Tuesday, December 27, 2011

ಅವಳು ಕರಗುವ ಸಮಯ..!

ಹಲೋ ಹನಿ
ಹಾ ಹೇಳಿ
ಯಾಕೆ ನಾನ್ ಕಾಲ್ ಮಾಡಬಾರದಿತ್ತಾ ?
ಹಂಗೇನಿಲ್ಲ, ಎಲ್ರೂ ಇದ್ದಾರೆ
ಹೊರಗೆ ಬಾ..

ಹೀಗೆ ಶುರುವಾಗಿತ್ತು ಮಾತು.. ಪ್ರೀತಿಯಲ್ಲಿ ಇದೆಲ್ಲ ಸಹಜ..ಆದ್ರೆ ಅಸಹಜ ಅನ್ನಿಸಿದ್ದೂ ಅದರಲ್ಲಿತ್ತು.. ಎರಡೇ ಎರಡು ಶಬ್ದ ಮುಂದೆ ಕೇಳೋದಕ್ಕೆ ಆಗಲಿಲ್ಲ.. ಅದೆಷ್ಟು ನರಳಿಬಿಟ್ಟಳೋ ಅವಳು.. ಆಕೆಯ ಕಣ್ಣಲ್ಲಿ ಕಂಬನಿ ಇರಲಿಲ್ಲ.. ನನ್ನ ಮನಸು ಒದ್ದೆಯಾಗಿತ್ತು.. ಅವಳ ಮಾತು ಮುಗಿದ ಮೇಲೆ ಒಬ್ಬಳೇ ಅತ್ತಿದ್ದೆ.. ನನ್ನದಲ್ಲದ ಅನುಭವ ನನ್ನನ್ನ ಬೆಚ್ಚಿಬೀಳಿಸಿತ್ತು.. ಹುಡುಗೀರಿಗೆ ಯಾಕೆ ಈ ಶಿಕ್ಷೆ ?

ವೈಟ್ ಶರ್ಟ್  ಬ್ಲೂ ಜೀನ್ಸ್.. ಎತ್ತರಕ್ಕೆ ಸರಿಯಾದ ಮೈಕಟ್ಟು .. ಮುಖದಲ್ಲಿ ಮಂದಹಾಸ.. ಎಷ್ಟು ಚನ್ನಾಗಿ ಕಾಣಿಸ್ತಾ ಇದ್ದಾ ಗೊತ್ತಾ..? ಮಾತೂ ಅಷ್ಟೇ ತೇಲುವ ಮೋಡದ ಹಾಗೆ.. ತಂಗಾಳಿ ಬೀಸಿದ ಹಾಗೆ.. ಮುಂಗುರುಳ ಲಾಸ್ಯದಹಾಗೆ.. ಉಹು ಆಗಲ್ಲ ವರ್ಣಿಸೋದಕ್ಕೆ ಸಾಧ್ಯಾನೇ ಇಲ್ಲ.. ಅದ್ಭುತ ಮಾತುಗಾರ ಅನ್ನೋದಕ್ಕಿಂತ ಹುಡುಗಿಯರ ಹೃದಯವನ್ನ ಇಣುಕಿ ನೋಡಿದಂತಾ ಮಾತು.. ಅವನೇನಾ ಇವನು.. ಫೋನಿನಲ್ಲಿ ಮೆ ಶಾಯರ್ ತೊ ನಹಿ.. ಲೇಕಿನ್ ವೊ ಹಸಿ.. ಅಂತ ಬಂದಾಗಲೇ ಅನ್ನಿಸಿತ್ತು.. ಇವನು ಅವನಲ್ಲ ಅಂತ ಮೂರೇ ಮೂರು ದಿನಗಳ ಹಿಂದೆ ನಿನಗೆ ಮೋಸ ಮಾಡೋದಕ್ಕೆ ನನಗೆ ಇಷ್ಟ ಇಲ್ಲ.. ಐ ಎಮ್ ಇನ ಡಿಪ್ರೇಶನ್ ಅಂತ ಅತ್ತೇಬಿಟ್ಟಿದ್ದ.. ಯಾಕೋ ಕಥೆ ಕೇಳದೇ ಇರೋದಕ್ಕೆ ಆಗಿರಲಿಲ್ಲ.. ಅದೇ ನಾನು ಮಾಡಿದ ದೊಡ್ಡ ತಪ್ಪು..

ನಾನು ಅವಳನ್ನೇ ದಿಟ್ಟಿಸಿದ್ದೆ , ಆ ದನಿಯಲ್ಲಿ ಏರಿಳಿತಗಳಿರಲಿಲ್ಲ.. ಕೊನೇಪಕ್ಷ ಗಂಟಲ ನರಗಳಾದ್ರೂ ಉಬ್ಬಿವೆಯಾ..? ಉಹು ..ಅವಳದು ಸಹಜ ದಾಟಿಯ ಅಸಹಜ ಮಾತು.

ಅವನು ಪ್ರೀತಿಗೆ ಬಿದ್ದಿದ್ದನಂತೆ.. ಅವಳು ಬೆಳದಿಂಗಳಿನಂತಾ ಹುಡುಗಿ.. ಚೆಲುವೆ.. ಚಂಚಲೆ ..ಕೋಮಲೆ.. ಕವಿ ಕಲ್ಪನೆಯ ಕೆತ್ತನೆಯ ಥರಾ ಅನ್ನಿಸಿತ್ತು.. ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿದ್ದೆ ಅಂದಾ.. ಅಳ್ತಾ ಇದ್ದಾ ಅನ್ನಿಸತ್ತೆ.. ಧ್ವನಿ ಮಾತ್ರ ಗದ್ಘದಿತವಾಗಿತ್ತು.. ಅವಳು ಈಗ ಎಲ್ಲಿದ್ದಾಳೋ ? ಯಾರ ಜೊತೆಗೆ ಜೀವನ ಮಾಡ್ಕೊಂಡಿದ್ದಾಳೋ.. ? ಜಾತಿಯ ಕಾರಣಕ್ಕೆ ನಾವಿಬ್ಬರೂ ಬೇರೆಯಾಗಬೇಕಾಯ್ತು.. ಹಿರಿಯರ ಒತ್ತಾಯದಿಂದ ದೂರಾದ್ವಿ.. ಎಲ್ಲಿದ್ದರೂ ಚನ್ನಾಗಿರಲಿ.. ನೂರುಕಾಲ ಬಾಳಲಿ.. ಆದ್ರೆ ನನಗೆ ಅವಳನ್ನ ಮರೆಯೋದಕ್ಕೇ ಆಗ್ತಿಲ್ಲ.. ಆ ನೋವಿನಿಂದ ನಾನು ಹೊರಬರೋದಕ್ಕೆ ಟೈಮ್ ಬೇಕು.. ಈಗ್ಲೇ ಅಪ್ಪ ಅಮ್ಮ ಮದುವೆಗೆ ಒತ್ತಾಯಿಸ್ತಾ ಇದ್ದಾರೆ.. ಹಾಗಂತ ಈಗ ನಿನ್ನನ್ನ ಮದುವೆ ಮಾಡ್ಕೊಂಡ್ರೆ ತಪ್ಪಾಗತ್ತೆ.. ಮನಸೆಲ್ಲಾ ಅವಳೇ ತುಂಬಿದ್ದಾಳೆ.. ಆದಿನ್ಯಾವತ್ತೂ  ಅವಳು ನನ್ನವಳಾಗಲ್ಲ ಅನ್ನೋ ಸತ್ಯ ಗೊತ್ತಿದೆ.. ನಂತ್ರ ನಾನೂ ಮತ್ತೊಬ್ಬಳನ್ನ ಮದುವೆ ಆಗಲೇ ಬೇಕು.. ಅದು ನೀವೇ ಆಗಬಾರದು ಅಂತಿಲ್ಲ..ಆದ್ರೆ ನಿಮಗೆ ಅಡ್ಜೆಸ್ಟ್ ಆಗೋದಕ್ಕೆ , ನನ್ನ ಹೊಸ ಬದುಕನ್ನ ಒಪ್ಪಿಕೊಳ್ಳೋದಕ್ಕೆ ನನಗೆ ಟೈಮ್ ಬೇಕು.. ಅದನ್ನ ನಿಮ್ಮಿಂದ ಕೊಡೋದಕ್ಕಾಗತ್ತಾ..? ನಾನು ಹಿಂದೆ ಒಬ್ಬಳಿಗೆ ಮನಸು ಕೊಟ್ಟಿದ್ದೆ ಅನ್ನೋ ಸತ್ಯವನ್ನ ಒಪ್ಪಿಕೊಂಡು ನನ್ನನ್ನ ಮದುವೆಯಾಗೋ ಮನಸಿದ್ಯಾ ? ಉಹು ಇರಲ್ಲಾ, ಅಂತಾ ಅಳ್ತಾನೇ ಫೋನ್ ಇಟ್ಟಿದ್ದ..

ಕಣ್ಣೀರ್ ಹಾಕೋ ಹುಡುಗರನ್ನ ನಂಬಬಾರದು ಅಂತಾರಲ್ಲ ಅದು ನಿಜ ಅಂತ ನನಗನ್ನಿಸಿತು.. ಆದ್ರೆ ಅವನ ಹತ್ರಾ ನಾನೂ ಮಾತಾಡಿದ್ದೆ.. ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸಿದ್ದೆ.. ಉಹು ಅರ್ಥವಾಗಿರಲಿಲ್ಲ.. ಮೊದಲಬಾರಿಗೆ ಯಾರನ್ನೋ ಅಳೆಯೋದರಲ್ಲಿ ನಾನು ಸೋತಿದ್ದೆ.. ಅವಳೂ ಸೋತಿದ್ದಳು..

ಅದೊಂದು ಫೋನ್ ಕಾಲ್ ನನ್ನನ್ನ ತುಂಬಾ ಯೋಚಿಸೋ ಥರ ಮಾಡಿಬಿಟ್ಟಿತ್ತು.. ಕೂತಲ್ಲಿ ನಿಂತಲ್ಲಿ ಯೋಚಿಸಿದ್ದೆ, ಅವನಿಗೆ ಏನ್ ಹೇಳಲಿ.. ಒಂದು ಮನಸು ಯಾಕೋ ಮುಂದುವರೆಯೋದು ಬೇಡ ಅಂತ ಹೇಳ್ತಾ ಇತ್ತು.. ಆದ್ರೂ ಮನದ ಮೂಲೆಯಲ್ಲಿ ಎಲ್ಲೋ ಹೃದಯ ಕಲ್ಲಾಗಬಾರದು ಅನ್ನೋ ಧ್ವನಿ.. ಪ್ರೀತಿ ಸಿಗದವರು ಎಷ್ಟು ಜನ ಇಲ್ಲಾ.. ಅವರೆಲ್ಲಾ ಬದುಕನ್ನ ಪ್ರೀತಿಸಿಲ್ವಾ ?  ಹಳೆ ನೀರನ್ನ ಕೊಚ್ಚಿಕೊಂಡು ಹೊಗೋ ಹೊಸ ನೀರಿನ ಥರ ನಾನ್ಯಾಕ್ ಆಗಬಾರದು..? ನನ್ನ ಪ್ರೀತಿಗೆ ಎಲ್ಲವನ್ನೂ ಮರೆಸೋ ಶಕ್ತಿ ಇದೆ ಅನ್ನಿಸಿಬಿಟ್ಟಿತ್ತು..

ಎಲ್ಲಾ ಹುಡುಗಿಯರೂ ತಪ್ಪುಮಾಡೋದೇ ಅಲ್ಲಿ.. ನಾನು ನನ್ನ ಪ್ರೀತಿ ನನ್ನ ನಡುವಳಿಕೆ ನನ್ನ ಶಕ್ತಿಯಿಂದ ನನ್ನದಲ್ಲದ ಮನಸನ್ನ ಹತೋಟಿಗೆ ತಗೊಂಡು ಬತರ್ಿನಿ, ನನ್ನದಾಗಿಸಿಕೊಂಡುಬಿಡ್ತೀನಿ ಅಂದ್ಕೋತಾರೆ.. ಆದ್ರೆ ಅದು ಆಗದ ಕೆಲಸ.. ಅವಳು ಅವಳೇ ನಾನು ನಾನೇ.. ಅರಿಯಲು ತಡವಾದರೆ ನಂತರ ಮುಗಿಯದ ಬೇನೆ.

ಮೆಸೇಜ್ ಮೇಲೆ ಮೆಸೇಜ್ ಮಾಡಿದ್ದೆ.. ಉತ್ತರಗಳೆಲ್ಲ ಚಿಕ್ಕ ಮತ್ತು ಚೊಕ್ಕವಾಗಿದ್ವು.. ಮಗುವಿನ ಮನಸು ಅನ್ನಿಸಿಬಿಟ್ಟಿತ್ತು.. ನಾನು ಅವನನ್ನ ಒಪ್ಪಿಕೊಂಡೆ.. ಆದ್ರೆ ನಿಜ ಹೇಳ್ತೀನಿ, ನಾನು ಅವನನ್ನ ಒಪ್ಪಿಕೊಳ್ಳೋದಕ್ಕೆ ಕಾರಣ ಆತನ ಮಾತು ಮನಸು ನಡುವಳಿಕೆ ಅಷ್ಟೇ ಆಗಿರಲಿಲ್ಲ.. ಆತನ ರೂಪ ಕೆಲಸ ಗೌರವ ಘನತೆ ಎಲ್ಲವೂ ನನ್ನನ್ನ ಕರಗುವಂತೆ ಮಾಡಿದ್ದವು.. ಮದುವೆಗೆ ಒಪ್ಪಿಕೊಂಡಿದ್ದೆ.. ಅಷ್ಟಾಗಿ ವಾರಾಕೂಡ ಕಳೆದಿಲ್ಲ.. ಡಿಪ್ರೇಶನ್ನಿನ ಮಾತುಗಳು ಮೆಸೇಜ್ಗಳು ಬರೋದೂ ಕಡಿಮೆ ಆಗಿರಲಿಲ್ಲ.. ಅವತ್ತು ನಾನು ಅವನನ್ನ ಮೀಟ್ ಮಾಡೋಣ ಅಂದಿದ್ದೆ.. ಎದೆಯ ತುಂಬ ನೋವಿಟ್ಕೊಂಡು ಬತರ್ಾನೆ, ನಾನಾಗ ಅವನ ತಲೆಯನ್ನ ನನ್ನ ಎದೆಯ ಮೇಲಿಟ್ಟು ತಾಯಿಯಂತೆ ಸಮಾಧಾನ ಮಾಡಬೇಕು.. ಮನಸಿನ ಭಾರಗಳನ್ನೆಲ್ಲಾ ಹೊರಹಾಕೋದಕ್ಕೆ ಪ್ರಯತ್ನಿಸಬೇಕು ಅಂದುಕೊಂಡಿದ್ದೆ.. ಆದ್ರೆ ಆಗಿದ್ದೇ ಬೇರೆ.

ಹೆಣ್ಣುಮಕ್ಕಳಿಗೆ ಅದೆಲ್ಲಿಂದ ಬಂದುಬಿಡತ್ತೋ ತಾಯಿಯ ಹೃದಯ.. ಯಾರದೋ ನೋವು ಹತಾಶೆಗಳಿಗೂ ಇವಳ ಹೃದಯ ಮಿಡಿಯತ್ತೆ .. ಅದು ತಪ್ಪಾ ?


ಕಾರಿನಿಂದ ವೈಟ್ ಶರ್ಟ್ ಬ್ಲೂ ಪ್ಯಾಂಟ್ ತೊಟ್ಟಿದ್ದ ಹ್ಯಾಂಡ್ಸಮ್ ಹುಡುಗ ಕೆಳಗಿಳಿದಿದ್ದ..ಆತನ ಮುಖದಲ್ಲಿ ನೋವು ಕಾಣಿಸಲಿಲ್ಲ..ನನಗೆ ಗೊಂದಲ.. ಮಾತಲ್ಲೂ ಹಳೇ ಹುಡುಗಿ ಇಣುಕಲಿಲ್ಲ.. ದುಃಖದ ಗಾಳಿ ಬೀಸಲಿಲ್ಲ.. ಕಟ್ಟಕಡೆಯದಾಗಿ ನಾನು ನಿನ್ನನ್ನ ಚನ್ನಾಗಿ ನೋಡ್ಕೋತೀನಿ ಅಲ್ವಾ ? ಅಂತ ಅಮಾಯಕನಂತೆ ಕೇಳಿದ್ದೇ ಕೇಳಿದ್ದು ಹಳ್ಳಕ್ಕೆ ಬಿದ್ದೆ.. ಮದುವೆಯಾದರೂ ಏಳೋದಕ್ಕೆ ಆಗಲೇ ಇಲ್ಲ..

ಅವನೂ ಅದನ್ನೇ ಹೇಳಿದ್ದ.. ಮದುವೆಯಾದ್ರೂ ಅವಳನ್ನ ಮರೆಯೋದಕ್ಕಾಗಿರಲಿಲ್ಲ.. ಮೊದಲರಾತ್ರಿ ನಾವಿಬ್ಬರೂ ಮಾತಲ್ಲೇ ಮುಗಿಸಿದ್ವಿ.. ನಾನು ಅವಳನ್ನ ತುಂಬಾನೇ ಪ್ರೀತಿಸ್ತಾ ಇದ್ದೆ.. ಆದ್ರೆ ಅವಳಿಗೆ ಅನುಮಾನ.. ಒಂದೇ ಒಂದು ದಿನ ಹಳೆ ಹುಡುಗಿಯ ಹೆಸರು ತೆಗೆಯದೇ ಸಂಸಾರ ಮಾಡಲಿಲ್ಲ.. ಮಂಚದಲ್ಲೂ ಅವಳದೇ ಧ್ಯಾನ.. ಮೌನ.. ಕಳೆದುಹೋಗ್ತಾ ಇತ್ತು ಯವ್ವನ.

ಅವನ ಮಾತುಗಳು ಕಿವಿಯಲ್ಲಿ ಗುಯ್ಗುಡ್ತಾ ಇದ್ವು. ಮೈಯ್ಯೆಲ್ಲಾ ಉರಿ.. ಇಂಥಾ ನೀಚನ ಮಾತಿಗೆ ನಾನು ಅಯ್ಯೋ ಅಂದನಾ ? ತರ್ಕಕ್ಕಿಳಿಯದೇ ನಂಬಿಬಿಟ್ಟಿದ್ದೆ. ಅದು ನನ್ನ ದಡ್ಡತನ

ಅವನಿಗೆ ಊಟ ಬೇಡ , ನಿದ್ದೆ ಬೇಡ.. ಬರೀ ಹಾಸಿಗೆ ಹಾಸಿಗೆ ಹಾಸಿಗೆ.. ಅದು ನನಗೆ ಹೇಸಿಗೆ ಅಂದವಳ ಮುಖದಲ್ಲಿ ಅಸಹ್ಯದ ಭಾವ ಮೂಡಿದ್ದು ಮಾತ್ರ ನನಗೆ ಕಂಡಿತ್ತು.. ಗಂಡಸು ಅವಳನ್ನ ಅಷ್ಟರಮಟ್ಟಿಗೆ ಕಾಡಿಬಿಟ್ಟಿದ್ದ.. ಅವನಂಥ ಮನುಶ್ಯ ಮತ್ತೊಬ್ಬ ಇರೋದಕ್ಕೆ ಸಾಧ್ಯ ಇಲ್ವೇನೋ.. ಯಾವ ಹುಡುಗಿಗೂ ಅಂಥ ಗಂಡ ಸಿಗಬಾರದು ಅಂತ ಅಂದವಳ ಕಣ್ಣಲ್ಲಿ ಸಿಟ್ಟಿತ್ತು.

ಅವನು ಕಾಡಬಾರದ ರೀತಿ ಎಲ್ಲಾ ಕಾಡಿದ್ದ.. ಮೊದಮೊದಲು ಅವಳಿಗೆ ಎಲ್ಲವೂ ಹಳೆಯದನ್ನ ಮರೆಯೋ ತವಕ ಅನ್ನಿಸಿತ್ತು.. ಅವನಿಚ್ಛೆಯಂತೆ ಎಲ್ಲವೂ ನಡೆದವು.. ಅವನಿಲ್ಲದ ಸಮಯದಲ್ಲಿ ಅವಳಿಗೇ ಅರಿವಿಲ್ಲದಂತೆ  ಆಕೆ ಅತ್ತಿದ್ದಳು.. ವಿದ್ಯಾವಂತೆ ಬುದ್ಧಿವಂತೆ ದಿಟ್ಟ ಹೆಣ್ಣುಮಗಳೊಬ್ಬಳಿಗೆ ಮದುವೆ ಬಂಧನವಾಗಿತ್ತು.. ಆಕೆ ನರಳಿ ನರಳಿ ನಡುಗಿಹೋಗಿದ್ದಳು.. ಆಕೆಯ ಆ ನರಳಾಟ ನನಗೆ ಅರ್ಥವಾಗೋದಲ್ಲ.. ಹಾಗಾಗಿ ಅವಳ ಕಥೆ ಕೇಳಿದಾಗ ಕಣ್ಣುತುಂಬಿಬರಲಿಲ್ಲ.. ಆದ್ರೆ ಅವಳು ನನ್ನ ಕೈಲಿಟ್ಟ ಆಡಿಯೋ ಟ್ರಾಕ್ ಅಳುಬರಿಸಿಬಿಟ್ಟಿತ್ತು.. ನಾನರಿಯದ ಅದೆಷ್ಟೋ ಸಂಘತಿಗಳು ಅದರಲ್ಲಿದ್ದವು.. ಅವಳು ಇವನಿಗೆ ಹೆದರೇ ಓಡಿಹೋಗಿರಬೇಕು.. ಅವನೊಬ್ಬ ಸೈಕೋ.. 
 ಅವನ ಇಡೀ ಕಥೆ ಇನ್ಯಾವತ್ತಾದ್ರೂ ಸಮಯ ಕೂಡಿ ಬಂದಾಗ ಹೇಳ್ತೀನಿ..  


No comments:

Post a Comment