Tuesday, February 15, 2011

ಪ್ರೀತಿಯೆ ನಿನ್ನ ವಿಳಾಸವನ್ನ...ನೀನು ಇವತ್ತು ನಂಗೆ ಹೀಗೆ ಸಿಗ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲಾ.. ಎಷ್ಟಂದ್ರೂ  ಮೊಟ್ಟಮೊದಲ ಕ್ರಶ್ ಅಲ್ವಾ.?:)) ಅಷ್ಟು ಬೇಗ ಮರೆಯಾಗಿಬಿಡ್ತೀಯಾ..? ಮನಸ ಮೂಲೆಯಲ್ಲೊಂದು ಮಧುರ ನೆನಪಿರೋದು ಬೇಡ್ವಾ..? ಪುಸ್ತಕದ ಪುಟಗಳಲ್ಲೆಲ್ಲೋ ಅಡಗಿ ಕುಂತಿದ್ದವು ಆ ಪುಟ್ಟ ಕೈಲಿ ಮೂಡಿದ್ದ ಅಪ್ಪಟ ಪ್ರೀತಿಯ ಎಳೆಗಳು..ಬಿಡಿಸಿ ನೋಡಿದರೆ ಸಂಭ್ರಮ.. ಪ್ರೇಮ ಸಂಭ್ರಮ..!ಹೇಯ್,
     ನಾನು ನಿಂಜೊತೆ ತುಂಬಾ ತುಂಬಾ ಚಾಕಲೇಟ್ ತಿಂದಾಗ ಖುಶಿಯಾಗತ್ತಲ್ಲಾ ,ಅಷ್ಟು ಖುಶಿಯಾಗಿರ್ತೀನಿ.. ನಂಗೆ ನೀನು ಮನಕಟ್ಟೋದಿಷ್ಟಾ.. ಅದರಲ್ಲೂ ತೆಂಗಿನಗರಿಯನ್ನ ನಿಲ್ಲಿಸಿ ಕಟ್ತೀಯಲ್ಲಾ, ಅದಿಷ್ಟ.. ನಾನು ಗರಿ ತಂದ್ಕೊಡ್ತೀನಿ.. ನೀನು ಕಂಬಾ ನಿಲ್ಸು.. ದಿನಕ್ಕಿಂತ ಸ್ವಲ್ಪ ದೊಡ್ಡದಿರ್ಲಿ ಮನೆ.. ಹೊರಗೆ ಕೂತ್ಕೊಂಡು ಅಡುಗೆ ಮಾಡೋದು ಚನ್ನಾಗನ್ಸಲ್ಲಾ.. ನಿನಗೆ ಏನಿಷ್ಟಾ ಹೇಳು.. ಅದನ್ನೇ ಮಾಡ್ತೀನಿ.. ಎಲ್ರೂ ಚನ್ನಾಗ್ ತಿಂದ್ಕೊಂಡು ಮಲಗಿದ್ವಿ ಅಂದ್ರೆ, ಮತ್ತೆ ಆಡೋದೇ ನನಪಾಗ್ಬಾರ್ದು..ಆದ್ರೂ ಜೋಕಾಲಿ ಆಡದೇ ಇರೋದಕ್ಕೆ ನನ್ನತ್ರ ಆಗಲ್ಲಾ.. ನಂಗೆ ಅವಳಷ್ಟು ಚನ್ನಾಗಿ ಜೀಕೋದಕ್ಕೆ ಬರಲ್ವಲ್ಲೋ ..ಪ್ಲೀಸ್ ತೂಗ್ತೀಯಾ.. ? ನಾನು ಕೇಳೋದೇ ಬೇಡಾ, ಕಷ್ಟಾ ಪಡೋದನ್ನ ನೋಡಿ ಬಂದು ಕೇಳೋ ಮೊದ್ಲೇ ಸಹಾಯ ಮಾಡ್ತೀಯಲ್ಲಾ , ಅದೇ ನಂಗಿಷ್ಟಾ ?


ನಿಂಗೆ ಅಮ್ಮಾ ತೆಕ್ಕೊಟ್ಟ ಕಪ್ಪು ಗೆರೆ ಗೆರೆಯ ಶರ್ಟ್ ಇದೆಯಲ್ಲಾ ಅದನ್ನೇ ಹಾಕ್ಕೊಳೋ.. ಅದು ನಿಂಗೆ ತುಂಬಾ ಚನ್ನಾಗ್ ಕಾಣಿಸತ್ತೆ.. ನನ್ನ ದೃಷ್ಟಿನೇ ತಾಕ್ಬಿಡತ್ತೋ ಏನೋ.. ತಾಕಿದ್ರೂ ಚಿಂತೆ ಮಾಡ್ಬೇಡಾ.. ನಾನು ದೃಷ್ಟಿ ತೆಗೆಯೋದ್ ಕಲ್ಕೋತಿನಿ.. ಅದೇನ್ ಕಷ್ಟಾ ಇಲ್ಲಾ ಬಿಡು.. ನಂಗೆ ಹುಶಾರಿಲ್ಲಾ ಅಂದಾಗೆಲ್ಲಾ ಅಜ್ಜಿ ದೃಷ್ಟಿ ತೆಗೀತಾರೆ.. ಅದ್ಬಿಡು.. ನೀನು ಅದಹೆಂಗ್ ಕಲಿತ್ಯೋ ಚಿತ್ರಾ ಬಿಡಿಸೋದನ್ನಾ.. ? ಎಷ್ಟು ಚನ್ನಾಗ್ ಬಿಡಿಸ್ತೀಯಾ ಗೊತ್ತ..? ನಾನು ಮೊನ್ನೆ ಅಷ್ಟೊತ್ತಿಂದ ನೀನ್ ಕೈಯ್ಯನ್ನೇ ನೊಡ್ಕೊಂಡು ಕೂತಿದ್ನಲ್ಲೋ.. ಬಿಡಿಸೋದು ಏನೂ ಕಷ್ಟಾ ಇಲ್ಲಾ ಅನ್ನಿಸಿಬಿಟ್ಟಿತ್ತು.. ಮನೆಗೆ ಹೋಗಿ ಅದೆಷ್ಟು ಹಾಳೆ ಹರಿದಿದಿನಿ ಗೊತ್ತಾ..? ಬರ್ಲೇ ಇಲ್ಲಾ ಕಣೊ ಬಿಡಿಸಕೆ.. ನಂಗೂ ಹೇಳ್ಕೊಡ್ತೀಯಾ ಪ್ಲೀಸ್..? ನಂಗೆ ಕಲಿಸೋದಕ್ಕೋಗಿ  ನನ್ನ ಡ್ರಾಯಿಂಗ್ ಬುಕ್ ತುಂಬಾ ನೀನ್ ಬಿಡಿಸಿದ್ದೇ ಚಿತ್ರಗಳೇ ತುಂಬ್ಕೊಂಡಿವೆ.. ಅದೆಲ್ಲಾ ನಂಗಿಷ್ಟಾ..

ಆದ್ರೂ ನೀನು ಒಮ್ಮೊಮ್ಮೆ ಕೆಟ್ಟವನಾಗ್ಬಿಡ್ತೀಯಾ.. ಅವತ್ತು ಟೂರ್ಗೆ ಹೋದಾಗ ನನ್ನ ಬಿಟ್ಟು ಓಡ್ಹೋದ್ಯಲ್ವಾ..? ನಿಂಗೆ ನನ್ನ ಜೊತೆಗೆ ಇರ್ಬೇಕು ಅನ್ನಿಸ್ಲಿಲ್ವಾ ..? ನನ್ನ ಡ್ರೆಸ್ ನೋಡಿ ಎಲ್ರೂ ಹೊಗಳಿದ್ರು.. ನೀನೊಬ್ನು ಚನ್ನಾಗಿದೆ ಅಂತ ಹೇಳ್ಳಿಲ್ಲಾ.. ನಾನು ಚನ್ನಾಗನ್ಸಿಲ್ವೇನೋ ನಿಂಗೆ..? ಮತ್ಯಾಕೆ ನನ್ನ ಸುತ್ತಾ ಮುತ್ತಾ ಸುಳೀತೀಯಾ.. ನಾನ್ ತಗೊಂಡ ಐಸ್ ಕ್ರೀಮ್ ತಿಂತೀಯಾ..? ನನ್ನ ಕರ್ಚೀಪಲ್ಲೇ ಯಾಕ್ ಬಾಯ್ ಒರಸ್ಕೋಬೇಕು..? ನಾನು ನಿಂಗೆ ಏನೂ ಕೊಡಲ್ಲಾ.. ಉಹು, ಹಾಗ್ ಹೇಳೋದಕ್ಕೇ ನನ್ನತ್ರಾ ಆಗ್ಲೇ ಇಲ್ವಲ್ಲೋ.. ನೀನಂದ್ರೆ  ನಂಗಿಷ್ಟ ಕಣೊ.. ನೀನು ಹಯಸ್ಟ್ ಮಾರ್ಕ್ಸ್ ತೆಗೆದಾಗ ನಾನು ಹಬ್ಬಾ ಮಾಡ್ತೀನಿ ಗೊತ್ತಾ..? ಯಾರಾದ್ರೂ  ನಿನ್ನ ಹೊಗಳಿದ್ರೆ , ನಂಗೆ ತುಂಬಾ ಖುಶಿ ಆಗತ್ತೆ.. ಆದ್ರೂ ನೀನು ನಮ್ಮ ಕ್ಲಾಸೇ ಆಗ್ಬೇಕಿತ್ತು.. ಇಡೀ ದಿನ ಜೊತೆಗೇ ಇರಬಹುದಿತ್ತು.. ಹೊಗ್ಲಿ ಬಿಡು ನಿನಗೂ ನಾನಂದ್ರೆ ಇಷ್ಟಾ ಅಲ್ವಾ..? ನನ್ನ ಹುಡುಕ್ಕೊಂಡು ಬರ್ತೀಯಾ ಅಲ್ವಾ..? ಉಹು ಬರ್ಲೇ ಇಲ್ಲಾ.. ಯಾವಾಗ್ಲೂ ಬೇರೆಯವರನ್ನೇ ಮಾತಾಡಿಸ್ತಾ ಇದ್ದೆ.. ಆದ್ರೆ ನನ್ನನ್ನ ನೋಡದೇ ಇರ್ತಿರ್ಲಿಲ್ಲಾ.. ಅದಕ್ಕೂ ನಾನು ಖುಶಿಯಾಗ್ತಿದ್ದೆ ಬಿಡು.. ಕದ್ದುಮುಚ್ಚಿ ಪ್ರೀತ್ಸೋದು ಅಂದ್ರೆ ಇದೇನಾ..? ಗೊತ್ತಿಲ್ಲಾ ,ಕೇಳೋಣಾ ಅಂದ್ರೆ ನೀನಿರ್ಲಿಲ್ಲಾ. ಎಕ್ಸಾಮ್ ಬರೆದು ಹೊರಟೋಗಿದ್ದೆ..

 ರಿಸಲ್ಟ್ ದಿನ   ಮನೇಲಿದ್ದ ಬೆಲ್ಲದುಂಡೆಯನ್ನ ಕದ್ದು ತಂದಿದ್ದೆ ನಾನು.. ನಂಗೊತ್ತಿತ್ತು ನೀನ್ ಚನ್ನಾಗಿ ಮಾಡಿರ್ತೀಯಾ ಅಂತ..  ನೋಟೀಸ್ ಬೋರ್ಡಲ್ಲಿ ನಿನ್ನ ಹೆಸರಾಕಿ ಕಂಗ್ರಾಟ್ಸ್ ಅಂತ ಬರೆದಿದ್ರು.. ಅದನ್ನ ನೋಡಿ ಎಂಥಾ ಖುಶಿ ಗೊತ್ತಾ..? ನೀನು ಅದನ್ನ ನೋಡಿದ ತಕ್ಷಣ ಸಿಹಿ ತಿನ್ನಿಸಬೇಕು ಅಂದ್ಕೊಂಡಿದ್ದೆ.. ಎಲ್ರೂ ಹೋದ್ರು.. ನಾನು ಆ ಕಡೆ ಕಂಬದ ಮರೆಯಲ್ಲಿ ಕೂತೇ ಇದ್ದೆ.. ಯಾಕೋ ಬರ್ಲಿಲ್ಲಾ ನೀನು..? ನಿನ್ನ ತಂಗಿ ಮಧ್ಯಾನ್ಹಾ ಆಟಾ ಆಡ್ಕೊ0ಡು ಹೋಗ್ತಾ ಇದ್ದಾಗ್ಲೇ ಗೊತ್ತಾಗಿದ್ದು ನಿಂಗೆ ಜ್ವರ ಅಂತ.. ಅದಕ್ಕೂ ಈಗೇ ಬರ್ಬೇಕಿತ್ತಾ..? ಓಡ್ಕೊಂಡು ನಿಮ್ಮನೆ ತನಕ ಬಂದ್ಬಿಡ್ಬೇಕು ಅನ್ಸಿತ್ತು.. ಉಹು ಧೈರ್ಯಾ ಸಾಕಾಗ್ಲಿಲ್ಲಾ.. ಮನೆಕಡೆ ಹೊಗೋರೆಲ್ಲಾ ಹೊರಟು ಬಿಟ್ಟಿದ್ರು.. ದೂರದಲ್ಲಿ ವೆಹಿಕಲ್ ಸೌಂಡ್ ಬೇರೆ ಆಗ್ತಾ ಇತ್ತು.. ನಿಂಗೊತ್ತಲ್ವಾ ನಾನೆಷ್ಟು ಭಯಾ ಪಡ್ತೀನಿ ಅದಕ್ಕೆ ಅಂತ..ಹಂಗಾಗಿ ನಿನ್ನ ನೊಡೋದಕ್ಕೆ ಬರ್ಲಿಲ್ಲಾ.. ನೀನು ಅರ್ಥಮಾಡ್ಕೋತೀಯಾ ಅಂದ್ಕೊಂಡಿದ್ದೆ.. ಆದ್ರೆ ನಿಂಗೆ ಗೊತ್ತಾಗ್ಲೇ ಇಲ್ಲಾ ಹೊರಟೋದೆ.. ಮತ್ತೆ ಸಿಗಲಿಲ್ಲಾ..

ಎಷ್ಟೋ ವರುಷಗಳು ಕಳೆದುಹೋಗಿದ್ವು.. ನೀನು ಇವತ್ತು ನನ್ನ ಡಿಯೋದ ಪಕ್ಕಾ ಬೈಕ್ ತಂದು ನಿಲ್ಲಿಸ್ತೀಯಾ ಅಂತ ಖಂಡಿತಾ ಅಂದ್ಕೊ0ಡಿರ್ಲಿಲ್ಲಾ.. ಅಷ್ಟಕ್ಕೂ ನೀನೂ ಇಲ್ಲೇ ಇದೀಯಾ ಅನ್ನೋದೇ ಗೊತ್ತಿರ್ಲಿಲ್ಲಾ ನಂಗೆ.. ಇವತ್ತು ನಿನ್ನ ನೋಡಿ ಸಕ್ಕತ್ ಖುಶಿ ಆಯ್ತು.. ಆದ್ರೆ ನನ್ನಿಷ್ಟದ ಫೇಸ್ಟ್ರಿ ತಿಂದಾಂಗ್ ಆಗ್ಲಿಲ್ಲಾ ನೋಡು.. :)) ಅವತ್ತು ಹೇಳಲಾಗದಿದ್ದನ್ನೆಲ್ಲಾ ಇವತ್ತು ಹೇಳಿಬಿಡಬೇಕು ಅನ್ನಿಸ್ಲೇ ಇಲ್ಲಾ .. ನೀನು ಮದೊಲಿನ ಥರಾ ಇರ್ಲೇ ಇಲ್ಲಾ ಅಲ್ವಾ.. ? ಅಷ್ಟಕ್ಕೂ ನನ್ನ ಇಷ್ಟಾನೂ ತುಂಬಾನೇ ಬದಲಾಗಿದೆ.. ಈಗ ನೀನು ಅಂದ್ರೆ ನಂಗಿಷ್ಟಾ ಕಣೊ ಅಂತ ನಾನಂತೂ ಹೇಳಲ್ಲಾ.. ಹಂಗೆ ಹೇಳೋ ಹಾಗಿದ್ರೆ ಇಷ್ಟು ದಿನದಲ್ಲಿ ಎಷ್ಟೊಂದು ಜನರಿಗೆ ಹೇಳ್ಬೇಕಿತ್ತು ಗೊತ್ತಾ..?!:)


ನಾನು ಪ್ರೇಮ ಪತ್ರ ಬರೆದಿದ್ದು ನಿನಗೊಬ್ಬನಿಗೇ ಅಲ್ಲಾ.. ನನ್ನ ಕಪಾಟಿನಲ್ಲಿ ಕಟ್ಟಿದೆ.. ಬಿಚ್ಚಿದ್ರೆ ಎಷ್ಟೊಂದು ಕ್ಯಾರೆಕ್ಟರ್ಗಳು..! ಬಣ್ಣ ಬಣ್ಣದ ಕಥೆಗಳು.. ಬಟ್ ನೋ ಯೂಸ್.. ಯಾರಿಗೂ ಕೊಟ್ಟಿಲ್ಲಾ.. ಎಲ್ಲರೂ ಜಸ್ಟ್ ಮಿಸ್. ಬಟ್ ಸ್ವಲ್ಪ ದಿನಗಳ ನಂತ್ರಾ ಕೊಡದೇ ಇದ್ದದ್ದೇ ಒಳ್ಳೇದು ಅನ್ಸಿದೆ.. :) ಈಗ ಬರೆದಿಟ್ಟಿರೋ ಲವ್ ಲೆಟರ್ಗಳನ್ನ ಯಾರ ಅಡ್ರೆಸ್ಸಿಗೆ ಹಾಕ್ಬೇಕು ಗೊತ್ತಾಗ್ತಾ ಇಲ್ಲಾ.. ಹಾಗೇ ಇಟ್ಟಿರ್ತೀನಿ.. ಒಂದಲ್ಲಾ ಒಂದು ದಿನ ಆ ಅಕ್ಷರಗಳಿಗೆ ಜೀವ ಬರತ್ತೆ.. ಮಗುವಾಗಿ ಪ್ರೀತಿಸೋದ್ರಲ್ಲಿ ನಿಜಕ್ಕೂ ಮಜಾ ಇದೆ.. ಆದ್ರೆ ಅದನ್ನೂ ಮೀರಿದ ಜೀವಂತಿಕೆ ಈಗ ನನ್ನಲ್ಲಿದೆ.. ಪ್ರೀತಿಯ ವಿಳಾಸವನ್ನ ಹುಡುಕ್ಕೊ0ಡು ಎಲ್ಲಿಗೂ ಹೋಗಬೇಕಾಗಿಲ್ಲಾ..  ಅದು ನನ್ನೊಳಗಿದೆ .. ನನ್ನವರಲ್ಲಿದೆ.. ನನ್ನ ಸುತ್ತಲೂ ಇದೆ.. ಪ್ರೀತಿಯನ್ನ ಹಂಚೋದ್ರಲ್ಲಿ ಖುಶಿ ಇದೆ.. ಒಂದು ಅರ್ಥವತ್ತಾದ ಪ್ರೀತಿ ಎಲ್ಲರಬದುಕಲ್ಲೂ ಬದುಕಾಗಿರ್ಲಿ.. ಸದಾ ಜೀವಂತವಾಗಿರ್ಲಿ.. ಜೀವನದಿಯಾಗಿ ಹರೀಲಿ..

 

4 comments:

 1. ninna impress madlikke, chocolate saaku :) le innu est love letter ittidye :p

  ReplyDelete
 2. pratiyondu channagira mukhakkuu kodostappa..!:)))

  ReplyDelete
 3. Beautiful..eleya mansu hage alwa yochane madodu...
  aadre mansu yavaglu eleede alwa..:)

  ReplyDelete