Wednesday, March 2, 2011

ಶಿವ ಶಿವಾ ಶಿವರಾತ್ರಿ...!

ಮಾರಾಯ್ತಿ ನಾಳೆ ಶಿವರಾತ್ರಿ.. ಬೆಳಗಾಗೋದೇ ಬೇಡಾ ಅನ್ನಿಸ್ತಾ ಇದೆ.. ನಮ್ಮತ್ತೆ ಬೆಳಬೆಳಿಗ್ಗೆ ಲಿಂಗಾ ಹಿಡ್ಕೊಂಡು ಅದೇನೇನೋ ಪೂಜೆ ಮಾಡ್ಕೊಂಬಂದ್ಬಿಡ್ತಾರೆ.. ಇವತ್ತೊಂದಿನ ಆದ್ರೂ ಹಾಕ್ಕೋ ಅಂತ ಪೀಡಿಸ್ತಾರೆ.. ನಂಗೆ ಅದು ನಿಜಕ್ಕೂ ಇಷ್ಟಾ ಇಲ್ಲಾ.. ಮೈ ಮೇಲಿದ್ರೆ ಏನೋ ಅಲವರಿಕೆ.. ಕೂತ್ರೆ ನಿಂತ್ರೆ ಎಲ್ಲಿ ಹೊರಬರತ್ತೋ .. ಯಾರು ನೋಡ್ತಾರೋ ಅನ್ಸತ್ತೆ.. ರಗಳೆನಪ್ಪಾ ಅಂತ ಒಂದೇ ಸಮನೆ ಪುಕಾರ್ ಹೇಳ್ತಾನೇ ಇದ್ಲು ನನ್ನ ಗೆಳತಿ ..ಆಕೆಗೆ ಅದೇನ್ ಹೇಳ್ಬೇಕೋ ಗೊತ್ತಾಗ್ಲಿಲ್ಲಾ.. ಆದ್ರೂ ಒಂದಿನ ಅಲ್ವಾ..? ವರ್ಷಪೂತರ್ಿ ಹಾಕ್ಕೊ ಅನ್ನಲ್ವಲ್ಲಾ , ಅವರ ನಂಬಿಕೆಗೆ ಆಸೆಗೆ ಯಾಕ್ ತಣ್ಣೀರೆರಚ್ತೀಯಾ, ಸುಮ್ನೆ ಹಾಕ್ಕೊಂಬಿಡು..ಒಂದಿನ ಅಡ್ಜೆಸ್ಟ್ ಆಗೋದು ಕಷ್ಟಾ ಅಲ್ಲಾ , ಇವತ್ತು ನೀನು ಒಪ್ಕೊಂಡ್ರೆ ನಿಮ್ಮತ್ತೆನೂ ಖುಶೀಯಾಗಿರ್ತಾರೆ..ಮನೆಯ ವಾತಾವರಣ ಚನ್ನಾಗಿರತ್ತೆ ಸುಮ್ನೆ ರಗಳೆ ಮಾಡದೆ ಹಾಕ್ಕೊಂಬಿಡೋದಪ್ಪಾ ಅಂದೆ.. ಹೌದಮ್ಮಾ ನಾನೂ ಹಂಗ್ ಅಂದ್ಕೊಂಡೇ  ಕಳೆದ ವರುಷ ಹಾಕ್ಕೊಂಡಿದ್ದೆ.. ಕಡೆಗೆ ಎಂತಾ ಪರದಾಟ ಅಂತೀನಿ.. ಒಪ್ಕೊಂಡಿದ್ದೇ ಒಳ್ಳೆ ಮುಹೂರ್ತ ಅಂತ ತೊಡಿಸಿದವರು ತೆಗೆಯೋದಕ್ಕೆ ದಿನಾ ವೇಳೆ ಎಲ್ಲಾ ನೋಡಿದ್ದೇ ಕೆಲಸಾ.. ತಿಂಗ್ಳಾನ್ಗಟ್ಲೆ ತೆಗೆಯೋದಕ್ಕೆ ಬಿಡ್ಲಿಲ್ಲಾ.. ನಾನಂತೂ ಈ ಸಾರಿ ಹಾಕ್ಕೋಬಾರ್ದು ಅಂತ ನಿರ್ಧಾರ ಮಾಡ್ಬಿಟ್ಟಿದೀನಿ.. ಅದೇನ್ ರಂಪಾ ರಾದ್ಧಾಂತ ಮಾಡ್ತಾರೆ ನೋಡ್ತೀನಿ ಅಂದ್ಲು.. ಆಕೆಯ ಹಠಕ್ಕೆ ನಾನೂ ಸುಮ್ನಾದೆ..

  ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯ ಹುಡುಗಿ ಅವಳು.. ಕಾಲೇಜಿಗೆ ಹೋಗ್ತಾ ಇದ್ದಾಗ್ಲೇ ಹುಡುಗಿಗೆ ಮದುವೆ ಮಾಡೋ ಯೋಚನೆ ಮಾಡಿದ್ರು ಅವರಪ್ಪಾ.. ಒಂದೆರಡು ವರಾನೂ ಕೇಳ್ಕೊಂಬಂದಿತ್ತು..ಅವ್ರಯಾರೂ ತನ್ನ ಮಗಳಿಗಲ್ಲಾ ಅಂತ ಅನ್ನಿಸಿ ಮದುವೆನೇ ಮುಂದೂಡಿದ್ರು.. ತನ್ನ ಮಹಾಲಕ್ಷ್ಮಿಯಂತಾ ಮಗಳನ್ನ ವರಿಸಬೇಕು ಅಂದ್ರೆ ಮನೆಯಲ್ಲಿ ಭರಪೂರ್ ಆಸ್ತಿ ಇರ್ಬೇಕು, ಹುಡುಗ ಚನ್ನಾಗಿ ಓದಿರ್ಬೇಕು.. ಒಳ್ಳೆ ಕೆಲಸದಲ್ಲಿರ್ಬೇಕು..ಅದೂ ಇದೂ ಚಟಕ್ಕೆ ಬಿದ್ದಿರ್ಬಾರ್ದು.. ಅಬ್ಬಬ್ಬಾ ಅವರು ಹೇಳೋದನ್ನ ಕೇಳಸ್ಕೋತಾ ಇದ್ರೆ ಯುವರಾಣಿಯ ಸ್ವಯಮ್ವರದ ಥರಾ ಅನ್ನಿಸ್ತಾ ಇತ್ತು.. ಇವಳಿಗೆ ಅದೆಂತಾ ರಾಜಕುಮಾರ ಸಿಗ್ತಾನಪ್ಪಾ ಅಂತ ಎಲ್ರೂ ಅಂದ್ಕೋತಿದ್ವಿ.. ಆಕೆ ಮಾತ್ರ ನಕ್ಕು ಸುಮ್ಮನಾಗ್ತಿದ್ಲು.. ಆಕೆಯ ಮನಸಲ್ಲಿ ಏನಿದೆ ಅಂತ ಅವತ್ತು ನಾವ್ಯಾರೂ ಕೇಳಿರ್ಲಿಲ್ಲಾ..ನಂತ್ರಾ ಡಿಗ್ರಿ ಮುಗ್ಸಿ ಅಪ್ಪನ ಮುದ್ದಿನ ಮಗಳು ಕೆಲಸಾ ಮಾಡ್ತೀನಿ ಅಂತ ಬೆಂಗಳೂರಿಗೆ ಬಂದ್ಲು.. ಇಲ್ಲಿ ಅವಳ ಮನಸಿಗೊಪ್ಪೋ ಕೆಲಸಾನೂ ಸಿಕ್ತು.. ಅದರ ಜೊತೆಗೆ ಆ ಕಂಪನಿಯಲ್ಲೇ ಕೊನೆತನಕ ಜೊತೆಗಿರ್ತೀನಿ ಅನ್ನೋ ಹುಡುಗಾನೂ ಸಿಕ್ಕಿಬಿಡೋದಾ... ಅಲ್ಲಿಂದ ಶುರುವಾಗಿದ್ದು ಸಮಸ್ಯೆ..!ಅಪ್ಪಾ ಊರಲ್ಲಿ ಮಗಳ ಮದುವೆಯ ಬಗ್ಗೆ ಕನಸು ಕಂಡಿದ್ದೇ ಕಂಡಿದ್ದು... ಇತ್ತ ಈ ಹುಡುಗಿ ನನ್ನ ಜೀವನ ನನ್ನ ಆಯ್ಕೆ ಅಂತ ನಿರ್ಧರಿಸಿಬಿಟ್ಟಿದ್ಲು.. ಅದೇನೇ ಆದ್ರೂ ಅಪ್ಪಾ ನನ್ನನ್ನ ಒಪ್ಕೋತಾರೆ.. ನನ್ನ ಆಯ್ಕೆಯನ್ನ ಧಿಕ್ಕರಿಸಲ್ಲಾ.. ಮುದ್ದಿನ ಮಗಳನ್ನ ದೂರ ಮಾಡಲ್ಲಾ ಅನ್ನೋ ವಿಶ್ವಾಸಾ ಇವಳದ್ದು.. ಈ ಮಕ್ಕಳು, ಅಂದ್ರೆ ನಾವು ಎಷ್ಟು ಸೆಲ್ಫಿಶ್ಗಳು ಅಲ್ವಾ.. ? ಅಪ್ಪಾ ಅಮ್ಮನ ಬಗ್ಗೆ , ಅವರ ಯೋಚನೆಗಳ ಬಗ್ಗೆ ಕನಸುಗಳ ಬಗ್ಗೆ ಕಡೆಗೆ ಅವರು ನಮಗಾಗಿ ಬದುಕಿದ ದಿನಗಳ ಬಗ್ಗೆನೂ ಯೋಚಿಸಲ್ಲಾ ನಾವು... ನಮಗೆ ಕಾಣಿಸೋದು ಬರೀ ನಮ್ಮ ಬದುಕು.. ಅದನ್ನೂ ಸರಿಯಾಗಿ ನೊಡೋದಕ್ಕೆ ಎಲ್ಲರಿಗೂ ಬರಲ್ಲಾ.. ತುಂಬಾ ಪ್ರಜ್ಞಾವಂತಳು ಅಂತ ಅಂದ್ಕೊಂಡಿದ್ದ ಈ ನನ್ನ ಗೆಳತಿ ಕತೆನೂ ಅಷ್ಟೆ.. ಆಕೆ ಬಾವಿಯೊಳಗಿನ ಕಪ್ಪೆ ಆಗ್ಬಾರ್ದು , ಹೊರಪ್ರಪಂಚ ನೋಡ್ಬೇಕು ಅಂತ ಹೇಳ್ತಾ ಹೇಳ್ತಾನೇ ತನ್ನದೇ ಕಚೇರಿಯಲ್ಲಿ ತನಗೊಂದು ಬಾಳ ಸಂಗಾತಿಯನ್ನ ಹುಡುಕ್ಕೊಂಬಿಟ್ಲು... ಅವನೋ ಅವಳಪ್ಪನ ಕಲ್ಪನೆಯನ್ನ ಸಾಕಾರಗೊಳಿಸೋದಲ್ಲಾ, ನಮಗೂ ಈಕೆಗೆ ಸರಿಯಾದ ವರ ಅನ್ನಿಸ್ಲಿಲ್ಲಾ.. ನಾನಂತೂ ಅದನ್ನ ಬಾಯ್ಬಿಟ್ಟು ಹೇಳೇಬಿಟ್ಟಿದ್ದೆ..ಅದಕ್ಕವಳು ಮುನಿಸಿಕೊಂಡೂ ಆಗಿತ್ತು.. ಕಡೆಗೆ ಮನಸು ತಿಳಿಯಾದಾಗ ಮಾತಿಗಿಳಿದು ಹೀ ಈಸ್ ಪರ್ಪೆಕ್ಟ್ ಅಂತ ಮನದಟ್ಟು ಮಾಡೋ ಪ್ರಯತ್ನ ಮಾಡಿದ್ಲು.. ಎನಿ ಹೌ ಈ ನಂಬಿಕೆ  ಕೊನೆತನಕ ಹೀಗೇ ಇರ್ಲಿ ಅಂತ ಮನದಾಳದಿಂದ ಹರಸಿದ್ದೆ..

ಅಲ್ವಾ..? ಜಗತ್ತಲ್ಲಿ ಯಾರೂ  ಪರ್ಪೆಕ್ಟ್ ಅಂತ ಇರಲ್ಲಾ..ಆಕೆಗೆ ಅವನು, ಅವನಿಗೆ ಇವಳು ನನಗೋಸ್ಕರಾನೇ ಹುಟ್ಟಿರೋದು ಅಂತ ಅನ್ನಿಸಿಬಿಟ್ರೆ ಸಾಕು ಮದುವೆ ಆಗೋದಕ್ಕೆ... ಆದ್ರೆ ಗಂಡಾಹೆಂಡತಿ ಅಂತ ಆದ್ಮೇಲೂ ನನಗೆ ನೀನು ನಿನಗೆ ನಾನು ಅನ್ನೋ ಮಂತ್ರ ಜೀವಂತವಾಗಿರ್ಬೇಕು ಅಷ್ಟೆ... ಆ ಭರವಸೆಯಲ್ಲೇ ಈ ಬ್ರಾಹ್ಮಣರ ಮನೆಯ ಮುದ್ದಿನ ಹುಡುಗಿ ಲಿಂಗಾಯಿತರ ಮನೆಯ ಸೊಸೆಯಾಗೋ ನಿರ್ಧಾರಕ್ಕೆ ಬಂದ್ಲು..

ಜಾತಿ ಗೀತಿ ಎಲ್ಲಾ ಈಕೆಗೆ ಇಲ್ಲಾ..ಆದ್ರೆ ಮನೆಯಲ್ಲಿ ಅಪ್ಪಾ ? ದಿನ ಬೆಳಿಗ್ಗೆ ಸೂರ್ಯ ಮೂಡೋ ಮೊದ್ಲೇ ಎದ್ದು ತಣ್ಣೀರು ಸ್ನಾನ ಮಾಡಿ ಗಂಟೆಗಟ್ಲೆ ದೇವರ ಮುಂದೆ ಕೂರೋ ಖಟ್ಟಾರ್ ಬ್ರಾಹ್ಮಣನನ್ನ ಈ ಮದುವೆಗೆ ಒಪ್ಪಿಸೋದು ಹೇಗೆ..? ಲಿಂಗಾಯಿತರು ಅಂದ್ರೆ ಅವರಿಗೆ ಅಷ್ಟಕ್ಕಷ್ಟೆ.. ಅವರು ಮಡಿವಂತರು.. ಶಿವಭಕ್ತರು.. ಬ್ರಾಹ್ಮಣರಿಗೆ ಯಾವುದರಲ್ಲೂ ಕಡಿಮೆ ಇಲ್ಲದ ಥರಾ ದೇವರಲ್ಲಿ ನಡ್ಕೋತಾರೆ.. ಮಾಂಸಾ ತಿನ್ನಲ್ಲಾ.. ಎಲ್ಲಾ ಸರಿ ಆದ್ರೂ ಅವರನ್ನ ಒಪ್ಪಲ್ಲಾ.. ಆದ್ರೂ ಇವಳು ಅತ್ತೂಕರೆದು,ಅವನಿಲ್ಲದೆ ಬದುಕೇ ಇಲ್ಲಾ ಅಂತ ಊಟ ಬಿಟ್ಟಮೇಲೆ, ಪಾಪಾ ಆ ತಂದೆಯ ಹೃದಯ ಕರಗಿದೆ.. ಕಷ್ಟದಲ್ಲೇ ಒಪ್ಪಿಗೆ ಸೂಚಿಸಿದ್ರು..ಕೆಲವೇ ತಿಂಗಳಲ್ಲಿ ಮದುವೆ ತಯಾರಿ  ನಡೀತು.. ಆದ್ರೆ ಅವರ ಮನಸಿನೊಳಗೆ ಮಗಳು ಈ ಥರಾ ಮಾಡಿದ್ಲಲ್ಲಾ ಅನ್ನೋ ಕೊರಗು ಇದ್ದೇ ಇತ್ತು.. ನಾನು ಮದುವೆ ಟೈಮಲ್ಲಿ ಮನೆಗೆ ಹೋದಾಗ್ಲೂ ಬೇಸರದಲ್ಲೇ ಹೇಳ್ಕೊಂಡಿದ್ರು..  "ಮಗಾ ನೀನೇ ಹೇಳು ಲಿಂಗಾಯಿತರು ಅಂದ್ರೆ ಬ್ರಾಹ್ಮಣರ ಥರಾನಾ..? ಈ ಜಾತಿ ಧರ್ಮದ ಬೇದ ಬೇಡಾ ಅಂತ ಬಸವಣ್ಣವರು ಎಲ್ಲರಿಗೂ ಲಿಂಗಾಹಾಕಿ ನಾವೆಲ್ಲರೂ ಒಂದೇ ಅಂದ್ರು.. ಅವತ್ತು ಅವರ ಹಿಂದೆ ನಿಷ್ಠಾವಂತ ಬ್ರಾಹ್ಮಣರ್ಯಾರೂ ಹೋಗಿಲ್ಲಾ.. ಹೋದವರಲ್ಲಿ ಹೆಚ್ಚುಪಾಲು ಜನಾ ತುಳಿತಕ್ಕೊಳಗಾದ ಕೆಳವರ್ಗದವರೇ ಅಲ್ವಾ..? ಅವರಿಗೇ ಈ ಜಾತಿ ಪದ್ಧತಿ ಬೇಡ ಅಂತ ಅನ್ನಿಸಿರತ್ತೆ.. ಎಲ್ಲೋ ಅಪವಾದ ಅನ್ನೋ ಥರಾ ಮೇಲ್ವರ್ಗದವರು ಕತ್ತುಬಗ್ಗಿಸಿರಬಹುದು ಅಷ್ಟೆ.. ಈ ಹುಡುಗ ಅಂತೂ ಕಡುಗಪ್ಪು.. ಹೇಗೋ ಏನೋ ಇವಳ ಜೀವನ " ..ಅಂತ ನಿಟ್ಟುಸಿರು ಬಿಟ್ಟಿದ್ರು.. ನಂಗೆ ಏನ್ ಹೇಳ್ಬೇಕು ತೋಚ್ಲಿಲ್ಲಾ.. ಆದ್ರೂ ಚನ್ನಾಗಿರ್ತಾರೆ ಬಿಡಿ.. ಜಾತಿ ಅನ್ನೋದು ಹುಟ್ಟಿನಿಂದ ಬರೋದಕ್ಕಿಂತ ಕ್ರಿಯೆಯಿಂದ ಸಂಸ್ಕಾರದಿಂದ ಬರಬೇಕು..ಅದರಲ್ಲಿ ಹುಡುಗ ಶುಭ್ರಬಿಳುಪು ಅಂತ ಅವಳೇ ಅಂತಿದ್ದಾಳಲ್ಲಾ.. ತುಂಬಾ ಯೋಚಿಸ್ಬೇಡಿ.. ಇಬ್ರೂ ಚನ್ನಾಗಿರ್ತಾರೆ ಅಂದಿದ್ದೆ.. ಸಂಸಾರದಲ್ಲಿ ಬರೋ ಚಿಕ್ಕಪುಟ್ಟ ಸಮಸ್ಯೆಗಳನ್ನ ಬಿಟ್ರೆ ಇಬ್ರೂ ಚನ್ನಾಗೂ ಇದ್ದಾರೆ.. ಆದ್ರೆ ಅಡ್ಜೆಸ್ಟ್ ಆಗೋದು..? ಹೇಗೇ ಇದ್ರೂ ಅದು ಅಷ್ಟು ಈಸಿ ಅಲ್ಲಾ..ಮದುವೆಯಿಂದ ಶುರುವಾಗಿದೆ ಡಿಫರೆನ್ಸು... ಸಂಪ್ರದಾಯ ಆಚರಣೆ ಎಲ್ಲಾ ವಿಭಿನ್ನ.. ಕಡೆಗೆ ಬ್ರಾಹ್ಮಣರ ಮನೆಯ ಹುಡುಗಿ ಅಪ್ಪಟ ಲಿಂಗಾಯಿತ ಶೈಲಿಯಲ್ಲಿ ಲಗ್ನಾ ಮಾಡ್ಕೊಂಡ್ಲು.. ಮದುವೆ ದಿನ ಸಿಡಿ ಸಿಡಿ ಅಂತಾನೇ ಲಿಂಗಾನೂ ಹಾಕಿಸ್ಕೊಂಡ್ಲು.. ಕಡೆಗೆ ಒಂದು ದಿನ ಆ ಲಿಂಗ ಮೈ ಮೇಲಿಲ್ಲಾ.. ಅದಕ್ಕೇ ಈ ಹುಡುಗಿ ಅವರ ಮನೆಯಲ್ಲಿ ಯಾರಿಗೂ ಆಗ್ಬರಲ್ಲಾ... ಆಕೆ ಶಿವಮೆಚ್ಚೋ ಥರಾ ಬದುಕ್ತಾ ಇಲ್ಲಾ.. ದೇವರ ಪೂಜೆ ಮಾಡಲ್ಲಾ.. ಹಿರಿಯರಿಗೆ ನಮಿಸಲ್ಲಾ.. ಗಂಡನಿಗೂ ರಿಸ್ಪೆಕ್ಟ್ ಕೊಡಲ್ಲಾ... ಹೀಗೇ ಅವರ ಮನೆಗೆ ಹೋದ್ರೆ  ಆರೋಪಗಳ ಸುರಿಮಳೆ ಆಗತ್ತೆ.. ಅದನ್ನ ಕೇಳಿಸ್ಕೊಂಡು ಸುಮ್ಮನಿರೋದ್ಬಿಟ್ಟು ವಿಧಿ ಇಲ್ಲಾ.. ಈಕೆ ನಮ್ಮ ಮಾತು ಕೇಳಲ್ಲಾ..

ಅಷ್ಟಕ್ಕೂ ಯಾರೇ ಆದ್ರೂ ಯಾರದೋ ಲೈಫನ್ನ ಯಾಕೆ ತಮ್ಮ ಕಂಟ್ರೋಲೊಳಗೆ ತಗೋಬೇಕು..? ಅವರಿಚ್ಛೆಯಂತೆ ಅವರು ಬದುಕ್ಲಿ.. ಬದುಕೋದಕ್ಕೆ ಬಿಡ್ಲಿ.. ಸಮಾಜ ಏನ್ ಅಂದ್ಕೊಳ್ಳತ್ತೋ ಅನ್ನೋ ಜನಕ್ಕೆ ನಾವೂ ಆ ಸಮಾಜದ ಭಾಗ.. ನಾಳೆ ನಮ್ಮಂತೆನೇ ಸಮಾಜ ಆಗ್ಬಾದರ್ು ಅಂತೇನೂ ಇಲ್ಲಾ ಅಲ್ವಾ..? ಅನ್ನೋ ಯೋಚನೆ ಯಾಕೆ ಬರಲ್ಲಾ..? ಏನೋ ಒಟ್ಟಲ್ಲಿ ಈ ಹುಡುಗಿ ಬದಲಾಗಲ್ಲಾ.. ಈ ಶಿವರಾತ್ರ್ರಿಗೆ ಶಿವಲಿಂಗವನ್ನ ಮೈಗಂಟಿಸಿಕೊಳ್ಳಲ್ಲಾ ಅಂತ ಆಕೆ ಹೇಳಿದ್ಮೇಲೆ ಮುಗೀತು ಹಠಾ ಅಂದ್ರೆ ಹಠಾ.. ಇವತ್ತು ರಜೆ ತಗೊಂಡು ಮನೇಲೇ ಇದ್ದಾಳೆ.. ನಾಳೆ ಬಂದಾಗ ಆಕೆಯ ಮೂಡು ಯಾವ ಥರಾ ಇರತ್ತೋ ಗೊತ್ತಿಲ್ಲಾ... ಶಿವರಾತ್ರಿಯ ಜಾಗರಣೆ ಹೇಗಿರತ್ತೆ ನೋಡ್ಬೇಕು ಅಂದ್ಕೋತಾ ನನ್ನ ಪಾಡಿಗೆ ನಾನು ಕೆಲಸಾ ಮಾಡ್ತಾ ಇದ್ದೆ.. ಆಗ್ಲೇ ನನ್ನ ಮತ್ತೊಬ್ಬ ಲಿಂಗಾಯಿತ ಕಲೀಗ್ ಪಕ್ಕ ಬಂದು ಕೂತ್ಲು... ಮತ್ತದೇ ಲಿಂಗದ ಮಾತು.. ಆಕೆಯ ಮನೆಯಲ್ಲಿ ಅಪ್ಪಾ ಅಂಥಾ ದೈವ ಭಕ್ತರಲ್ವಂತೆ.. ಆದ್ರೆ ಅಮ್ಮಾ ಮಾತ್ರ ಒಂದು ದಿನಾನೂ ತಪ್ಪದೆ ಲಿಂಗದ ಪೂಜೆ ಮಾಡ್ತಾರೆ ಅಂದಿದ್ಲು.. ನಾನು ಸುಮ್ಮನೆ ನೀನು ಅಂದೆ.. ಓ..ಇಲ್ಲಪ್ಪಾ ನಂಗೆ ಆ ಲಿಂಗಾ ಹಾಕ್ಕೊಳ್ಳೋದೆಲ್ಲಾ ಆಗಲ್ಲಾ ಯು ನೋ ಅಂತ ಮುಖಾ ಕಿವುಚಿದ್ಲು...

ಶಿವ ಶಿವಾ .. ಹುಟ್ಟಾಲಿಂಗಾಯಿತರಿಗೂ ಲಿಂಗಾದಾರಣೆ ಬೇಡಾ ಅಂತ ಅನ್ನಿಸತ್ತಾ..? ಅಪ್ಕೋರ್ಸ್ ಬ್ರಾಹ್ಮಣರ ಮನೆಯಲ್ಲಿ ಎಷ್ಟು ಹುಡುಗರು ಸಂಧ್ಯಾವಂದನೆ ಮಾಡ್ತಾರೆ..? ಎಷ್ಟು ಹುಡುಗೀರು ಮಟ್ಟಸವಾಗಿ ಕೂತು ಸಹಸ್ರನಾಮ ಓದ್ತಾರೆ ಅಲ್ವಾ..? ಈ ಆಚರಣೆಗಳೆಲ್ಲಾ ಅಲ್ಲಿ ಇಲ್ಲಿ ಅಂತಲ್ಲಾ ಎಲ್ಲೂ ಉಳ್ಕೋತಿಲ್ಲಾ.. ಇದಕ್ಕೆ ಧರ್ಮ ಮತ್ತು ಆಚರಣೆಯ ವಿಶಯದಲ್ಲಿ ನಮಗಿರೋ ಫ್ರೀಡಮ್ಮೇ ಕಾರಣ ಅನ್ಸತ್ತೆ.. ಏನೇ ಆದ್ರೂ ಕೆಲ ಆಚರಣೆಗಳು ಕಟ್ಟುಪಾಡುಗಳು ಮೂಡನಂಬಿಕೆಗಳಂತ ಅನ್ನಿಸಿದ್ರೂ , ಅರ್ಥೈಸಿಕೊಂಡು ಸರಿಯಾದ ರೀತಿಯಲ್ಲಿ ಮಾಡಿದ್ರೆ ಲಾಭದಾಯಕ ಅನ್ನೋದು ನನ್ನ ಅಭಿಪ್ರಾಯ...

ಅಂದ್ಹಾಗೆ ಈ ಶಿವರಾತ್ರಿಯ ದಿನ ನನಗೆ ಅದ್ಯಾಕೋ ಥಟ್ ಅಂತ ಮನಸಿಗೆ ಬಂದಿದ್ದು ಶಿಪೂಜೆಯಲ್ಲಿ ಕರಡಿ  ಥರಾ ನುಗ್ಬೇಡಾ ಅನ್ನೋ ಮಾತು.. ಹುಡುಗಾ ಹುಡುಗೀರ ನಡುವೆ ಅಥವಾ ನವವಿವಾಹಿತರ ಮಧ್ಯೆ ಹೋದಾಗೆಲ್ಲಾ ಈ ರೀತಿ ಅನ್ಸಕೊಂಡಿದೀನಿ.. ಏಕಾಂತಕ್ಕೆ ಭಂಗ ತರಬಾರ್ದು ಅಂತ ಹೀಗ್ ಹೇಳ್ತಾರೆ ಅಂದ್ಕೋತಿನಿ.. ಆದ್ರೆ ಶಿವಪೂಜೆಗೇ ಯಾಕ್ ಹೋಲಿಸ್ತಾರೆ ? ಅನ್ನೋ ಪ್ರಶ್ನೆ ಮಾತ್ರ ಇಷ್ಟು ದಿನದ ಮೇಲೆ ಈಗ ಎದ್ದಿದೆ..  ಉತ್ತರ ಹುಡಕ್ತಿದೀನಿ.. ಸಹಾಯ ಮಾಡಿ ಪ್ಲೀಸ್...

 

No comments:

Post a Comment