Saturday, December 4, 2010

ಅರವಳಿಕೆಗಳ ಮನೆ

 ಒಂದು ಅರಮನೆ 
         ಅಲ್ಲಿ ಅಲಂಕಾರವಿಲ್ಲ  ಅಹಂಕಾರವಿಲ್ಲ 
        ನಾಲ್ಕು ಗೋಡೆಗಳೊಳಗೆ ಮತ್ತಷ್ಟು ಗೋಡೆಗಳು 
        ಕಲ್ಲು ಮಣ್ಣು ಬರಿ ಮೌನ 
        ಮರಳ ರಾಶಿಯ ಮೇಲೆ ಮಾತು
        ಬರಿ ಆಟ ತೊಳಲಾಟ ಪೀಕಲಾಟ 

ಒಂದು ಅರಮನೆ 
         ಅಲ್ಲಿ ಸೈನಿಕರಿಲ್ಲ ಸಾಹುಕಾರರಿಲ್ಲ 
         ದುಡಿವ ಕೈಗಳು ದಣಿವ ದೇಹಗಳು ಮನಗಳು 
         ನಡುವೊಂದು ಕಂಬ ಪ್ರತಿಬಿಂಬ 
         ಇಳಿವ ಬೆವರಿನಲಿ ಬಿಟ್ಟಿದಾ ತೆನೆ 
                                ಬತ್ತಿದಾ ಕೆನೆ 
         ಜೀವವಿದೆ ಹೋರಾಟದ ಜೀವನವಿದೆ 

 
ಒಂದು ಅರಮನೆ 
           ಅಲ್ಲಿ ನೀರವ ಮೌನವಿಲ್ಲ ಮಾತೂ ಇಲ್ಲ  
                         ಮುಗಿಯದ ಸಂಬಂಧಗಳು                         
ಅರಿಯದ ಬಾವಗಳು 
          ಹಗಲು ರಾತ್ರಿ ಸಣ್ಣದೊಂದು ಬೆಳಕು
          ಸಂಭ್ರಮಕ್ಕೊಂದು ಎಳೆಯ ಜೀವ 
         ಮತ್ತದೇ ಪಯಣ ತಲ್ಲಣ ಜೀವನ

ಒಂದು ಅರಮನೆ 
         ಅಲ್ಲಿ ಕ್ರೌರ್ಯವಿಲ್ಲ ಕಾವ್ಯವಿಲ್ಲ 
         ಗೆದ್ದಲು ಹಿಡಿದ ಮಣ್ಣು ಗುದ್ದಾಡುವ ದೇಹ 
         ಗದ್ದಲದೊಳಗೆ ಸಿದಿದೇಲ್ವ  ದನಿ..
         ಒಂದೇ ಒಂದು ಹಗ್ಗ ಹತ್ತು ಹನಿ ಕಂಬನಿ 
        ಮುದುಡಿತ್ತು ಬಾಂಧವ್ಯದ ಅಲೆ ಬೆಲೆ ಕಲೆ 

ಒಂದು ಅರಮನೆ 
         ಅಲ್ಲಿ ಪಾಪಿಗಳಿಲ್ಲಾ ಪುಣ್ಯವಂತರಿಲ್ಲ
         ದೇವಶಕ್ತಿ ಒಂದಿಷ್ಟು ಭಕ್ತಿ
         ಆಸೆಗಳು ಅವತರಣಿಕೆಗಳು 
         ಅಳುವ ಧನಿ  ಕಣ್ಣಂಚಲಿ ಜಾರಿದ ಕಂಬನಿ 
         ಬದುಕು ಬವಣೆ ಗೊಂದಲ 
ಅದು ಅರಮನೆ ಅರವಳಿಕೆಗಳ ಮನೆ 






1 comment: