Tuesday, January 18, 2011

ಅಮ್ಮಾ ನಾನು ದೇವರಾಣೆ...!!

       ಆಗ ನಾನು ಮೂರುವರೆ ನಾಲ್ಕು ವರ್ಷದವಳಿರ್ಬೇಕು.. ಅದೆಂತಾ ಹಟ... ಅಬ್ಬಬ್ಬಾ ಅದೆಲ್ಲಿಂದ ನನಗೆ ಬೇಸರ ಆವರಿಸಿತ್ತೋ ಆಕ್ರೋಶ ಅಟಕಾಯಿಸಿಕೊಂಡಿತ್ತೋ ಭಗವಂತಾನೇ ಬಲ್ಲ.. ಒಂದೇ ಒಂದು ಉಸಿರಲ್ಲಿ ಓಡಿದ್ದೆ ಓಡಿದ್ದೆ ಮೋಸ್ಟ್ಲಿ ರೇಸ್ ಕಾರಿನ ಸ್ಪೀಡೂ ನನ್ನ ಪುಟ್ಟ ಕಾಲಿನ ವೇಗಕ್ಕೆ  ಸರಿಸಾಟಿ ಆಗ್ತಿರ್ಲಿಲ್ವೇನೋ.. ಇನ್ನು ರಸ್ತೆ , ಅದನ್ನ ರೋಡು ಅನ್ನೋದಕ್ಕೇ ಸಾಧ್ಯಾನೇ ಇರ್ಲಿಲ್ಲಾ.. ಊರಲ್ಲಿರೋ ಕಲ್ಲುಗಳನ್ನೆಲ್ಲಾ ತಂದು ಅಲ್ಲಿ ಹೊಯ್ದಿರೋ ಥರಾ ಇತ್ತು.. ಸಣ್ಣದು ದೊಡ್ಡದು ದುಂಡಗಿರೋದು ಮೊನಚಾಗಿರೋದು,ಸ್ವಲ್ಪ ಅಜಾಗರುಕತೆಯಲ್ಲಿ ಅಡಿ ಇಟ್ರೂ ಅಪಾಯ ಗ್ಯಾರಂಟಿ.. ಅಂಥಾ ಜಾಗದಲ್ಲಿ ನಾನು ಜೀವಬಿಟ್ಟು ಓಡಿದ್ದೆ.. ಕಣ್ಣು ಕೆರೆಯಾಗಿತ್ತು.. ಗಲ್ಲದ ಮೇಲೆ ಜೋಗದಂತೆ ಧುಮ್ಮಿಕ್ತಾ ಇದ್ದ ಕಣ್ಣೀರು.. ಅದರ ಜೊತೆಗೆ ಊರಿಗೆ ಊರೇ ನಡುಗುವ ಬುಲ್ಡೋಜರ್ ಸೌಂಡ್ ಥರದ ಅಳು.. ಅದನ್ನ ನೋಡಿ ದಾರಿಯಲ್ಲಿದ್ದ ಭಯಾನಕ ಕಲ್ಲುಗಳಿಗೂ ಭಯವಾಗಿತ್ತೋ ಅಥವಾ ಅವು ನನ್ನ ಮೇಲೆ ಕರುಣೆ ತೋರಿಸಿದ್ವೋ ಗೊತ್ತಿಲ್ಲಾ.. ಒಟ್ಟಲ್ಲಿ ಪುಟ್ಟ ಪಾದಗಳಿಗೆ ಪೆಟ್ಟಾಗದ ಹಾಗೆ ಸಪ್ಪಗೆ ಮಲಗಿದ್ವು.. ಅವುಗಳ ಪೈಕಿ ಒಂದೇ ಒಂದು ಹೊರಳಾಡಿದ್ರೂ , ನನಗೇನಾಗ್ತಿತ್ತೇನೋ..! ಮತ್ಯಾವ ಪಾಟರ್ಿಗೆ ಏನಾಗದಿದ್ರೂ ಮುಖದ ಶೇಫಂತೂ ಔಟಾಗ್ತಿತ್ತು.. ಇವತ್ತಿಗೂ ಅದು ನೆನಪಿರೋ ಹಾಗೆ ಕಲೆಗಳು ಉಳ್ಕೋತಿದ್ವು.. ಈಗ್ಲೂ ಊಳ್ಕೊಂಡಿವೆ.. ಆದ್ರೆ ಅದು ನನ್ನ ಮೇಲಲ್ಲಾ...!

 ನಾನು ಇಷ್ಟೆಲ್ಲಾ ಮಾಡಿದ್ದು ಅಜ್ಜಿಯ ಮನೆಗೆ ಹೋಗಬೇಕು ಅಂತ.. ನಮ್ಮ ಮನೆಯಿಂದ ಸುಮಾರು ತೊಂಬತ್ತು ತೊಂಬತ್ತೈದು ಕಿಲೋಮೀಟರ್ ದೂರ ಇರ್ಬೇಕು ನಮ್ಮಮ್ಮನ ತವರು ಮನೆ.. ಚಿಕ್ಕವಳಿದ್ದಾಗ ಅಲ್ಲಿಗೆ ಹೊಗೋದು ಅಂದ್ರೆ ಸಂಭ್ರಮ.. ಆಗ ಅದು ಅಜ್ಜಿ ತಾತನ್ನ ನೋಡ್ತೀನಿ ಅನ್ನೋ ಖುಶಿ ಇರ್ಲಿಕ್ಕಿಲ್ಲಾ.. ಅಲ್ಲಿ ಆಡೋದಕ್ಕೂ ಜನಾ ಇರ್ಲಿಲ್ಲಾ ಬಿಡಿ..! ಆದ್ರೆ ದೊಡ್ಡದಾಗಿ ಸೌಂಡ್ ಮಾಡ್ಕೊಂಬರೋ ಕೆಂಪು ಬಸ್ಸಲ್ಲಿ ಅಲ್ಲಿಗೆ ಹೋಗ್ಬೇಕು.. ಬಸ್ ಹತ್ತಿದ ತಕ್ಷಣ ಅಮ್ಮನ ಕೈ ಬಿಡಿಸಿಕೊಂಡು ಓಡೋಗಿ ಕಿಟಕಿ ಸೀಟಲ್ಲಿ ಕೂತ್ಮೇಲೆ ಮೂಡೋ ನಗು ಇದ್ಯಲ್ಲಾ , ಅದು ಪಿಲಿಪ್ಸ್ ಲೈಟ್ ಹಚ್ಚಿದಹಾಗೆ ಇರೋದು.. ನಂತ್ರಾ ಕಿಟಕಿಯ ಸರಳುಗಳಾಚೆ ದೃಷ್ಟಿ ನೆಟ್ಬಿಟ್ರೆ, ಅಬ್ಬಬ್ಬಾ ಏನ್ ಅದ್ಭುತ ಅಂದ್ರೆ ಗಿಡ ಗಂಟಿ ಮರ ಅಂಗಡಿ ಎಲ್ಲಾನೂ ಬಸ್ಸಿನ ಜೊತೆ ಜೊತೆಗೇ ಓಡೋದು.. ಆದ್ರೂ ಯಾವಾಗ್ಲೂ ಬಣ್ಣದ ಬಸ್ಸೇ ಅಂದ್ರೆ ಅದರಲ್ಲಿ ಕೂತಿರೋ ನಾನೇ ಮಂದಿರೋದು.. ಖುಷಿ  ಆಗದೇ ಇರತ್ತಾ..?ಹೀಗೇ ನೋಡಿ ನೋಡಿ ನಕ್ಕು ನಲಿದು ಕೇಕೆ ಹಾಕ್ತಾ ಇದ್ರೆ, ಅಮ್ಮಾ ಮತ್ತೆ ಮತ್ತೆ ನೆನಪಿಸೋರು ಬ್ರೇಕ್ ಹಾಕಿದ್ರೆ ಬಿದ್ದೋಗ್ತೀಯಾ ಜೋಪಾನ ಅಂತ.. ಏನ್ ಬ್ರೇಕೋ ಏನೋ ಬಿದ್ದು ತಲೆ ಜಪ್ಪಿಸಿಕೊಂಡ್ಮೇಲೆ ಅದೇನು ಅನ್ನೋದು ಗೊತ್ತಾಗೋದು.. ಆಗಿರೋ ನೋವಿಗೆ ದೊಡ್ಡದಾಗಿ ಅಳಬೇಕು ಅನ್ಸತ್ತೆ.. ಆದ್ರೆ ಸುತ್ತಲಿನ ಜನ ಆಗ ಕಾಣಿಸ್ತಾರೆ.. ಹಾಗಾಗಿ ಮತ್ತೆ ಕಿಟಕಿಯಾಚೆಗಿನ ನೋಟ.. ಆಗ ಓಡೋ ಮರಗಳು ಮಜಾ ಕೊಡಲ್ಲಾ.. ಅಮ್ಮ ಸಣ್ಣಗೆ ತಲೆನವರ್ತಾ ಇದ್ಲು .. ಅದಕ್ಕೇ ಕಾಯ್ತಿದ್ದವಳ ಹಾಗೆ ಅವಳ ತೊಡೆಗೊರಗ್ತಾ ಇದ್ದೆ. ನಂತ್ರಾ ಸುಖ ನಿದ್ರೆ..

ನಾನು  ಕಣ್ಬಿಡೋ ಹೊತ್ತಿಗೆ ಮರಗಳಿರಲ್ಲಾ.. ಮನೆಗಳಿರಲ್ಲಾ.. ದೊಡ್ಡದೊಂದು ಬಸ್ಸ್ಟಾಪು.. ರಾಶಿ ರಾಶೀ ಜನ.. ಸುತ್ತಲು ತರಾವರಿ ಅಂಗಡಿಗಳು ತಿಂಡಿ ತಿನಿಸುಗಳು.. ನಡುವೆ ಹತ್ತೆಂಟು ಬಸ್ಗಳು.. ಆದ್ರೂ ನಿದ್ದೆಯ ಮೂಡಿಂದ ಹೊರಬರಬೇಕು ಅಂದ್ರೆ ಅದೊಂದು ಪರ್ಟಿಕ್ಯುಲರ್  ಧ್ವನಿ ಕೇಳಿಸ್ಲೇಬೇಕಾಗಿತ್ತು .. ಅತ್ತ ನೋಡಿದ್ರೆ ಕೈಯಲ್ಲೊಂದು ಬುಟ್ಟಿ ,ಅದರ ಪಕ್ಕದಲ್ಲಿ ಉದ್ದುದ್ದಕ್ಕೂ ಸಿಕ್ಕಿಸಿದ ಪೇಪರ್ ರೋಲ್.. ಕಣ್ಣು ದೊಡ್ಡದಾಗ್ತಿತ್ತು.. ಅವನು ಶೇಂಗಾ ಕಡ್ಲೆ  ವಠಾಣಿ ಅಂತ ಹೇಳೋ ಮೊದ್ಲೇ ನಾನು ಅಮ್ಮಾ ಅಮ್ಮಾ ಶೇಂಗಾ ಅಂದಾಗ್ತಿತ್ತು... ಆಕೆ ಕೇಳಿಸಿಕೊಳ್ಳಿಲ್ಲಾ ಅಂದ್ರೆ ಬ್ಯಾಗ್ ಹಿಡಿದು ಎಳೆಯೋದು, ಆದ್ರೂ ನಿಲ್ಲದೆ ಫಾಸ್ಟ್ ಫಾಸ್ಟ್ ಆಗಿ ಹೋಗ್ತಾ ಇದ್ರೆ ಸೀರೆ ಜಗ್ಗೋದು... ಪಾಪಾ ಆಕೆಗೆ ಇನ್ನೊಂದು ಬಸ್ ಹಿಡಿಯೋ ತವಕ.. ನನಗೋ ಶೇಂಗಾ ಕಡೆಗೇ ಮುಗಿಯದ ಒಲವು.. ಅದಿಲ್ಲದೆ ಮುಂದೆ ಹೊಗೋ ಚಾನ್ಸೇ ಇರ್ಲಿಲ್ಲಾ.. ಅದು ಅಮ್ಮಂಗೆ ಹೊಸಾ ವಿಷಯಾ ಆಗಿರ್ಲಿಲ್ಲಾ.. ಅವಳು ಬೈಕೋತಾದ್ರೂ ಮೊದ್ಲು ಮಾಡೋದು ಶೇಂಗಾ ಕೊಡಸೋ ಕೆಲಸಾ.. ಅದು ಕೈಗೆ ಬಂದ್ಮೇಲೆ ನನ್ನಷ್ಟು ಅದೃಷ್ಟವಂತರು ಯಾರೂ ಇಲ್ವೇನೋ ಅನ್ನೋ ಹಾಗೆ ತಿಂತಾ ಹೋಗ್ತಾ ಇದ್ರೆ ಅಮ್ಮಂಗೆ ನನ್ನ ಹಿಡಿದು ಮತ್ತೊಂದು ಬಸ್ ಹತ್ತಿಸೋದೇ ದೊಡ್ಡ ಕೆಲಸಾ.. ಹೀಗೆ ಸಾಗೋದು ನಮ್ಮ ಅಜ್ಜನ ಮನೆಯ ಪಯಣ.. ಅದನ್ನ ಮಿಸ್ ಮಾಡ್ಕೊಳ್ದೇ ಇರೋದಕ್ಕಾಗತ್ತಾ..?

  ಅಷ್ಟಷ್ಟು ದಿನಕ್ಕೆ ಅಜ್ಜಿಯ ಮನೆಗೆ ಹೊಗೋ ಮನಸಾಗೋದು.. ಆದ್ರೆ ಅಮ್ಮಾ ಅಷ್ಟೊಂದು ಹೋಗ್ತಾ ಇರ್ಲಿಲ್ಲಾ.. ಇನ್ನು ಹೋಗೋವಾಗ ಬಿಟ್ಹೋದ್ರೆ ಹೇಗೆ..? ಅವತ್ತಾಗಿದ್ದು ಅದೆ.. ಅವರು ನನಗೆ ಗೊತ್ತೇ ಆಗದ ಹಾಗೆ ಮನೆಯಿಂದ ಹೊರಡ್ಬೇಕು ಅಂತ ಸಾಕಷ್ಟು ಪ್ರಯತ್ನಿಸಿದ್ರು.. ಆದ್ರೆ ನನ್ನ ಒಳಮನಸಿಗೆ ಯಾಕೋ ಅನುಮಾನ.. ಹಾಗಾಗಿ ಅಮ್ಮನ ಬಿಟ್ಟು ಎಲ್ಲೂ ಹೋಗ್ಲಿಲ್ಲಾ.. ಕಡೆಗೆ ಅಪ್ಪಾ ಅದೇನೋ ಕಥೆ ಹೇಳ್ತಾ ಕೂತಿದ್ರೂ ದೃಷ್ಟಿ ಎಲ್ಲಾ ಅಮ್ಮನ ಕಡೆಗೆ.. ಆಕೆ ಹೊಸಾ ಸೀರೆ ಉಡ್ತಾ ಇದ್ಲು.. ಅಮ್ಮಾ ನನಗೆ ಹೊಸಾ ಬಟ್ಟೆ ಅಂದೆ.. ಯಾಕೆ ಅಂತ ಕೇಳಿದ್ಲು.. ನಾನೂ ಬರ್ತೀನಿ ಅಂದೆ.. ಆಗ ಅವಳು ಸುಳ್ಹೇಳಿದ್ಲು , ನಂಗೆ ಹುಶಾರಿಲ್ಲಾ ಡಾಕ್ಟ್ರಮನೆಗೆ ಹೋಗ್ತಾ ಇದ್ದೀನಿ.. ಇಂಜಕ್ಷನ್ ಮಾಡಿಸ್ಕೊಂಡು ಬಂದುಬಿಡ್ತೀನಿ ಅಂತ.. ಇಂಜಕ್ಷನ್ನು ಅಂದ ತಕ್ಷಣ ಯಾಕೋ ಮನಸು ಚುರ್ರಂತು.. ಯಾಕಂದ್ರೆ ಹಿಂದೊಂದ್ಸಾರಿ ಅಮ್ಮಾನೇ ಡಾಕ್ಟ್ರತ್ರಾ ಕರ್ಕೊಂಡ್ಹೋದಾಗ , ನನಗೇ ಬೇಡಾ ಬೇಡಾ ಅಂದ್ರೂ ಸೂಜಿ ಚುಚ್ಚಿದ್ರು.. ಮೋಸ್ಟ್ಲಿ ಆ ಡಾಕ್ಟ್ರಿಗೆ  ನನ್ ಕಂಡ್ರೆ ಆಗಲ್ಲಾ ಅನ್ನೋ ತೀರ್ಮಾನಕ್ಕೆ ನಾನು ಬಂದಿದ್ದೆ... ನಂಗಂತೂ ಅವರು ಇಷ್ಟಾ ಇರ್ಲಿಲ್ಲಪ್ಪಾ.. ಈಗ ಮತ್ತೆ ಅವರತ್ರಾ ಹೋಗೋದಾ..? ಯಾರಿಗೆ ಬೇಕು ಸೂಜಿ ಚುಚ್ಚಿಸಿಕೊಳ್ಳೋದು.. ಅಮ್ಮಾ ಹೋಗ್ಬರ್ಲಿ ಅನ್ನೋ ನಿರ್ಧಾರಕ್ಕೆ ಬಂದಿದ್ದೆ... ಅಪ್ಪಾ ಅದಕ್ಕೆ ಸಪೋರ್ಟ್ ಮಾಡಿದ್ರು.. ಪಾಪಾ ಅಮ್ಮಾ ಅಂತ ಅಂದ್ಕೊಂಡು ,ಬೇಗಾ ಬಂದ್ಬಿಡು ಅಂತ ಹೇಳಿ ಬಾಯ್ ಮಾಡಿದ್ದೆ..

ಅಷ್ಟಾಗಿ ಸ್ವಲ್ಪೇ ಸ್ವಲ್ಪ ಹೊತ್ತು ಕಳೆದಿದೆ.. ನಂಗೆ ಅದೇನ್ ಆಗ್ಬಿಟ್ತೋ  ಏನೋ.. ಇದ್ದಕ್ಕಿದ್ಹಾಗೆ ಅವರು ಆಸ್ಪತ್ರೆಗೆ  ಹೋಗ್ತಾ ಇಲ್ಲಾ , ನಾನು ಮೋಸ ಹೋದೆ ಅನ್ನಿಸಿಬಿಟ್ಟಿದೆ.. ಅಮ್ಮಾ ಖಂಡಿತವಾಗಿಯೂ ಅಜ್ಜಿಮನೆಗೇ ಹೋಗ್ತಿರೋದು ಅಂತ ನನಗೆ ಆ ಕ್ಷಣಕ್ಕೆ ಯಾಕ್ ಅನ್ನಿಸ್ತು ?ಅಂತ ಇವತ್ತಿನವರೆಗೂ ಅದೆಷ್ಟು ಬಾರಿ ಯೋಚಿಸಿದ್ನೇನೋ , ಉತ್ರಾ ಮಾತ್ರ ಸಿಕ್ಕಿಲ್ಲಾ.. ಅವತ್ತು ಮಾತ್ರ ಹಾಗನ್ನಿಸಿದ್ದೇ ತಡಾ ದುಃಖ ಉಮ್ಮಳಿಸಿಬಿಟ್ತು.. ನಂತ್ರಾ ನಾನಲ್ಲಿ ನಿಲ್ಲಲಿಲ್ಲಾ.. ಒಂದೇ ಉಸಿರಿಗೆ ಓಡಿದ್ದೆ.. ನಿಂತಿದ್ದು ಆಕೆ ದಾರಿಯಲ್ಲಿ ಕಂಡ್ಮೇಲೇ.. ಅವಳಿಗೆ ಪ್ರಯತ್ನಗಳೆಲ್ಲಾ ಠುಸ್ಸಾಯ್ತಲ್ಲಾ ಅನ್ನೋ ನೋವು.. ನನಗೆ ಅಮ್ಮಾ ನನಗೆ ಮೋಸಾ ಮಾಡಿ ಬಿಟ್ಟು ಹೊರಟುಬಿಟ್ಲಲ್ಲಾ ಅನ್ನೋ ದುಃಖ.. ಅಳು ಹೆಚ್ತಾನೇ ಹೋಯ್ತು.. ಆಕೆ ಸಮಾದಾನ ಮಾಡೋದಕ್ಕೆ ನೋಡಿದ್ದಾಳೆ.. ಆಗ್ಲಿಲ್ಲಾ.. ಬಾ ಹೊಗೋಣಾ ಅಂತಾಳೆ.. ನಾನು ಹೊಸಾ ಬಟ್ಟೆ ಹಾಕ್ಕೊಂಡಿಲ್ಲಾ ಹಾಗಾಗಿ ಬರೋದಕ್ಕೆ ರೆಡಿ ಇಲ್ಲಾ.. ಮತ್ತೆ ಅವಳದು ಮೋಸಾ ಮಾಡೋ ಪ್ರಯತ್ನ ..ಸರಿ ಮನೆಗೆ ಹೋಗಿ ಅಪ್ಪನ ಹತ್ರಾ ಹಾಕಿಸ್ಕೊಂಡು ಬಾ ಅಂತಿದ್ದಾಳೆ.. ನಾನು ಓಡಿಬಂದು ಹಿಡಿದ ಅಮ್ಮನ್ನ ಹೇಗೆ ಬಿಟ್ಹೋಗ್ಲಿ. ಅದು ಆಗದ ಮಾತು.. ಆಕೆನೇ ನನ್ ಜೊತೆಗೆ ಬರಬೇಕು ಅನ್ನೋ ಹಠ ನಂದು.. ಆದ್ರೆ ಅವಳಿಗೆ ವಾಪಸ್ ಬಂದು ನನ್ನ ರೆಡಿ ಮಾಡ್ಕೊಂಡು ಹೊಗೋ ಹೊತ್ತಿಗೆ ಬಸ್ ಮಿಸ್ಸಾಗೋದು ಗ್ಯಾರಂಟಿ ಅನ್ನೋದು ಗೊತ್ತು.. ಹಾಗಾಗಿ ಇಲ್ಲೇ ಕಾದಿರ್ತೀನಿ ಅಂದಿದ್ದಾಳೆ.. ನಾನೂ ದೊಡ್ಡ ಮನಸು ಮಾಡಿ ನಾಲ್ಕು ಹೆಜ್ಜೆ ಹಿನ್ನಡೆದಿದ್ದೆ.. ಹಾಗೆ ಹಿಂದೆ ತಿರುಗ್ತೀನಿ.. ಅಮ್ಮಾ ನಿಂತಿದ್ದ ಜಾಗದಲ್ಲಿರದೇ ಸ್ವಲ್ಪ ಮುಂದೆ ನಡೆದುಬಿಟ್ಟಿದ್ದಾಳೆ.. ಅದನ್ನ ನೋಡಿ ನನಗೆ ಅದೆಲ್ಲಿಂದ ಸಿಟ್ಟು ಬಂತೋ ಏನೋ ಕೆಳಗಿದ್ದ ಕಲ್ಲು ನನ್ನ ಪುಟ್ಟ ಕೈಗೆ ಬಂದಿತ್ತು.. ತೆಗೆದು ಆಕೆಯ ಕಡೆಗೆ ಬೀಸಿಬಿಟ್ಟಿದ್ದೆ.. ಅಷ್ಟೊತ್ತಿಗೆ ಸರಿಯಾಗಿ ಅಮ್ಮಾ ತಿರುಗಿದ್ದಾಳೆ.. ಹಾಗಾಗಿ ಅದರಿಂದ ತಪ್ಪಿಸಿಕೊಂಡಿದ್ದಾಳೆ.. ನಂತ್ರಾ ಓಡ್ಹೋಗಿ ಆಕೆಯನ್ನ ಹಿಡ್ಕೊಂಡ ನಾನು ,ಏನ್ ಮಾಡಿದ್ರೂ ಮುಂದೆ ಹೆಜ್ಜೆ ಇಡೋದಕ್ಕೆ ಬಿಡ್ಲಿಲ್ಲಾ.. ನಂತ್ರಾ ಆಕೆಯನ್ನ ನನಗಿರೋ ಶಕ್ತಿಯನ್ನೆಲ್ಲಾ  ಹಾಕಿ ದೂಡಿದ್ದೆ.. ಅದರ ಕಲ್ಪನೆನೇ ಇಲ್ಲದ ಅಮ್ಮಾ ಕೆಳಗೆ ಬಿದ್ದಿದ್ರು.. ಮೋಣಕಾಲಿಗೆ ಬಡಿದ ಕಲ್ಲು ಕೆಂಪಗಾಗಿತ್ತು.. ಆಕೆಯ ಕಾಲಿನಿಂದ ನೆತ್ತರು ಸುರೀತಾ ಇತ್ತು.. ಕಣ್ಣಲ್ಲಿ ನೀರು..  ಅವತ್ತು ಆಕೆಗಾದ ಗಾಯ ಸಣ್ಣದಲ್ಲಾ.. ನನಗೆ ಶುರುವಾಗಿದ್ದು ಭಯ.. ಅಮ್ಮಾ ನನಗೀಗ ಹೊಡೀತಾಳೆ .. ಹೊಡಸ್ಕೊಂಡು ಸುಮ್ಮನೆ ಅವಳ ಜೊತಗೇ ಮನೆಗೆ ಬರ್ಬೇಕು , ಅಮ್ಮಾ ನಾನು ದೇವರಾಣೆ ನಿನಗೆ ಹೊಡೀಬೇಕು ಅಂದ್ಕೊಂಡಿರ್ಲಿಲ್ಲಾ ಅಂತ ಹೇಳ್ಬೇಕು ಅಂದ್ಕೊಂಡಿದ್ದೆ.. ಆದ್ರೆ ಆಕೆ ಹೊಡೀಲಿಲ್ಲಾ.. ಆಣೆ ಪ್ರಮಾಣಗಳು ಬೇಕಾಗ್ಲೇ ಇಲ್ಲಾ.. ತಪ್ಪಾಯ್ತಮ್ಮಾ ಅಂತ ಕಿವಿ ಹಿಡಿದು ಬಸ್ಕಿ ಹಾಕಬಹುದಿತ್ತೇನೋ.. ನಾನ್ ಹಾಗ್ ಮಾಡ್ಲಿಲ್ಲಾ.. ನಂತ್ರಾ  ನಂತ್ರಾ ಅವಳು ನನ್ನ ಕೈ ಹಿಡ್ಕೊಂಡು ವಾಪಸ್ ಮನೆಗೆ ಬರ್ತಾ ಇದ್ರೆ, ನಾನು ಸುಮ್ಮನೆ ಅವಳ ಮುಖವನ್ನೇ ನೋಡ್ತಾ ಇದ್ದೆ.. ಆಕೆಯ ಕಾಲಿಗಾದ ಗಾಯ ನನಗೂ ಬೇಸರ ತರಿಸಿತ್ತು.. ಅಮ್ಮಾ ಏನೂ ಹೇಳದೆ , ಮನೆಗೆ ಬಂದು ತಣ್ಣೀರಲ್ಲಿ ಗಾಯವನ್ನ ತೊಳಕೊಂಡು ನಂತ್ರಾ ಅದೇನೇನೋ ಹಚ್ಕೊಂಡ್ಲು.. ಅಷ್ಟೊತ್ತಿಗೆ ಬಂದ ಅಪ್ಪನ ಹತ್ರಾ , ಕಡೆಗೂ ಈ ಕಾಳಿ ಹಬ್ಬಕ್ಕೆ ಹೊಗೋದಕ್ಕೆ ಬಿಡ್ಲಿಲ್ಲಾ ಅಂದಿದ್ದಾಳೆ.. ಇವತ್ಹೋಗಿ ನಾಳೆ ಬಂದ್ಬಿಡ್ತಾ ಇರ್ಲಿಲ್ವಾ..? ಒಂದಿನ ಅಪ್ಪನ ಜೊತೆಗಿದ್ರೆ ಏನಾಗ್ತಾ ಇತ್ತು ಅಂತ ರೇಗಿದ್ಲು.. ನಾನು ಏನೂ ಮಾತಾಡ್ಲಿಲ್ಲಾ.. ಮಾತಾಡಿದ್ರೆ ಪೆಟ್ಟು ಬೀಳಬಹುದು ಅನ್ನೋ ಭಯ.. ಅಮ್ಮನಿಗೆ ಗಾಯಾ ಆಯ್ತಲ್ಲಾ ಅನ್ನೋ ಸಣ್ಣದೊಂದು ಅನುಕಂಪ.. ಅವತ್ತಿಡೀ ನಾನು ಅವಳ ಸುತ್ತ ಮುತ್ತಾನೇ ಸುಳಿದಾಡ್ಕೊಂಡು ಸುಮ್ಮನೇ ಇದ್ದೆ.. ದಿನಕಳೆದ್ಹಾಗೆ ಆ ದಿನ ನನಗೂ ಹಳೆಯದಾಯ್ತು.. ಅಮ್ಮ ಅಂತೂ ಮರೆತೇಬಿಟ್ರು.. ಆದ್ರೆ ನಾನು ಮಾತ್ರ ಯಾವತ್ತಿಗೂ ಮರೆಯೋ ಚಾನ್ಸಿಲ್ಲಾ.. ಯಾಕಂದ್ರೆ ಅವತ್ತು ನಾನು ಮಾಡಿದ ಗಾಯ  ಅವರ ಕಾಲ ಮೇಲೆ ಕಲೆಯನ್ನ ಬಿಟ್ಟುಹೋಗಿದೆ.. ಅದು ಯಾವಾಗ ? ಹೇಗೆ ? ಆದ ಗಾಯದ ಗುರುತು ಅನ್ನೋದು ಅಮ್ಮನಗೆ ನೆನಪಿದ್ಯೋ ಇಲ್ವೋ..ಅಷ್ಟಕ್ಕೂ ಆಕೆ ಆ ಇನ್ಸಿಡೆಂಟನ್ನಂತೂ ಮತ್ತೆ ಮತ್ತೆ ಮೆಲುಕ್ಹಾಕಲ್ಲಾ.. ಆದ್ರೆ ನನಗೆ ಮಾತ್ರ ಮರೆಯೋದಕ್ಕೇ ಆಗಲ್ಲಾ.. ಆಕೆಯ ಕಾಲಮೇಲಿನ ಗಾಯದ ಗುರುತು ಕಂಡಾಗಲೆಲ್ಲಾ ನನ್ನ ಬಗ್ಗೆ ಸಿಟ್ಟು ಬರತ್ತೆ.. ಬೇಸರವಾಗತ್ತೆ.. ಹೃದಯಾನೂ ತುಂಬಿಬರತ್ತೆ.. ಅಮ್ಮಾ ನಾನೆಷ್ಟು ಕೆಟ್ಟವಳು ಅಲ್ವಾ... ?

1 comment:

  1. ನಿನ್ನ ಅಮ್ಮನನ್ನು ಕೇಳಿ ಹೇಳ್ತಿನಿ...ನೀನೆಷ್ಟು ಕೆಟ್ಟವಳು ಅಂತ :)

    ReplyDelete