ ಹೊತ್ತೊತ್ತಿಗೆ ಜೋಪಾನಾ ಮಾಡ್ತಾನಾ..? ಮತ್ತೆ ಮೆತ್ತನೆಯ ಕನಸು ಕಾಣ್ತಾನಾ..? ಅಪ್ಪನ ಕನಸುಗಳನ್ನ ಕನಸುಗಣ್ಣುಗಳಲ್ಲಿ ನೋಡ್ತಾ ಇದ್ದ ಅಮ್ಮನಿಗೆ ಈಗ ಆ ಕನಸುಗಳುಳಿದಿವೆಯಾ..? ಉಹು.. ಆಕೆಗೆ ಕನಸಲ್ಲಾ ಬದುಕೋ ಮನಸೂ ಉಳಿದಿಲ್ಲಾ.. ಜೀವಂತ ಶವವಾಗಿದ್ದಾಳೆ.. ಆದ್ರೂ ಜೀವ ಇದೆ ನೋಡಿ..ಹಂಗಾಗಿ ನೋವು ಮುಗಿದಿಲ್ಲಾ..ಆದ್ರೆ ಆಕೆಯ ದುಃಖ ದುಮ್ಮಿಕ್ಕುವ ಕಡಲಾಗುವುದಲ್ಲಾ.. ಅವಳು ಕಲ್ಲಾಗಿದ್ದಾಳೆ.. ಒಂಟಿಕಲ್ಲು.. ಯಾಕಂದ್ರೆ ಆಕೆ ವಿದರ್ಭದ ರೈತ..!

ಮನೆಯ ಮುಂದೆ ಬಂದು ನಿಂತ ಕಾರು..ಅದರಿಂದಿಳಿದ ಬುದ್ದಿವಂತರಂತೆ ಕಾಣೋ ಜನಾ.. ಅವರ ಕಣ್ಣಲ್ಲಿರೋ ಕರುಣೆ.. ಎಲ್ಲವೂ  ಆ ಹುಡುಗನ ಕಣ್ಣಲ್ಲಿ ಆಸೆಯ ಅಲೆಗಳೇಳುವಂತೆ ಮಾಡಬಹುದು.. ಆದ್ರೆ ಆ ತಾಯಿ..!ಆಕೆಗೆ ಗೊತ್ತು.. ಅವಳು ಇಂಥಾ ಸಾವುಗಳನ್ನ ಅದೆಷ್ಟು ನೋಡಿದ್ಲೋ.. ಪಕ್ಕದ ಕೇರಿಯಲ್ಲಿ ಬೀದಿಯಲ್ಲಿ ಮನೆಯಲ್ಲಿ ಬಂದ ಆ ಕೆಟ್ಟ ಗಳುಗೆ ತನ್ನ ಮನೆಗೂ ಒಂದಲ್ಲಾ ಒಂದು ದಿನ ಬರತ್ತೆ ಅನ್ನೋದು ಆಕೆಗೆ ಯಾವತ್ತೋ ಗೊತ್ತಿತ್ತು..ಅವತ್ತೇ ಅವಳು ಅರ್ಧ ಸತ್ತುಹೋಗಿದ್ಲು ಅನ್ಸತ್ತೆ.. ಈಗ ಬದುಕಿ ಸತ್ತವಳಂತಿದ್ದಾಳೆ.. ಬದುಕಿಗೆ ಹೆದರಿ ಸಾವಿನೆಡೆಗೆ ಮುಖಾ ಮಾಡಬಾರದು ಅನ್ನೋ ನಿರ್ಧಾರ ಮಾಡಿ ಇವತ್ತಲ್ಲಾ ನಾಳೆ ಮೇಲೇಳ್ತಾಳೆ.. ಆದ್ರೆ ಎದ್ಮೇಲೆ ಮಗನ ಕೈ ಹಿಡಿದು ಕರೆದೊಯ್ಯೋದೆಲ್ಲಿಗೆ..? ಮಾಡೋದೇನು..? ಬದುಕೋದ್ಹೇಗೆ..? ಬಡತನದ ಬೆನ್ನಿಗೆ ಬಿದ್ದ ಸಾಲದ ಭಾರವನ್ನ ಇಳಿಸೋದ್ಹೇಗೆ..? ಅದಕ್ಕೇ ಯಾವುದೋ ಪರಿಹಾರ ಸಿಗಬಹುದು, ತಮ್ಮ ಕಷ್ಟ ಕಳೀಬಹುದು , ಮನೆತನಕ ಬಂದವರು ಒಂದಿಷ್ಟು ಮರ್ಸಿ ತೋರಿಸದೇ ಇರ್ತಾರಾ..? ಇನ್ನು ಬಂದವರು ಸರಕಾರದವರಾಗಿದ್ರೆ, ಸವಲತ್ತುಗಳನ್ನ ಕೊಡದೇ ಇರ್ತಾರಾ..? ಫೋಟೋ ತಗೋತಿದ್ದಾರೆ.. ಏನೋ ಒಳ್ಳೆಯದಾಗ್ತಿದೆ ಅನ್ನೋ ಭರವಸೆ ಇಣುಕಿದಂತಿತ್ತು ಅವನ ಕಣ್ಣಲ್ಲಿ.. ಅದು ಇವತ್ತಿಗೂ ಹಾಗೇ ಇದೆಯಾ..?

ವಿದರ್ಭದ ರೈತನ ಕಣ್ಣಲ್ಲಿ ಭರವಸೆ ಇದ್ಯೋ ಇಲ್ವೋ.. ಆದ್ರೆ ನಮ್ಮಣ್ಣನ ಕಣ್ಣಲ್ಲಿ ಮಾತ್ರ ಇವತ್ತಿಗೂ ಆಸೆ ಉಳಕೊಂಡಿದೆ.. ಸರಕಾರ ಏನಾದ್ರೂ ಮಾಡಬಹುದು ಅಂತಾನೆ.. ಆಗ್ಲೇ ಅವರಪ್ಪ ಇದೇ ರೀತಿ ತನ್ನದೇ ತೋಟದಲ್ಲಿ  ಹೆಣವಾಗಿ ಮಲಗಿ ತಿಂಗಳುಗಳು ಕಳೆದಿವೆ.. ನಮ್ಮೂರಲ್ಲಿ ರೈತರ ಆತ್ಮಹತ್ಯಾ ಪ್ರಕರಣಗಳು ತೀರಾ ವಿಧರ್ಭದಷ್ಟಿಲ್ವಲ್ಲಾ..! ಹಂಗಾಗಿ ಸತ್ತ ರೈತರ ಬಗ್ಗೆ ಸಂತಾಪ ಸೂಚಿಸೋದಕ್ಕೂ ಸರಕಾರಕ್ಕೆ ಪುರುಸೊತ್ತಿರಲ್ಲಾ ಅನ್ನೋದು ಅವನಿಗೆ ಗೊತ್ತಿಲ್ಲಾ.. ರೈತರ ಹೆಸರೇಳಿಕೊಂಡು ಪ್ರಮಾಣವಚನ ಸ್ವೀಕರಿಸಿದ ರೈತಪರ ಮುಖ್ಯಮಂತ್ರಿಯ ಮೇಲಿನ ನಂಬಿಕೆ ಇನ್ನೂ ಹೋಗಿಲ್ಲಾ..

ಮೊನ್ನೆಯ ಬಜೆಟ್ಟಲ್ಲಿ ರೈತರಿಗೆ ಒಂದು ಪರ್ಸಂಟ್ ಬಡ್ಡಿದರದಲ್ಲಿ ಮುರು ಲಕ್ಷದವರೆಗೆ ಸಾಲಾ ಕೊಡೋದಾಗಿ ಯಡಿಯೂರಪ್ಪನವರು ಹೇಳಿದ್ರು.. ಅದೇನೋ ಸುವರ್ಣ ಭೂಮಿ ಭೂ ಚೇತನಾ ಹೀಗೆ ಅದೇನೇನೋ ಯೋಜನೆಗಳ ಬಗ್ಗೆ ಜನಾ ಖುಶಿಯಲ್ಲಿ ಮಾತಾಡ್ತಾರೆ.. ಆದ್ರೆ ಇಲ್ಲೀವರಗೆಗೆ ಸರಕಾರದ ಆ ಯೋಜನೆಗಳು ಬಡರೈತನ ತನಕ ಬಂದಿವೆಯಾ..? ಕೊಡ್ತೀವಿ ಅಂದ್ರೆ ಸಾಕು ನಮ್ಮ ಜನಕ್ಕೆ ಖುಶಿಪಡೋದಕ್ಕೆ.. ಅದು ಚನ್ನಾಗಿ ಅರ್ಥಮಾಡ್ಕೊಂಡಿರೋದ್ರಿಂದಾನೇ ಇವತ್ತಿಗೂ ಸುಳ್ಳು ಭರವಸೆಯ ರಾಜಕಾರಣ ಜೀವಂತವಾಗಿರೋದು..

ಎಲ್ಲಾ ಕ್ಷೇತ್ರದಲ್ಲು ಡೆವಲಪ್ಮೆಂಟ್ ಅಂತ ಇರತ್ತೆ.. ಸಾವಿರಾರು ಕೋಟಿ ಸುರಿಯೋದೂ ಇದ್ದೇ ಇದೆ.. ಅದೇ ರೀತಿ ಡೆವಲಪ್ಮೆಂಟ್ ಆಗಿರೋದು ಕಾಣಿಸತ್ತೆ.. ಆದ್ರೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಿಸಿದೆಯಾ..? ರೈಲ್ವೆಯಿಂದ ಇಷ್ಟು ಲಾಸ್ ಆಯ್ತು ಇಷ್ಟು ಲಾಭ ಆಯ್ತು ಅಂತಾ ಹೇಳ್ತಾರೆ.. ಆದ್ರೆ ಭೂಮಿಯಿಂದ ಅದರ ಉತ್ಪಾದನೆಗಳಿಂದ ಏನಾಗ್ತಿದೆ.. ಭೂಮಿ ಅನ್ನೋದು ನಮಗೆ ಊಟಕ್ಕುಂಟು ಆಟಕ್ಕುಂಟು ಕಡೆಗೆ ಲೆಕ್ಕಕ್ಕೂ ಉಂಟು.. ಆದ್ರೆ ಅದನ್ನೇ ನಂಬಿಕೊಂಡು ಬದುಕ್ತಾ ಇರೋ ಸಣ್ಣ ಹಿಡುವಳಿ ದಾರರ ಜೀವನಕ್ಕೆ ಮಾತ್ರ ಇಲ್ಲಾ..

ಮೊನ್ನೆ ನಮ್ಮ ಕ್ಯಾಬ್ ಡ್ರೈವರ್ ಒಬ್ರು ಹೇಗಾದ್ರೂ ಮಾಡಿ ಸ್ವಲ್ಪ ಸಾಲಾ ಸಿಗೋ ಥರಾ ಮಾಡ್ಬೇಕಿತ್ತು ಮೇಡಮ್, ಈ ಸಾರಿ ಆದ್ರೂ ಬೆಳೆ ಹಾಕ್ಬೇಕು ಅಂದ್ರು.. ನಾನೂ ,ಯೆಡಿಯೂರಪ್ಪಾ ಒಂದು ಪರ್ಸಂಟ್ ಬಡ್ಡೀದರದಲ್ಲಿ ಬೆಳೆ ಸಾಲ ಕೊಡ್ತಾರಂತೆ ತಗೊಳ್ರಿ ಅಂದೆ.. ಅವನೂ ಅವತ್ತೇ ಬ್ಯಾಂಕಿನ ತನಕ ಹೋಗಿಬಂದ.. ಬಂದವನು ಒಂದೇ ಸಮನೆ ಈ ಸರಕಾರ ಬಡವರಿಗಾಗೋದಲ್ಲಾ, ಹೊಟ್ಟೆ ತುಂಬಿದವರಿಗೇ ಇನ್ನಷ್ಟು ತುಂಬೋದಕ್ಕೆ ಸಹಾಯ ಮಾಡ್ತಾರೆ..ಅಲ್ಲಾ ಅವರಿಗ್ಯಾಕ್ ಬೇಕಾಗತ್ತೆ ಸಾಲ.. ಅವರು ದುಡಿದಿರೋದ್ರಲ್ಲೇ ಉಳಿಸ್ಕೊಂಡು ಮತ್ತೇನೋ ಮಾಡಲ್ವಾ? ಅಂತ ಒಂದೇ ಸಮನೆ ರೇಗ್ತಾ ಇದ್ದಾ.. ಕೇಳಿದ್ರೆ ನಮಗಿರೋ ಒಂದುವರೆಕರೆ ಭೂಮಿಗೆ ಸಾಲಾ ಸಿಗಲ್ವಂತೆ ಅದಕ್ಕೆ ಐದೆಕರೆ ಜಾಗ ಇರ್ಬೇಕಂತೆ ಅಂದಾ..  ಇದು ನಮ್ಮ ಕಥೆ..!

 ನಮಗೆ ಇರೋದಕ್ಕೆ ಮನೆ ಇಲ್ಲಾ , ನಮ್ದೂ ಅಂತ ಹಿಡಿ ಮಣ್ಣೂ ಇಲ್ಲಾ ಅಂದ್ರೆ ಹೆಂಗೋ ಜೀವ ಹಿಡ್ಕೊಂಡಿದ್ಬಿಡ್ಬಹುದು.. ಯಾಕಂದ್ರೆ ಸರಕಾರ ಬಿ ಪಿ ಎಲ್ ಕಾರ್ಡ್ ಕೊಡತ್ತೆ.. ಸಂಸಾರ ನಡೆಸೋದಕ್ಕೆ ಬೇಕಾಗಿದ್ದೆಲ್ಲವನ್ನೂ ಕಡಿಮೆ ದರದಲ್ಲಿ ಕೊಡತ್ತೆ.. ಹೇಗೋ ಹೊಟ್ಟೆಪಾಡಾಗತ್ತೆ...! ಇನ್ನು ಜಾತಿಯ ಮೀಸಲಾತಿಯೊಳಗೆ ಬಂದುಬಿಟ್ರಂತೂ ಸರಕಾರಾನೇ ಅವರನ್ನ ನೋಡ್ಕೊಂಬಿಡತ್ತೆ.. ಆದ್ರೆ ಬಡ ಮಧ್ಯಮ ವರ್ಗದವರಿಗೆ ಆಗೋರು ಮಾತ್ರ ಯಾರೂ ಇಲ್ಲಾ.. ದುರಂತ ಅಂದ್ರೆ ರೈತಾಪಿ ಜೀವನ ನಡೆಸ್ತಾ ಇರೋರಲ್ಲಿ ಹೆಚ್ಚುಪಾಲು ಜನ ಇಂಥಾ ಎಲ್ಲೂ ಸಲ್ಲದ ಮಧ್ಯಮರು.. ಕಳೆದ ಹದಿಮೂರು ವರುಷಗಳಲ್ಲಿ ಇಂಥಾ ಎರಡೂವರೆ ಲಕ್ಷ ಅಸಹಾಯಕ ರೈತರು ಜೀವ ತೆತ್ತಿದ್ದಾರೆ ಅಂದ್ರೆ ಆಘಾತವಾಗತ್ತೆ..!

ರೈತರ ಕಷ್ಟಾ ಕೇಳಿ, ನಿಜವಾಗಿ ಸಹಾಯ ಮಾಡೋ ಒಬ್ಬೇ ಒಬ್ಬ ಇಲ್ಲದಿದ್ರೂ ತೀರಾ ವಿದರ್ಭದ ಮಟ್ಟದಲ್ಲಿ ನಮ್ಮ ಜನಾ ಬೇಸತ್ತಿಲ್ಲಾ.. ದಿನಕ್ಕೆ ಐದು ಆರು ರೈತರು ಸಾಯೋ ದುಸ್ಥಿತಿ ಕನ್ನಡ ಮಣ್ಣಿನ ಮಕ್ಕಳಿಗೆ ಬಂದಿಲ್ಲಾ.. ಹಂಗಂತ ರೈತರ ಆತ್ಮಹತ್ಯಾ ಪ್ರಕರಣಗಳು ನಮ್ಮಲ್ಲೂ ಕಡಿಮೆ ಇಲ್ಲಾ.. ನಾವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೀವಿ.. ಪರಿಸ್ಥಿತಿ ಹೀಗೇ ಇದ್ರೆ ಮೊದಲ ಸ್ಥಾನಕ್ಕೂ ಬರಬಹುದು..

ಈಗ್ಲಾದ್ರೂ ಬಾಯಲ್ಲಿ  ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ಳುವುದನ್ನ ಬಿಟ್ಟು ನಿಜಕ್ಕೂ ಮಣ್ಣಿನ ಮಕ್ಕಳಾಗ್ಬೇಕು .. ಜನ್ಮದಾತೆಯಾದ ಭೂಮಿಗೆ ಜೀವ ತುಂಬಿ , ಅದರ ನರ ನಾಡಿಯನ್ನ ಮೀಟುವ ಬೆಳೆ ಯಾವುದು , ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ..? ಅದನ್ನ ಹೇಗೆ ಬೆಳೀಬೇಕು..? ಯಾವ ರೀತಿ ಮಾರುಕಟ್ಟೆಮಾಡಬೇಕು. ಅನ್ನೋ ಬಗ್ಗೆ ಅರಿವು ಮೂಡಿಸೋ ಕೆಲಸಾ ಮೊದಲಾಗ್ಬೇಕು .. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗೋ ಥರಾ ಆಗ್ಬೇಕು..  ಅಂದ್ಹಾಗೆ ನಮ್ಮ ನೆಲದ್ಲಲಿ ಸಾಲದ ಹಣವನ್ನೇ ನಂಬಿ ಭೂಮಿಗೆ ಬೀಜ ಬಿತ್ತೋ ಬಡ ರೈತರ ಸಂಖ್ಯೆ ದೊಡ್ಡದಿದೆ.. ಅವರೆಲ್ಲರನ್ನೂ ಗಮನದಲ್ಲಿಟ್ಕೊಂಡು ಒಂದು ಸುಂದರ ಯೋಜನೆಯನ್ನ ಸಿದ್ಧಪಡಿಸೋ ಕೆಲಸಾ ರೈತರಿಗಾಗಿ ಮಿಡಿತಾ ಇರೋ ಮನಸುಗಳಿಂದ ಆಗ್ಬೇಕು..
 

Thursday, March 10, 2011

ಪ್ರೀತಿಸಲೇ ಬೇಕು..!

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ....
ನಾನು ಅದನ್ನ ಪ್ರೀತಿ ಅಂತೀನಿ.. ಬದುಕಿನೆಡೆಗಿನ ಪ್ರೀತಿ.. ಬದುಕಬೇಕು ಅನ್ನೋ ತುಡಿತ.. ಮನದಮೂಲೆಯಲ್ಲೆಲ್ಲೋ ಭರವಸೆ.. ಮುಗಿಯದ ಆಸೆ.. ಆ ಭಗವಂತ ಆಕೆಯ ಬದುಕಿಗೆ ಅದ್ಯಾವ ಅರ್ಥ್ಥಕೊಟ್ನೋ ಅದು ಅವನಿಗೇ ಗೊತ್ತು.. ಎಷ್ಟು ಚಿಕ್ಕವಯಸ್ಸಲ್ಲಿ ಹುಡುಗಿಯನ್ನ ಎಲ್ಲಿಂದ ಎಲ್ಲಿಗೋ ಕರ್ಕೊಂಡ್ಹೋಗ್ಬಿಟ್ಟ.. ಏನೂ ಇಲ್ಲದಂತೆ ಮಾಡಿಬಿಟ್ಟ.. ಎಲ್ಲವೂ ಮುಗಿದಮೇಲೂ ಬದುಕೊಂದನ್ನ ಬಾಕಿ ಉಳಿಸಿಬಿಟ್ಟಾ.. ಅದು ಕಾಣದ ಶಕ್ತಿಯ ಇಂಟೆನ್ಷನ್ನು.. ಹಾಗಾಗಿನೇ ಸುಪ್ರಿಮ್ ಕೋರ್ಟ್ ಕೂಡಾ ಸಾಯಿಸಿ ಅನ್ನಲಿಲ್ಲಾ.. ಆಕೆ ಬದುಕಿದ್ದಾಳೆ.. ಅವಳಿಗೆ ಸುತ್ತಲೂ ಏನಾಗ್ತಿದೆ ಅನ್ನೋದು ಗೊತ್ತಾಗತ್ತಾ..? ಗೊತ್ತಿಲ್ಲಾ.. ಅವಳ ಮನಸಲ್ಲಿ ತಲೆಯಲ್ಲಿ ಕಡೆಗೆ ಕಣ್ಣಲ್ಲಿ ಏನಿದೆ ಅನ್ನೋದೂ ಯಾರಿಗೂ ತಿಳಿದಿಲ್ಲಾ.. ಈ ಜಗತ್ತಿನಿಂದ ಅವಳು ದೂರ ದೂರ. ಆದ್ರೂ ಈ ಪಂಚಭೂತಗಳ ಋಣ ಮುಗಿದಿಲ್ಲಾ.. ಕೆ  ಇ ಎಲ್ ಆಸ್ಪತ್ರೆ ,ಅಲ್ಲಿರೋ ದಾದಿಯರು, ಮತ್ತು ವೈಧ್ಯರ ಜೊತೆಗಿನ ಸಂಬಂಧ ಕಡೆದುಹೋಗಿಲ್ಲಾ.. ಮುಂಬೈನ್ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ನಾಲ್ಕನೇ ನಂಬರ್ ವಾರ್ಡಿನ ಮೂಲೆಯಲ್ಲಿರೋ ಕಬ್ಬಿಣದ ಮಂಚದ ಮೇಲೆ ಕಣ್ಣುಗಳನ್ನಷ್ಟೇ ಪಿಳಕಿಸ್ತಾ ಮಲಗಿದ ಆ ಅಕೃತಿಯ ಹೆಸರು ಅರುಣಾ ಶಾನ್ಬಾಗ್...

ಹೊನ್ನಾವರದಂತ ಹಸಿರು ರಾಶಿಯ ನಡುವೆ ಹುಟ್ಟಿ ಬೆಳೆದ ಶಾನುಬೋಗರ ಮನೆಯ ಹೂವಿನಂತ ಹುಡುಗಿ ನರಸಿಂಹ ಸ್ವಾಮಿ ಹಾಡಿನ ಹಾಗೆ ಬಲು ಜಾಣೆ ಗಂಭೀರೆ... ಆದ್ರೆ ಹದಿನಾರಕ್ಕೇ ಹೆಂಡತಿಯಾಗಿ ಮಕ್ಕಳನ್ನ ಹೇರೋದಕ್ಕೆ ರೆಡಿಯಾಗ್ಲಿಲ್ಲಾ ಅಷ್ಟೆ.. ಆಕೆ ಕನಸುಗಳು ಮೊದಲು ಹುಟ್ಟಿದ್ವೋ ಆಕೆ ಫಸ್ಟ್ ಹಟ್ಟಿದ್ಲೋ ಅನ್ನೋ ಅನುಮಾನ ಬರೋ ಥರಾ ಇದ್ಲು.. ಬಡವರ ಮನೆಯಲ್ಲಿ ಹುಟ್ಟಿದ ಬೆಳದಿಂಗಳಿನಂತಾ ಹುಡುಗಿ ಮೊದಲು ಕಂಡಿದ್ದು ಮನೆಕಟ್ಟೋ ಕನಸನ್ನ.. ಅಲ್ಲಿ ಬಡಮಕ್ಕಳನ್ನ ಸಾಕ್ತೀನಿ.. ಕೈಲಾಗದವರಿಗೆ ಬದುಕಾಗ್ತೀನಿ ಅಂತಿದ್ದವಳು ಅದೇ ನಿಟ್ಟಿನಲ್ಲಿ ನರ್ಸ್ ಆದ್ಲು.. ಕಾಯಿಲೆಯಿಂದ ಬಳಲ್ತಾ ಇರೋರಲ್ಲಿ ದೇರನ್ನ ಕಂಡು ಸೇವೆ ಮಾಡೋದಕ್ಕೆ ಸಿದ್ಧಳಿದ್ದವಳನ್ನ ಮುಂಬೈನ್ ಕೆ ಇ ಎಲ್ ಆಸ್ಪತ್ರೆ ಕೈ ಬೀಸಿ ಕರೀತು.. ಅಷ್ಟೊತ್ತಿಗಾಗ್ಲೇ ಆಕೆಯ ಹೃದಯದಲ್ಲಿ ಪ್ರೇಮದ ಅರುಣರಾಗವನ್ನ ಡಾಕ್ಟರ್ ಸಂದೀಪ್ ಸರ್ ದೇಸಾಯಿಯವರು ಹಾಡಿದ್ರು.. ಇಬ್ಬರೂ ಸೇರಿ ಅದೆಷ್ಟು ಕನಸುಗಳನ್ನ ಕಂಡಿದ್ರೋ .. ಎಷ್ಟು ವಿಚಾರಗಳನ್ನ ಶೇರ್ ಮಾಡ್ಕೊಂಡಿದ್ರೋ,,ಎಂತೆಂತಾ ಬಯಕೆಗಳನ್ನ ಹಂಚಿಕೊಂಡಿದ್ರೋ..ಎಲ್ಲವನ್ನೂ ಸಾಕಾರಗೊಳಿಸೋ ಕಾಲ ಹತ್ತಿರ ಬಂದಿತ್ತು.. ಇಬ್ಬರೂ ವಿವಾಹಬಂದನದಲ್ಲಿ ಕಾಲಿಡೋದಕ್ಕೆ ಮುಹೂರ್ತ ನೋಡ್ತಾ ಇದ್ದಾಗ್ಲೇ ಅರುಣಾ ಬದುಕಿನಲ್ಲಿ ಭರಸಿಡಿಲು ಬಡಿದಿದ್ದು..

ಅದು ಸಾವಿರದ ಒಂಬೈನೂರಾ ಎಪ್ಪತ್ಮೂರರ ನವೆಂಬರ್ ತಿಂಗಳಿನ ಕಡೆಯ ವಾರ.. ಮುಂಬೈನ್ ಶಾಲೆಯೊಂದರ ಮಕ್ಕಳು ಫುಡ್ ಪಾಯಿಸನ್ ಆಗಿ ಕೆ ಎ ಎಲ್ ಆಸ್ಪತ್ರೆ ಸೇರಿದ್ರು..ಅವರಿಗೆ ಚಿಕಿತ್ಸೆ ನೀಡಿ  ಕಣ್ರೆಪ್ಪೆಯಂತೆ ಜೋಪಾನಾ ಮಾಡಿಕೊಂಡಿದ್ದ ಅರುಣಾ , ತನ್ನ ಡ್ಯೂಟಿ ಮುಗಿಸಿ ಸ್ವಲ್ಪ ಫ್ರೆಶ್ ಆಗಿ ಮನೆಗೆ ವಾಪಸ್ಸು ಹೊಗೋಣಾ ಅಂತ ಡ್ರೆಸ್ಸಿಂಗ್ ರೂಮ್ ಕಡೆ ಹೋಗಿದ್ದಾಳೆ.. ಅಲ್ಲೇ ಕಾದಿದ್ದ ಆಕೆಯ ಕರಾಳ ಬದುಕಿಗೆ ಮುನ್ನುಡಿ ಬರೆಯೋ ಕಿರಾತಕ.. ಆತನ ಹೆಸರು ಸೋಹನ್ಲಾಲ್ ಭರ್ತಾ ವಾಲ್ಮಿಕಿ.. ಆಸ್ಪತ್ರೆಯ ಕಸಾಗುಡುಸುಕೊಂಡಿದ್ದವನು ಆದ್ಯಾವಾಗ ಗುಂಗರು ಗೂದಲಿಲಾಚೆಯ ಬಟ್ಟಲು ಮುಖವನ್ನ ಆಸೆಗಣ್ಣಿನಿಂದ ನೋಡಿದ್ನೋ ಗೊತ್ತಿಲ್ಲಾ, ಅವತ್ತು ಅನುಭವಿಸಲೇಬೇಕು ಅಂತ ನಿಂತುಬಿಟ್ಟ.. ಕೋಣೆಯೊಳಗೆ ಕಾಲಿಟ್ಟ ಹುಡುಗಿಯ ಕತ್ತಿಗೆ ತಣ್ಣೆಯದ್ದೇನೋ ತಾಗಿದಂತಾಗಿದ್ದೇ ಕೊನೆ,  ಕಡೆಗೆ ಆ ಸರಪಳಿಯ ಬಿಗಿತಕ್ಕೆ ಧನಿಯೇ ಹೊರಡ್ಲಿಲ್ಲಾ.. ಕಣ್ಣುಗಳು ಮಂಜಾದ್ವು.. ಮುಂದೆ ಅದೇನ್ ನಡೀತೋ ಹೇಳೋ ಸ್ಥಿತಿಯಲ್ಲಿ ಅವಳು ಉಳೀಲಿಲ್ಲಾ... ಮರುದಿನ ಬೆಳಗಿನ ಹೊತ್ತಿಗೆ ಜೀವಂತ ಶವದಂತೆ ಬಿದ್ದವಳನ್ನ ನೋಡಿದವರು ಹು ರೇಪ್ಡ್ ಹರ್ ಅಂತ ಕೂಗಿದ್ರು...!

ಮೇಲ್ನೋಟಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆದ ಎಲ್ಲಾ ಕುರುಹುಗಳೂ ಇದ್ವು..ಆದ್ರೆ ಅದು ಸಾಬೀತಾಗ್ಲಿಲ್ಲಾ.. ಆ ಪ್ರಕರಣದಲ್ಲಿ ಅರೆಸ್ಟಾದ ಸೋಹನ್ಲಾಲ್ ಮೇಲೆ ಕಳ್ಳತನ ಮತ್ತು ಕೊಲೆಯತ್ನದ ಆರೋಪ ಹಾಕಿ ಏಳು ವರ್ಷಗಳ ಶಿಕ್ಷೆ ವಿಧಿಸಲಾಯ್ತು.. ಆದ್ರೆ ಅರುಣಾ ? ಆಕೆ ಏನ್ ತಪ್ಪುಮಾಡಿದ್ಲು..? ಅವಳು ಇವತ್ತಿಗೂ ಕಾನೂನು ಯಾವ ಖೈದಿಗಳಿಗೂ ಕೊಡದಷ್ಟು ಕಠಿಣ ಶಿಕ್ಷೆಯನ್ನ ಅನುಭವಿಸ್ತಾ ಇದ್ದಾಳೆ.. ಇಲ್ಲಿಗೆ ಮೂವತ್ತೇಳು ವರುಷಗಳು ಕಳೆದಿವೆ.. ಅರುಣಾ ತನ್ನ ಕತ್ತಲು ಕಂಗಳಲ್ಲಿ ಸೂರನ್ನೇ ದಿಟ್ಟಿಸ್ತಾ ಮಲಗಿದ್ದಾಳೆ.. ಇವತ್ತಿಗೂ ಆಕೆಯ ಕಣ್ಣುಗಳಲ್ಲಿ ಕಾಣದ ನಗುವಿದೆ.. ಅರಿಯಲಾಗದ ಬಾವವಿದೆ.. ಆಕೆ ಮತ್ತೆ ಕನಸು ಕಾಣ್ತಾ ಇದ್ದಾಳಾ..? ಹೇಳಿಕೊಳ್ಳೋದಕ್ಕೆ ಬಾಯಿಲ್ಲಾ.. ಕೈಯ್ಯೂ ಇಲ್ಲಾ.. ಹೇಳದೆನೇ ಎಲ್ಲವನ್ನೂ ಅರ್ಥೈಸಿಕೊಳ್ಳುವಂತ ಮನಸೂ ಜೊತೆಗಿಲ್ಲಾ.. ಆಕೆಯನ್ನ ಪ್ರೀತಿಸಿದ್ದ ಸಂದೀಪ್ ಸರ್ದೇಸಾಯಿ ಇವತ್ತು ಅವಳೊಂದಿಗಿಲ್ಲಾ.. ಆದ್ರೆ ಆತ ಕ್ರೂರಿಯಲ್ಲಾ...
ಅವತ್ತು ಜೀವಂತ ಶವವಾಗಿ ಮಲಗಿದವಳನ್ನ ಆಸ್ಪತ್ರೆಯ ಸಿಬ್ಬಂದಿಗಳ ಜೊತೆಗೆ ನಿಂತು ಮರುಜನ್ಮ ಕೊಡೋದಕ್ಕೆ ಪ್ರಯತ್ನಿಸಿ ಹಗಲೂ ರಾತ್ರಿ ಒಂದು ಮಾಡಿದವನು ಪ್ರೇಮಿ ಸಂದೀಪ್.. ಆತ ಮಾಡದ ಪ್ರಯತ್ನಗಳಿಲ್ಲಾ.. ವೈಧ್ಯಕೀಯ ಜಗತ್ತು ಕೈ ಎತ್ತಿದಮೇಲೆ ಮಾತಲ್ಲೇ ಮನಸು ಮೀಟಿ ಹೊಸ ಬದುಕು ಕಟ್ಟೋ ಕಟ್ಟಕಡೆಯ ಪ್ರಯತ್ನ ಮಾಡಿದ್ದಾ.. ಅದೆಷ್ಟೋ ತಿಂಗಳುಗಳ ಕಾಲ  ಮಗುವಿನಂತೆ ಮಲಗಿದ ಅರುಣಾಳಪಾಲಿಗೆ ಎಲ್ಲವೂ ಆಗಿದ್ದಾ.. ತನ್ನ ಸಾಮಿಪ್ಯವೇ ಅವಳನ್ನ ಮೊದಲಿನಂತೆ ಮಾಡತ್ತೆ ಅನ್ನೋ ಭರವಸೆಯಲ್ಲಿ  ಆಕೆಯ ತಲೆಯನ್ನ ತನ್ನ ತೊಡೆಯ ಮೇಲಿಟ್ಕೊಂಡು ಮನಸಿನ ಮಾತಾಡಿದ್ದ.. ಹಳೆಯ ನೆನಪುಗಳಿಗೆ ಬಣ್ಣಬಳಿದಿದ್ದಾ.. ಹೊಸ ಕನಸುಗಳನ್ನ ಕಟ್ಟಿಕೊಟ್ಟಿದ್ದ.. ಉಹು, ಅರುಣಾಗಾಗಿ ಏನೇ ಮಾಡಿದ್ರೂ ನೀರಿನಲ್ಲಿ ಮಾಡದ ಹೋಮದ ಥರಾ.. ಅದು ಪೂತರ್ಿ ಮನದಟ್ಟಾದ್ಮೇಲೆ ಸಂದೀಪ ತನ್ನ ಮೊದಲ ಪ್ರೇಮವನ್ನ ದೇವರ ಕೈಗಿಟ್ಟು ದಾರಿ ತೋರಿಸು ಅಂತ ಅಲ್ಲಿಂದ ಹೊರನಡೆದ.. ಹೋಗೋ ಮೊದ್ಲು ಅವನಿಟ್ಟ ಹೂ ಮುತ್ತಿಗೆ ನತದೃಷ್ಟೆ ಅರುಣಾ ಹೃದಯ ಮೀಟಿತ್ತು..ಆಸ್ಪತ್ರೆಯ ಸಿಬ್ಬಂದಿಗಳು ಆಕೆಯ ಕಂಗಳಲ್ಲಿ ಕಿರುನಗೆಮೂಡಿದ್ದನ್ನ ನೋಡಿದ್ರು.. ಅವತ್ತಿನಿಂದ ಅರುಣಾ ಖುಶಿಯಾದಾಗ ನಗ್ತಾಳೆ..!

ಸಂಪೂರ್ಣ ಸತ್ತುಹೋದಂತಿದ್ದವಳ ದೇಹದ ಮೂಲೆಯಲ್ಲೆಲ್ಲೋ ಆ ಪ್ರೇಮಿ ಮಾಡಿದ ಕಟ್ಟ ಕಡೆಯ ಪ್ರಯತ್ನಕ್ಕೆ ಮಿ0ಚಿನ ಸಂಚಾರವಾಯ್ತು.. ಆದ್ರೆ ಮಳೆಬರ್ಲಿಲ್ಲಾ.. ಬೆಳೆಬೆಳೆಯೋ ಹಾಗಿಲ್ಲಾ.. ಅದು ಬರೀ ಮರೆಯಾಗೋ ಮಿಂಚು.. ಆ ಸರಿದುಹೋಗೋ ಬೆಳಕಲ್ಲಿ ಆಕೆಗೆ ಆ ದೂರ್ಥ ಹುಡುಗ ಕಾಣಿಸ್ತಾನೇನೋ..ಅವಳ ಬದುಕಿನ ಕೆಟ್ಟ ಕ್ಷಣ ನೆನಪಾಗತ್ತೇನೋ .. ಒಟ್ಟಲ್ಲಿ ಅರುಣಾಗೆ ಹುಡುಗರ ನೆರಳು ಸೋಕಿದ್ರೂ ಆಗಲ್ಲಾ.. ಆಕೆಯ ವರ್ತನೆ ಒಮ್ಮೆಲೇ ಭಯಾನಕವಾಗತ್ತೆ.. ಹಾಗಾಗಿ ಆಕೆಯನ್ನ ನೋಡ್ಕೊಳ್ಳೋದಕ್ಕೆ ದಾದಿಯರನ್ನೇ ನೇಮಿಸಲಾಗಿದೆ..

ನಡುವೆ ಅರುಣಾ ಊಟ ತಿಂಡಿಯನ್ನ ಗುರುತಿಸೋಷ್ಟಾಗಿದ್ಲು..ಆಕೆ ಸಿ ಫುಡ್ ಸ್ಮೆಲ್ಲಿಗೆ ಹೂನಗೆ ಬೀರಿದ್ದನ್ನ ಪರೀಕ್ಷಿಸಿದ ವೈದ್ಯರು ಗ್ರಹಿಸಿದ್ರು..ಅವತ್ತಿನಿಂದ ಆಕೆಗೆ ವಾರಕ್ಕೆರಡು ದಿನ ಅವಳಿಷ್ಟದ ಫಿಶ್ ಫ್ರೈ ಕೊಡಲಾಗಿತ್ತು..ಆದ್ರೆ ಅದು ಕೂಡಾ ಈಗಿಲ್ಲಾ.. ಈಗ ಅರುಣಾ ದ್ರವಾಹಾರದ ಹೊರತಾಗಿ ಮತ್ತೇನನ್ನೂ ಸೇವಿಸೋ ಸ್ಥಿತಿಯಲ್ಲಿಲ್ಲಾ.. ಅವಳು ಈಗ ಅಕ್ಷರಶಃ ಶವ.. ಆದ್ರೆ ಜೀವ ಇದೆ.. ಆಕೆಯ ಪಾಲಿಗೆ ಸಂಬಂಧಿಗಳಿಲ್ಲಾ..ಸಂಬಂಧಗಳಿಲ್ಲಾ.. ಆದ್ರೆ ಸಾವು ಅನ್ನೋದು ದೂರ ದೂರದ ವರೆಗೂ ಕಾಣ್ತಾ ಇಲ್ಲಾ.. ಆಕೆಯ ಈ ದುಸ್ಥಿಯನ್ನ ಹತ್ತಿರದಿಂದ ನೋಡಿ ಮರುಗಿದ ಪತ್ರಕತರ್ೆ ಪಿಂಕಿ ವಿರಾನಿ ಅರುಣಾಳ ಕರುನಾ ಜನಕ ಕಥೆಯನ್ನ ಪುಸ್ತಕ ಮಾಡಿ ಜನರ ಮುಂದಿಟ್ಲು.. ತಾನು ಆಕೆಗೆ ಮಾಡಬಹುದಾದ ಸಹಾಯ ಅಂದ್ರೆ ದಯಾಮರಣ ಕೊಡಿಸೋದು ಅಂತ ನಿರ್ಧರಿಸಿ ಕೋರ್ಟಿನ ಮೊರೆಹೋದ್ಲು..
ನಮ್ಮ ನ್ಯಾಯಾಲಯ ದಯಾಮರಣಕ್ಕೆ ಒಪ್ಪಿಗೆ ನೀಡ್ಲಿಲ್ಲಾ. ನನಗೆ ಗೊತ್ತಿರೋ ಹಾಗೆ ಬೆಲ್ಜಿಯಮ್ ನೆದರ್ಲಾಂಡ್ ಮತ್ತು ಯು ಎಸ್ನಲ್ಲೂ ದಯಾಮರಣವನ್ನ ಕಾನೂನು  ಒಪ್ಪತ್ತೆ..! ಆದ್ರೆ ನಮ್ಮ ದೇಶದಲ್ಲಿ ಇನ್ನೂ ತನಕ ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲಾ.. ಒಂದ್ವೇಳೆ ಒಪ್ಪಿಗೆ ಸಿಕ್ರೆ ಅದು ಮಿಸ್ ಯೂಸ್ ಆಗಬಹುದು ಅನ್ನೋ ಕಾರಣ ಕೊಡಲಾಗತ್ತೆ.. ಅದು ನಿಜಾನೆ.. ಆದ್ರೆ ಹುಟ್ಟು ಸಾವು ಮತ್ತು ಬದುಕು ಯಾವುದೂ ನಮ್ಮ ಕೈಲಿಲ್ಲಾ, ಯಾವುದೋ ಕಾಣದ ಶಕ್ತಿಯ ಸಾರಥ್ಯದಲ್ಲಿ ಎಲ್ಲವೂ ನಿರ್ಧಾರವಾಗತ್ತೆ, ಪ್ರತಿಯೊಬ್ಬರ ಬದುಕಿಗೂ ಒಂದು ಗುರಿ ಇದೆ ದಾರಿ ಇದೆ ಅದನ್ನ ಸವೆಸಿ ದಡಸೇರೋದ್ರಲ್ಲಿ ಉನ್ನತಿ ಇದೆ  ಅನ್ನೋದನ್ನ ನಂಬೋದೇ ಆದ್ರೆ ದಯಾಮರಣ ಅನ್ನೋದು ಬೇಡದ ಕಾನ್ಸೆಪ್ಟು...
ನನಗೆ ಅರುಣಾ ಶನ್ಬಾಗ್ ಮೂವತ್ತೇಳು ವರುಷಗಳಿಂದ ಮಲಗಿದಲ್ಲಿ ಮಲಗಿದಹಾಗೆ ಇದ್ದಾಳೆ ಅನ್ನೋದನ್ನ ಮೊಟ್ಟಮೊದಲ ಬಾರಿ ಕೇಳಿದಾಗ ನೆನಪಾಗಿದ್ದು ನನ್ನ ಅಜ್ಜಿ.. ಆಕೆ ಕೂಡಾ ಆಲ್ಮೋಸ್ಟ್ ಯಾರಿಗೂ ಬೇಡವಾದ ಬದುಕನ್ನ ಬದುಕೋದಕ್ಕೆ ಶುರು ಮಾಡಿ ಇಪ್ಪತ್ತೈದು ವರುಷಗಳಿಗೂ ಜಾಸ್ತಿ ಆಗಿದೆ.. ನಾವೆಲ್ಲಾ ಅವಳು ಸರಿಯಾಗಿದ್ದ ದಿನಗಳನ್ನ ಕಂಡೇ ಇಲ್ಲಾ.. ಆಕೆ ಯವ್ವನದ ದಿನಗಳಲ್ಲಿ ದುಡಿದ ಹಾಗೆ ಯಾವ ಹೆಂಗಸರೂ ದಿಡಯೋದಕ್ಕಾಗಲ್ಲಾ ಅಂತ ಅಮ್ಮಾ ಆಗಾಗ ಹೇಳ್ತಾ ಇರ್ತಾರೆ.. ಆ ದುಡಿತಾನೇ ಅಜ್ಜಿಯ ಪಾಲಿಗೆ ಮಾರಕವಾಗಿದ್ದು.. ಮನೆ ಕಟ್ಟೋವಾಗ ಮೈ ಮೇಲೆ ದೊಡ್ಡದೊಂದು ಮರದ ದಿಮ್ಮಿ ಬಿದ್ದಿದ್ದೇ ನೆಪ.. ಆಕೆ ನಡೆಯೋದಕ್ಕೆ ಹರಸಾಹಸಪಡ್ತಾಳೆ.. ಮಲಗಿದ್ದಲ್ಲೇ ನರಳ್ತಾಳೆ.. ನೋವು ಸಹಿಸದಾದಾಗ ಸಾವಾದ್ರೂ ಬರಬಾರದಾ ಅಂತ ಕನವರಿಸ್ತಾಳೆ.. ಹಾಗಂತ ಆಕೆಗೆ ಸಾವಿನ ಭಯಾ ಹೋಗಿಲ್ಲಾ.. ಬದುಕೋ ಆಸೆ ಬತ್ತಿಲ್ಲಾ.. ಮಲಗಿದ್ದಲ್ಲೇ ಮೊಮ್ಮಕ್ಕಳ ಮದುವೆಯ ಕನಸು ಕಾಣೋ ನಮ್ಮಜ್ಜಿಗೆ ಅರುಣಾಳನ್ನ ಹೋಲಿಸೋದಕ್ಕೆ ಆಗಲ್ಲಾ.. ಆಕೆಗೆ ಆಸ್ಪತ್ರೆಯ ಹೊರತಾಗಿ ಏನೂ ಇಲ್ಲಾ.. ಯಾರೂ ಇಲ್ಲಾ.. ಆದ್ರೂ ಅವಳಿಗೆ ಸಾಯೋ ಕಾಲ ಬಂದಿಲ್ಲಾ.. ಎಲ್ಲದಕ್ಕೂ ಟೈಮ್ ಬರಬೇಕು.. ಅಲ್ಲೀ ತನಕ ಬೇಡವಾಗಿದ್ದನ್ನೂ ಪ್ರೀತಿಸಲೇಬೇಕು ಅಂತ ಅನ್ನಿಸಿದ್ದು ಬ್ರಾನ್ ವಯ್ಸ್ ರವರ ಮೆನಿ ಲೈವ್ಸ್ ಮೆನಿ ಮಾಸ್ಟರ್ಸ್ ಪುಸ್ತಕವನ್ನ  ಓದಿದಮೇಲೆ...

Friday, March 4, 2011

ಸಮ್ ಬಂಧ..!



ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಹೀಗೆ ಬಂದಿಸಿಹುದೋ... ಎಷ್ಟು ಸುಂದರವಾದ ಸಾಲುಗಳು ಅಲ್ವಾ..? ಅದಕ್ಕೆ ಅಷ್ಟೇ ಚಂದದ ರಾಗ.. ಕಂಠ... ಕೆಲವು ಹಾಡುಗಳನ್ನ ಕೇಳಿದ್ರೆ ಕೇಳ್ತಾನೇ ಇರ್ಬೇಕು ಅನ್ಸತ್ತೆ.. ಮನಸು ಎಲ್ಲೆಲ್ಲಿಂದ ಎಲ್ಲಿಗೋ ತೇಲ್ ಹೋಗ್ಬಿಡತ್ತೆ.. ನಾನೂ ಅಷ್ಟೇ ಆ ಹಾಡ್ ಕೇಳ್ತಾ ಕೇಳ್ತಾ ಕಳದ್ಹೋದೆ.. ನನ್ನ ತಲೆಯಲ್ಲಿ ಅವಳಿದ್ಲು... ಕಡಲಿನಂತವಳು...ಒಡಲಿನಂತವಳು.. ಅವಳಂತವಳು ಅವಳು ಮಾತ್ರ.. ಆಕೆಯಷ್ಟು ಒಳ್ಳೆಯವಳು ಮತ್ತೊಬ್ಬರಿರೋ ಚಾನ್ಸೇ ಇಲ್ವೇನೋ ಅಂತ ನನಗನ್ಸತ್ತೆ.. ಯಾಕಂದ್ರೆ ನಾನು ಅವಳಂತ ಮತ್ತೊಂದು ಮನಸನ್ನ ನೋಡಿಲ್ಲಾ.. ಅದೆಷ್ಟೇ ಬಯಸಿದ್ರೂ ಅವಳಂತಾಗೋದಕ್ಕೆ ನನ್ನಿಂದಾಗಲ್ಲಾ..   ಶಿ ಈಸ್ ಸಿಂಪ್ಲಿ ಸುಪರ್ಬ್ .. ಅವಳ ಜೊತೆ ನನ್ನದು ಜನ್ಮ ಜನ್ಮದ ಅನುಬಂಧ.. ಮುಗಿಯದ ಸಂಬಂಧ.. ಯಾವತ್ತಿಗೂ ಬೇಸರವಾಗದ ಬಂಧ...
ಪ್ರತಿಯೊಬ್ಬರ ಬದುಕಲ್ಲೂ ಯಾರೋ ಒಬ್ಬರು ಹೀಗೆ ಜನ್ಮಜನ್ಮದ ಮೈತ್ರಿಯಂತವರಿದ್ರೆ ಬದುಕು ನಿಜಕ್ಕೂ ಸುಂದರವಾಗಿರತ್ತೆ. ಆದ್ರೆ ಎಲ್ರೂ ನನ್ನಷ್ಟು ಅದೃಷ್ಟವಂತರಿರಲ್ಲಾ..! ಪ್ರತಿಯೊಬ್ಬರೂ ಬೆಳ್ಳಿಯ ಸ್ಪೂನನ್ನ ಬಾಯಲ್ಲಿಟ್ಕೊಂಡು ಹುಟ್ಟೋದಕ್ಕಾಗಲ್ಲಾ.. ಆದ್ರೆ ಬದುಕಿನ ಯಾನದಲ್ಲಿ ಬಯಸಿದ್ದು ಬಯಸಿದಾಗ ಸಿಗೋ ಸೌಭಾಗ್ಯ ಕೆಲವರಿಗಿರತ್ತೆ.. ಇನ್ಕೆಲವರಿಗೆ ಸಿಕ್ಕಿದ್ದೆಲ್ಲಾ ಭಾಗ್ಯ ಅನ್ನೋ ಥರದ ಮಧುರ ಮನಸಿರತ್ತೆ.. ಅಷ್ಟೊಂದು ಹ್ಯಾಪಿ ಹೃದಯ ನಂದಲ್ಲಪ್ಪಾ.... ಎಲ್ಲವನ್ನೂ ಇಷ್ಟಾಪಡಲ್ಲಾ..ಎಲ್ಲರನ್ನೂ ಹತ್ತಿರಬಿಟ್ಕೊಳ್ಳೋದೂ ಇಲ್ಲಾ.. ಒಮ್ಮೆ  ಸನಿಹ ಬಂದವರು ಕಡೆತನಕ ಜೊತೆಗೆ ನಿಲ್ಲಬೇಕು ಅಂತ ಬಯಸೋದೂ ಇಲ್ಲಾ.. ಜೊತೆಗಿದ್ದಿದ್ದಕ್ಕೆ ಅಂತಾ ಪರಿ ಥ್ಯಾಂಕ್ಪುಲ್ ಆಗಿರೋದಕ್ಕೂ ನನಗೆ ಬರಲ್ಲಾ..ಅಷ್ಟಕ್ಕೂ ತೀರಾ ಜ್ನಮ ಜನ್ಮದ ಮೈತ್ರಿ ಅನ್ನೋ ಮಟ್ಟದ ಸಂಬಂಧ ಎಲ್ಲರ ಜೊತೆಗೂ ಬೆಸೆಯೋವಂಥದ್ದಲ್ಲಾ ಅಲ್ವಾ..?
 ಈ ಮೈತ್ರಿ ಅನ್ನೋದು ಎಷ್ಟು ವಿಚಿತ್ರ ಅಲ್ವಾ..? ಚಿಕ್ಕವರಿರೋವಾಗ ಜೊತೆಗೆ ಆಡೋ ಜನರಜೊತೆಗೆ ಒಂದು ರೀತಿಯ ಮೈತ್ರಿ.. ಸ್ವಲ್ಪ ಹೈಸ್ಕೂಲ್ ಮಟ್ಟಕ್ಕೆ ಬಂದಾಗ ಶುರುವಾಗೋ ಸ್ನೇಹಸೇತುವಿನಲ್ಲೊಂದು ಮೈತ್ರಿ.. ಗುರು ಶಿಶ್ಯರಲ್ಲೂ ಅರಿಯದ ಮೈತ್ರಿ.. ಟೀನೇಜಿನಲ್ಲಿ ತರಾವರಿ ಮೈತ್ರಿ.. ಅದರಲ್ಲಿಷ್ಟು ಪವಿತ್ರ ಮೈತ್ರಿ ಮೈ ಮರೆತರೆ ಅಪವಿತ್ರ ಮೈತ್ರಿ.. ಎಲ್ಲದಕ್ಕೂ ಮಿಗಿಲಾಗಿ ಬದುಕಿನುದ್ದಕ್ಕೂ ಜೊತೆಯಾಗೋದು ಜನುಮ ಜನುಮದ ಮೈತ್ರಿ... ಅಂಥದ್ದೊಂದು ಬಾವ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸೇರಿ ಬದುಕಿನುದ್ದಕ್ಕೂ ಜೊತೆಯಾಗಿ ನಡೆಯೋ ಸಂಕಲ್ಪ ಮಾಡಿದ  ಗಂಡಾ ಹೆಂಡಿರ ನಡುವೆ ಸದಾ ಜೀವಂತವಾಗಿದ್ರೆ ಅವರಷ್ಟು ಸುಖಿ ಇನ್ನೊಬ್ಬರಿಲ್ಲಾ..
ಮದುವೆ ಅನ್ನೋದು ಸ್ವರ್ಗದಲ್ಲೇ ನಿರ್ಧಾರವಾಗಿರತ್ತೆ..ಅದು ಜನ್ಮ ಜನ್ಮದ ಸಂಬಂಧ ಅಂತ ಹಿರಿಯರು ಹೇಳ್ತಾರೆ.. ಅದರಲ್ಲಿ ನಿಜಾ ಇದ್ಯಾ? ಸೈನ್ಸು ಒಪ್ಕೊಳ್ಳೋದ್ ಹಾಗಿರ್ಲಿ ಜ್ಯೋತಿಶ್ಯಾಸ್ತ್ರಾ ಆದ್ರೂ ಅದಕ್ಕೆ ಒತ್ತುಕೊಡತ್ತಾ..? ಆ ಯೋಚನೆ ನಂಗೆ ಸಾಕಷ್ಟು ಬಾರಿ ಬಂದಿದೆ.. ಕೆಲವರತ್ರಾ ಕೇಳಿದೀನಿ ಕೂಡಾ.. ಆದ್ರೆ ನಾನು ಕೇಳಲ್ಪಟ್ಟ ಪ್ರಕಾರ ಜನ್ಮಗಳಿವೆ ಆದ್ರೆ ಪ್ರತಿಯೊಂದು ಜನ್ಮಕ್ಕೂ ಜೊತೆಗಾರ ಅಥವಾ ಜೊತೆಗಾತಿ ಒಬ್ರೇ ಇರ್ತಾರೆ ಅನ್ನೋ ನಂಬಿಕೆ ಮಾತ್ರ ಇಲ್ಲಾ.. ಒಂದ್ವೇಳೆ ಯಾವುದೋ ಜೋಡಿ ಅಷ್ಟು ತೀವ್ರವಾಗಿ ಪ್ರೀತಿಸಿ, ಜನ್ಮಜನ್ಮಕ್ಕೂ ಜೊತೆಯಾಗ್ತೀವಿ ಅಂತ ಬಲವಾಗಿ ನಂಬಿದ್ರೆ ಜೊತೆಗೇ ಇರ್ತಾರೇನೋ.. ಅಂಥವರು ಇದ್ದಾರಾ ? ಅನ್ನೋದನ್ನ ಪುನರ್ಜನ್ಮ ಕಾರ್ಯಕ್ರಮ ಮಾಡ್ತಾರಲ್ಲಾ ಅವರನ್ನ ಕೇಳ್ಬೇಕು.. !
ಮೇಲ್ನೋಟಕ್ಕಂತೂ ಈ ಮದುವೆ , ಗಂಡಾ ಹೆಂಡತಿಯ ಸಂಬಂಧ ಇದೆಲ್ಲಾ ಅರ್ಥ ಕಳ್ಕೊಂಬಿಟ್ಟಿದೆ.. ಎರಡು ದೇಹ ಒಂದು ಜೀವ ಅನ್ನೋ ಥರಾ ಬದುಕೋ ದಂಪತಿ ಇವತ್ತಿಗೆ ಸಿಗೋದೇ ಇಲ್ಲಾ.. ಆದ್ರೂ ಜೊತೆಗಿರ್ತಾರೆ.. ವಿಚ್ಛೇಧನ ಪ್ರಕರಣಗಳು ಇರೋದ್ರಲ್ಲಿ ನಮ್ಮ ನಡುವೆ ಸ್ವಲ್ಪ ಕಡಿಮೆನೇ ಇದೆ.. ಹಂಗಂತ ಜೊತೆಗೆ ನಡೆಯೋರಲ್ಲಿ ಹಿತ ಇದೆಯಾ..? ಆ ಸಂಬ0ಧಗಳಲ್ಲಿ ಸವಿ ಇದೆಯಾ..? ಉಹು.. ಇವತ್ತು ಹುಡುಕ್ಕೊಂಡ್ಹೋದ್ರೂ ಆದರ್ಷ ಅನ್ನಿಸೋ ಥರದ ದಂಪತಿ ಸಿಗೋದು ತುಂಬಾನೇ ಕಷ್ಟ.. ಎಲ್ಲೋ ನೂರಕ್ಕೊಂದು ಜೋಡಿ ಮೇಡ್ ಪಾರ್ ಈಚ್ ಅದರ್ ಅನ್ನಿಸಿದ್ರೆ ಹೆಚ್ಚು...

ಅಂದ್ಹಾಗೆ ಬೇರೆಯವರಿಗೆ ಅವರಂತಿರ್ಬೇಕು ಅನ್ಸೋದ್ ಬೇರೆ.. ಅವರಿಗೆ ಅವರ ಬದುಕಿನ ಬಗ್ಗೆ ಖುಶಿ ಇರೋದ್ಬೇರೆ.. ಒಂದಿಷ್ಟು ಜನ ಮಾತಲ್ಲೇ ಮರಳುಮಾಡ್ತಾರೆ, ಆದ್ರೆ ಮನಸಲ್ಲೇ ಮಂಡಿಗೆ ತಿಂತಾರೆ..ತೋರಿಕೆಯ ಬದುಕು ಶಾಶ್ವತ ಅಲ್ಲಾ.. ಒಂದಲ್ಲಾ ಒಂದು ದಿನ ಮುಖವಾಡ ಕಳಚಿ ಬೀಳತ್ತೆ.. ಬಿದ್ದಾಗ ಏಳೋದಕ್ಕಾಗಲ್ಲಾ.. ಎದ್ದರೂ ಬದುಕೋದಕ್ಕಾಗಲ್ಲಾ.. ಆದಷ್ಟು ನಮ್ಮ ಬದುಕು ನಮಗಾದ್ರೂ ಪಾರದರ್ಷಕವಾಗಿರ್ಬೇಕು.. ಪಾರಮಾಷರ್ಿಕವಾಗಿರ್ಬೇಕು.. ಮೈತ್ರಿ ಮುಂದಿನ ಮಾತು.. ಇನ್ನು ಜನ್ಮದ್ದಂತೂ ದುರ ದೂರ.. ಜರಿಯ ನೊರೆಗೆ ಹರಿವ ತೊರೆಗೆ ಬಾವ ಜೀವ ಬಂಧ.. ಬದುಕ ಪುಟದಿ ಮನದ ತಟದಿ ಬಯಕೆ ಬೆಳಕ ಗಂಧ.. ನನಗೆ ನೀನೇ ಚಂದ.. ನಿನ್ನೊಲುಮೆಯೇ ಅಂದ.. ಅದು ಬಂಧವಲ್ಲ ಸಂ ಬಂಧ.. ಅನುಬಂಧ..

Wednesday, March 2, 2011

ಶಿವ ಶಿವಾ ಶಿವರಾತ್ರಿ...!





ಮಾರಾಯ್ತಿ ನಾಳೆ ಶಿವರಾತ್ರಿ.. ಬೆಳಗಾಗೋದೇ ಬೇಡಾ ಅನ್ನಿಸ್ತಾ ಇದೆ.. ನಮ್ಮತ್ತೆ ಬೆಳಬೆಳಿಗ್ಗೆ ಲಿಂಗಾ ಹಿಡ್ಕೊಂಡು ಅದೇನೇನೋ ಪೂಜೆ ಮಾಡ್ಕೊಂಬಂದ್ಬಿಡ್ತಾರೆ.. ಇವತ್ತೊಂದಿನ ಆದ್ರೂ ಹಾಕ್ಕೋ ಅಂತ ಪೀಡಿಸ್ತಾರೆ.. ನಂಗೆ ಅದು ನಿಜಕ್ಕೂ ಇಷ್ಟಾ ಇಲ್ಲಾ.. ಮೈ ಮೇಲಿದ್ರೆ ಏನೋ ಅಲವರಿಕೆ.. ಕೂತ್ರೆ ನಿಂತ್ರೆ ಎಲ್ಲಿ ಹೊರಬರತ್ತೋ .. ಯಾರು ನೋಡ್ತಾರೋ ಅನ್ಸತ್ತೆ.. ರಗಳೆನಪ್ಪಾ ಅಂತ ಒಂದೇ ಸಮನೆ ಪುಕಾರ್ ಹೇಳ್ತಾನೇ ಇದ್ಲು ನನ್ನ ಗೆಳತಿ ..ಆಕೆಗೆ ಅದೇನ್ ಹೇಳ್ಬೇಕೋ ಗೊತ್ತಾಗ್ಲಿಲ್ಲಾ.. ಆದ್ರೂ ಒಂದಿನ ಅಲ್ವಾ..? ವರ್ಷಪೂತರ್ಿ ಹಾಕ್ಕೊ ಅನ್ನಲ್ವಲ್ಲಾ , ಅವರ ನಂಬಿಕೆಗೆ ಆಸೆಗೆ ಯಾಕ್ ತಣ್ಣೀರೆರಚ್ತೀಯಾ, ಸುಮ್ನೆ ಹಾಕ್ಕೊಂಬಿಡು..ಒಂದಿನ ಅಡ್ಜೆಸ್ಟ್ ಆಗೋದು ಕಷ್ಟಾ ಅಲ್ಲಾ , ಇವತ್ತು ನೀನು ಒಪ್ಕೊಂಡ್ರೆ ನಿಮ್ಮತ್ತೆನೂ ಖುಶೀಯಾಗಿರ್ತಾರೆ..ಮನೆಯ ವಾತಾವರಣ ಚನ್ನಾಗಿರತ್ತೆ ಸುಮ್ನೆ ರಗಳೆ ಮಾಡದೆ ಹಾಕ್ಕೊಂಬಿಡೋದಪ್ಪಾ ಅಂದೆ.. ಹೌದಮ್ಮಾ ನಾನೂ ಹಂಗ್ ಅಂದ್ಕೊಂಡೇ  ಕಳೆದ ವರುಷ ಹಾಕ್ಕೊಂಡಿದ್ದೆ.. ಕಡೆಗೆ ಎಂತಾ ಪರದಾಟ ಅಂತೀನಿ.. ಒಪ್ಕೊಂಡಿದ್ದೇ ಒಳ್ಳೆ ಮುಹೂರ್ತ ಅಂತ ತೊಡಿಸಿದವರು ತೆಗೆಯೋದಕ್ಕೆ ದಿನಾ ವೇಳೆ ಎಲ್ಲಾ ನೋಡಿದ್ದೇ ಕೆಲಸಾ.. ತಿಂಗ್ಳಾನ್ಗಟ್ಲೆ ತೆಗೆಯೋದಕ್ಕೆ ಬಿಡ್ಲಿಲ್ಲಾ.. ನಾನಂತೂ ಈ ಸಾರಿ ಹಾಕ್ಕೋಬಾರ್ದು ಅಂತ ನಿರ್ಧಾರ ಮಾಡ್ಬಿಟ್ಟಿದೀನಿ.. ಅದೇನ್ ರಂಪಾ ರಾದ್ಧಾಂತ ಮಾಡ್ತಾರೆ ನೋಡ್ತೀನಿ ಅಂದ್ಲು.. ಆಕೆಯ ಹಠಕ್ಕೆ ನಾನೂ ಸುಮ್ನಾದೆ..

  ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯ ಹುಡುಗಿ ಅವಳು.. ಕಾಲೇಜಿಗೆ ಹೋಗ್ತಾ ಇದ್ದಾಗ್ಲೇ ಹುಡುಗಿಗೆ ಮದುವೆ ಮಾಡೋ ಯೋಚನೆ ಮಾಡಿದ್ರು ಅವರಪ್ಪಾ.. ಒಂದೆರಡು ವರಾನೂ ಕೇಳ್ಕೊಂಬಂದಿತ್ತು..ಅವ್ರಯಾರೂ ತನ್ನ ಮಗಳಿಗಲ್ಲಾ ಅಂತ ಅನ್ನಿಸಿ ಮದುವೆನೇ ಮುಂದೂಡಿದ್ರು.. ತನ್ನ ಮಹಾಲಕ್ಷ್ಮಿಯಂತಾ ಮಗಳನ್ನ ವರಿಸಬೇಕು ಅಂದ್ರೆ ಮನೆಯಲ್ಲಿ ಭರಪೂರ್ ಆಸ್ತಿ ಇರ್ಬೇಕು, ಹುಡುಗ ಚನ್ನಾಗಿ ಓದಿರ್ಬೇಕು.. ಒಳ್ಳೆ ಕೆಲಸದಲ್ಲಿರ್ಬೇಕು..ಅದೂ ಇದೂ ಚಟಕ್ಕೆ ಬಿದ್ದಿರ್ಬಾರ್ದು.. ಅಬ್ಬಬ್ಬಾ ಅವರು ಹೇಳೋದನ್ನ ಕೇಳಸ್ಕೋತಾ ಇದ್ರೆ ಯುವರಾಣಿಯ ಸ್ವಯಮ್ವರದ ಥರಾ ಅನ್ನಿಸ್ತಾ ಇತ್ತು.. ಇವಳಿಗೆ ಅದೆಂತಾ ರಾಜಕುಮಾರ ಸಿಗ್ತಾನಪ್ಪಾ ಅಂತ ಎಲ್ರೂ ಅಂದ್ಕೋತಿದ್ವಿ.. ಆಕೆ ಮಾತ್ರ ನಕ್ಕು ಸುಮ್ಮನಾಗ್ತಿದ್ಲು.. ಆಕೆಯ ಮನಸಲ್ಲಿ ಏನಿದೆ ಅಂತ ಅವತ್ತು ನಾವ್ಯಾರೂ ಕೇಳಿರ್ಲಿಲ್ಲಾ..



ನಂತ್ರಾ ಡಿಗ್ರಿ ಮುಗ್ಸಿ ಅಪ್ಪನ ಮುದ್ದಿನ ಮಗಳು ಕೆಲಸಾ ಮಾಡ್ತೀನಿ ಅಂತ ಬೆಂಗಳೂರಿಗೆ ಬಂದ್ಲು.. ಇಲ್ಲಿ ಅವಳ ಮನಸಿಗೊಪ್ಪೋ ಕೆಲಸಾನೂ ಸಿಕ್ತು.. ಅದರ ಜೊತೆಗೆ ಆ ಕಂಪನಿಯಲ್ಲೇ ಕೊನೆತನಕ ಜೊತೆಗಿರ್ತೀನಿ ಅನ್ನೋ ಹುಡುಗಾನೂ ಸಿಕ್ಕಿಬಿಡೋದಾ... ಅಲ್ಲಿಂದ ಶುರುವಾಗಿದ್ದು ಸಮಸ್ಯೆ..!



ಅಪ್ಪಾ ಊರಲ್ಲಿ ಮಗಳ ಮದುವೆಯ ಬಗ್ಗೆ ಕನಸು ಕಂಡಿದ್ದೇ ಕಂಡಿದ್ದು... ಇತ್ತ ಈ ಹುಡುಗಿ ನನ್ನ ಜೀವನ ನನ್ನ ಆಯ್ಕೆ ಅಂತ ನಿರ್ಧರಿಸಿಬಿಟ್ಟಿದ್ಲು.. ಅದೇನೇ ಆದ್ರೂ ಅಪ್ಪಾ ನನ್ನನ್ನ ಒಪ್ಕೋತಾರೆ.. ನನ್ನ ಆಯ್ಕೆಯನ್ನ ಧಿಕ್ಕರಿಸಲ್ಲಾ.. ಮುದ್ದಿನ ಮಗಳನ್ನ ದೂರ ಮಾಡಲ್ಲಾ ಅನ್ನೋ ವಿಶ್ವಾಸಾ ಇವಳದ್ದು.. ಈ ಮಕ್ಕಳು, ಅಂದ್ರೆ ನಾವು ಎಷ್ಟು ಸೆಲ್ಫಿಶ್ಗಳು ಅಲ್ವಾ.. ? ಅಪ್ಪಾ ಅಮ್ಮನ ಬಗ್ಗೆ , ಅವರ ಯೋಚನೆಗಳ ಬಗ್ಗೆ ಕನಸುಗಳ ಬಗ್ಗೆ ಕಡೆಗೆ ಅವರು ನಮಗಾಗಿ ಬದುಕಿದ ದಿನಗಳ ಬಗ್ಗೆನೂ ಯೋಚಿಸಲ್ಲಾ ನಾವು... ನಮಗೆ ಕಾಣಿಸೋದು ಬರೀ ನಮ್ಮ ಬದುಕು.. ಅದನ್ನೂ ಸರಿಯಾಗಿ ನೊಡೋದಕ್ಕೆ ಎಲ್ಲರಿಗೂ ಬರಲ್ಲಾ.. ತುಂಬಾ ಪ್ರಜ್ಞಾವಂತಳು ಅಂತ ಅಂದ್ಕೊಂಡಿದ್ದ ಈ ನನ್ನ ಗೆಳತಿ ಕತೆನೂ ಅಷ್ಟೆ.. ಆಕೆ ಬಾವಿಯೊಳಗಿನ ಕಪ್ಪೆ ಆಗ್ಬಾರ್ದು , ಹೊರಪ್ರಪಂಚ ನೋಡ್ಬೇಕು ಅಂತ ಹೇಳ್ತಾ ಹೇಳ್ತಾನೇ ತನ್ನದೇ ಕಚೇರಿಯಲ್ಲಿ ತನಗೊಂದು ಬಾಳ ಸಂಗಾತಿಯನ್ನ ಹುಡುಕ್ಕೊಂಬಿಟ್ಲು... ಅವನೋ ಅವಳಪ್ಪನ ಕಲ್ಪನೆಯನ್ನ ಸಾಕಾರಗೊಳಿಸೋದಲ್ಲಾ, ನಮಗೂ ಈಕೆಗೆ ಸರಿಯಾದ ವರ ಅನ್ನಿಸ್ಲಿಲ್ಲಾ.. ನಾನಂತೂ ಅದನ್ನ ಬಾಯ್ಬಿಟ್ಟು ಹೇಳೇಬಿಟ್ಟಿದ್ದೆ..ಅದಕ್ಕವಳು ಮುನಿಸಿಕೊಂಡೂ ಆಗಿತ್ತು.. ಕಡೆಗೆ ಮನಸು ತಿಳಿಯಾದಾಗ ಮಾತಿಗಿಳಿದು ಹೀ ಈಸ್ ಪರ್ಪೆಕ್ಟ್ ಅಂತ ಮನದಟ್ಟು ಮಾಡೋ ಪ್ರಯತ್ನ ಮಾಡಿದ್ಲು.. ಎನಿ ಹೌ ಈ ನಂಬಿಕೆ  ಕೊನೆತನಕ ಹೀಗೇ ಇರ್ಲಿ ಅಂತ ಮನದಾಳದಿಂದ ಹರಸಿದ್ದೆ..

ಅಲ್ವಾ..? ಜಗತ್ತಲ್ಲಿ ಯಾರೂ  ಪರ್ಪೆಕ್ಟ್ ಅಂತ ಇರಲ್ಲಾ..ಆಕೆಗೆ ಅವನು, ಅವನಿಗೆ ಇವಳು ನನಗೋಸ್ಕರಾನೇ ಹುಟ್ಟಿರೋದು ಅಂತ ಅನ್ನಿಸಿಬಿಟ್ರೆ ಸಾಕು ಮದುವೆ ಆಗೋದಕ್ಕೆ... ಆದ್ರೆ ಗಂಡಾಹೆಂಡತಿ ಅಂತ ಆದ್ಮೇಲೂ ನನಗೆ ನೀನು ನಿನಗೆ ನಾನು ಅನ್ನೋ ಮಂತ್ರ ಜೀವಂತವಾಗಿರ್ಬೇಕು ಅಷ್ಟೆ... ಆ ಭರವಸೆಯಲ್ಲೇ ಈ ಬ್ರಾಹ್ಮಣರ ಮನೆಯ ಮುದ್ದಿನ ಹುಡುಗಿ ಲಿಂಗಾಯಿತರ ಮನೆಯ ಸೊಸೆಯಾಗೋ ನಿರ್ಧಾರಕ್ಕೆ ಬಂದ್ಲು..

ಜಾತಿ ಗೀತಿ ಎಲ್ಲಾ ಈಕೆಗೆ ಇಲ್ಲಾ..ಆದ್ರೆ ಮನೆಯಲ್ಲಿ ಅಪ್ಪಾ ? ದಿನ ಬೆಳಿಗ್ಗೆ ಸೂರ್ಯ ಮೂಡೋ ಮೊದ್ಲೇ ಎದ್ದು ತಣ್ಣೀರು ಸ್ನಾನ ಮಾಡಿ ಗಂಟೆಗಟ್ಲೆ ದೇವರ ಮುಂದೆ ಕೂರೋ ಖಟ್ಟಾರ್ ಬ್ರಾಹ್ಮಣನನ್ನ ಈ ಮದುವೆಗೆ ಒಪ್ಪಿಸೋದು ಹೇಗೆ..? ಲಿಂಗಾಯಿತರು ಅಂದ್ರೆ ಅವರಿಗೆ ಅಷ್ಟಕ್ಕಷ್ಟೆ.. ಅವರು ಮಡಿವಂತರು.. ಶಿವಭಕ್ತರು.. ಬ್ರಾಹ್ಮಣರಿಗೆ ಯಾವುದರಲ್ಲೂ ಕಡಿಮೆ ಇಲ್ಲದ ಥರಾ ದೇವರಲ್ಲಿ ನಡ್ಕೋತಾರೆ.. ಮಾಂಸಾ ತಿನ್ನಲ್ಲಾ.. ಎಲ್ಲಾ ಸರಿ ಆದ್ರೂ ಅವರನ್ನ ಒಪ್ಪಲ್ಲಾ.. ಆದ್ರೂ ಇವಳು ಅತ್ತೂಕರೆದು,ಅವನಿಲ್ಲದೆ ಬದುಕೇ ಇಲ್ಲಾ ಅಂತ ಊಟ ಬಿಟ್ಟಮೇಲೆ, ಪಾಪಾ ಆ ತಂದೆಯ ಹೃದಯ ಕರಗಿದೆ.. ಕಷ್ಟದಲ್ಲೇ ಒಪ್ಪಿಗೆ ಸೂಚಿಸಿದ್ರು..



ಕೆಲವೇ ತಿಂಗಳಲ್ಲಿ ಮದುವೆ ತಯಾರಿ  ನಡೀತು.. ಆದ್ರೆ ಅವರ ಮನಸಿನೊಳಗೆ ಮಗಳು ಈ ಥರಾ ಮಾಡಿದ್ಲಲ್ಲಾ ಅನ್ನೋ ಕೊರಗು ಇದ್ದೇ ಇತ್ತು.. ನಾನು ಮದುವೆ ಟೈಮಲ್ಲಿ ಮನೆಗೆ ಹೋದಾಗ್ಲೂ ಬೇಸರದಲ್ಲೇ ಹೇಳ್ಕೊಂಡಿದ್ರು..  "ಮಗಾ ನೀನೇ ಹೇಳು ಲಿಂಗಾಯಿತರು ಅಂದ್ರೆ ಬ್ರಾಹ್ಮಣರ ಥರಾನಾ..? ಈ ಜಾತಿ ಧರ್ಮದ ಬೇದ ಬೇಡಾ ಅಂತ ಬಸವಣ್ಣವರು ಎಲ್ಲರಿಗೂ ಲಿಂಗಾಹಾಕಿ ನಾವೆಲ್ಲರೂ ಒಂದೇ ಅಂದ್ರು.. ಅವತ್ತು ಅವರ ಹಿಂದೆ ನಿಷ್ಠಾವಂತ ಬ್ರಾಹ್ಮಣರ್ಯಾರೂ ಹೋಗಿಲ್ಲಾ.. ಹೋದವರಲ್ಲಿ ಹೆಚ್ಚುಪಾಲು ಜನಾ ತುಳಿತಕ್ಕೊಳಗಾದ ಕೆಳವರ್ಗದವರೇ ಅಲ್ವಾ..? ಅವರಿಗೇ ಈ ಜಾತಿ ಪದ್ಧತಿ ಬೇಡ ಅಂತ ಅನ್ನಿಸಿರತ್ತೆ.. ಎಲ್ಲೋ ಅಪವಾದ ಅನ್ನೋ ಥರಾ ಮೇಲ್ವರ್ಗದವರು ಕತ್ತುಬಗ್ಗಿಸಿರಬಹುದು ಅಷ್ಟೆ.. ಈ ಹುಡುಗ ಅಂತೂ ಕಡುಗಪ್ಪು.. ಹೇಗೋ ಏನೋ ಇವಳ ಜೀವನ " ..ಅಂತ ನಿಟ್ಟುಸಿರು ಬಿಟ್ಟಿದ್ರು.. ನಂಗೆ ಏನ್ ಹೇಳ್ಬೇಕು ತೋಚ್ಲಿಲ್ಲಾ.. ಆದ್ರೂ ಚನ್ನಾಗಿರ್ತಾರೆ ಬಿಡಿ.. ಜಾತಿ ಅನ್ನೋದು ಹುಟ್ಟಿನಿಂದ ಬರೋದಕ್ಕಿಂತ ಕ್ರಿಯೆಯಿಂದ ಸಂಸ್ಕಾರದಿಂದ ಬರಬೇಕು..ಅದರಲ್ಲಿ ಹುಡುಗ ಶುಭ್ರಬಿಳುಪು ಅಂತ ಅವಳೇ ಅಂತಿದ್ದಾಳಲ್ಲಾ.. ತುಂಬಾ ಯೋಚಿಸ್ಬೇಡಿ.. ಇಬ್ರೂ ಚನ್ನಾಗಿರ್ತಾರೆ ಅಂದಿದ್ದೆ.. ಸಂಸಾರದಲ್ಲಿ ಬರೋ ಚಿಕ್ಕಪುಟ್ಟ ಸಮಸ್ಯೆಗಳನ್ನ ಬಿಟ್ರೆ ಇಬ್ರೂ ಚನ್ನಾಗೂ ಇದ್ದಾರೆ.. ಆದ್ರೆ ಅಡ್ಜೆಸ್ಟ್ ಆಗೋದು..? ಹೇಗೇ ಇದ್ರೂ ಅದು ಅಷ್ಟು ಈಸಿ ಅಲ್ಲಾ..



ಮದುವೆಯಿಂದ ಶುರುವಾಗಿದೆ ಡಿಫರೆನ್ಸು... ಸಂಪ್ರದಾಯ ಆಚರಣೆ ಎಲ್ಲಾ ವಿಭಿನ್ನ.. ಕಡೆಗೆ ಬ್ರಾಹ್ಮಣರ ಮನೆಯ ಹುಡುಗಿ ಅಪ್ಪಟ ಲಿಂಗಾಯಿತ ಶೈಲಿಯಲ್ಲಿ ಲಗ್ನಾ ಮಾಡ್ಕೊಂಡ್ಲು.. ಮದುವೆ ದಿನ ಸಿಡಿ ಸಿಡಿ ಅಂತಾನೇ ಲಿಂಗಾನೂ ಹಾಕಿಸ್ಕೊಂಡ್ಲು.. ಕಡೆಗೆ ಒಂದು ದಿನ ಆ ಲಿಂಗ ಮೈ ಮೇಲಿಲ್ಲಾ.. ಅದಕ್ಕೇ ಈ ಹುಡುಗಿ ಅವರ ಮನೆಯಲ್ಲಿ ಯಾರಿಗೂ ಆಗ್ಬರಲ್ಲಾ... ಆಕೆ ಶಿವಮೆಚ್ಚೋ ಥರಾ ಬದುಕ್ತಾ ಇಲ್ಲಾ.. ದೇವರ ಪೂಜೆ ಮಾಡಲ್ಲಾ.. ಹಿರಿಯರಿಗೆ ನಮಿಸಲ್ಲಾ.. ಗಂಡನಿಗೂ ರಿಸ್ಪೆಕ್ಟ್ ಕೊಡಲ್ಲಾ... ಹೀಗೇ ಅವರ ಮನೆಗೆ ಹೋದ್ರೆ  ಆರೋಪಗಳ ಸುರಿಮಳೆ ಆಗತ್ತೆ.. ಅದನ್ನ ಕೇಳಿಸ್ಕೊಂಡು ಸುಮ್ಮನಿರೋದ್ಬಿಟ್ಟು ವಿಧಿ ಇಲ್ಲಾ.. ಈಕೆ ನಮ್ಮ ಮಾತು ಕೇಳಲ್ಲಾ..

ಅಷ್ಟಕ್ಕೂ ಯಾರೇ ಆದ್ರೂ ಯಾರದೋ ಲೈಫನ್ನ ಯಾಕೆ ತಮ್ಮ ಕಂಟ್ರೋಲೊಳಗೆ ತಗೋಬೇಕು..? ಅವರಿಚ್ಛೆಯಂತೆ ಅವರು ಬದುಕ್ಲಿ.. ಬದುಕೋದಕ್ಕೆ ಬಿಡ್ಲಿ.. ಸಮಾಜ ಏನ್ ಅಂದ್ಕೊಳ್ಳತ್ತೋ ಅನ್ನೋ ಜನಕ್ಕೆ ನಾವೂ ಆ ಸಮಾಜದ ಭಾಗ.. ನಾಳೆ ನಮ್ಮಂತೆನೇ ಸಮಾಜ ಆಗ್ಬಾದರ್ು ಅಂತೇನೂ ಇಲ್ಲಾ ಅಲ್ವಾ..? ಅನ್ನೋ ಯೋಚನೆ ಯಾಕೆ ಬರಲ್ಲಾ..? ಏನೋ ಒಟ್ಟಲ್ಲಿ ಈ ಹುಡುಗಿ ಬದಲಾಗಲ್ಲಾ.. ಈ ಶಿವರಾತ್ರ್ರಿಗೆ ಶಿವಲಿಂಗವನ್ನ ಮೈಗಂಟಿಸಿಕೊಳ್ಳಲ್ಲಾ ಅಂತ ಆಕೆ ಹೇಳಿದ್ಮೇಲೆ ಮುಗೀತು ಹಠಾ ಅಂದ್ರೆ ಹಠಾ.. ಇವತ್ತು ರಜೆ ತಗೊಂಡು ಮನೇಲೇ ಇದ್ದಾಳೆ.. ನಾಳೆ ಬಂದಾಗ ಆಕೆಯ ಮೂಡು ಯಾವ ಥರಾ ಇರತ್ತೋ ಗೊತ್ತಿಲ್ಲಾ... ಶಿವರಾತ್ರಿಯ ಜಾಗರಣೆ ಹೇಗಿರತ್ತೆ ನೋಡ್ಬೇಕು ಅಂದ್ಕೋತಾ ನನ್ನ ಪಾಡಿಗೆ ನಾನು ಕೆಲಸಾ ಮಾಡ್ತಾ ಇದ್ದೆ.. ಆಗ್ಲೇ ನನ್ನ ಮತ್ತೊಬ್ಬ ಲಿಂಗಾಯಿತ ಕಲೀಗ್ ಪಕ್ಕ ಬಂದು ಕೂತ್ಲು... ಮತ್ತದೇ ಲಿಂಗದ ಮಾತು.. ಆಕೆಯ ಮನೆಯಲ್ಲಿ ಅಪ್ಪಾ ಅಂಥಾ ದೈವ ಭಕ್ತರಲ್ವಂತೆ.. ಆದ್ರೆ ಅಮ್ಮಾ ಮಾತ್ರ ಒಂದು ದಿನಾನೂ ತಪ್ಪದೆ ಲಿಂಗದ ಪೂಜೆ ಮಾಡ್ತಾರೆ ಅಂದಿದ್ಲು.. ನಾನು ಸುಮ್ಮನೆ ನೀನು ಅಂದೆ.. ಓ..ಇಲ್ಲಪ್ಪಾ ನಂಗೆ ಆ ಲಿಂಗಾ ಹಾಕ್ಕೊಳ್ಳೋದೆಲ್ಲಾ ಆಗಲ್ಲಾ ಯು ನೋ ಅಂತ ಮುಖಾ ಕಿವುಚಿದ್ಲು...

ಶಿವ ಶಿವಾ .. ಹುಟ್ಟಾಲಿಂಗಾಯಿತರಿಗೂ ಲಿಂಗಾದಾರಣೆ ಬೇಡಾ ಅಂತ ಅನ್ನಿಸತ್ತಾ..? ಅಪ್ಕೋರ್ಸ್ ಬ್ರಾಹ್ಮಣರ ಮನೆಯಲ್ಲಿ ಎಷ್ಟು ಹುಡುಗರು ಸಂಧ್ಯಾವಂದನೆ ಮಾಡ್ತಾರೆ..? ಎಷ್ಟು ಹುಡುಗೀರು ಮಟ್ಟಸವಾಗಿ ಕೂತು ಸಹಸ್ರನಾಮ ಓದ್ತಾರೆ ಅಲ್ವಾ..? ಈ ಆಚರಣೆಗಳೆಲ್ಲಾ ಅಲ್ಲಿ ಇಲ್ಲಿ ಅಂತಲ್ಲಾ ಎಲ್ಲೂ ಉಳ್ಕೋತಿಲ್ಲಾ.. ಇದಕ್ಕೆ ಧರ್ಮ ಮತ್ತು ಆಚರಣೆಯ ವಿಶಯದಲ್ಲಿ ನಮಗಿರೋ ಫ್ರೀಡಮ್ಮೇ ಕಾರಣ ಅನ್ಸತ್ತೆ.. ಏನೇ ಆದ್ರೂ ಕೆಲ ಆಚರಣೆಗಳು ಕಟ್ಟುಪಾಡುಗಳು ಮೂಡನಂಬಿಕೆಗಳಂತ ಅನ್ನಿಸಿದ್ರೂ , ಅರ್ಥೈಸಿಕೊಂಡು ಸರಿಯಾದ ರೀತಿಯಲ್ಲಿ ಮಾಡಿದ್ರೆ ಲಾಭದಾಯಕ ಅನ್ನೋದು ನನ್ನ ಅಭಿಪ್ರಾಯ...

ಅಂದ್ಹಾಗೆ ಈ ಶಿವರಾತ್ರಿಯ ದಿನ ನನಗೆ ಅದ್ಯಾಕೋ ಥಟ್ ಅಂತ ಮನಸಿಗೆ ಬಂದಿದ್ದು ಶಿಪೂಜೆಯಲ್ಲಿ ಕರಡಿ  ಥರಾ ನುಗ್ಬೇಡಾ ಅನ್ನೋ ಮಾತು.. ಹುಡುಗಾ ಹುಡುಗೀರ ನಡುವೆ ಅಥವಾ ನವವಿವಾಹಿತರ ಮಧ್ಯೆ ಹೋದಾಗೆಲ್ಲಾ ಈ ರೀತಿ ಅನ್ಸಕೊಂಡಿದೀನಿ.. ಏಕಾಂತಕ್ಕೆ ಭಂಗ ತರಬಾರ್ದು ಅಂತ ಹೀಗ್ ಹೇಳ್ತಾರೆ ಅಂದ್ಕೋತಿನಿ.. ಆದ್ರೆ ಶಿವಪೂಜೆಗೇ ಯಾಕ್ ಹೋಲಿಸ್ತಾರೆ ? ಅನ್ನೋ ಪ್ರಶ್ನೆ ಮಾತ್ರ ಇಷ್ಟು ದಿನದ ಮೇಲೆ ಈಗ ಎದ್ದಿದೆ..  ಉತ್ತರ ಹುಡಕ್ತಿದೀನಿ.. ಸಹಾಯ ಮಾಡಿ ಪ್ಲೀಸ್...