Saturday, October 8, 2011

ರೂಪವಲ್ಲ ದಾರಿದೀಪ..!


 ಧ್ಯಾನ ಮೂಲಮ್ ಗುರುರ್ ಮೂರ್ತಿ,
 ಪೂಜಾ ಮೂಲಮ್ ಗುರುಃ ಪಾದಮ್,
 ಮಂತ್ರ ಮೂಲಮ್ ಗುರೂರ್ ವಾಕ್ಯಮ್
 ಮೋಕ್ಷ ಮೂಲಮ್ ಗುರು ಕೃಪಾ..

ನಿಜವಾದ ಗುರು ಅನ್ನೋದು ಒಂದು ರೂಪ ಅಲ್ಲ.. ದಾರಿ ದೀಪ.. ಆದ್ರೆ ಜನರಿಗೆ ಆದ್ಯಾತ್ಮದ ದಾರಿಯನ್ನ ತೋರಿಸೋ ನಿಟ್ಟನಿಲ್ಲಿ ಬದುಕಿನ ಜ್ಞಾನವನ್ನ ನೀಡಿ ದಾರಿದೀಪವಾಗೋ ಗುರುವಿಗೆ  ಕಾಣದ ದೇವರ ಸ್ಥಾನ ಕೊಟ್ರೆ ತಪ್ಪಾ..?

ಈ ಪ್ರಶ್ನೆಯನ್ನ ನಾನು ಸಾಕಷ್ಟು ಜನರತ್ರಾ ಕೇಳಿದೀನಿ.. ತುಂಬಾ ಜನರು ಈಗೆಲ್ಲಾ ಗುರುಗಳು ಅನ್ನೋದು ಡೋಂಗಿ.. ಕಾವಿ ತೊಟ್ಟು ಮಾಡಬಾರದ ಕೆಲಸಾ ಮಾಡಿ ಅದರ ಸ್ಥಾನಕ್ಕೇ ಕಳಂಕ ತರ್ತಿದ್ದಾರೆ ಅಂತ ಹೇಳ್ತಾರೆ.. ಅಂಥವರ ಬಗ್ಗೆ ಒಂದಿಷ್ಟು ಎಕ್ಸಾಂಪಲ್ ಕೊಡಿ ಅಂದ್ರೆ , ಮೊದಲು ಬರೋದು ನಿತ್ಯಾನಂದಸ್ವಾಮಿಯ ಹೆಸರು.. ಅದೊಂದು ಸೀಡಿ.. ಜನಸಾಮಾನ್ಯರ ಕಣ್ಣಲ್ಲಿ ನಿತ್ಯಾನಂದ ಅಪ್ಪಟ ಲಂಪಟ.. ಆದ್ರೆ ಅವರ ಭಕ್ತರ ಕಣ್ಣಲ್ಲಿ ಆತ ಮತ್ತೆ ಅದೇ ದಾರಿದೀಪ.. ರಂಜಿತಾಳ ಸಹಿತವಾಗಿ ಎಲ್ಲರೂ ಮತ್ತೆ ಅವರ ಆಶ್ರಮಕ್ಕೆ ಹೋಗ್ತಾರೆ.. ಅಲ್ಲಿನ ಚಿತ್ರವಿಚಿತ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ತಾರೆ..ಅಂಥದ್ದೊಂದು ನಂಬಿಕೆ ಇದ್ಯಲ್ಲಾ ಅದನ್ನ ನೋಡಿದ್ರೆ ನನಗೆ ಶಹಬ್ಬಾಸ್ ಅನ್ಸತ್ತೆ.. ಯಾಕಂದ್ರೆ ದೇವರು ಅನ್ನೋದು ಒಂದು ನಂಬಿಕೆ.. ಆ ನಂಬಿಕೆಯೆಡಗೆ ಪಯಣಿಸೋ ದಾರಿಯನ್ನ ತೋರಿಸೋನು ಕಾವಿ ತೊಡೋ ಗುರು..

  ಇಲ್ಲಿ ನಾನು ಕಾವಿ ತೊಡೋ ಗುರು ಅಂತ ಯಾಕಂದೆ ಅಂದ್ರೆ ಕಾವಿತೊಟ್ಟವನಷ್ಟೇ ಗುರು ಅಲ್ಲಾ.. ಮೊದಲ ತೊದಲು ನುಡಿಯನ್ನ ನುಡಿಯೋದಕ್ಕೆ ಕಾರಣರಾದವರಿಂದ ಹಿಡಿದು  ನಾವು ಏನೇನೆಲ್ಲಾ ಯಾರ್ಯಾರಿಂದ ಕಲೀತೀವೋ ಅವರೆಲ್ಲರೂ ನಮಗೆ ಗುರು.. ಅವರು ಸಧ್ಯ ಬದುಕೋದಕ್ಕೆ ದಾರಿ ತೋರಿಸೋ ಗುರುಗಳು ಕಾವಿತೊಟ್ಟವರು ಬದುಕಿನ ಉದ್ದೇಶವನ್ನ , ಅದರ ಒಳಾರ್ಥವನ್ನ ಅರ್ಥಮಾಡಿಸೋ ಗುರು..

ನಮ್ಮನ್ನ ನಿಯಂತ್ರಿಸೊ ಯಾವುದೋ ಒಂದು ಶಕ್ತಿ ಇದೆ ಅಂತ ನಂಬುವವರೆಲ್ಲಾ, ಅದಕ್ಕೆ ದೇವರು ಅಂತ ಹೆಸರಿಟ್ರೆ ಬೇಡ ಅನ್ನಲ್ವೇನೋ.. ಅದನ್ನ ತೋರಿಸ್ತೀವಿ, ಅದರ ಕಡೆಗೆ ಹೊಗೋ ದಾರಿ ತೋರಿಸ್ತೀವಿ ಅನ್ನೋರು ಸಹಜವಾಗೇ ಉಳಿದೆಲ್ಲಾ ಗುರುಗಳಿಗಿಂತ ಗ್ರೇಟ್ ಅನ್ನಿಸ್ತಾರೆ..ಯಾಕಂದ್ರೆ ಉಳಿದವರು ನಮಗೆ ದೂರದಲ್ಲಿ ಕಾಣೋದರ ಎಡೆಗೆ ಕಳಿಸಬಹುದು.. ಆದ್ರೆ ಇವರು ಕಾಣದ್ದನ್ನಲ್ವಾ ತೋರಿಸೋದು..!

ಅಂದ್ಹಾಗೆ ದೇವರು ಅಂದ್ರೆ ಏನು..? ನಮ್ಮಂತ ಜನಸಾಮಾನ್ಯರ ಭಾವನೆಯಲ್ಲಿ ದೇವರು ಅಂದ್ರೆ ಕಷ್ಟಗಳನ್ನ ನೀಗೋನು. ದುಃಖ ನಿವಾರಕ. ಶಕ್ತಿಯನ್ನ ಕೊಡೋನು.. ಹಾಗಾದ್ರೆ ಅದು ನಮ್ಮೊಳಗೇ ಇದೆ ಅಲ್ವಾ ? ನೆಮ್ಮದಿ ಮತ್ತು ಖುಶಿನೇ ದೇವರಲ್ವಾ..? ಆ ರೀತಿ ಯೋಚಿಸಿದಾಗಲೆಲ್ಲಾ  ದಿ ಸಿಕ್ರೇಟ್ ಬುಕ್ಕು ನನಗೆ ಗುರುಸ್ಥಾನದಲ್ಲಿ ನಿಲ್ಲತ್ತೆ.. ಆದ್ರೆ ಓದೋದಕ್ಕಿಂತ ಕೇಳಿಸಿಕೊಳ್ಳೋದು, ಅನುಭವಿಸೋದು ಹೆಚ್ಚು ಕಾಲ ಮನಸಲ್ಲಿರತ್ತೆ.. ಹಂಗಾಗಿ ನೆಮ್ಮದಿಯಿಂದಿರೋದರ ಸಿಕ್ರೇಟ್ ಕೂಡಾ ಯಾರಾದ್ರೂ ಹೇಳಿದ್ರೆ ಖುಶಿ.. ಅದು ಗುರು ರೂಪ ಅಲ್ವಾ..?

ನಮ್ಮೊಳಗೇ ಇರೋ ನೆಮ್ಮದಿಯನ್ನ ಖುಶಿಯನ್ನ ಜಾಗೃತಗೊಳಿಸಿಕೊಂಡ್ರೆ ಸಾಕು ಅಂತ ಮೊದಲು ಅನ್ಸತ್ತೆ.. ನಂತ್ರಾ ನಮ್ಮೊಳಗೆ ಹುದುಗಿರೋ ಅದೆಷ್ಟೋ ಶಕ್ತಿಗಳನ್ನ ಜಾಗೃತಗೊಳಿಸಬೇಕು ಅನ್ನಿಸಲ್ವಾ..? ಅದಕ್ಕೆಲ್ಲಾ ಕಠೋರ ಪ್ರಯತ್ನ ಬೇಕು.. ಗುರುವಾದವನು ಆ ಹಂತದಲ್ಲಿರೋ ವ್ಯಕ್ತಿ.. ಅವನು ಕಾಠಿಣ್ಯದ ತಪಸ್ಸು ಮಾಡಿ ತನ್ನೊಳಗಿನ ಶಕ್ತಿಯನ್ನ ಜಾಗೃತಗೊಳಿಸಿಕೊಳ್ತಾನೆ.. ಅದಕ್ಕೆ ಯಾವುದೇ ಅಡೆತಡೆಗಳಿರ್ಬಾರ್ದು ಅಂತ ವಯಕ್ತಿಕವಾದ ಸಂಸಾರದಿಂದ ದೂರ ಇರೋದು.. ಇನ್ನು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳೆಲ್ಲಾ ಸಂತಸವನ್ನ ಗೆಲ್ಲುವಾಗಲೇ ಮರೆಯಾಗಿಬಿಟ್ಟಿರತ್ತೆ..
ಕೆಲವರಿಗೆ ಕಾಮ ಅನ್ನೋದು ಸಹಜ ಅನ್ಸತ್ತೆ.. ಅದರಲ್ಲೇ ಖುಶಿ ಇರೋದು ಅನ್ನಬಹುದು..ಅಪ್ಕೋರ್ಸ್ ಎರಡುಜೀವಗಳು  ಬೆಸೆದು ಪೃಕೃತಿಯಾಗೋದು ಅದ್ಭುತ.. ಆದ್ರೆ ಅದು ಎರಡು ದೇಹಗಳನ್ನಲ್ಲಾ, ಎರಡುಜೀವಗಳನ್ನ ಬೆಸೆಯೋ ಥರ ಇರ್ಬೇಕು.. ಅಷ್ಟು ಅದ್ಭುತವಾದ ಅನುಭವ ಆದ್ರೆ ಅದೂ ಖುಶಿನೇ.. ಅದೂ ದೇವರೆ.. ಆದ್ರೆ ಅದು ಜಸ್ಟ್ ಕಾಮವಲ್ವೇನೋ, ಮನದ ಶೃಂಗಾರವೇನೋ ಅಂತ ನನಗೆ ಅನ್ಸತ್ತೆ..  ಎನಿ ಹೌ , ಎಲ್ಲವನ್ನೂ ಅನುಭವಿಸಬೇಕು.. ಯಾವುದರೆಡೆಗೂ ಕುತೂಹಲ ಆಸೆ ಉಳಿಯಬಾರದು ಅನ್ನೋ ಓಶೋ ಅಭಿಪ್ರಾಯದಲ್ಲೂ ಕೊನೆಗೆ ಸಿಗೋದು ತೃಪ್ತಿನೇ.. ಒಟ್ಟಿನಲ್ಲಿ ತೃಪ್ತಿ ಅನ್ನೋದು ದೇವರು..
ಓಶೋನ ದಾರಿಯಲ್ಲಿ ಹೊಗೋ ಧೈರ್ಯ ಎಲ್ಲರಿಗೂ ಇರಲ್ಲ.. ಅಲ್ಲಿ ಜನ ಸೇರೋದು ಕಷ್ಟ.. ಆದ್ರೆ ಕಾವಿತೊಟ್ಟು ದೇವ ಭಜನೆ ಮಾಡಿದ್ರೆ, ಯಾರಿಗೂ ಈ ದಾರಿಯಲ್ಲಿ ಮುಜುಗರವಿರಲ್ಲ .. ಇದರಲ್ಲೂ ಒಂದು ರೀತಿಯ ನೆಮ್ಮದಿಯ ಭಾವ ಇದೆ.. ಮಂತ್ರಗಳು ಅರ್ಥವೇ ಆಗದಿದ್ರೂ, ಅಂತರಂಗ ಮಿಡಿಯುತ್ತೆ.. ಮನಸು ಮಾತಾಡತ್ತೆ..

ಸಹಸ್ರಾರು ಜನರಿಗೆ ಮಾರ್ಗದರ್ಷಕನಾಗೋ ಗುರುವಿಗೆ ಕಟ್ಟುಪಾಡುಗಳಿರ್ಲೇಬೇಕು.. ಆತ ಸಿಡುಕನಾಗಿದ್ದು ಸಿಟ್ಟು ಒಳ್ಳೆಯದಲ್ಲ ಅಂದ್ರೆ ಸಿಗರೇಟ್ ಪ್ಯಾಕಿನ ಮೇಲೆ ಇಂಜೂರಿಯಸ್ ಟು ಹೆಲ್ತ್ ಅಂತ ಇದ್ಹಾಗೆ ಆಗೋದು.. ಬೇರೆಯವರಿಗೆ ಕಾಮ ಕ್ಷಣಿಕ ಮೋಹ ಕ್ಷಣಿಕ ಅನ್ನೋನು ಮೊದಲು ಅದನ್ನ ತಾನು ಗೆಲ್ಲಬೇಕು.. ಅವನು ಮೋಕ್ಷದೆಡೆಗೆ ಮುಂದಿನ ಹೆಜ್ಜೆ ಇಡದೆ ಹಿಂದಿರುವ ಜನಸಮೋಹಕ್ಕೆ ದಾರಿ ತೋರಲಾರ.. ನಡೆಯೋದಾರಿಯಲ್ಲಿ ನಿಂತು ಎಲ್ಲರಿಗೂ ಬೆಳಕು ತೊರೋದಕ್ಕಾಗಲ್ಲ .. ಮುಂದೆ ಮುಂದೆ ಹೋಗಬೇಕು.. ಜ್ಞಾನದ ಬೆಳಕನ್ನ ಚೆಲ್ಲುತ್ತ ನಡೆದರೆ ಸಾಕು ಜನ ಹಿಂಬಾಲಿಸಿಬರೋದಕ್ಕೆ.. ನನಗೆ ನಾನೊಬ್ಬ ನಡೆದರೆ ಸಾಕು.. ನನಗೆ ಮುಕ್ತಿಪಥದ ಗುರುತಿದೆ.. ನಾನು ಹೋಗ್ತೀನಿ ಅನ್ನೋನು ಗುರು ಆಗಲ್ಲಾ.. ನಾನು ನಡೀತಿರೋ ದಾರಿ ಸುಂದರವಾಗಿದೆ.. ಅದರ ಕೊನೆಯಲ್ಲಿ ಅದ್ಭುತವಾಗಿದ್ದೇನೋ ಇದೆ ಅನ್ನೋದನ್ನ ತಿಳಿಸಿ ದಾರಿ ತೋರುವವನು ಗುರು.. ಒಂದರ್ಥದಲ್ಲಿ ಅವನು ಲೀಡರ್..

ನಮಗೆ ಮೋಕ್ಷ ಅನ್ನೋದೆಲ್ಲಾ ಅರ್ಥವಾಗಲ್ಲ ..  ನಿತ್ಯಬದುಕು ನೆಮ್ಮದಿಯಿಂದ ಇದ್ರೆ ಸಾಕು ಅನ್ನೋ ಜನ ಹೆಚ್ಚು.. ಅಂಥವರಿಗೆಲ್ಲಾ ಗುರು ನಿಂತಲ್ಲೇ ದೀಪ ತೋರಿಸಬಹುದು.. ಅಂಥ ಗುರು ಸಂಸಾರಸ್ಥನಾಗಿದ್ದ ಮಾತ್ರಕ್ಕೆ ಗುರು ಅಂತ ಹೇಳಕಾಗಲ್ಲಾ ಅಂತೇನೂ ಇಲ್ಲ.. ಆದ್ರೆ ವೈರಾಗ್ಯದ ಸಂಕೇತವಾಗಿರೋ ಕಾವಿಯನ್ನ ತೊಟ್ಟಿ ಕಾಮನೆಗಳನ್ನ ಗೆಲ್ಲಲಾಗದಿದ್ರೆ ಅದು ತಪ್ಪಾಗತ್ತೆ..

ನಿತ್ಯಾನಂದ ಸ್ವಾಮಿಗೆ ಗುರುಸ್ಥಾನವನ್ನ ಕೊಡೋದಕ್ಕೆ ಜನ ಹಿನ್ನಡೆಯೋದೂ ಅದಕ್ಕೇ.. ಹಾಗಾದ್ರೆ ಆ ಮನುಷ್ಯ ಕಾವಿಯನ್ನ ತೊಡದೇ ತನ್ನದೇ ಆದ ಸಂಸಾರವನ್ನ ಇಟ್ಕೊಂಡು ಜ್ಞಾನಭೋದನೆ ಮಾಡಿದ್ರೆ, ಆಗ್ತಿತ್ತಲ್ವಾ..? ಅನ್ನೋ ಯೋಚನೆಬರತ್ತೆ.. ಆದ್ರೆ ಕಾವಿಗೆ ಜನರನ್ನ ಒಂದು ಕಡೆಸೇರಿಸೋ ಶಕ್ತಿ ಇದೆ , ಕಾವಿ ತೊಟ್ಟವರು ಮಾತಾಡಿದ್ರೆ ಪ್ರವಚನ ಉಳಿದವರದ್ದು ಭಾಷಣ.. ಭಾಷಣ ಪ್ರವಚನದ ಕಟ್ಟಿನೊಳಗೆ ಬರಬೇಕು ಅಂದ್ರೆ, ಮಾತನಾಡುವವನಿಗೆ ಒಂದಿಷ್ಟು ಕಟ್ಟುಪಾಡುಗಳಿರಲೇಬೇಕು.. ಭಕ್ತಿ ಹುಟ್ಟಬೇಕು.. ಭಾವನೆ ಬೆಸೆಯಬೇಕು..

ನಾನು ದೇವರೆಡೆಗೆ ನಡೆಯೋ ದಾರಿ ತೋರಿಸೋ ಗುರುಗಳನ್ನ ಮೊಟ್ಟ ಮೊದಲು ನೋಡಿದ್ದು ಪ್ರೈಮರಿ ಸ್ಕೂಲಲ್ಲಿ... ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನಮ್ಮ ಶಾಲೆಗೆ ಬಂದಿದ್ದರು.. ನಿಜ ಹೇಳ್ತೀನಿ , ಶಾಲೆಗೆ ಇನ್ಸ್ಪೆಕ್ಟ್ರ್ ಬಂದಾಗ ಭಯಾ ಆಗತ್ತಲ್ಲಾ ಹಾಗೇ ಆಗಿತ್ತು ಅವರನ್ನ ನೋಡಿದಾಗ.. ಆದ್ರೆ ಅವರು ನಮ್ಮನ್ನ ಪರೀಕ್ಷಿಸಲ್ಲಾ ಅನ್ನೋದೊಂದೇ ಭಾವ ನಿಧಾನವಾಗಿ ಆ ಪರಿಸರವನ್ನ ಸ್ವೀಕರಿಸೋದಕ್ಕೆ ಕಾರಣವಾಯ್ತು.. ಇನ್ನು ಮಾತು ಮಂತ್ರಗಳೆಲ್ಲಾ ಅರ್ಥವಾಗೋ ವಯಸ್ಸಲ್ಲಾ ಅದು.. ಎಲ್ಲರೂ ನಮಸ್ಕರಿಸ್ತಾರೆ.. ನಾನೂ ನಮಸ್ಕರಿಸ್ತೀನಿ.. ಎಲ್ಲರೂ ಹೇಳೋ ಹಾಗೆ ಅವರು ಹಿತವಚನ ಹೇಳಿದ್ರು.. ನಾನು ತಲೆಹಾಕಿದ್ದೆ.. ಅರ್ಥವಾಗಿರ್ಲಿಲ್ಲ.. ದೇವರಿಗೆ ನಮಸ್ಕರಿಸೋವಾಗ ಏನಾದ್ರೂ ಅರ್ಥವಾಗ್ತಾ ಇತ್ತಾ, ಹಾಗೆ..

ನಂತ್ರಾ ವರದಳ್ಳಿಯ ಶ್ರೀಧರರ ಪಾದುಕೆ ನೋಡಿದ್ದೆ.. ನಡೆದಾಡೋ ದೇವರು ಶಿವಕುಮಾರಸ್ವಾಮಿಯ ಬಗ್ಗೆ ಕೇಳಿದ್ದೆ, ಬಾಲಗಂಗಾದರ ನಾಥರು, ಪೇಜಾವರ ಶ್ರೀಗಳು ಇವರ ಬಗ್ಗೆ ಎಲ್ಲಾ ಒಂದೊಂದು ಭಾವ.. ಆದ್ರೆ ಅವರ್ಯಾರರೂ ನನಗೆ ದಾರಿದೀಪವಾಗ್ಲಿಲ್ಲ.. ಮೋಸ್ಟ್ಲಿ ಅವರನ್ನ ನಾನು ಹತ್ತಿರದಿಂದ ನೋಡಿಲ್ಲವಲ್ಲ ಅದಕ್ಕಿರ್ಬೇಕು..

ಈಗ ಸಧ್ಯಕ್ಕೆ ಗುರುಗಳು ಅಂದ್ರೆ ನನಗೆ ನೆನಪಾಗೋದು ರಾಘವೇಶ್ವರ ಸ್ವಾಮಿಗಳು.. ಅವರಿಂದ ಕಲಿಯೋದು ತುಂಬಾ ಇದೆ ಅಂತ ನನಗೆ ಯಾವತ್ತೂ ಅನ್ಸತ್ತೆ.. ರಾಮ ಅಂದ್ರೆ ಹೆಂಡತಿಯನ್ನ ಕಾಡಿಗಟ್ಟಿದ್ದೇ ನೆನಪಾಗೋ ನನಗೂ , ಅವನಲ್ಲಿಯ ಒಳ್ಳೆಯತನ ಕಾಣಿಸತ್ತೆ.. ರಾವಣ ಸೀತೆಯನ್ನ ಹೊತ್ತೊಯ್ದನಾದ್ರೂ ಆಕೆಯ ಇಚ್ಛೆಯ ವಿರುದ್ಧವಾಗಿ ಬಲಾತ್ಕಾರ ಮಾಡ್ಲಿಲ್ವಲ್ಲಾ, ಅವನಲ್ಲೂ ಒಳ್ಳೆಯತನ ಇದೆ ಅನ್ನೋ ನನಗೆ ಕೆಟ್ಟದ್ದು   ಒಳ್ಳೆಯದ್ದನ್ನ ಮರೆಮಾಚಿಬಿಡಬಹುದು ಅನ್ನೋದು ಗೊತ್ತಾಗಿದೆ.. ಅದಕ್ಕಿಂತಾ ಹೆಚ್ಚಾಗಿ ನನಗೆ ರಾಮ ಮತ್ತು ರಾವಣ ಅನ್ನೋದು ವ್ಯಕ್ತಿಯಲ್ಲ ವ್ಯಕ್ತಿತ್ವ, ಒಳ್ಳೆಯದು ಕೆಟ್ಟದ್ದು ಅನ್ನೋದು ಎಲ್ಲರಲ್ಲು ಇರತ್ತೆ,  ಒಳ್ಳೆಯತನ ಜಾಸ್ತಿ ಇದ್ರೆ ರಾಮನಾಗ್ತಾನೆ, ಕೆಟ್ಟದ್ದು ಹೆಚ್ಚಿದ್ರೆ ರಾವಣ ಅನ್ನಿಸಿಕೊಳ್ತಾನೆ ಅನ್ನೋದು ಅರ್ಥವಾಗಿದೆ.. ಅದೆಲ್ಲಾ ವಿಷಯಗಳು ಹಾಗಿರ್ಲಿ.. ರಾಘವೇಶ್ವರರ ಶಾಂತ ಚಿತ್ತ.. ಮುಗುಳ್ನಗು.. ಸಂತಸದ ಭಾವ ಪ್ರೀತಿ... ವಾತ್ಸಲ್ಯ .. ಇವೆಲ್ಲಾ ಎಂಥವನನ್ನಾದ್ರೂ ಖುಶಿಪಡಿಸುತ್ತೆ..

ಮೋಕ್ಷದ ಗುರಿ ಇಲ್ಲದಿದ್ದರೂ ಸರಿಯಾದ ಹಾದಿಯಲ್ಲಿ ಚಿತ್ತವನ್ನಿಡೋದಕ್ಕೆ ಗುರುಬೇಕು... ಗುರುಹಿರಿಯರ ಅನುಭವ ಬೇಕು..

2 comments:

 1. ಗುರುವಿಂದ ಕಲಿಯೋದು ತುಂಬಾ ಇರತ್ತೆ
  ಆದರೆ ಗುರು ಯಾರು ಅನ್ನೋದು ತುಂಬಾ ಮುಖ್ಯ ಆಗತ್ತೆ ಆಲ್ವಾ
  ನಮ್ಮ ದಿನನಿತ್ಯದ ಬದುಕಿನ ಜೊತೆ ಇರೋ ಬೀಸೋ ಗಾಳಿ, ಹರಿಯೋ ನೀರು,
  ದನ ಕರುಗಳು, ಮರ ಗಿಡ ಎಲ್ಲವು ಗುರು ವೆ, ಎಲ್ಲವುಗಳಿಂದ ಕಲಿಯೋ ಜ್ಞಾನದ ಒಟ್ಟು ಮೊತ್ತವೇ
  ಸರ್ವಜ್ಞ
  ಬದುಕಿನ ಸತ್ಯತೆ ಕಂಡುಕೊಳ್ಳುವುದರಲ್ಲಿ ಇದೆ ಆಲ್ವಾ
  ರಸ್ತೆಯ ಮೇಲೆ ಭಿಕ್ಷೆ ಎತ್ತೋ ವ್ಯಕ್ತಿ ಯಾವುದೋ ಹಂತದಲ್ಲಿ ನಮ್ಮ ಗುರು ಆಗಿರ್ತಾನೆ
  ಆದರೆ ಒಣ ಪ್ರತಿಷ್ಠೆ ಮನದಲ್ಲಿ ತುಂಬಿದರೆ ಅದನ್ನ ಗುರ್ತಿಸೋ ಮನಸ್ಸು ನಮ್ಮಲ್ಲಿ ಇರೋದಿಲ್ಲ

  ತುಂಬಾ ಸುಂದರವಾಗಿ ಬರೆದಿದ್ದಿರಾ

  ReplyDelete
 2. nimma barvanige kushi needithu...

  ReplyDelete