Thursday, March 24, 2011

ಭರವಸೆಯ ಬೆಳಕು..!


http://withlove-ajit.blogspot.com/2011/03/blog-post_15.html

ಇದನ್ನ ನೋಡಿ ಕರುಳು ಚುರ್ರಂದಿದ್ದಷ್ಟೇ ಅಲ್ಲಾ ಒಮ್ಮೆ ಮಾತೇ ನಿಂತಂತಾಯ್ತು..
ಮೌನವಾಗ್ಹೋದೆ.. ಸಾಯಿನಾಥ್ ಅವರು ತೋರಿಸಿದ ಆ ಹುಡುಗನ ಚಿತ್ರ ನನ್ನ ಮನಸಲ್ಲಿ ಸ್ಟಿಲ್ ಆಗ್ಹೋಗಿತ್ತು. ಆ ಕಣ್ಣುಗಳಲ್ಲಿ ಏನಿತ್ತು..? ಭಯ..? ಆತಂಕ..? ನೋವು..? ಅಥವಾ ವಯಸ್ಸಿಗೆ ಮೀರಿದ ಪ್ರಬುದ್ಧತೆ..? ಬದುಕಿನ ಅನಿವಾರ್ಯತೆ..? ಉಹು ನನಗೆ ಅರ್ಥವಾಗ್ಲಿಲ್ಲಾ.. ಒಂದಂತೂ ಹೇಳಬಲ್ಲೆ ಆ ಕಣ್ಣುಗಳಿಗೆ ಜೀವ ಇತ್ತು.. ಅವುಗಳು ಅದೇನನ್ನೋ ಹುಡುಕ್ತಾ ಇದ್ವು.. ಅದು ಭರವಸೆನಾ..?ಬದುಕಿಗೊಂದು ಭರವಸೆನಾ..?





ಮನೆಯಲ್ಲಿ ಮಸಣದ ಚಾಯೆ .. ಅವನ ಅಪ್ಪಾ ಆತ್ಮಹತ್ಯೆ ಮಾಡಿಕೊಂಡು ಮೂರೋ ಮತ್ತೊಂದೋ ದಿನ ಆಗಿದೆ.. ಹತ್ತಿಯ ಹುಳಕ್ಕೆ ಹೊಡೆಯೋ ಕೀಟನಾಶಕದಲ್ಲಿ ಹಟ್ಟಿಯೊಳಗಿನ ಬಡತನ ಅನ್ನೋ ಕ್ರಿಮಿಯನ್ನ ಬಡೀಬಹುದು, ಬೆಳ್ಳಿಯ ಕಿರಣದಂತಾ ಎಳೆಯಲ್ಲಿ ಬದುಕುಕಟ್ಟಿಕೊಳ್ಳಬಹುದು ಅಂದ್ಕೊಂಡು ಚಿಕ್ಕಂದಿನಿಂದ ದುಡಿದಿದ್ದ.. ಆತನ ದುಡಿಮೆಗೆ ದೇವರು ಕಣ್ಣುಬಿಡ್ಲಿಲ್ವಾ..? ದಣಿವಿಗೊಂದು ದಯೆ ಇರಲಿಲ್ವಾ..? ಯಾವ ಲೆಕ್ಕದಲ್ಲೂ ಅಗ್ಗವಾಗದ ಉಳ್ಳವರ ಅಲಂಕಾರಕ್ಕೆ ಅಹಂಕಾರಕ್ಕೆ ಇವನೆಲ್ಲಿ ಕಾಣಿಸಬೇಕು..! ಕೊಡುವವರ ಕೈ ಸಣ್ಣದಾಯ್ತು...ಕೊಂಡವನ ಉದರ ಉಬ್ಬಿಕೊಂಡ್ತು.. ಅಟ್ಟದ ಮೇಲೆ ಒಣನಗಿಬಿದ್ದ ಅಂಟವಾಳಕಾಯಿಯಂತಾದ ಬೆವರು ಬಸಿದ ರೈತ... ಉಸಿರಿದೆ ಹಸಿರಿಲ್ಲಾ.. ವಿದರ್ಭದ ರೈತನ ಕಣ್ಣಲ್ಲಿ ಬತ್ತಿಹೋದ ಬದುಕಿನ ಹೊರತಾಗಿ ಮತ್ತೇನೂ ಇರಲಿಲ್ಲಾ.. ಭರವಸೆಗಳು ಸತ್ತಮೇಲೂ ಬದುಕಿನಗಾಡಿ ಎಳೆದ ದೇಹ ಮಣ್ಣಾಗೋದಕ್ಕೆ ಹೊರಟುಬಿಟ್ತು.. ಅವನೊಂದಿಗೆ ಆಕೆಗಿದ್ದ ಅಲ್ಪ ಖುಶಿಯೂ ಹೋಯ್ತು..

ಅಮ್ಮಾ ಅಮ್ಮಾ.. ಕರೆದರೆ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವಳಿಲ್ವಾ..? ಅತವಾ ಕೇಳುವ ಮನಸಿಲ್ವಾ..? ಧೈರ್ಯವಿಲ್ವಾ..? ಹುಟ್ಟಿಸಿದ ದೇವರು ಹುಲ್ಲುಮೇಯಿಸಲಾಗದೆ ಹೆಣವಾಗಲಿಲ್ವಾ..? ಈಗ ಮಗ ಹಸಿವು ಅಂದ್ರೆ ಏನ್ ಮಾಡ್ತಾಳೆ..? ದುಡಿದು ತಿನ್ನು ಅನ್ನಬಹುದಿತ್ತು..ಆದ್ರೆ ದುಡಿಮೆ ಅನ್ನವಾಗುವುದಲ್ಲಾ ಅನ್ನೋದು ಅವಳಿಗಿಂತ ಚನ್ನಾಗಿ ಮತ್ಯಾರಿಗೆ ಅರ್ಥವಾಗ್ಬೇಕು..? ಸುಟ್ಟ ರೊಟ್ಟಿಯ ಕನವರಿಕೆಯಲ್ಲೇ ಕನಸಿನ ಲೋಕಕ್ಕೆ ಕರೆದೊಯ್ದುಬಿಡೋದಕ್ಕೆ ಅವನು ಚಿಕ್ಕವನಲ್ಲಾ.. ಬೆಳೆದಿದ್ದಾನೆ.. ಬುಜದೆತ್ತರಕ್ಕೆ.. ಅವಳಷ್ಟು, ಅವರಪ್ಪನಷ್ಟು..

ಅದು ನನೆಪು.. ಉಳಿದವರಿಗೆ ಅಳಿದವರ ನೆನಪು.. ಅವನಿಗೆ ಈ ಬಟ್ಟೆ ಇಷ್ಟ , ತಿಂಡಿ ಇಷ್ಟ.. ಪುಸ್ತಕ ಇಷ್ಟಾ.. ಕಣ್ಣೀರಾಕ್ತಾ ಕಳೆದುಹೋದವರ ನೆನಪುಗಳನ್ನ ಜೋಪಾನಮಾಡೋ ಜನಗಳ ನಡುವೆ ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಅಂಗಿಯನ್ನ ತೊಟ್ಟು ದಿಕ್ಕುತೋಚದೆ ಕೂತ ಮಗ.. ಅವನೀಗ ಆ ಮನೆಗೆ ಅಪ್ಪನಾಗಬೇಕು..ಆತನ ಜವಾಬ್ದಾರಿಗಳನ್ನ ಹೊರಬೇಕು.. ಅವನಾದ್ರೂ ಏನ್ ಮಾಡ್ತಾನೆ.. ಅಪ್ಪಾ ಕುಡಿದ ಕೀಟನಾಶಕದಲ್ಲಿ ಸ್ವಲ್ಪ ಮಿಕ್ಕಿದೆಯಲ್ಲಾ ಅದನ್ನೇ ತಗೊಂಡು ಅಷ್ಟು ದೂರದಲ್ಲಿರೋ ಹೊಲದ ಕಡೆ ಹೋಗ್ತಾನಾ..? ಹತ್ತಿಯ ಗಿಡಗಳನ್ನ ಹೊತ್ತೊತ್ತಿಗೆ ಜೋಪಾನಾ ಮಾಡ್ತಾನಾ..? ಮತ್ತೆ ಮೆತ್ತನೆಯ ಕನಸು ಕಾಣ್ತಾನಾ..? ಅಪ್ಪನ ಕನಸುಗಳನ್ನ ಕನಸುಗಣ್ಣುಗಳಲ್ಲಿ ನೋಡ್ತಾ ಇದ್ದ ಅಮ್ಮನಿಗೆ ಈಗ ಆ ಕನಸುಗಳುಳಿದಿವೆಯಾ..? ಉಹು.. ಆಕೆಗೆ ಕನಸಲ್ಲಾ ಬದುಕೋ ಮನಸೂ ಉಳಿದಿಲ್ಲಾ.. ಜೀವಂತ ಶವವಾಗಿದ್ದಾಳೆ.. ಆದ್ರೂ ಜೀವ ಇದೆ ನೋಡಿ..ಹಂಗಾಗಿ ನೋವು ಮುಗಿದಿಲ್ಲಾ..ಆದ್ರೆ ಆಕೆಯ ದುಃಖ ದುಮ್ಮಿಕ್ಕುವ ಕಡಲಾಗುವುದಲ್ಲಾ.. ಅವಳು ಕಲ್ಲಾಗಿದ್ದಾಳೆ.. ಒಂಟಿಕಲ್ಲು.. ಯಾಕಂದ್ರೆ ಆಕೆ ವಿದರ್ಭದ ರೈತ..!

ಮನೆಯ ಮುಂದೆ ಬಂದು ನಿಂತ ಕಾರು..ಅದರಿಂದಿಳಿದ ಬುದ್ದಿವಂತರಂತೆ ಕಾಣೋ ಜನಾ.. ಅವರ ಕಣ್ಣಲ್ಲಿರೋ ಕರುಣೆ.. ಎಲ್ಲವೂ  ಆ ಹುಡುಗನ ಕಣ್ಣಲ್ಲಿ ಆಸೆಯ ಅಲೆಗಳೇಳುವಂತೆ ಮಾಡಬಹುದು.. ಆದ್ರೆ ಆ ತಾಯಿ..!ಆಕೆಗೆ ಗೊತ್ತು.. ಅವಳು ಇಂಥಾ ಸಾವುಗಳನ್ನ ಅದೆಷ್ಟು ನೋಡಿದ್ಲೋ.. ಪಕ್ಕದ ಕೇರಿಯಲ್ಲಿ ಬೀದಿಯಲ್ಲಿ ಮನೆಯಲ್ಲಿ ಬಂದ ಆ ಕೆಟ್ಟ ಗಳುಗೆ ತನ್ನ ಮನೆಗೂ ಒಂದಲ್ಲಾ ಒಂದು ದಿನ ಬರತ್ತೆ ಅನ್ನೋದು ಆಕೆಗೆ ಯಾವತ್ತೋ ಗೊತ್ತಿತ್ತು..ಅವತ್ತೇ ಅವಳು ಅರ್ಧ ಸತ್ತುಹೋಗಿದ್ಲು ಅನ್ಸತ್ತೆ.. ಈಗ ಬದುಕಿ ಸತ್ತವಳಂತಿದ್ದಾಳೆ.. ಬದುಕಿಗೆ ಹೆದರಿ ಸಾವಿನೆಡೆಗೆ ಮುಖಾ ಮಾಡಬಾರದು ಅನ್ನೋ ನಿರ್ಧಾರ ಮಾಡಿ ಇವತ್ತಲ್ಲಾ ನಾಳೆ ಮೇಲೇಳ್ತಾಳೆ.. ಆದ್ರೆ ಎದ್ಮೇಲೆ ಮಗನ ಕೈ ಹಿಡಿದು ಕರೆದೊಯ್ಯೋದೆಲ್ಲಿಗೆ..? ಮಾಡೋದೇನು..? ಬದುಕೋದ್ಹೇಗೆ..? ಬಡತನದ ಬೆನ್ನಿಗೆ ಬಿದ್ದ ಸಾಲದ ಭಾರವನ್ನ ಇಳಿಸೋದ್ಹೇಗೆ..? ಅದಕ್ಕೇ ಯಾವುದೋ ಪರಿಹಾರ ಸಿಗಬಹುದು, ತಮ್ಮ ಕಷ್ಟ ಕಳೀಬಹುದು , ಮನೆತನಕ ಬಂದವರು ಒಂದಿಷ್ಟು ಮರ್ಸಿ ತೋರಿಸದೇ ಇರ್ತಾರಾ..? ಇನ್ನು ಬಂದವರು ಸರಕಾರದವರಾಗಿದ್ರೆ, ಸವಲತ್ತುಗಳನ್ನ ಕೊಡದೇ ಇರ್ತಾರಾ..? ಫೋಟೋ ತಗೋತಿದ್ದಾರೆ.. ಏನೋ ಒಳ್ಳೆಯದಾಗ್ತಿದೆ ಅನ್ನೋ ಭರವಸೆ ಇಣುಕಿದಂತಿತ್ತು ಅವನ ಕಣ್ಣಲ್ಲಿ.. ಅದು ಇವತ್ತಿಗೂ ಹಾಗೇ ಇದೆಯಾ..?

ವಿದರ್ಭದ ರೈತನ ಕಣ್ಣಲ್ಲಿ ಭರವಸೆ ಇದ್ಯೋ ಇಲ್ವೋ.. ಆದ್ರೆ ನಮ್ಮಣ್ಣನ ಕಣ್ಣಲ್ಲಿ ಮಾತ್ರ ಇವತ್ತಿಗೂ ಆಸೆ ಉಳಕೊಂಡಿದೆ.. ಸರಕಾರ ಏನಾದ್ರೂ ಮಾಡಬಹುದು ಅಂತಾನೆ.. ಆಗ್ಲೇ ಅವರಪ್ಪ ಇದೇ ರೀತಿ ತನ್ನದೇ ತೋಟದಲ್ಲಿ  ಹೆಣವಾಗಿ ಮಲಗಿ ತಿಂಗಳುಗಳು ಕಳೆದಿವೆ.. ನಮ್ಮೂರಲ್ಲಿ ರೈತರ ಆತ್ಮಹತ್ಯಾ ಪ್ರಕರಣಗಳು ತೀರಾ ವಿಧರ್ಭದಷ್ಟಿಲ್ವಲ್ಲಾ..! ಹಂಗಾಗಿ ಸತ್ತ ರೈತರ ಬಗ್ಗೆ ಸಂತಾಪ ಸೂಚಿಸೋದಕ್ಕೂ ಸರಕಾರಕ್ಕೆ ಪುರುಸೊತ್ತಿರಲ್ಲಾ ಅನ್ನೋದು ಅವನಿಗೆ ಗೊತ್ತಿಲ್ಲಾ.. ರೈತರ ಹೆಸರೇಳಿಕೊಂಡು ಪ್ರಮಾಣವಚನ ಸ್ವೀಕರಿಸಿದ ರೈತಪರ ಮುಖ್ಯಮಂತ್ರಿಯ ಮೇಲಿನ ನಂಬಿಕೆ ಇನ್ನೂ ಹೋಗಿಲ್ಲಾ..

ಮೊನ್ನೆಯ ಬಜೆಟ್ಟಲ್ಲಿ ರೈತರಿಗೆ ಒಂದು ಪರ್ಸಂಟ್ ಬಡ್ಡಿದರದಲ್ಲಿ ಮುರು ಲಕ್ಷದವರೆಗೆ ಸಾಲಾ ಕೊಡೋದಾಗಿ ಯಡಿಯೂರಪ್ಪನವರು ಹೇಳಿದ್ರು.. ಅದೇನೋ ಸುವರ್ಣ ಭೂಮಿ ಭೂ ಚೇತನಾ ಹೀಗೆ ಅದೇನೇನೋ ಯೋಜನೆಗಳ ಬಗ್ಗೆ ಜನಾ ಖುಶಿಯಲ್ಲಿ ಮಾತಾಡ್ತಾರೆ.. ಆದ್ರೆ ಇಲ್ಲೀವರಗೆಗೆ ಸರಕಾರದ ಆ ಯೋಜನೆಗಳು ಬಡರೈತನ ತನಕ ಬಂದಿವೆಯಾ..? ಕೊಡ್ತೀವಿ ಅಂದ್ರೆ ಸಾಕು ನಮ್ಮ ಜನಕ್ಕೆ ಖುಶಿಪಡೋದಕ್ಕೆ.. ಅದು ಚನ್ನಾಗಿ ಅರ್ಥಮಾಡ್ಕೊಂಡಿರೋದ್ರಿಂದಾನೇ ಇವತ್ತಿಗೂ ಸುಳ್ಳು ಭರವಸೆಯ ರಾಜಕಾರಣ ಜೀವಂತವಾಗಿರೋದು..

ಎಲ್ಲಾ ಕ್ಷೇತ್ರದಲ್ಲು ಡೆವಲಪ್ಮೆಂಟ್ ಅಂತ ಇರತ್ತೆ.. ಸಾವಿರಾರು ಕೋಟಿ ಸುರಿಯೋದೂ ಇದ್ದೇ ಇದೆ.. ಅದೇ ರೀತಿ ಡೆವಲಪ್ಮೆಂಟ್ ಆಗಿರೋದು ಕಾಣಿಸತ್ತೆ.. ಆದ್ರೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಿಸಿದೆಯಾ..? ರೈಲ್ವೆಯಿಂದ ಇಷ್ಟು ಲಾಸ್ ಆಯ್ತು ಇಷ್ಟು ಲಾಭ ಆಯ್ತು ಅಂತಾ ಹೇಳ್ತಾರೆ.. ಆದ್ರೆ ಭೂಮಿಯಿಂದ ಅದರ ಉತ್ಪಾದನೆಗಳಿಂದ ಏನಾಗ್ತಿದೆ.. ಭೂಮಿ ಅನ್ನೋದು ನಮಗೆ ಊಟಕ್ಕುಂಟು ಆಟಕ್ಕುಂಟು ಕಡೆಗೆ ಲೆಕ್ಕಕ್ಕೂ ಉಂಟು.. ಆದ್ರೆ ಅದನ್ನೇ ನಂಬಿಕೊಂಡು ಬದುಕ್ತಾ ಇರೋ ಸಣ್ಣ ಹಿಡುವಳಿ ದಾರರ ಜೀವನಕ್ಕೆ ಮಾತ್ರ ಇಲ್ಲಾ..

ಮೊನ್ನೆ ನಮ್ಮ ಕ್ಯಾಬ್ ಡ್ರೈವರ್ ಒಬ್ರು ಹೇಗಾದ್ರೂ ಮಾಡಿ ಸ್ವಲ್ಪ ಸಾಲಾ ಸಿಗೋ ಥರಾ ಮಾಡ್ಬೇಕಿತ್ತು ಮೇಡಮ್, ಈ ಸಾರಿ ಆದ್ರೂ ಬೆಳೆ ಹಾಕ್ಬೇಕು ಅಂದ್ರು.. ನಾನೂ ,ಯೆಡಿಯೂರಪ್ಪಾ ಒಂದು ಪರ್ಸಂಟ್ ಬಡ್ಡೀದರದಲ್ಲಿ ಬೆಳೆ ಸಾಲ ಕೊಡ್ತಾರಂತೆ ತಗೊಳ್ರಿ ಅಂದೆ.. ಅವನೂ ಅವತ್ತೇ ಬ್ಯಾಂಕಿನ ತನಕ ಹೋಗಿಬಂದ.. ಬಂದವನು ಒಂದೇ ಸಮನೆ ಈ ಸರಕಾರ ಬಡವರಿಗಾಗೋದಲ್ಲಾ, ಹೊಟ್ಟೆ ತುಂಬಿದವರಿಗೇ ಇನ್ನಷ್ಟು ತುಂಬೋದಕ್ಕೆ ಸಹಾಯ ಮಾಡ್ತಾರೆ..ಅಲ್ಲಾ ಅವರಿಗ್ಯಾಕ್ ಬೇಕಾಗತ್ತೆ ಸಾಲ.. ಅವರು ದುಡಿದಿರೋದ್ರಲ್ಲೇ ಉಳಿಸ್ಕೊಂಡು ಮತ್ತೇನೋ ಮಾಡಲ್ವಾ? ಅಂತ ಒಂದೇ ಸಮನೆ ರೇಗ್ತಾ ಇದ್ದಾ.. ಕೇಳಿದ್ರೆ ನಮಗಿರೋ ಒಂದುವರೆಕರೆ ಭೂಮಿಗೆ ಸಾಲಾ ಸಿಗಲ್ವಂತೆ ಅದಕ್ಕೆ ಐದೆಕರೆ ಜಾಗ ಇರ್ಬೇಕಂತೆ ಅಂದಾ..  ಇದು ನಮ್ಮ ಕಥೆ..!

 ನಮಗೆ ಇರೋದಕ್ಕೆ ಮನೆ ಇಲ್ಲಾ , ನಮ್ದೂ ಅಂತ ಹಿಡಿ ಮಣ್ಣೂ ಇಲ್ಲಾ ಅಂದ್ರೆ ಹೆಂಗೋ ಜೀವ ಹಿಡ್ಕೊಂಡಿದ್ಬಿಡ್ಬಹುದು.. ಯಾಕಂದ್ರೆ ಸರಕಾರ ಬಿ ಪಿ ಎಲ್ ಕಾರ್ಡ್ ಕೊಡತ್ತೆ.. ಸಂಸಾರ ನಡೆಸೋದಕ್ಕೆ ಬೇಕಾಗಿದ್ದೆಲ್ಲವನ್ನೂ ಕಡಿಮೆ ದರದಲ್ಲಿ ಕೊಡತ್ತೆ.. ಹೇಗೋ ಹೊಟ್ಟೆಪಾಡಾಗತ್ತೆ...! ಇನ್ನು ಜಾತಿಯ ಮೀಸಲಾತಿಯೊಳಗೆ ಬಂದುಬಿಟ್ರಂತೂ ಸರಕಾರಾನೇ ಅವರನ್ನ ನೋಡ್ಕೊಂಬಿಡತ್ತೆ.. ಆದ್ರೆ ಬಡ ಮಧ್ಯಮ ವರ್ಗದವರಿಗೆ ಆಗೋರು ಮಾತ್ರ ಯಾರೂ ಇಲ್ಲಾ.. ದುರಂತ ಅಂದ್ರೆ ರೈತಾಪಿ ಜೀವನ ನಡೆಸ್ತಾ ಇರೋರಲ್ಲಿ ಹೆಚ್ಚುಪಾಲು ಜನ ಇಂಥಾ ಎಲ್ಲೂ ಸಲ್ಲದ ಮಧ್ಯಮರು.. ಕಳೆದ ಹದಿಮೂರು ವರುಷಗಳಲ್ಲಿ ಇಂಥಾ ಎರಡೂವರೆ ಲಕ್ಷ ಅಸಹಾಯಕ ರೈತರು ಜೀವ ತೆತ್ತಿದ್ದಾರೆ ಅಂದ್ರೆ ಆಘಾತವಾಗತ್ತೆ..!

ರೈತರ ಕಷ್ಟಾ ಕೇಳಿ, ನಿಜವಾಗಿ ಸಹಾಯ ಮಾಡೋ ಒಬ್ಬೇ ಒಬ್ಬ ಇಲ್ಲದಿದ್ರೂ ತೀರಾ ವಿದರ್ಭದ ಮಟ್ಟದಲ್ಲಿ ನಮ್ಮ ಜನಾ ಬೇಸತ್ತಿಲ್ಲಾ.. ದಿನಕ್ಕೆ ಐದು ಆರು ರೈತರು ಸಾಯೋ ದುಸ್ಥಿತಿ ಕನ್ನಡ ಮಣ್ಣಿನ ಮಕ್ಕಳಿಗೆ ಬಂದಿಲ್ಲಾ.. ಹಂಗಂತ ರೈತರ ಆತ್ಮಹತ್ಯಾ ಪ್ರಕರಣಗಳು ನಮ್ಮಲ್ಲೂ ಕಡಿಮೆ ಇಲ್ಲಾ.. ನಾವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೀವಿ.. ಪರಿಸ್ಥಿತಿ ಹೀಗೇ ಇದ್ರೆ ಮೊದಲ ಸ್ಥಾನಕ್ಕೂ ಬರಬಹುದು..

ಈಗ್ಲಾದ್ರೂ ಬಾಯಲ್ಲಿ  ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ಳುವುದನ್ನ ಬಿಟ್ಟು ನಿಜಕ್ಕೂ ಮಣ್ಣಿನ ಮಕ್ಕಳಾಗ್ಬೇಕು .. ಜನ್ಮದಾತೆಯಾದ ಭೂಮಿಗೆ ಜೀವ ತುಂಬಿ , ಅದರ ನರ ನಾಡಿಯನ್ನ ಮೀಟುವ ಬೆಳೆ ಯಾವುದು , ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ..? ಅದನ್ನ ಹೇಗೆ ಬೆಳೀಬೇಕು..? ಯಾವ ರೀತಿ ಮಾರುಕಟ್ಟೆಮಾಡಬೇಕು. ಅನ್ನೋ ಬಗ್ಗೆ ಅರಿವು ಮೂಡಿಸೋ ಕೆಲಸಾ ಮೊದಲಾಗ್ಬೇಕು .. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗೋ ಥರಾ ಆಗ್ಬೇಕು..  ಅಂದ್ಹಾಗೆ ನಮ್ಮ ನೆಲದ್ಲಲಿ ಸಾಲದ ಹಣವನ್ನೇ ನಂಬಿ ಭೂಮಿಗೆ ಬೀಜ ಬಿತ್ತೋ ಬಡ ರೈತರ ಸಂಖ್ಯೆ ದೊಡ್ಡದಿದೆ.. ಅವರೆಲ್ಲರನ್ನೂ ಗಮನದಲ್ಲಿಟ್ಕೊಂಡು ಒಂದು ಸುಂದರ ಯೋಜನೆಯನ್ನ ಸಿದ್ಧಪಡಿಸೋ ಕೆಲಸಾ ರೈತರಿಗಾಗಿ ಮಿಡಿತಾ ಇರೋ ಮನಸುಗಳಿಂದ ಆಗ್ಬೇಕು..
 

No comments:

Post a Comment