Thursday, March 10, 2011

ಪ್ರೀತಿಸಲೇ ಬೇಕು..!

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ....
ನಾನು ಅದನ್ನ ಪ್ರೀತಿ ಅಂತೀನಿ.. ಬದುಕಿನೆಡೆಗಿನ ಪ್ರೀತಿ.. ಬದುಕಬೇಕು ಅನ್ನೋ ತುಡಿತ.. ಮನದಮೂಲೆಯಲ್ಲೆಲ್ಲೋ ಭರವಸೆ.. ಮುಗಿಯದ ಆಸೆ.. ಆ ಭಗವಂತ ಆಕೆಯ ಬದುಕಿಗೆ ಅದ್ಯಾವ ಅರ್ಥ್ಥಕೊಟ್ನೋ ಅದು ಅವನಿಗೇ ಗೊತ್ತು.. ಎಷ್ಟು ಚಿಕ್ಕವಯಸ್ಸಲ್ಲಿ ಹುಡುಗಿಯನ್ನ ಎಲ್ಲಿಂದ ಎಲ್ಲಿಗೋ ಕರ್ಕೊಂಡ್ಹೋಗ್ಬಿಟ್ಟ.. ಏನೂ ಇಲ್ಲದಂತೆ ಮಾಡಿಬಿಟ್ಟ.. ಎಲ್ಲವೂ ಮುಗಿದಮೇಲೂ ಬದುಕೊಂದನ್ನ ಬಾಕಿ ಉಳಿಸಿಬಿಟ್ಟಾ.. ಅದು ಕಾಣದ ಶಕ್ತಿಯ ಇಂಟೆನ್ಷನ್ನು.. ಹಾಗಾಗಿನೇ ಸುಪ್ರಿಮ್ ಕೋರ್ಟ್ ಕೂಡಾ ಸಾಯಿಸಿ ಅನ್ನಲಿಲ್ಲಾ.. ಆಕೆ ಬದುಕಿದ್ದಾಳೆ.. ಅವಳಿಗೆ ಸುತ್ತಲೂ ಏನಾಗ್ತಿದೆ ಅನ್ನೋದು ಗೊತ್ತಾಗತ್ತಾ..? ಗೊತ್ತಿಲ್ಲಾ.. ಅವಳ ಮನಸಲ್ಲಿ ತಲೆಯಲ್ಲಿ ಕಡೆಗೆ ಕಣ್ಣಲ್ಲಿ ಏನಿದೆ ಅನ್ನೋದೂ ಯಾರಿಗೂ ತಿಳಿದಿಲ್ಲಾ.. ಈ ಜಗತ್ತಿನಿಂದ ಅವಳು ದೂರ ದೂರ. ಆದ್ರೂ ಈ ಪಂಚಭೂತಗಳ ಋಣ ಮುಗಿದಿಲ್ಲಾ.. ಕೆ  ಇ ಎಲ್ ಆಸ್ಪತ್ರೆ ,ಅಲ್ಲಿರೋ ದಾದಿಯರು, ಮತ್ತು ವೈಧ್ಯರ ಜೊತೆಗಿನ ಸಂಬಂಧ ಕಡೆದುಹೋಗಿಲ್ಲಾ.. ಮುಂಬೈನ್ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ನಾಲ್ಕನೇ ನಂಬರ್ ವಾರ್ಡಿನ ಮೂಲೆಯಲ್ಲಿರೋ ಕಬ್ಬಿಣದ ಮಂಚದ ಮೇಲೆ ಕಣ್ಣುಗಳನ್ನಷ್ಟೇ ಪಿಳಕಿಸ್ತಾ ಮಲಗಿದ ಆ ಅಕೃತಿಯ ಹೆಸರು ಅರುಣಾ ಶಾನ್ಬಾಗ್...

ಹೊನ್ನಾವರದಂತ ಹಸಿರು ರಾಶಿಯ ನಡುವೆ ಹುಟ್ಟಿ ಬೆಳೆದ ಶಾನುಬೋಗರ ಮನೆಯ ಹೂವಿನಂತ ಹುಡುಗಿ ನರಸಿಂಹ ಸ್ವಾಮಿ ಹಾಡಿನ ಹಾಗೆ ಬಲು ಜಾಣೆ ಗಂಭೀರೆ... ಆದ್ರೆ ಹದಿನಾರಕ್ಕೇ ಹೆಂಡತಿಯಾಗಿ ಮಕ್ಕಳನ್ನ ಹೇರೋದಕ್ಕೆ ರೆಡಿಯಾಗ್ಲಿಲ್ಲಾ ಅಷ್ಟೆ.. ಆಕೆ ಕನಸುಗಳು ಮೊದಲು ಹುಟ್ಟಿದ್ವೋ ಆಕೆ ಫಸ್ಟ್ ಹಟ್ಟಿದ್ಲೋ ಅನ್ನೋ ಅನುಮಾನ ಬರೋ ಥರಾ ಇದ್ಲು.. ಬಡವರ ಮನೆಯಲ್ಲಿ ಹುಟ್ಟಿದ ಬೆಳದಿಂಗಳಿನಂತಾ ಹುಡುಗಿ ಮೊದಲು ಕಂಡಿದ್ದು ಮನೆಕಟ್ಟೋ ಕನಸನ್ನ.. ಅಲ್ಲಿ ಬಡಮಕ್ಕಳನ್ನ ಸಾಕ್ತೀನಿ.. ಕೈಲಾಗದವರಿಗೆ ಬದುಕಾಗ್ತೀನಿ ಅಂತಿದ್ದವಳು ಅದೇ ನಿಟ್ಟಿನಲ್ಲಿ ನರ್ಸ್ ಆದ್ಲು.. ಕಾಯಿಲೆಯಿಂದ ಬಳಲ್ತಾ ಇರೋರಲ್ಲಿ ದೇರನ್ನ ಕಂಡು ಸೇವೆ ಮಾಡೋದಕ್ಕೆ ಸಿದ್ಧಳಿದ್ದವಳನ್ನ ಮುಂಬೈನ್ ಕೆ ಇ ಎಲ್ ಆಸ್ಪತ್ರೆ ಕೈ ಬೀಸಿ ಕರೀತು.. ಅಷ್ಟೊತ್ತಿಗಾಗ್ಲೇ ಆಕೆಯ ಹೃದಯದಲ್ಲಿ ಪ್ರೇಮದ ಅರುಣರಾಗವನ್ನ ಡಾಕ್ಟರ್ ಸಂದೀಪ್ ಸರ್ ದೇಸಾಯಿಯವರು ಹಾಡಿದ್ರು.. ಇಬ್ಬರೂ ಸೇರಿ ಅದೆಷ್ಟು ಕನಸುಗಳನ್ನ ಕಂಡಿದ್ರೋ .. ಎಷ್ಟು ವಿಚಾರಗಳನ್ನ ಶೇರ್ ಮಾಡ್ಕೊಂಡಿದ್ರೋ,,ಎಂತೆಂತಾ ಬಯಕೆಗಳನ್ನ ಹಂಚಿಕೊಂಡಿದ್ರೋ..ಎಲ್ಲವನ್ನೂ ಸಾಕಾರಗೊಳಿಸೋ ಕಾಲ ಹತ್ತಿರ ಬಂದಿತ್ತು.. ಇಬ್ಬರೂ ವಿವಾಹಬಂದನದಲ್ಲಿ ಕಾಲಿಡೋದಕ್ಕೆ ಮುಹೂರ್ತ ನೋಡ್ತಾ ಇದ್ದಾಗ್ಲೇ ಅರುಣಾ ಬದುಕಿನಲ್ಲಿ ಭರಸಿಡಿಲು ಬಡಿದಿದ್ದು..

ಅದು ಸಾವಿರದ ಒಂಬೈನೂರಾ ಎಪ್ಪತ್ಮೂರರ ನವೆಂಬರ್ ತಿಂಗಳಿನ ಕಡೆಯ ವಾರ.. ಮುಂಬೈನ್ ಶಾಲೆಯೊಂದರ ಮಕ್ಕಳು ಫುಡ್ ಪಾಯಿಸನ್ ಆಗಿ ಕೆ ಎ ಎಲ್ ಆಸ್ಪತ್ರೆ ಸೇರಿದ್ರು..ಅವರಿಗೆ ಚಿಕಿತ್ಸೆ ನೀಡಿ  ಕಣ್ರೆಪ್ಪೆಯಂತೆ ಜೋಪಾನಾ ಮಾಡಿಕೊಂಡಿದ್ದ ಅರುಣಾ , ತನ್ನ ಡ್ಯೂಟಿ ಮುಗಿಸಿ ಸ್ವಲ್ಪ ಫ್ರೆಶ್ ಆಗಿ ಮನೆಗೆ ವಾಪಸ್ಸು ಹೊಗೋಣಾ ಅಂತ ಡ್ರೆಸ್ಸಿಂಗ್ ರೂಮ್ ಕಡೆ ಹೋಗಿದ್ದಾಳೆ.. ಅಲ್ಲೇ ಕಾದಿದ್ದ ಆಕೆಯ ಕರಾಳ ಬದುಕಿಗೆ ಮುನ್ನುಡಿ ಬರೆಯೋ ಕಿರಾತಕ.. ಆತನ ಹೆಸರು ಸೋಹನ್ಲಾಲ್ ಭರ್ತಾ ವಾಲ್ಮಿಕಿ.. ಆಸ್ಪತ್ರೆಯ ಕಸಾಗುಡುಸುಕೊಂಡಿದ್ದವನು ಆದ್ಯಾವಾಗ ಗುಂಗರು ಗೂದಲಿಲಾಚೆಯ ಬಟ್ಟಲು ಮುಖವನ್ನ ಆಸೆಗಣ್ಣಿನಿಂದ ನೋಡಿದ್ನೋ ಗೊತ್ತಿಲ್ಲಾ, ಅವತ್ತು ಅನುಭವಿಸಲೇಬೇಕು ಅಂತ ನಿಂತುಬಿಟ್ಟ.. ಕೋಣೆಯೊಳಗೆ ಕಾಲಿಟ್ಟ ಹುಡುಗಿಯ ಕತ್ತಿಗೆ ತಣ್ಣೆಯದ್ದೇನೋ ತಾಗಿದಂತಾಗಿದ್ದೇ ಕೊನೆ,  ಕಡೆಗೆ ಆ ಸರಪಳಿಯ ಬಿಗಿತಕ್ಕೆ ಧನಿಯೇ ಹೊರಡ್ಲಿಲ್ಲಾ.. ಕಣ್ಣುಗಳು ಮಂಜಾದ್ವು.. ಮುಂದೆ ಅದೇನ್ ನಡೀತೋ ಹೇಳೋ ಸ್ಥಿತಿಯಲ್ಲಿ ಅವಳು ಉಳೀಲಿಲ್ಲಾ... ಮರುದಿನ ಬೆಳಗಿನ ಹೊತ್ತಿಗೆ ಜೀವಂತ ಶವದಂತೆ ಬಿದ್ದವಳನ್ನ ನೋಡಿದವರು ಹು ರೇಪ್ಡ್ ಹರ್ ಅಂತ ಕೂಗಿದ್ರು...!

ಮೇಲ್ನೋಟಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆದ ಎಲ್ಲಾ ಕುರುಹುಗಳೂ ಇದ್ವು..ಆದ್ರೆ ಅದು ಸಾಬೀತಾಗ್ಲಿಲ್ಲಾ.. ಆ ಪ್ರಕರಣದಲ್ಲಿ ಅರೆಸ್ಟಾದ ಸೋಹನ್ಲಾಲ್ ಮೇಲೆ ಕಳ್ಳತನ ಮತ್ತು ಕೊಲೆಯತ್ನದ ಆರೋಪ ಹಾಕಿ ಏಳು ವರ್ಷಗಳ ಶಿಕ್ಷೆ ವಿಧಿಸಲಾಯ್ತು.. ಆದ್ರೆ ಅರುಣಾ ? ಆಕೆ ಏನ್ ತಪ್ಪುಮಾಡಿದ್ಲು..? ಅವಳು ಇವತ್ತಿಗೂ ಕಾನೂನು ಯಾವ ಖೈದಿಗಳಿಗೂ ಕೊಡದಷ್ಟು ಕಠಿಣ ಶಿಕ್ಷೆಯನ್ನ ಅನುಭವಿಸ್ತಾ ಇದ್ದಾಳೆ.. ಇಲ್ಲಿಗೆ ಮೂವತ್ತೇಳು ವರುಷಗಳು ಕಳೆದಿವೆ.. ಅರುಣಾ ತನ್ನ ಕತ್ತಲು ಕಂಗಳಲ್ಲಿ ಸೂರನ್ನೇ ದಿಟ್ಟಿಸ್ತಾ ಮಲಗಿದ್ದಾಳೆ.. ಇವತ್ತಿಗೂ ಆಕೆಯ ಕಣ್ಣುಗಳಲ್ಲಿ ಕಾಣದ ನಗುವಿದೆ.. ಅರಿಯಲಾಗದ ಬಾವವಿದೆ.. ಆಕೆ ಮತ್ತೆ ಕನಸು ಕಾಣ್ತಾ ಇದ್ದಾಳಾ..? ಹೇಳಿಕೊಳ್ಳೋದಕ್ಕೆ ಬಾಯಿಲ್ಲಾ.. ಕೈಯ್ಯೂ ಇಲ್ಲಾ.. ಹೇಳದೆನೇ ಎಲ್ಲವನ್ನೂ ಅರ್ಥೈಸಿಕೊಳ್ಳುವಂತ ಮನಸೂ ಜೊತೆಗಿಲ್ಲಾ.. ಆಕೆಯನ್ನ ಪ್ರೀತಿಸಿದ್ದ ಸಂದೀಪ್ ಸರ್ದೇಸಾಯಿ ಇವತ್ತು ಅವಳೊಂದಿಗಿಲ್ಲಾ.. ಆದ್ರೆ ಆತ ಕ್ರೂರಿಯಲ್ಲಾ...
ಅವತ್ತು ಜೀವಂತ ಶವವಾಗಿ ಮಲಗಿದವಳನ್ನ ಆಸ್ಪತ್ರೆಯ ಸಿಬ್ಬಂದಿಗಳ ಜೊತೆಗೆ ನಿಂತು ಮರುಜನ್ಮ ಕೊಡೋದಕ್ಕೆ ಪ್ರಯತ್ನಿಸಿ ಹಗಲೂ ರಾತ್ರಿ ಒಂದು ಮಾಡಿದವನು ಪ್ರೇಮಿ ಸಂದೀಪ್.. ಆತ ಮಾಡದ ಪ್ರಯತ್ನಗಳಿಲ್ಲಾ.. ವೈಧ್ಯಕೀಯ ಜಗತ್ತು ಕೈ ಎತ್ತಿದಮೇಲೆ ಮಾತಲ್ಲೇ ಮನಸು ಮೀಟಿ ಹೊಸ ಬದುಕು ಕಟ್ಟೋ ಕಟ್ಟಕಡೆಯ ಪ್ರಯತ್ನ ಮಾಡಿದ್ದಾ.. ಅದೆಷ್ಟೋ ತಿಂಗಳುಗಳ ಕಾಲ  ಮಗುವಿನಂತೆ ಮಲಗಿದ ಅರುಣಾಳಪಾಲಿಗೆ ಎಲ್ಲವೂ ಆಗಿದ್ದಾ.. ತನ್ನ ಸಾಮಿಪ್ಯವೇ ಅವಳನ್ನ ಮೊದಲಿನಂತೆ ಮಾಡತ್ತೆ ಅನ್ನೋ ಭರವಸೆಯಲ್ಲಿ  ಆಕೆಯ ತಲೆಯನ್ನ ತನ್ನ ತೊಡೆಯ ಮೇಲಿಟ್ಕೊಂಡು ಮನಸಿನ ಮಾತಾಡಿದ್ದ.. ಹಳೆಯ ನೆನಪುಗಳಿಗೆ ಬಣ್ಣಬಳಿದಿದ್ದಾ.. ಹೊಸ ಕನಸುಗಳನ್ನ ಕಟ್ಟಿಕೊಟ್ಟಿದ್ದ.. ಉಹು, ಅರುಣಾಗಾಗಿ ಏನೇ ಮಾಡಿದ್ರೂ ನೀರಿನಲ್ಲಿ ಮಾಡದ ಹೋಮದ ಥರಾ.. ಅದು ಪೂತರ್ಿ ಮನದಟ್ಟಾದ್ಮೇಲೆ ಸಂದೀಪ ತನ್ನ ಮೊದಲ ಪ್ರೇಮವನ್ನ ದೇವರ ಕೈಗಿಟ್ಟು ದಾರಿ ತೋರಿಸು ಅಂತ ಅಲ್ಲಿಂದ ಹೊರನಡೆದ.. ಹೋಗೋ ಮೊದ್ಲು ಅವನಿಟ್ಟ ಹೂ ಮುತ್ತಿಗೆ ನತದೃಷ್ಟೆ ಅರುಣಾ ಹೃದಯ ಮೀಟಿತ್ತು..ಆಸ್ಪತ್ರೆಯ ಸಿಬ್ಬಂದಿಗಳು ಆಕೆಯ ಕಂಗಳಲ್ಲಿ ಕಿರುನಗೆಮೂಡಿದ್ದನ್ನ ನೋಡಿದ್ರು.. ಅವತ್ತಿನಿಂದ ಅರುಣಾ ಖುಶಿಯಾದಾಗ ನಗ್ತಾಳೆ..!

ಸಂಪೂರ್ಣ ಸತ್ತುಹೋದಂತಿದ್ದವಳ ದೇಹದ ಮೂಲೆಯಲ್ಲೆಲ್ಲೋ ಆ ಪ್ರೇಮಿ ಮಾಡಿದ ಕಟ್ಟ ಕಡೆಯ ಪ್ರಯತ್ನಕ್ಕೆ ಮಿ0ಚಿನ ಸಂಚಾರವಾಯ್ತು.. ಆದ್ರೆ ಮಳೆಬರ್ಲಿಲ್ಲಾ.. ಬೆಳೆಬೆಳೆಯೋ ಹಾಗಿಲ್ಲಾ.. ಅದು ಬರೀ ಮರೆಯಾಗೋ ಮಿಂಚು.. ಆ ಸರಿದುಹೋಗೋ ಬೆಳಕಲ್ಲಿ ಆಕೆಗೆ ಆ ದೂರ್ಥ ಹುಡುಗ ಕಾಣಿಸ್ತಾನೇನೋ..ಅವಳ ಬದುಕಿನ ಕೆಟ್ಟ ಕ್ಷಣ ನೆನಪಾಗತ್ತೇನೋ .. ಒಟ್ಟಲ್ಲಿ ಅರುಣಾಗೆ ಹುಡುಗರ ನೆರಳು ಸೋಕಿದ್ರೂ ಆಗಲ್ಲಾ.. ಆಕೆಯ ವರ್ತನೆ ಒಮ್ಮೆಲೇ ಭಯಾನಕವಾಗತ್ತೆ.. ಹಾಗಾಗಿ ಆಕೆಯನ್ನ ನೋಡ್ಕೊಳ್ಳೋದಕ್ಕೆ ದಾದಿಯರನ್ನೇ ನೇಮಿಸಲಾಗಿದೆ..

ನಡುವೆ ಅರುಣಾ ಊಟ ತಿಂಡಿಯನ್ನ ಗುರುತಿಸೋಷ್ಟಾಗಿದ್ಲು..ಆಕೆ ಸಿ ಫುಡ್ ಸ್ಮೆಲ್ಲಿಗೆ ಹೂನಗೆ ಬೀರಿದ್ದನ್ನ ಪರೀಕ್ಷಿಸಿದ ವೈದ್ಯರು ಗ್ರಹಿಸಿದ್ರು..ಅವತ್ತಿನಿಂದ ಆಕೆಗೆ ವಾರಕ್ಕೆರಡು ದಿನ ಅವಳಿಷ್ಟದ ಫಿಶ್ ಫ್ರೈ ಕೊಡಲಾಗಿತ್ತು..ಆದ್ರೆ ಅದು ಕೂಡಾ ಈಗಿಲ್ಲಾ.. ಈಗ ಅರುಣಾ ದ್ರವಾಹಾರದ ಹೊರತಾಗಿ ಮತ್ತೇನನ್ನೂ ಸೇವಿಸೋ ಸ್ಥಿತಿಯಲ್ಲಿಲ್ಲಾ.. ಅವಳು ಈಗ ಅಕ್ಷರಶಃ ಶವ.. ಆದ್ರೆ ಜೀವ ಇದೆ.. ಆಕೆಯ ಪಾಲಿಗೆ ಸಂಬಂಧಿಗಳಿಲ್ಲಾ..ಸಂಬಂಧಗಳಿಲ್ಲಾ.. ಆದ್ರೆ ಸಾವು ಅನ್ನೋದು ದೂರ ದೂರದ ವರೆಗೂ ಕಾಣ್ತಾ ಇಲ್ಲಾ.. ಆಕೆಯ ಈ ದುಸ್ಥಿಯನ್ನ ಹತ್ತಿರದಿಂದ ನೋಡಿ ಮರುಗಿದ ಪತ್ರಕತರ್ೆ ಪಿಂಕಿ ವಿರಾನಿ ಅರುಣಾಳ ಕರುನಾ ಜನಕ ಕಥೆಯನ್ನ ಪುಸ್ತಕ ಮಾಡಿ ಜನರ ಮುಂದಿಟ್ಲು.. ತಾನು ಆಕೆಗೆ ಮಾಡಬಹುದಾದ ಸಹಾಯ ಅಂದ್ರೆ ದಯಾಮರಣ ಕೊಡಿಸೋದು ಅಂತ ನಿರ್ಧರಿಸಿ ಕೋರ್ಟಿನ ಮೊರೆಹೋದ್ಲು..
ನಮ್ಮ ನ್ಯಾಯಾಲಯ ದಯಾಮರಣಕ್ಕೆ ಒಪ್ಪಿಗೆ ನೀಡ್ಲಿಲ್ಲಾ. ನನಗೆ ಗೊತ್ತಿರೋ ಹಾಗೆ ಬೆಲ್ಜಿಯಮ್ ನೆದರ್ಲಾಂಡ್ ಮತ್ತು ಯು ಎಸ್ನಲ್ಲೂ ದಯಾಮರಣವನ್ನ ಕಾನೂನು  ಒಪ್ಪತ್ತೆ..! ಆದ್ರೆ ನಮ್ಮ ದೇಶದಲ್ಲಿ ಇನ್ನೂ ತನಕ ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲಾ.. ಒಂದ್ವೇಳೆ ಒಪ್ಪಿಗೆ ಸಿಕ್ರೆ ಅದು ಮಿಸ್ ಯೂಸ್ ಆಗಬಹುದು ಅನ್ನೋ ಕಾರಣ ಕೊಡಲಾಗತ್ತೆ.. ಅದು ನಿಜಾನೆ.. ಆದ್ರೆ ಹುಟ್ಟು ಸಾವು ಮತ್ತು ಬದುಕು ಯಾವುದೂ ನಮ್ಮ ಕೈಲಿಲ್ಲಾ, ಯಾವುದೋ ಕಾಣದ ಶಕ್ತಿಯ ಸಾರಥ್ಯದಲ್ಲಿ ಎಲ್ಲವೂ ನಿರ್ಧಾರವಾಗತ್ತೆ, ಪ್ರತಿಯೊಬ್ಬರ ಬದುಕಿಗೂ ಒಂದು ಗುರಿ ಇದೆ ದಾರಿ ಇದೆ ಅದನ್ನ ಸವೆಸಿ ದಡಸೇರೋದ್ರಲ್ಲಿ ಉನ್ನತಿ ಇದೆ  ಅನ್ನೋದನ್ನ ನಂಬೋದೇ ಆದ್ರೆ ದಯಾಮರಣ ಅನ್ನೋದು ಬೇಡದ ಕಾನ್ಸೆಪ್ಟು...
ನನಗೆ ಅರುಣಾ ಶನ್ಬಾಗ್ ಮೂವತ್ತೇಳು ವರುಷಗಳಿಂದ ಮಲಗಿದಲ್ಲಿ ಮಲಗಿದಹಾಗೆ ಇದ್ದಾಳೆ ಅನ್ನೋದನ್ನ ಮೊಟ್ಟಮೊದಲ ಬಾರಿ ಕೇಳಿದಾಗ ನೆನಪಾಗಿದ್ದು ನನ್ನ ಅಜ್ಜಿ.. ಆಕೆ ಕೂಡಾ ಆಲ್ಮೋಸ್ಟ್ ಯಾರಿಗೂ ಬೇಡವಾದ ಬದುಕನ್ನ ಬದುಕೋದಕ್ಕೆ ಶುರು ಮಾಡಿ ಇಪ್ಪತ್ತೈದು ವರುಷಗಳಿಗೂ ಜಾಸ್ತಿ ಆಗಿದೆ.. ನಾವೆಲ್ಲಾ ಅವಳು ಸರಿಯಾಗಿದ್ದ ದಿನಗಳನ್ನ ಕಂಡೇ ಇಲ್ಲಾ.. ಆಕೆ ಯವ್ವನದ ದಿನಗಳಲ್ಲಿ ದುಡಿದ ಹಾಗೆ ಯಾವ ಹೆಂಗಸರೂ ದಿಡಯೋದಕ್ಕಾಗಲ್ಲಾ ಅಂತ ಅಮ್ಮಾ ಆಗಾಗ ಹೇಳ್ತಾ ಇರ್ತಾರೆ.. ಆ ದುಡಿತಾನೇ ಅಜ್ಜಿಯ ಪಾಲಿಗೆ ಮಾರಕವಾಗಿದ್ದು.. ಮನೆ ಕಟ್ಟೋವಾಗ ಮೈ ಮೇಲೆ ದೊಡ್ಡದೊಂದು ಮರದ ದಿಮ್ಮಿ ಬಿದ್ದಿದ್ದೇ ನೆಪ.. ಆಕೆ ನಡೆಯೋದಕ್ಕೆ ಹರಸಾಹಸಪಡ್ತಾಳೆ.. ಮಲಗಿದ್ದಲ್ಲೇ ನರಳ್ತಾಳೆ.. ನೋವು ಸಹಿಸದಾದಾಗ ಸಾವಾದ್ರೂ ಬರಬಾರದಾ ಅಂತ ಕನವರಿಸ್ತಾಳೆ.. ಹಾಗಂತ ಆಕೆಗೆ ಸಾವಿನ ಭಯಾ ಹೋಗಿಲ್ಲಾ.. ಬದುಕೋ ಆಸೆ ಬತ್ತಿಲ್ಲಾ.. ಮಲಗಿದ್ದಲ್ಲೇ ಮೊಮ್ಮಕ್ಕಳ ಮದುವೆಯ ಕನಸು ಕಾಣೋ ನಮ್ಮಜ್ಜಿಗೆ ಅರುಣಾಳನ್ನ ಹೋಲಿಸೋದಕ್ಕೆ ಆಗಲ್ಲಾ.. ಆಕೆಗೆ ಆಸ್ಪತ್ರೆಯ ಹೊರತಾಗಿ ಏನೂ ಇಲ್ಲಾ.. ಯಾರೂ ಇಲ್ಲಾ.. ಆದ್ರೂ ಅವಳಿಗೆ ಸಾಯೋ ಕಾಲ ಬಂದಿಲ್ಲಾ.. ಎಲ್ಲದಕ್ಕೂ ಟೈಮ್ ಬರಬೇಕು.. ಅಲ್ಲೀ ತನಕ ಬೇಡವಾಗಿದ್ದನ್ನೂ ಪ್ರೀತಿಸಲೇಬೇಕು ಅಂತ ಅನ್ನಿಸಿದ್ದು ಬ್ರಾನ್ ವಯ್ಸ್ ರವರ ಮೆನಿ ಲೈವ್ಸ್ ಮೆನಿ ಮಾಸ್ಟರ್ಸ್ ಪುಸ್ತಕವನ್ನ  ಓದಿದಮೇಲೆ...

6 comments:

  1. ಸಿಂಪ್ಲಿ ಸುಪರ್ಬ...ವಿಧಿ ಅರುಣಾಳಿಂದ ಎಲ್ಲವನ್ನೂ ಕಸಿದುಕೊಂಡಿದೆ, ಆಯಸ್ಸೊಂದನ್ನು ಹೊರತುಪಡಿಸಿ. ಬದುಕಿನ ದುರಂತಗಳು ಹೇಗೆಲ್ಲಾ ಇರತ್ವೆ ಅಲ್ವಾ..?

    ReplyDelete
  2. ಕೆಲವು ಜೀವಗಳು ಬದುಕಲಿಕ್ಕೆ ಹೈರಾಣಾಗಿ ಸಾವನ್ನ ಹುಡುಕಿಕೊಂಡು ಹೋಗುತ್ವೆ.
    ಮತ್ತೆ ಕೆಲವು ಬದುಕನ್ನ ಪ್ರೀತಿಸಿ ಪ್ರೀತಿಸುತ್ತಲೇ ಸಾಯುವಾಗಲೂ ನಗುಮುಖ ಹೊತ್ತೇ ಹೋಗುತ್ವೆ. ಅರುಣಾರಂಥಹ ಜೀವಗಳು ಬದುಕು,ಸಾವು ಎರಡರಲ್ಲಿ ಯಾವುದನ್ನ ಪ್ರೀತಿಸುತ್ತಾರೆ ಅಂತಾ ಹೇಗೆ express ಮಾಡ್ತಾರೆ..? ನ್ಯಾಯಾಲಯಗಳಾಗಲಿ ಅವರ ಮನಸ್ಸನ್ನ ascertain ಮಾಡಲಿಕ್ಕಾದರೂ ಹೇಗೆ ಸಾಧ್ಯ ಸಿಂಚನರವರೇ..? ದಯಾಮರಣಕ್ಕೂ ಮೀರಿದ ’ಭಾವ’ ಇದೆಯೆಂದಾದ್ರೆ ಅರುಣರನ್ನ ಇಷ್ಟು ವರ್ಷಗಳ ಕಾಲ ಜತನದಿಂದ ಮಡಿಲಲ್ಲಿ ಮಲಗಿಸಿಕೊಂಡಿರುವ ಆ ಆಸ್ಪತ್ರೆ,ಮತ್ತು ಅದರ ಸಿಬ್ಬಂದಿ ನ್ಯಾಯಲಯ, ದೇವಾಲಯಗಳನ್ನ ಮೀರಿ ನಿಲ್ಲುತ್ತಾರೆ. ಆ ನೊಂದ ಜೀವ ಕೊನೆಯುಸಿರು ಎಳೆಯುವರೆಗೆ ಇದೇ ಮುತುವರ್ಜಿ ವಹಿಸಲೆಂಬುದು ನನ್ನ ನಿಮ್ಮ ಆಶಯ.
    may god bless aruna..ಇಂಥಹ ಲೇಖನಗಳನ್ನ ಬರೆಯುವ ಹವ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕಾಗ್ತದೆ.hats of u..

    ReplyDelete
  3. ನಿಜಕ್ಕೂ ಅನಿವಾರ್ಯದ ಬದುಕನ್ನ ಪ್ರೀತಿಸೋದಕ್ಕೆ ಸಹಕರಿಸೋರಿಗೆ ಧನ್ಯವಾದ ಹೇಳಲೇಬೇಕು..
    ವೀಣಾಳ ಪಾಲಿಗೆ ಎಲ್ಲವೂ ಆದ ಆಸ್ಪತ್ರೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳನ್ನ ದೇವರಿಗೆ ಹೋಲಿಸಿದ ನಿಮ್ಮ ಭಾವ ನನಗಿಷ್ಟವಾಯ್ತು..!
    ಒಂದು ಮನದಾಳದ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು ..

    ಅಂದಹಾಗೆ ಮುರುಳಿಯ ಗಾನವನ್ನ ಆಲಿಸೋ ಮನಸು ಮಾಡಿ ನನ್ನ ಲಹರಿಯನ್ನ ನಿಮ್ಮ ಬಳಗಕ್ಕೆ ಸೇರಿಸಿಕೊಂಡದ್ದಕ್ಕೆ ತುಂಬಾ thanks..

    ReplyDelete
  4. ನಿಜ ಇದು ವಿಧಿಯಾಟಾ ಗುರುರಾಯ್ ಅವರೆ..!

    ReplyDelete
  5. ದುರಂತ ಅಂದ್ಕೊಂಡ್ರೆ ದುರಂತ ಬದುಕು ಅಂದ್ಕೊಂಡ್ರೆ ಬದುಕು.. ಒಟ್ಟಲ್ಲಿ ಅಂತ್ಯದೆಡೆಗೆ ನಡೆಯೋದು ನಮ್ಮ ಕೆಲಸಾ ಅಲ್ವಾ ಅಜಿತ್..?

    ReplyDelete