Friday, April 8, 2011

ಹಜಾರೆ ಆಜಾರೆ..!!

ಸಾಗಬಹುದು, ಒಂದಲ್ಲಾ ಎರಡಲ್ಲಾ ಮೈಯ್ಯಲ್ಲಿರೋ ಬಲವೆಲ್ಲಾ ನೀರಾಗೋ ವರೆಗೂ ನಡೀಬಹುದು.. ಆದ್ರೆ ದಾರಿ ಬೇಕು.. ದಾರಿದೀಪ ಬೇಕು..ಮನಸನ್ನ ಕನಸನ್ನ ಕಡೆಗೆ ನಮ್ಮನ್ನ ನಡೆಸೋ ಶಕ್ತಿ ಬೇಕು.. ಅವರನ್ನೇ ಅಲ್ವಾ ಲೀಡರ್ ಅನ್ನೋದು.. ಅವನೇ ಅಲ್ವಾ ನಿಜವಾದ ನಾಯಕ.. ಅವರೇ ಅಲ್ವಾ ಅಣ್ಣಾ ಹಜಾರೆ..

ಈಗ ಜನ್ಲೋಕ್ಪಾಲ್ ಆಂದೋಲನಾನೇ ತಗೋಳಿ.. ಭ್ರಷ್ಟರ ನಿರ್ಮೂಲನೆಗೆ ಅಣ್ಣಾ ಹಜಾರೆಯವರು ಶುರು ಮಾಡಿದ ಹೋರಾಟಾನೇ ತಗೋಳಿ..ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಾ ಇದೆ ಅಂತ ಯಾರಿಗೆ ಗೊತ್ತಿಲ್ಲಾ..? ಅದೆಷ್ಟು ಜನಾ ಅದರಿಂದ ಸಫರ್ ಆಗಿಲ್ಲಾ..! ಬ್ಯುರೋಕ್ರಸಿ ಅನ್ನೋದು ಬೇರೆ ದೇಶಗಳಲ್ಲೆಲ್ಲಾ ಬಗಲಲ್ಲಿರಬಹುದು, ಹೆಗಲಲ್ಲಿರಬಹುದು, ಆದ್ರೆ ನಮ್ಮಲ್ಲಿ ಬುಡದಲ್ಲಿದೆ.. ಉಸಿರಾಡೋ ಗಾಳಿಯಲ್ಲಿದೆ.. ಕುಡಿಯೋ ನೀರಲ್ಲಿದೆ.. ಇಡೀ ಜಗತ್ತಿನ ಕಪ್ಪು ಹಣ ಸೇರಿಸಿದರೆ ನಮ್ಮ ದೇಶದಲ್ಲಿರೋಷ್ಟು ಆಗತ್ತಂತೆ.. ಅಂದ್ರೆ ಹೇಗಿದೆ ಲೆಕ್ಕಾ ಹಾಕಿ..!

 ಇವತ್ತು ನೂರಕ್ಕೆ ಹದಿನೈದು ಜನ ಲಂಚ ಕೊಟ್ಟು ಕೆಲಸಕ್ಕೆ ಸೇರ್ಕೋತಿದಾರೆ.. ಅವರಂತೂ ಸಂಬಳಕ್ಕೆ ನಿಷ್ಠರಾಗಿರೋ ಚಾನ್ಸು ತುಂಬಾ ಕಡಿಮೆ..  ಅವರ ಜೊತೆಗೆ ಹಣಾ ತಗೊಳೋದೇ ಹವ್ಯಾಸವಾಗಿಸಿಕೊಂಡವರು, ಕೊಳ್ಳೆ ಹೊಡೆಯೋದನ್ನೇ ಕೆಲಸವಾಗಿಸಿಕೊಂಡವರು, ಸಾಲದ ಸಂಬಳಕ್ಕೆ ಗಿಂಬಳಾ ಸೇರಿಸಿ ಸಂಸಾರ ನಡೆಸೋರು.. ಎಷ್ಟು ಬೇಕು..? ಭ್ರಷ್ಟರ ದೊಡ್ಡ ದಂಡೇ ಇದೆ.. ಇವರ ನಡುವೆ ನಿಯತ್ತು ಅಂದ್ರೆ ಮನೆಲಿರೋ ನಾಯಿನೂ ನಗತ್ತೆ.. ಇದು ನಮ್ಮ ಪರಿಸ್ಥಿತಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ..

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹಂತದಲ್ಲಿ ಭ್ರಷ್ಟಾಚಾರ ಕಾಣಿಸಿದೆ.. ಅನುಭವವಾಗಿದೆ.. ಅಬ್ಬಬ್ಬಾ ಅನ್ಸಿ ಬರ್ಜರಿ ಬಾಯ್ ಮಾಡಿದ್ದೂ ಇದೆ.. ಮನೆಯವರೆಲ್ಲಾ ಕೂತು ಹರಟೋವಾಗ, ಸ್ನೇಹಿತರ ಜೊತೆ ಟೈಮ್ ಪಾಸ್ ಮಾಡೋವಾಗ ಕಡೆಗೆ ಚಾನಲ್ಗಳ ಪ್ಯಾನಲ್ ಡಿಸ್ಕಶನ್ನಲ್ಲಿ ಕೂತು ಅಬ್ಬರವಿಟ್ಟಿದ್ದೂ ಇದೆ.. ಆದ್ರೆ ನನ್ನನ್ನೂ ಸೇರಿ ಒಬ್ಬೇ ಒಬ್ಬ ಅದರ ನಿರ್ಮೂಲನೆಯ ಪಣ ತೊಟ್ಟು ಹೋರಾಟಕ್ಕೆ ನಿಲ್ಲೋ ಮನಸು ಮಾಡಿದ್ವಾ..? ಇಲ್ಲಾ..! ಕಳ್ಳರ ಸಂತೆಯಲ್ಲಿ ನಿಂತು ಒಬ್ಬ ಕೂಗಿದ್ರೆ ಯಾರಿಗೆ ಕೇಳಬೇಕು..? ಇನ್ನಷ್ಟು ಮತ್ತಷ್ಟು ದನಿಗಳು ಕೂಡಿಕೊಳ್ಳತ್ವೆ ಅನ್ನೋ ಭರವಸೆ ಆದ್ರೂ ಉಂಟೇ..? ಊಹು, ಇದೆಲ್ಲಾ ನಮ್ಮಿಂದಾಗದ ಮಾತು.. ಭ್ರಷ್ಟಾಚಾರ ಅನ್ನೋದು ನಮ್ಮದೇಶದಲ್ಲಿ ಬಡಿದೊಡೆಯೋದಕ್ಕಾಗದ ಪಿಡುಗು ಅಂತ ನಿರ್ದರಿಸಿದವರೇ ಜಾಸ್ತಿ..

ಆದ್ರೆ ಅಣ್ಣಾಜಿ.. ಅವರೊಬ್ಬರು ಹಾಗ್ ಅಂದ್ಕೊಳ್ಳಿಲ್ಲಾ.. ಭ್ರಷ್ಟಾಚಾರ ನಿರ್ಮೂಲನೆಗೆ ಅದೆಂಥಾ ಹೋರಾಟ ಮಾಡಿಬಿಟ್ರು ಅಲ್ವಾ..? ನ್ಯಾಯಮೂತರ್ಿ ಸಂತೋಶ್ ಹೆಗಡೆ ಪ್ರಶಾಂತ್ ಭೂಷಣ್ ಇವರೆಲ್ಲಾ ಸೇರಿ ಹಾಕಿದ ಡ್ರಾಪ್ಟನ್ನ ಪಾಸ್ ಮಾಡಿಸ್ಲೇಬೇಕು ಅಂತ ಬೇತಾಳನಂತೆ ಬೆನ್ನತ್ತಿಬಿಟ್ರು . ಅದರ ಫಲಾನೇ ಉಪವಾಸ ಸತ್ಯಾಗ್ರಹ..


ಅವರು ಬನ್ನಿ ಹೋರಾಡೋಣ ಅಂತ ಜನರನ್ನ ಕರೀಲಿಲ್ಲಾ..  ಇದು ನನಗೊಬ್ಬನಿಗೇ ಬೇಕಾಗಿರೋದಲ್ಲಾ, ನನ್ನೊಬ್ಬನಿಂದ ಆಗೋದೂ ಅಲ್ಲಾ ಅಂತೆಲ್ಲಾ ಯೋಚಿಸಲೂ ಇಲ್ಲಾ.. ಜಂತರ್ ಮಂತರ್ನಲ್ಲಿ ಕುಳಿತುಬಿಟ್ರು.. ಜೀವಾ ಹೋದರೂ ಸರಿ ಭ್ರಷ್ಟರಿಗೆ ಮೂಗುದಾರ ಹಾಕೋ ವ್ಯವಸ್ಥೆ ಆಗಲೇಬೇಕು ಅಂತ ನಿರ್ದರಿಸಿಬಿಟ್ರು.. ಅಷ್ಟೆ, ಒಳಗೊಳಗೇ ಕುದಿಯುತ್ತಿದ್ದ ಅದೆಷ್ಟು ಜನ ಎದ್ದು ನಿಂತ್ರು ನೋಡಿ.. ಒಬ್ಬ ಅಣ್ಣನ ಬೆನ್ನಿಗೆ ಕೋಟ್ಯಾಂತರ ಜನ..!

ಒ0ದು ಎರಡು ಮೂರು ನಾಲ್ಕು ದಿನಗಳು ಉರುಳ್ತಾನೇ ಇವೆ.. .. ಬೆಂಬಲಿಸೋ ಜನರೂ  ಹೆಚ್ಚಾದ್ರು.. ಆದ್ರೆ ಒಕ್ಕೂರಲದ ಕೂಗನ್ನೂ ಕೇಳಿಸಿಕೊಳ್ಳೋದಕ್ಕೆ ಸಿದ್ಧರಿಲ್ಲದ ಹುಂಬರಂತೆ ಖುರ್ಚಿಯನ್ನ ಗಟ್ಟಿಯಾಗಿ ಹಿಡಿದಪ್ಪಿ ಕುಳಿತವರು, ನಾವು ಆರಿಸಿ ಕಳಿಸಿದ ನಾಯಕರು.. ಇಂಥವರಿಗೆಲ್ಲಾ ನಮ್ಮ ನೇತಾರರು ಅನ್ನೋದಕ್ಕೆ ಅಸಹ್ಯವಾಗತ್ತೆ.. ನಮ್ಮದು ಪ್ರಜಾ ಪ್ರಭುತ್ವ  ವ್ಯವಸ್ಥೆ ಅನ್ನೋ ಸಂವಿಧಾನದ ವಾಕ್ಯದ ಬಗ್ಗೆ ಜಿಗುಪ್ಸೆ ಬರತ್ತೆ..! ಈ ಜನನಾಯಕರಿಗೆ ಜನರ ಪಾಲನೆಗೊಂದು ಸರಿಯಾದ ಮಸೂದೆಯನ್ನ ತರೋದಕ್ಕಾಗಲ್ಲಾ ಅನ್ನೋದಾದ್ರೆ , ಇವರ್ಯಾಕೆ ಬೇಕು..? ಓಟು ಹಾಕಿ ಗೆಲಿಸಿದವರನ್ನ ಬೂಟು ಕಾಲಲ್ಲಿ ಒದೆಯೋ ಹಾಳು ಸಂಸ್ಕ್ರುತಿ ಯಾಕಿರಬೇಕು...?

"ಇರಬಾರದು.. ನಿಮ್ಮ ಹೋರಾಟ ಸರಿಯಾಗಿದೆ.. ಭ್ರಷ್ಟರನ್ನ ಬಗ್ಗು ಬಡಿಯೋದಕ್ಕೆ ಒಂದು ಸರಿಯಾದ ಸಮಿತಿ ಆಗಲೇಬೇಕು.. ಕಾನೂನು ಬರಲೇಬೇಕು.. ನಾವು ಅಣ್ಣಾಜಿಗೆ ಸಪೋರ್ಟ್ ಮಾಡ್ತೀವಿ ಅಂತ ನಮ್ಮ ಮುಖ್ಯಮಂತ್ರಿಗಳು ಹೇಳಿದ್ದು ತಮಾಷೆ..! ಎಷ್ಟಂದ್ರೂ ಹಿರಿಯ ರಾಜಕಾರಣಿ ನೋಡಿ.. ಅವರ ಕಣ್ಣಿಗೆ ಕೋಟ್ಯಾಂತರ ಓಟುಗಳು ಕಾಣಿಸುತ್ವೆ..ಜನಸಾಮಾನ್ಯರ ಮನಸು ಕಾಣಿಸತ್ತೆ.. ಮುಂದೆ ಬರೋ ಇಲೆಕ್ಷನ್ನಿಗೊಂದಿಷ್ಟು ತಯಾರಿ ಆಗಲೇಬೇಕಲ್ವಾ..?

ಬರೀ ಓಟಿನ ರಾಜಕೀಯ ಮಾಡೋ ಈ ಜನನಾಯಕರ ಕೈಗೆ ಆಡಳಿತದ ಚುಕ್ಕಾಣಿಯನ್ನೇನೋ ಕೊಟ್ಟಾಗಿದೆ.. ಆದ್ರೆ ನಮ್ಮೆಲ್ಲರ ಬದುಕನ್ನ ಕೊಟ್ಟಿಲ್ವಲ್ಲಾ ,ದನಿಯನ್ನ ಕೊಟ್ಟಿಲ್ವಲ್ಲಾ.. ನಾವು ನಮಗೆ ಸ್ವಂತ.. ನಮ್ಮ ದೇಶ ನಮಗೆಲ್ಲರಿಗೂ ಅಂತ... ಕೋಟಿ ಕೋಟಿ ಲೂಟಿಯಾಗೋದನ್ನ ತಡೆಯೋದಕ್ಕೆ ಆಗತ್ತೋ ಇಲ್ವೋ.. ಕಳೆದುಕೊಂಡಿರೋದು ಮರಳಿ ಸಿಗತ್ತೋ ಇಲ್ವೋ..ಆದ್ರೆ ಇನ್ಮುಂದೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಪ್ರಯತ್ನ ಆದ್ರೂ ನಡೀಬೇಕು.. ಜನಜಾಗೃತಿ ಮೂಡಿಸಿದ ಪ್ರತಿಯೊಬ್ಬರಿಗೂ ಅದರಲ್ಲೂ ವಿಷೇಶವಾಗಿ  ಹಜಾರೆ ಅಣ್ಣನವರಿಗೆ ಹಜಾರು ನಮಸ್ಕಾರ..  ಇದು ಮನೆ ಮನೆಯಲ್ಲೂ ಅಣ್ಣಾ ಹಜಾರೆ ಹುಟ್ಟಬೇಕಾದ ಸಮಯ.. ಬನ್ನಿ ಕೈ ಜೋಡಿಸಿ ..ಸಾಗರೋಪಾದಿಯಾಗಿ ಸೇರೋಣಾ... ಭ್ರಷ್ಟರ ಬೆನ್ನತ್ತೋಣಾ..!

4 comments:

  1. ನಿವೃತ್ತ ಸೈನಿಕನ ಪ್ರಾಮಾಣಿಕತೆಯ ಸಾಮರ್ಥ್ಯವನ್ನು ದೇಶದ ಜನತೆಗೆ ಸಾಬೀತು ಪಡಿಸಿದ ಮಹಾನ್ ವ್ಯಕ್ತಿಗೆ ಹೃತ್ಪೂರ್ವಕ ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete
  2. nijakku vandisalebeku rammachandra avre..

    ReplyDelete