Saturday, September 10, 2011

ಲೈಫ್ ಇಷ್ಟೇನಾ..?


                     ಮೊನ್ನೆ ನಾವು  ಮಾತಾಡೋವಾಗ ಎಕ್ಸ್ಪೈರೀ ಡೇಟ್ ಬಗ್ಗೆ ಹೇಳ್ತಾ ಇದ್ರು.. ಯಾಕೋ ಅದು ನನ್ನ ಕಿವಿಯಲ್ಲಿ ಗುಯ್ಗುಡ್ತಾನೇ ಇತ್ತು.. ಮಾತು ಮುಗಿಸಿ ಎದ್ದ ಮೇಲೆ ನನ್ನ ತಲೆ ಎಲ್ಲಿಂದ ಎಲ್ಲಿಗೋ ಓಡ್ತಾ ಇತ್ತು.. ಎಲ್ಲದಕ್ಕೂ ಒಂದು ಎಕ್ಸ್ಪೈರಿ ಡೇಟ್ ಇದ್ದೇ ಇರತ್ತಾ.?ಕೇಳಿದ್ದೆ. ಯೆಸ್ ನಾನಂತೂ ಏನ್ ತಗೊಂಡ್ರೂ ಮೊದ್ಲು ನೋಡೋದು ಎಕ್ಸ್ಪೈರಿ ಡೇಟನ್ನಾ ಅಂತ ಯಾರೋ ಅಂದ್ರು.. ಇನ್ನೊಬ್ಬರು ಗುಡ್ ಹೆಬಿಟ್ ಅಂತ ಬೆನ್ನುಚಪ್ಪರಿಸಿದ್ರು.. ನನಗೆ ಮಾತ್ರ ಉತ್ತರ ಸಿಗಲಿಲ್ಲ..

ಹೊಟ್ಟೆಗೆ ಹಾಕೋ ತಿಂಡಿ ತಿನಿಸುಗಳ ಎಕ್ಸಪೈರಿ ಡೇಟ್ ನೋಡ್ತೀವೋ ಇಲ್ವೋ ಮೈಗೆ ಹಚ್ಚೋ ಲೋಶನ್ನಿಂದ ಹಿಡಿದು ಕೂದಲ ಬಣ್ಣದ ತನಕ ಎಲ್ಲದರ ಅವಧಿ ಯಾವತ್ತು ಮುಗಿಯತ್ತೆ ಅನ್ನೋದನ್ನ ಎಲ್ಲರೂ ನೋಡ್ಕೊಂಡೇ ನೋಡ್ಕೋತಾರೆ.. ನಮಗೆಲ್ಲಾ ಚಂದ ಇಂಪಾರ್ಟೆಂಟು.. ಹೊರಗಿನಿಂದ ಬಳ್ಕೊಳ್ಳೋ ಬಣ್ಣ ಇಂಪಾರ್ಟೆಂಟು.. ನಾವು..? ನಮ್ಮ ಬದುಕು..? ನಮ್ಮ ಎಕ್ಸ್ಪೈರಿ ಡೇಟ್ ಬಗ್ಗೆ ನಾವ್ಯಾವತ್ತಾದ್ರೂ ಯೋಚಿಸಿದೀವಾ?  ಅಪ್ಕೋರ್ಸ್ ತಮಗೆ ವಯಸ್ಸಾಗ್ತಿದೆ.. ಜಾಸ್ತಿ ಅಂದ್ರೆ ಇನ್ನಿಷ್ಟು ವರ್ಷ ನಾವ್ ಕೆಲಸಾ ಮಾಡ್ಬಹುದು.. ಅಂತೆಲ್ಲಾ ಕೆಲವರು ಯೋಚಿಸಿರ್ತಾರೆ.. ಹೀಗೆ ಮುಂದಾಲೋಚನೆ ಇರೋರು ಬ್ಯಾಂಕ್ಗಳನ್ನ ಬೆಳೆಸ್ತಾರೆ.. ಒಂದಿಷ್ಟು ಸೇವಿಂಗ್ ಅಂತೂ ಆಗೇ ಆಗತ್ತೆ ಬಿಡಿ.. ಆದ್ರೆ ನಮ್ಮ ಎಕ್ಸ್ಪೈರಿ ಡೇಟ್ಗಳನ್ನ ನಿರ್ಧರಿಸೋದ್ಹೇಗೆ..?

ರಾತ್ರಿ ನಿದ್ದೆನೇ ಬರ್ತಿಲ್ಲಾ.. ಯಾಕೋ ಊಟಾನೂ ಅಷ್ಟಾಗಿ ಸೇರಲ್ಲ.. ಕಣ್ಣು ಮಂಜಾಗ್ತಿದೆ.. ಓಡಾಡೋದಕ್ಕೂ ಮೈಲಿ ಶಕ್ತಿನೇ ಇಲ್ಲಾ ..ಇನ್ನು ನಾನು ಜಾಸ್ತಿ ದಿನ ಇರ್ಲಿಕ್ಕಿಲ್ಲಾ ಅಂತ ಹಾಸಿಗೆ ಹಿಡಿದ ಅಜ್ಜಿಗೆ ಅನ್ನಿಸತ್ತೆ.. ಆದ್ರೆ ಆಕೆ ವರ್ಷಗಳಿಂದ ಅದೇ ಸ್ಥಿತಿಯಲ್ಲಿ ಮಲಗಿರ್ತಾಳೆ.. ಅದನ್ನ ಎಕ್ಸ್ಪೈರಿ ಡೇಟ್ ಮುಗಿದ್ಮೇಲೂ ಯೂಸಲ್ಲಿರೋದಕ್ಕೆ ಹೋಲಿಸಬಹು ಅಲ್ವಾ..? ಇನ್ನೊಬ್ಬರಿಗೆ ಡಿಪೆಂಡ್ ಆಗದೆ ಬದುಕಿದ ಕೊನೆಯ ದಿನವನ್ನ ಮನುಷ್ಯರ ಶೆಲ್ಪ್ ಲೈಫ್ ಅನ್ನೋಣಾ.. ಹಾಗಾದ್ರೆ ಭಾವನೆಗಳು ? ಸಂಬಂಧ..? ಅದಕ್ಕೆಲ್ಲಾ ಇಷ್ಟು ಲೈಫ್ ಅಂತಾ ಇಲ್ವಾ...? ಇದೆಯಪ್ಪಾ ನಮ್ಮಿಬ್ಬರ ಪ್ರೀತಿ ಎಕ್ಸ್ಪೈರ್ ಆಗ್ಲಿಲ್ವಾ? ಅಂತ ಕೈ ಕೊಟ್ಟ ಹುಡುಗಿ ನಗ್ ನಗ್ತಾ ಹೇಳ್ತಾಳೆ.. ಹುಡುಗ ಇನ್ನೂ ಎಕ್ಸ್ಪೈರ್ ಆದ ಪ್ರೀತಿಯ ಟಾನಿಕ್ಕನ್ನ ತಗೋತಾ ಗಡ್ಡ ಬೆಳೆಸಿಕೊಂಡಿರ್ತಾನೆ..


ಪ್ರೇಮಿಗಳಲ್ಲಿ ಪ್ರೀತಿ ನಾನಾ ಕಾರಣಕ್ಕೆ ಎಕ್ಸ್ಪೈರ್ ಆಗ್ಬಹುದು.. ಮನೆಯಲ್ಲಿ ಒಪ್ಪಿಗೆ ಇಲ್ಲದೆ ಇರ್ಬಹುದು.. ಅಥವಾ ಅವರದು ಟೈಮ್ ಪಾಸ್ ರಿಲೇಶನ್ನೇ ಆಗಿರ್ಬಹುದು.. ಇಲ್ಲಾ ಹುಡುಗನ ಜೇಬು ಕಾಲಿಯಾದ್ರೆ ಹುಡುಗಿಗೆ ಇವನ ಜೊತೆಗೆ ನನ್ನ ಸಂತಸ ಇಲ್ಲಾ ಅನ್ನಿಸಬಹುದು.. ಅವಳನ್ನ ಉಂಡೆದ್ದಮೇಲೆ ಇವನಿಗೆ ಅವಳು ಸಾಕು ಅನ್ನಿಸಿಬಿಡಬಹುದು.. ಆದ್ರೆ ಇದ್ಯಾವುದರ ಅಡೆತಡೆ ಇಲ್ಲದೆ ಸಾಯದೇ ಬದುಕೋ ಪ್ರೀತಿ ಮದುವೆ ಅನ್ನೋ ಬಾಂಧವ್ಯದೊಳಗೆ ಬಡವಾಗಿಬಿಡೋ ಎಷ್ಟು ಉದಾಹರಣೆಗಳಿಲ್ಲಾ..

ಹದಿಹರಯದಲ್ಲಿ ಹೆತ್ತವರನ್ನ ಬಿಟ್ಟು ಓಡಿಬಂದು ಮದುವೆಯಾಗೋ ಹುಡುಗಿಗೆ ಲೈಫು ಇಷ್ಟೇನೇ ಅಂತ ಅನ್ನಿಸೋದಕ್ಕೆ ಜಾಸ್ತಿ ದಿನ ಬೇಡಾ.. ಇನ್ನು ಹತ್ತಾರು ವರ್ಷ ಜೊತೆಗೆ ಸಂಸಾರಮಾಡಿದವರಿಗೂ ಒಂದು ಹಂತಕ್ಕೆ ಈ ಜೀವನ ಸಾಕು ಅನ್ನಿಸಿದ್ದಿದೆ.. ಯಾಕ್ ಹೀಗಾಗತ್ತೆ..? ದಾಂಪತ್ಯದಲ್ಲಿ ಎಕ್ಸ್ಪೈರಿ ಡೇಟು ಯಾವಾಗ ಹತ್ತಿರವಾಗತ್ತೆ..?
ನನಗನ್ನಿಸಿದ ಹಾಗೆ ಗಂಡಸರಿಗೆ ಸಂಸಾರ ಸಾಕು ಅನ್ನಿಸೋದು ಜವಾಬ್ದಾರಿಗಳು ಭಾರವಾದಾಗ.. ಸಂಬಂಧ ಬಂಧನವಾದಾಗ.. ಗಂಡನಿಗೆ ಮಾಡಬೇಕು ಅನ್ನಿಸಿದ್ದನ್ನೆಲ್ಲಾ ಮಡದಿಯಾದವಳು ಮಾಡೋದಕ್ಕೆ ಬಿಟ್ಟುಬಿಟ್ರೆ ಅವರಿಗೆ ಸಂಸಾರ ಕಷ್ಟ ಅನ್ನಿಸಲ್ಲಾ.. ಗಯ್ಸ್ ನೀಡ್ ಫ್ರೀಡಮ್..! ಆದ್ರೆ ಹೆಂಗಸು..? ಅವಳಿಗೆ ಗಂಡ ಕೊಡೋ ಫ್ರೀಡಮ್ಗಿಂತ ಪ್ರೀತಿಯ ಅಪ್ಪುಗೆ ಇಷ್ಟ.. ಅವನು ಅವಳಿಗಾಗಿ ಮೀಸಲಿಡೋ ಟೈಮ್ ಇಷ್ಟ.. ಅವನು ಕಾಡೋದು ಇಷ್ಟ.. ಬೇಡೋದು ಇಷ್ಟ.. ನಗಿಸೋದೂ ಇಷ್ಟ.. ಜೊತೆಗೆ ನಲಿಯೋದೂ ಇಷ್ಟ.. ಗಂಜಿನೇ ಆದ್ರು ಅದು ಅವನ ಪ್ರೀತಿಯಲಿ ಜೊತೆಯಾದ್ರೆ ಮೃಷ್ಟಾನ್ನ.. ಒಟ್ಟಲ್ಲಿ ಅವಳು ಸದಾ ಅವನ ಸಾಮಿಪ್ಯವನ್ನ ಬಯಸ್ತಾಳೆ.. ಭಾವುಕ ಜಗತ್ತನ್ನ ಬೆಳೆಸ್ತಾಳೆ.. ಅವಳು ಕಟ್ಟೋ ಭಾವನೆಯ ಗಾಳಿಗೋಪುರವನ್ನ ಇವನು ಅವಸರದಲ್ಲಿ ಒಡೆದುಬಿಡ್ತಾನೆ.. ಅವಳ ಕಣ್ಣು ಒದ್ದೆಯಾಗತ್ತೆ.. ಅದು ಇವನಿಗೆ ಕಾಣಿಸೋದೇ ಇಲ್ಲಾ.. ಕಂಡರೂ ಕಣ್ಣರೆಪ್ಪೆಯ ಮೇಲೆ ಒಂದು ಹೂ ಮುತ್ತು.. ಅಲ್ಲಿಗೆ ಅವಳು ಒಲಿಯ ಬೇಕು.. ನೋವನ್ನ ಮರೆಯಬೇಕು.. ಅದು ಎಷ್ಟು ಹೆಂಗಸರಿಂದ ಆಗತ್ತೋ ಅಷ್ಟು ಜನರ ಫ್ಯಾಮಿಲಿಗೆ  ಎಕ್ಸಪೈರೇಶನ್ ಡೇಟ್ ತುಂಬಾ ಲೇಟಾಗಿ ಬರಬಹುದು..

ಇವತ್ತು ಹುಡುಗಿ ಕೂಡಾ ಗಂಡಸಿಗೆ ಸಮನಾಗಿ ದುಡೀತಾಳೆ.. ಅವನ ಥರಾನೇ ವರ್ಕೋಹಾಲಿಕ್ ಇರ್ತಾಳೆ ಅಂದ್ಕೊಳ್ಳಿ, ಅಲ್ಲಿಗೆ ಸಮಸ್ಯೆ ಬರಲ್ವಾ..? ಗಂಡಿಗೆ ಬಯಸಿದಾಗ ಬಯಸಿದ್ದು ಬೇಕು.. ಅವನು ಒಂದಿನ ಬೇಗ ಆಫೀಸಿನಿಂದ ಬಂದ್ರೆ ಕಾಫಿ ಕೊಡೋದಕ್ಕೆ ಹೆಂಡತಿ ಇರ್ಬೇಕಿತ್ತು ಅನ್ಸತ್ತೆ.. ಹೋಗ್ಲಿ ಅದಕ್ಕೆ ಕಾಂಪ್ರಮೈಸ್ ಆಗ್ಬಿಡೋಣಾ.. ಹೆಂಡತಿಯ ದುಡಿಮೆ ಆಕೆಯ ಸ್ಥಾನ ಮಾನಗಳೆಲ್ಲಾ ಒಂದು ಹಂತಕ್ಕೆ ಹುಡುಗನಿಗೆ ಹೆಮ್ಮೆ ಅನ್ನಿಸಬಹುದು..ಆದ್ರೆ ಅದು ಅವನನ್ನ ಮೀರಿ ನಿಂತರೆ ಅಸಮಾಧಾನ.. ಇನ್ನು ಗಂಡಾ ಹೆಂಡತಿ ಇಬ್ಬರೂ ದುಡಿಯೋ ಫ್ಯಾಮಿಲಿಗಳಲ್ಲಿ ಮನೆಕೆಲಸಕ್ಕೆ ಕೆಲಸದವರಿದ್ದರೆ ಸರಿ, ಇಲ್ಲಾ ಅಂದ್ರೆ ಮನೆಯಲ್ಲಿ ಅತ್ತೆ ಮಾವಾ ಇದ್ರೂ ಗಂಡಾ ಹೆಂಡತಿಗೆ ಕೆಲಸದ ವಿಷಯದಲ್ಲಿ ಜಗಳ ಗ್ಯಾರಂಟಿ..

ಜಗಳಾ ಅನ್ನೋದು ಯಾರ್ ಫ್ಯಾಮಿಲಿಲಿ ಇರಲ್ಲಾ ಹೇಳಿ.. ಹಗಲೆಲ್ಲಾ ಹೊಡೆದಾಡಿದ್ರೂ ರಾತ್ರಿ ರಮಿಸಿ ಭ್ರಮಿಸಿ ಒಂದಾಗಿಬಿಟ್ರೆ ಮುಗಿದೋಗತ್ತೆ..ಆದ್ರೆ ಅದು ಮಂಚ ಕೈ ಬೀಸಿ ಕರೆಯೋವರೆಗೂ ಸರಿ.. ಒಂದು ಹಂತಕ್ಕೆ ಅವರಿಗೆ ಸಾಕು ಅನ್ನಿಸಿಬಿಟ್ರೆ.. ಗಂಡಸಿಗೆ ಅವಶ್ಯಕಥೆ ಇಲ್ಲದೆ ರಮಿಸೋದಕ್ಕೆ ಬರತ್ತಾ..? ಅವಳಿಗೆ ಸಂತಸದ ಭ್ರಮೆಯಲ್ಲಿ ಬದುಕೋದಕ್ಕೆ ಬರತ್ತಾ..? ಆಗ ಸಂಬಂಧ ಹಳಸಲಾಗತ್ತೆ.. ಯಾವತ್ತು ಗಂಡಾ ಹೆಂಡತಿ ಮಕ್ಕಳಿಗಾಗಿ ಹಿರಿಯರಿಗಾಗಿ ಮತ್ಯಾರಿಗೋ ಆಗಿ ಅಥವಾ ಅನಿವಾರ್ಯ ಅಂತ ಜೊತೆಗಿದೀವಿ ಅಂದ್ಕೋತಾರೋ ಅಲ್ಲಿಗೆ ಆ ಸಂಸಾರದ ಶೆಲ್ಪ್ ಲೈಪ್ ಮುಗೀತು ಅಂತಾನೇ..

ಬದುಕಿಗೆ ಎಕ್ಸ್ಪೈರಿ ಡೇಟಿದೆ.. ಸಂಭಂಧಕ್ಕಿದೆ.. ಆದ್ರೆ ಭಾವನೆಗಳಿಗೆ ಇಲ್ಲಾ ಅಲ್ವಾ..? ಅದು ಸಾಯೋ ಸ್ಥಿತಿಯಲ್ಲೂ ಬದುಕಿಬಿಡಬಹುದು.. ಬದಲಾಗ್ಬಹುದು.. ಇನ್ನಷ್ಟು ಮತ್ತಷ್ಟು ಸುಂದರವಾಗೋದಕ್ಕೆ ಯಾವ ಮಿತಿನೂ ಇಲ್ಲ.. ಇನ್ನು  ಎಕ್ಸ್ಪೈರಿ ಡೇಟ್ ಬಗ್ಗೆ ಯೋಚಿಸಲೇ ಬೇಕಾದ ಇನ್ನೊಂದು ಸಂಗತಿ ನಮ್ಮ ದಿನನಿತ್ಯದ ಬದುಕಲ್ಲಿದೆ.. ಅದು ನಮಗೆ ಅನ್ನ ಕೊಡೊ ಕೆಲಸಾ.. ಅದರಲ್ಲಿ ಒಂದಿಷ್ಟು ತೃಪ್ತಿ ಸಾಧನೆಯ ಖುಶಿ ಇರಬೇಕಲ್ವಾ..? ಅದು ದಿನ ದಿನ ಸಿಗಬೇಕು.. ಅದಕ್ಕೆ ನಾವೂ ಕ್ರಿಯೇಟೀವ್ ಆಗ್ಬೇಕು.. ಕೆಲಸದಲ್ಲಿ ಹೊಸತನ ಕಾಣ್ಬೇಕು..  ಯಾವ ಕೆಲಸಾನೂ ಬೇಸರಪಟ್ಟಿಕೊಳ್ಳೋಷ್ಟು ಕೆಟ್ಟದ್ದಾಗೋದಕ್ಕೆ ಯಾವತ್ತಿಗೂ ಚಾನ್ಸಿಲ್ಲಾ..ಅದು ಮೊನೋಟನಸ್ ಆದಾಗ ಬೇಸರ ಮೊಳಕೆಯೊಡೆಯತ್ತೆ.. ಸುತ್ತಲಿನ ಪರಿಸರ ಇಷ್ಟವಾಗಿದಿದ್ದಾಗ್ಲೂ ಕೆಲಸಾ ತೃಪ್ತಿಕೊಡಲ್ಲಾ.. ಕೆಲಸದಲ್ಲಿ ತೃಪ್ತಿ ಇಲ್ಲಾ ಅಂದ್ರೆ ಅದರ ಲೈಫ್ ಮುಗಿದಹಾಗೆ.. ಆದ್ರೆ ಕೆಲಸಾ ಅನ್ನೋದು   ಯಾವತ್ತು ಬೇಕಾದ್ರೂ ಬದಲಾಗ್ಬಹುದು.. ರೂಪರೇಶೆಯನ್ನ ಬದಲಿಸಬಹುದು.. ಬದಲಾವಣೆ ಕೂಡಾ ನಮ್ಮ ಕೈಲಿದೆ.. ಹಂಗಾಗಿ ದುಡಿಮೆಯ ಎಕ್ಷಪೈರಿ ಡೇಟನ್ನ ನಾವು ಡಿಸೈಡ್ ಮಾಡ್ಬಹುದು..
ಒಟ್ಟಾರೆ ಲೈಫು ಇಷ್ಟೇನೇ ಅನ್ನಿಸಿದಾಗ ನಮ್ಮ ಎಕ್ಸ್ಪೈರಿ ಡೇಟ್ ಆಗಿದೆ ಅಂತಾ ಅರ್ಥ.. ನಂತರದ ಬದುಕು ಎಕ್ಸ್ಪೈರಿ ಆದ ಮೆಡಿಸಿನ್ ಥರಾ ಪವರ್ಕಳ್ಕೋಬಹುದು, ಯಾವ ಇಫೆಕ್ಟೂ ಇಲ್ಲದೆ ಇರಬಹುದು ಇಲ್ಲಾ ಸೈಡ್ ಇಫೆಕ್ಟು ಬದುಕನ್ನೇ ಬಲಿತಗೋಬಹುದು..
ಎಕ್ಸ್ಪೈರಿ ಡೇಟ್ ಬಗ್ಗೆ ಇಷ್ಟೆಲ್ಲಾ ಯೋಚಿಸಿದ್ಮೇಲೆ ಡಿಸೈಡ್ ಮಾಡಿದೀನಿ.. ನನ್ನ ಬದುಕಿನ ಪ್ರತಿಯೊಂದು ಎಕ್ಸ್ಪೈರಿ ಡೇಟ್ ಕೂಡಾ ನನ್ನ ನಿರ್ಧಾರದ ಮೇಲಿರ್ಬೇಕು ಅಂತ.. ನನಗೆ ಲೈಫು ಇಷ್ಟೇ ಅಂತ ಅನ್ನಿಸದಿದ್ರೆ ಸಾಕಪ್ಪಾ..! 

No comments:

Post a Comment