Wednesday, April 20, 2011

ಜಪಾನ್ ನಿನಗಿದೋ ಸಲಾಮ್..!



                                   ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಐವರು ಬೈಕ್ ಕಳ್ಳರನ್ನ ಹಿಡ್ಕೊಂಬಂದ್ರು.. ಅವರೆಲ್ಲಾ ಫಿಲ್ಮೀ ದುನಿಯಾದವರು.. ಅಲ್ಲಿ ಬದುಕೋದಕ್ಕೆ ಸಾಕಾಗೋಷ್ಟು ಸಂಪಾಧನೆ ಇಲ್ಲಾ ಅಂತ ಕಳ್ಳತನಕ್ಕಿಳಿದ್ರಂತೆ.. ಕದಿಯೋದು ಅವರ ಪಾರ್ಟ್ ಟೈಮ್ ಕೆಲಸ.. ಕದ್ದಿರೋ ವೇಗ ಸಂಖ್ಯೆಗಳನ್ನೆಲ್ಲಾ ನೋಡ್ಬಿಟ್ರೆ ಗಾಂಧಿನಗರಾನೇ ಪಾಟರ್್ ಟೈಮ್ ಅಡ್ಡೆ ಏನೋ ಅನ್ಸತ್ತೆ.. ಇವರ ಬಗ್ಗೆ ಕೇಳಿದಾಗ  ನನಗೆ ಥಟ್ ಅಂತ ನೆನಪಾಗಿದ್ದು ಜಪಾನ್..!

 ಮಾಚರ್್ ಹನ್ನೊಂದರ ಬೆಳಿಗ್ಗೆ ಸುನಾಮಿ ಎಬ್ಬಿಸಿದ ಅಬ್ಬರವನ್ನ ಟಿವಿಗಳಲ್ಲಿ ನೋಡಿದಾಗ ನಿಜಕ್ಕೂ ನಡುಕ ಹುಟ್ಟಿತ್ತು.. ನಾನು,ನನ್ನ ತಲೆಯ ಮೇಲೆ ಮತ್ತೆ ನಾನು ನಮ್ಮ ಮನೆಯ ಮಾಡು ಪಕ್ಕದಲ್ಲೇ ಇರೋ ಮರ ಉಹು ಯಾವುದಕ್ಕೂ ಆ ಅಲೆಯ ಎತ್ತರ ಇದೆ ಅಂತ ಅನ್ನಿಸಲೇ ಇಲ್ಲಾ.. ಕಥೆಯಲ್ಲಿ ಬರೋ ರಾಕ್ಷಸನಿಗೂ ಕತೆಗಾರನಿಂದ ಅಂಥದ್ದೊಂದು ಧೈತ್ಯ ರೂಪ ಕೊಡೋದಕ್ಕೆ ಸಾಧ್ಯವಾಗ್ಲಿಲ್ಲಾ.. ಇನ್ನು ಸಮುದ್ರವನ್ನೇ ಕಡೆದಾಗ್ಲೂ ನೀರು ಸರಿದು ಸೃಷ್ಟಿಸಿದ ಅವಘಡಗಳ ಬಗ್ಗೆ ಉಲ್ಲೇಖವೇ ಇಲ್ಲಾ.. ಅಂದ್ರೆ ಸುನಾಮಿ ಅನ್ನೋದು ಇತಿಹಾಸ ಕಾರರ ಕಲ್ಪನೆಗೆ ನಿಲುಕಿದ್ದಲ್ಲಾ..! ನಮ್ಮ ಕಣ್ಣಮುಂದಿದೆ.. ಮುಂದೆ ಇತಿಹಾಸವಾಗತ್ತೆ.. ಆ ದುರಂತ ಇತಿಹಾಸದಲ್ಲೂ ಅದೆಷ್ಟು ವಿಧಗಳಾಗತ್ವೋ .. ವಿಭಿನ್ನತೆಗಳಿರತ್ವೋ.. ಉಳಿದೆಲ್ಲಾ ದೇಶಗಳಿಗಿಂತ ಜಪಾನ್ ಮಾತ್ರ ಬೇರೆಯದೇ ಇತಿಹಾಸ ನಿಮರ್ಿಸತ್ತೆ ಅನ್ನೋದ್ರಲ್ಲಿ ಬೇರೆ ಮಾತೇ ಇಲ್ಲಾ..

 ಸುನಾಮಿಯನ್ನ ನಾವೂ ನೋಡಿದ್ದೇವೇ ಅವರೂ ನೋಡಿದ್ದಾರೆ.. ಆದ್ರೆ ಪ್ರತಿಯೊಬ್ಬರೂ ನೋಡಿದ ರೀತಿನೇ ಬೇರೆ.. ಸಾವುನೋವುಗಳನ್ನ ತಗೊಂಡ ಥರಾನೇ ಬೇರೆ.. ಅಪ್ಕೋರ್ಸ್ ನಾವೇ ಬೇರೆ ಜಪಾನ್ ಅನ್ನೋ ಪುಟ್ಟ ದೇಶದಲ್ಲಿ ಮತ್ತೆ ಮತ್ತೆ ಸತ್ತರೂ ಜೀವಂತವಾಗುವ ಬದುಕಿನ ಶಕ್ತಿಯೇ ಬೇರೆ..!

ಮನೆ ಸಂಸಾರ ಸಂಪಾದನೆ ಕಡೆಗೆ ಕೆಲಸಾ ಇವಿಷ್ಟು ಕಳೆದೋದ್ರೆ ಸರ್ವಸ್ವಾನೂ ಹೋಯ್ತು ಅಂತೀವಿ.. ಅದಷ್ಟೂ ಕಳಕೋಬೇಕು ಅಂತಿಲ್ಲಾ ಅದರಲ್ಲಿ ಯಾವುದೋ ಒಂದು ಹೋದ್ರೂ ಸರ್ವಸ್ವಾನೇ ಹೋದ ಥರಾ ಅನ್ಸತ್ತೆ .. ಕಣ್ಣೀರು.. ಅದರಲ್ಲೂ ಹೆಣ್ಣುಮಕ್ಕಳಿಗೆ ಕಳಕೊಳ್ಳೋದಕ್ಕೆ ಶೀಲ ಅನ್ನೋ ಇನ್ನೊಂದು ಬುಲ್ಶಿಟ್..! ಒಟ್ಟಲ್ಲಿ ಬರೋ ಸಣ್ಣ ಪುಟ್ಟ ದುಃಖಗಳೂ ನಮಗೆ ದೊಡ್ಡದಾಗಿ ಕಾಣಿಸತ್ವೆ.. ನಾವು ಬದುಕಿದ್ದೇವೆ ಅಂದ್ರೆ ನಮ್ಮ ಪಯಣ ಮುಗಿದಿಲ್ಲಾ ಅನ್ನೋದೇ ಮರೆತುಹೋಗತ್ತೆ.. ಆದ್ರೆ ನಾನೇ ಇಲ್ಲಿರೋವಾಗ ನನ್ನ ಹೊರತಾಗಿ ಎಲ್ಲವನ್ನೂ ಅದ್ಹೇಗೆ ಸರ್ವಸ್ವ ಅನ್ನೋದಕ್ಕಾಗತ್ತೆ..? ಇಂಥದ್ದೊಂದು ಪ್ರಶ್ನೆ ನನಗೆ ಎದ್ದಿದ್ದು ಒಬ್ಬ ಜಪಾನಿಗನ ಈ ಮಾತಿಂದ " ಭೂಕಂಪ ಬೂಮಿಯನ್ನ ಅಲ್ಲಾಡಿಸಬಹುದು ಬದುಕೋ ಉತ್ಸಾಹವನ್ನಲ್ಲಾ.. ಸುನಾಮಿ ಸುತ್ತಲೂ ಇರುವುದನ್ನ ಕೊಚ್ಚಿಕೊಂಡು ಹೋಗಿರಬಹುದು ಆದ್ರೆ ಬದುಕೋ ಛಲವನ್ನಲ್ಲಾ.. ನಮ್ಮ ಊರನ್ನ ನಾವು ಮತ್ತೆ ಕಟ್ಟಿಕೊಳ್ಳೋಣಾ" ಅವನ ಹಾಗೆ, ಕಳೆದುಕೊಂಡ ದುಃಖಕ್ಕಿಂತ ಯಾರ್ಯಾರೋ ನಮ್ಮವರಾಗಿ ಎಲ್ಲರೂ ಒಂದಾಗಿ ಕಟ್ಟುವ ಖುಶಿ ದೊಡ್ಡದು ಅಂತ ನಮಗ್ಯಾಕೆ ಅನ್ನಿಸಲ್ಲಾ..?

ಸುನಾಮಿ ಅರೆಬರೆ ನೆಲಸಮ ಮಾಡಿದ ಜಪಾನಿನ ಉರೊಂದರಲ್ಲಿ,ಅಳಿದು ಉಳಿದ ಅಂಗಡಿಯ ಮುಂಗಟ್ಟಿನ ಮೇಲೆ ಯಾರೋ ಬಂದು ನಮ್ಮ ಊರನ್ನ ಮತ್ತೆ ಕಟ್ತಾರೆ ಅಂತ ಕಾಯೋದಕ್ಕಿಂತ ನಾವೇ ಅದನ್ನ ಮತ್ತೆ ನಿರ್ಮಿಸೋಣ.. ಇನ್ನಷ್ಟು ಚಂದವಾಗಿ.. ಆ ಸುನಾಮಿಯಂತ ಸುನಾಮಿನೇ ನಾಚುವ ಹಾಗೆ ಅಂತ ಬರೆದಿದ್ನಂತೆ..  ದುಃಖ ಉಮ್ಮಳಿಸಿದಾಗ ಭಗವದ್ಗೀತೆಯನ್ನ ಹಿಡಿದು ಅದರ ಯಾವ ಸಾಲುಗಳನ್ನೂ ಸರಿಯಾಗಿ ಅಥರ್ೈಸಿಕೊಳ್ಳದೆ ಮತ್ತೆ ಹುಟ್ಟಿಬರೋ ಕೃಷ್ಣನಿಗಾಗಿ ಕಾಯ್ತೀವಲ್ಲಾ ನಾವು...! ನಮ್ಮನ್ನ ಆ ಜಪಾನಿಗರಿಗೆ ಹೋಲಿಸಿಕೊಳ್ಳೋದಕ್ಕಾದ್ರೂ ಆಗತ್ತಾ..?

ಆ ಪುಟ್ಟ ದೇಶಕ್ಕೆ ಅದೆಷ್ಟು ಶಕ್ತಿ ಇದೆಯೋ ಏನೋ ನೋಡಿ.. ಮೊದಲು ಭೂಕಂಪ ನಂತರ ಸುನಾಮಿ ಆನಂತರ ಹಿಮಪಾತ ಅಷ್ಟಾದ್ಮೇಲೆ ನ್ಯೂಕ್ಲಿಯರ್ ರಿಯಾಕ್ಟರ್ಗಳ ಸ್ಫೋಟ್.. ಒಂದರ ನಂತ್ರಾ ಒಂದು ಸುಲಭವಾಗಿ ಭರಿಸಲಾಗದ ದುರಂತಗಳೆ.. ಆದ್ರೂ ಜಪಾನ್ ಭರಿಸತ್ತೆ.. ಹಾಗಂತ ಇಕನಾಮಿಕಲಿ ಜಪಾನ್ ತೀರಾನೇ ಬಲಿಷ್ಠವಾಗಿಯೇನೂ ಉಳಿದಿಲ್ಲಾ.. ರಾಜಕೀಯದ ರಗಳೆಗಳು ಅಲ್ಲೂ ಇವೆ.. ಅಧಿಕಾರಿಗಳ ಕೈಗೆ ಭ್ರಷ್ಠಾಚಾರದ ಕೊಳೆ ಅಂಟಿದೆ.. ಅದೆಲ್ಲದರ ನಡುವೆನೂ ಜಪಾನಿಗ ಸೋತಿಲ್ಲಾ.. ದೇಶದ ಮೇಲಿನ ಪ್ರೀತಿ ಕಡಿಮೆ ಆಗಿಲ್ಲಾ.. ಒಬ್ಬನೇ ಒಬ್ಬ ನಾನ್ಯಾಕಾದ್ರೂ ಈ ದೇಶದಲ್ಲಿ ಹುಟ್ಟಿದ್ನಪ್ಪಾ ಅಂತ ಕೊರಗಿದವನು ಕಾಣಿಸ್ಲಿಲ್ಲಾ..! ನಮ್ಮಲ್ಲಿ ಯಾಕಾದ್ರೂ ಹುಡುಗಿಯಾಗಿ ಹುಟ್ಟಿದ್ನಪ್ಪಾ ಅನ್ನೋದ್ರಿಂದ ನೋವು ಶುರುವಾಗ್ಬಿಡತ್ತೆ.. ಯಾಕ್ ಹೀಗೆ..?

ನಾವು ಹೋರಾಡಿ ಸ್ವಾತಂತ್ರ್ಯಗಳಿಸಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಜಪಾನಿನ ಮೆಲೆ ಅಣುಬಾಂಬ್ ದಾಳಿಯಾದಷ್ಟೇ ವರ್ಷಗಳಾಗಿವೆ.... ನಾವು ಬ್ರಿಟೀಶರು ಕೊಳ್ಳೆ ಹೊಡೆದ ನಂತರ ಅಳಿದುಳಿದ ಸಂಪತ್ತುಗಳಲ್ಲಿ ಸುಂದರ ದೇಶವನ್ನ ಕಟ್ಟಬೇಕಿದೆ ಅಂತ ನೋವಿನಲ್ಲಿ ಮಾತಾಡಿದ್ವಿ.. ಬೂದಿಯಾದ ಜಪಾನು.. ಉಸಿರೇ ಇಲ್ಲದ ಅರೆಜೀವಗಳನ್ನ ಇಟ್ಕೊಂಡು , ಬಸಿರಿನಲ್ಲೂ ಬರಸಿಡಿಲನ್ನ ಹೊತ್ಕೊಂಡು ಸಮಸ್ತ ವಿಶ್ವವೂ ಬೆರಗಾಗೋ ಥರಾ ಮೈ ಕೊಡವಿ ಎದ್ದದ್ದು ನಮಗ್ಯಾಕೆ ಕಾಣಿಸಲಿಲ್ಲಾ..?

ಬದಲಾವಣೆ ಅನ್ನೋದು ದಿಡೀರ್ ಅಂತ ಆಗ್ಬಿಡಲ್ಲಾ.. ಅದಕ್ಕೆ ಟೈಮ್ ಬೇಕು..? ಎಷ್ಟು ಬೇಕು ತಿಂಗಳು.. ಉಹು .. ವರ್ಷ.. ಉಹು ಹತ್ತು ವರ್ಷ...! ಅದೆಷ್ಟು ಪಂಚವಾಷರ್ಿಕ ಯೋಜನೆಗಳು ನಮ್ಮಲ್ಲಿ ಯೋಜನೆಯಾಗೇ ಉಳಿದಿಲ್ಲಾ ಹೇಳಿ.. ? ಜಪಾನಿನ ಬಹುಭಾಗವನ್ನ ಸುನಾಮಿ ನುಂಗ್ಹಾಕಿ ತಿಂಗಳು ಕಳೆದಿಲ್ಲಾ ಆಗ್ಲೇ ಕಣ್ಣಲ್ಲಿ ಆಶ್ಚರ್ಯದ ಬೆಳಕು ಮೂಡುವಷ್ಟು ಬದಲಾವಣೆ ಆಗಿದೆ.. ಇದೇನಾ ಷಾ0ಡಾಯ್..? ಇದೇನಾ ಷಿಯಾಗಾಮ್..? ಅಂಥ ಗುರುತಿಸಲಾಗದ ಬದಲಾವಣೆಗಳು ಆ ವೇಗದಲ್ಲಿ ಯಾವತ್ತಾದ್ರೂ ನಮ್ಮಲ್ಲಾಗಿವೆಯಾ..?

ಆಗಲ್ಲಾರಿ ಜಪಾನಿಗೆ, ಜಪಾನಿಗರಿಗೆ ನಮ್ಮನ್ನ ನಾವು ಹೋಲಿಸಿಕೊಳ್ಳೋದಕ್ಕೇ ಆಗಲ್ಲಾ.. ಅಲ್ಲಿ ಆದಷ್ಟು ದುರಂತಗಳು ಎಲ್ಲೂ ಆಗಿಲ್ವೇನೋ.. ಆದ್ರೆ ಎಲ್ಲವೂ ಪ್ರಕೃತಿ ಸೃಷ್ಟಿಸಿದ್ದು ಪರರು ಸೃಷ್ಟಿಸಿದ್ದು.. ಇಷ್ಟು ದೊಡ್ಡ ಸುನಾಮಿಯಾಗಿ ಚೆಲ್ಲಾಪಿಲ್ಲಿಯಾಗಿಸಿಹೋದಾಗ್ಲೂ ಸಿಕ್ಕಿದ್ದನ್ನ ಬರಗಿದ ಜನರಿಲ್ಲಾ.. ಕದ್ದ ಒ0ದೇ ಒಂದು ಕೇಸಿಲ್ಲಾ.. ಇನ್ನು ಅತ್ಯಾಚಾರ ಕೊಲೆಗಳೆಲ್ಲಾ ಒತ್ತಟ್ಟಿಗಿರ್ಲಿ.. ನಿರಾಶ್ರಿತ ಶಿಭಿರಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಕೂತ ಜನಾ ಕೂಡಾ ಬದುಕಿಗಲ್ಲಾ ಕಡೆಗೆ ಯಾರಿಂದಲೂ ಸಹಿಸಲಾಗದ ಹಸಿವಿಗೂ ಹೆದರಲಿಲ್ಲಾ.. ಅಲ್ಲಿ ಊಟದ ಪೊಟ್ಟಣಕ್ಕೆ ನೂಕು ನುಗ್ಗಲಾಗಲಿಲ್ಲಾ.. ಆದ್ರೆ ನಮ್ಮ ದೇಶದಲ್ಲಿ ಇದನ್ನ ಉಹಿಸೋದಕ್ಕಾದ್ರೂ ಆಗತ್ತಾ..? ದುಡಿವ ಸಂಪಾದನೆ ಬದುಕೋದಕ್ಕೆ ಸಾಕಾಗಲ್ಲಾ ಅಂತ ಕಳ್ಳತನಕ್ಕಿಳಿಯೋರು,  ಐಶಾರಾಮಿಯಾಗಿ ಬದುಕಬೇಕು ಅಂತ ಮರ್ಡರ್ ಮಾಡೋರು, ಹಿಡಿ ಜಾಗಕ್ಕಾಗಿ ಹುಟ್ಟಿನೊಂದಿಗೆ ಬಂದ ಸಂಬಂಧವನ್ನೇ ಮರೆಯೋ ಜನರೇ ಹೆಚ್ಚಿರೋ ನಮ್ಮ ದೇಶಕ್ಕೆ ಜಪಾನ್ ಹೋಲಿಕೆ ಆಗತ್ತಾ..?

ದೊಡ್ಡ ಗೊಂದಲ ಎದ್ದಿದೆ.. ಯಾಕೆ ನಾವು ಹಾಗಿಲ್ಲಾ..? ನಮ್ಮಲ್ಲೇಕೆ ಜಪಾನಿಗರಂತಾ ಸ್ವಾಭಿಮಾನವಿಲ್ಲಾ..? ಬದುಕುವ ಶಕ್ತಿ ಇಲ್ಲಾ..?  ದೇಶಭಕ್ತಿ ಇಲ್ಲಾ ? ಛಲವಿಲ್ಲಾ ? ಬಲವಿಲ್ಲಾ..? ಕಿಚ್ಚಿಲ್ಲಾ..? ಕನಸಿಲ್ಲಾ..? ಮನಸಿಲ್ಲಾ..? ನಾವು ಅವರಂತಾಗಲು ಸಾಧ್ಯವೇ ಇಲ್ವಾ..? ಸಮಸ್ಯೆ ಎಲ್ಲಿದೆ..? ಹುಟ್ಟಿದ ನೆಲದಲ್ಲಿದ್ಯಾ..? ಬೆಳೆದ ಪರಿಸರದಲ್ಲಿದ್ಯಾ..? ಉಸಿರಾಡೋ ಗಾಳಿಯಲ್ಲಿದ್ಯಾ..? ತಿನ್ನೋ ಅನ್ನದಲ್ಲಿದ್ಯಾ ? ಕಲಿವ ಪಾಠದಲ್ಲಿದ್ಯಾ ? ಎಲ್ಲೂ ಇಲ್ಲಾ ನಮ್ಮಲ್ಲಿದೆ.. ನಮ್ಮ ಯೋಚನಾ ಶಕ್ತಿಯಲ್ಲಿದೆ ಅಂತ ಅಂದುಬಿಡಬಹುದು.. ಹಾಗಾದ್ರೆ ನಮ್ಮ ಯೋಚನೆಗಳಲ್ಲೂ ಯಾಕಿಂತ ಅಧಃಪತನ..? ನಮ್ಮಲ್ಲಿರೋ ಸಮಸ್ಯೆಗೆ ಕಾರಣ ಹುಡುಕಬೆಕಾ..? ನಾವು ಬದಲಾಗುವ ದಾರಿ ಕಂಡುಕೊಳ್ಳಬೇಕಾ..? ಒಂದಕ್ಕೊಂದು ನಾಣ್ಯದ ಎರಡುಮುಖಗಳು.. ಒಟ್ಟಲ್ಲಿ ಬದಲಾವಣೆ ಬೇಕೇ ಬೇಕು.. ಜಪಾನ್ ಆದರ್ಶವಾದರೆ ಸಾಕು..!
 

1 comment:

 1. Sinchana,
  tumba chennagi baritira,
  Namma desha ivattu suhdarisatte, naale sudhaarisatte anta naavu ankobeku
  elli tanaka politicians irtaro alli tanaka desha haagene
  wonderful article

  ReplyDelete